-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 116

ನಿಷ್ಪಾಪಿ ಸಸ್ಯಗಳು : ಸಂಚಿಕೆ - 116

ನಿಷ್ಪಾಪಿ ಸಸ್ಯಗಳು : ಸಂಚಿಕೆ - 116
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
    

ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ಮಳೆರಾಯನ ಮುನಿಸು ಕಡಿಮೆಯಾಗುತ್ತಿದ್ದಂತೆ ಸಾಲುಸಾಲು ಹಬ್ಬಗಳು ಇದಿರು ನಿಂತಿವೆ. ಮನೆಯಲ್ಲಿ ನಡೆಯುವ ಹಬ್ಬದೂಟಗಳಿಗೆ ತರುವ ಸಾಂಬಾರ ವಸ್ತುಗಳಲ್ಲಿ ಕರಿ ಮೆಣಸು, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹೀಗೆ ಹಲವಾರು ವಸ್ತುಗಳಿರುತ್ತವೆ ತಾನೇ? ಅದರಲ್ಲಿ ಬಿಳಿ ಬಿಳಿಯಾದ ಹುಡಿಯಂತಹ ಸಣ್ಣ ಬೀಜಗಳೂ ಬಹಳ ಸಣ್ಣ ಪ್ರಮಾಣದಲ್ಲಿ ಸೇರಿರುವುದನ್ನು ಗಮನಿಸಿಸಿರುವಿರಾ? ಅದೇ ಗಸೆ ಗಸೆ ಬೀಜ!. ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ದೇಹವನ್ನು ತಂಪಾಗಿರಿಸಲು ನೀವು ಕಸ್ ಕಸ್ ಬೀಜಗಳನ್ನು ಹಾಕಿದ ಪಾನೀಯ ಕುಡಿದಿರಬೇಕಲ್ಲ? ಬಿಳಿಯಾದ ಗಸೆಗಸೆ ಬೀಜ ಹಾಗೂ ಈ ಕಪ್ಪಾದ ಕಸ್ ಕಸ್ ಬೀಜಗಳೆರಡೂ ಒಂದೇ ಜಾತಿಯ ಸಸ್ಯದ ಬೀಜಗಳು! ಎರಡೂ ಹೆಸರುಗಳೂ ಒಂದೇ...!

ಈ ಕಪ್ಪು ಗಸೆಗಸೆ ಬೀಜವನ್ನು ಬೇಕರಿ ತಿನಿಸುಗಳಲ್ಲಿ ಮಾತ್ರವಲ್ಲದೆ ಬಿಳಿ ಗಸಗಸೆ ಬೀಜಗಳನ್ನು ಹೋಟೇಲು ಮನೆ ಅಡುಗೆಯಲ್ಲೂ ಅಂದರೆ ಆಹಾರದಲ್ಲಿ ಬಳಸುವುದನ್ನು ನೀವು ನೋಡಿರಬಹುದು. ಎಂದಾದರೂ ಅದೇನೆಂದು ಯಾರಲ್ಲಾದರೂ ಕೇಳಿ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದರೆ ಅದು 'ಗಸೆಗಸೆ' ಎನ್ನುವಲ್ಲಿಗಷ್ಟೇ ಹೋಗಿ ನಿಂತಿರುತ್ತದೆ... ಹೌದಲ್ಲವೇ?

ಮಕ್ಕಳೇ, ಈ ಗಸಗಸೆ ಎಂಬ ಸೂಕ್ಷ್ಮ ಬೀಜಗಳನ್ನು ನೀಡುವ ನಿಷ್ಪಾಪಿ ಸಸ್ಯದ ಹಿಂದೆ ಒಂದು ರೋಚಕ ಕತೆಯಿದೆ ಗೊತ್ತಾ? ಮಸಾಲೆ ಪದಾರ್ಥಗಳಲ್ಲೇ ಅತಿ ಹೆಚ್ಚು ಬೆಲೆ ಬಾಳುವ ವಸ್ತು ಈ ಗಸಗಸೆ. ಇದನ್ನು ಬೆಳೆಯಬೇಕೆಂದರೆ ಕಡ್ಡಾಯವಾಗಿ ಸರಕಾರದ ಲೈಸೆನ್ಸ್ ಅಥವಾ ಪರವಾನಗಿ ಪಡೆದಿರಬೇಕು! ನೀವು ಅದನ್ನು ಬೇಸಾಯ ಮಾಡಬೇಕೆಂದುಕೊಂಡರೂ ಸಾಧ್ಯವಾಗದು. ಭಾರತದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ಕೆಲವೇ ಕೆಲವು ಊರುಗಳಲ್ಲಿ ಸರಕಾರದ ಸುಪರ್ದಿಯಲ್ಲೇ ಬೆಳೆಯಲಾಗುತ್ತದೆ! ಬೆಳೆದ ಬೆಳೆಯನ್ನು ಕಡ್ಡಾಯವಾಗಿ ಸರಕಾರಕ್ಕೇ ನೀಡಬೇಕಲ್ಲದೇ ಸ್ವಂತಕ್ಕೆ ಬಳಸಲು ಪರವಾನಗಿ ಇರುವುದಿಲ್ಲ. ಒಂದು ಹೆಕ್ಟೇರ್ ಗೆ‌ ಎಷ್ಟು ಬೆಳೆಯನ್ನು ನೀಡಬೇಕೆಂದು ಸರಕಾರವೇ ನಿಗದಿಗೊಳಿಸುತ್ತದೆ. ಹೆಚ್ಚಿದ್ದರೆ ಸರಕಾರಕ್ಕೇ ಜಮೆ ಮಾಡಬೇಕು. ಅವಧಿ ಮುಗಿದ ಬಳಿಕ ಸರಕಾರೀ ಅಧಿಕಾರಿಗಳ ಸಮ್ಮುಖದಲ್ಲೇ ಸುಟ್ಟು ಹಾಕಲಾಗುತ್ತದೆ! ಈಗ ನಿಮಗೆ ಅತ್ಯಾಶ್ಚರ್ಯವಾಗಿರಬೇಕಲ್ಲವೇ

ಸರಕಾರವೇ ಪರವಾನಗಿ ಇದ್ದ ರೈತರಿಗೆ ಗಸಗಸೆ ಬೀಜವನ್ನು ನೀಡುತ್ತದೆ. ಒಂದು ಹೆಕ್ಟೇರಿಗೆ 7-8 ಕೆ.ಜಿ. ಬೀಜ ಬೇಕಾಗುವುದು. ಬೀಜವು ಕಿಲೋ ಒಂದಕ್ಕೆ150 ರಿಂದ 200 ರೂಪಾಯಿಗಳಿಗೆ ನೀಡಲಾಗುತ್ತದೆ. ಅದೇ ಒಂದು ಹೆಕ್ಟೇರ್ ಗೆ 50 ರಿಂದ 60 ಕೆ.ಜಿ. ಬೆಳೆ ಬರುವ ನಿರೀಕ್ಷೆ ಸರಕಾರದ್ದು. ಸರಕಾರವೇ ಪ್ರತೀ ಗ್ರಾಮ್ ಗೆ 1800 ರೂಪಾಯಿ ನೀಡಿ ತೆಗೆದುಕೊಳ್ಳುತ್ತದೆ. ಮಾತ್ರವಲ್ಲ, ಇದನ್ನೇ ಕಾಳಸಂತೆಯಲ್ಲಿ ಮಾರಿದರೆ 60 ಸಾವಿರದಿಂದ 1 ಲಕ್ಷದ 20 ಸಾವಿರದವರೆಗೆ ದುಡ್ಡು ಸಿಗಬಹುದು! ಒಂದು ಕ್ವಿಂಟಾಲ್ ಗೆ ಏನಿಲ್ಲವೆಂದರೂ 15 ಲಕ್ಷ ರೂ ಬೆಲೆ!!

ಈಗ ನಿಮಗಿದು ಒಗಟಿನಂತೆ ಕಾಣತೊಡಗಿದೆ ಎಂದು ನನಗೊತ್ತು. ಗಸಗಸೆ ಇಷ್ಟೊಂದು ದುಬಾರಿಯಾ! ಅಂತೆನಿಸಬಹುದು. ಅದಕೇಕೆ ಅಷ್ಟೊಂದು ಸರಕಾರದ ಹಿಡಿತ ಎಂದೆನಿಸುತ್ತಿದೆಯಲ್ಲವೇ...? ಮಕ್ಕಳೇ, ನಾನು ಮೊದಲೇ ಹೇಳಿದಂತೆ ಗಸಗಸೆ ಒಂದು ಸಾಮಾನ್ಯ ಸಸ್ಯವಲ್ಲ. ನಮ್ಮ ರಾಜ್ಯದಲ್ಲಿ ಈ ಬೆಳೆಯನ್ನು ಬೆಳೆಯಲು ಅವಕಾಶವಾಗಲಿ, ಅನುಮತಿಯಾಗಲೀ ಇಲ್ಲವೇ ಇಲ್ಲ. ಹಾಗಾಗಿ ನಾವು ಈ ಬೆಳೆಯನ್ನು ಕಾಣಲಾರೆವು. ಪರವಾನಗಿ ಇಲ್ಲದೇ ಬೆಳೆಯುವುದು ಕಾನೂನುಬಾಹಿರವಾಗುತ್ತದೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಗಸಗಸೆ ಬೆಳೆಯಲು ಸೂಕ್ತ ಕಾಲ. ಮೂರ್ನಾಲ್ಕು ಬಾರಿ ಉತ್ತು ನೀರು ಹಾಯಿಸಿ ಮತ್ತೆ ಉತ್ತು ಹದಗೊಳಿಸಿದ, ಮೃದುವಾದ ಮಣ್ಣಿಗೆ ಕ್ರಿಮಿನಾಶಕ ಸಿಂಪರಣೆ ಮಾಡಿಯೇ ಬೀಜ ಬಿತ್ತನೆ ಮಾಡುತ್ತಾರೆ. ಹತ್ತು ಹನ್ನೆರಡು ದಿನಗಳ ಬಳಿಕ ಮತ್ತೆ ದಟ್ಟವಾಗಿ ನೀರು ಹಾಯಿಸಿ ಗಿಡವು ಮೊಳೆತು ಬೆಳೆಯುತ್ತವೆ. ಸುಮಾರು 40 ಇಂಚು ಎತ್ತರ ಬೆಳೆಯುವ ಈ ವಾರ್ಷಿಕ ಗಿಡ ಮೂಲಿಕೆ ಬೂದು ಹಸಿರು ಬಣ್ಣದಲ್ಲಿರುತ್ತವೆ. ಕಾಂಡ ಮತ್ತು ವಿರಳವಾದ ಪರ್ಯಾಯ ಎಲೆಗಳ ಮೇಲೆ ಕೂದಲಿನ ರಚನೆ ಇರುತ್ತದೆ. 115 ದಿನಗಳಲ್ಲಿ ಹೂವುಗಳು ಮೂಡುತ್ತವೆ. ನಾಲ್ಕು ದಳಗಳು, 13 ಕ್ಕೂ ಹೆಚ್ಚು ಕೇಸರಗಳನ್ನು ಹೊಂದಿದ 1ರಿಂದ 3 ಸೆ.ಮೀ ವ್ಯಾಸದ ಗಸಗಸೆ ಹೂವುಗಳು ಬಿಳಿ, ಕೆಂಪು, ಗುಲಾಬಿ, ನೇರಳೆ ಬಣ್ಣಗಳಲ್ಲಿರುತ್ತವೆ. ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಅವೇ ಹೂವುಗಳು ಬೀಜಕಟ್ಟಿ ಗೋಳಾಕಾರದ ಕೂದಲುರಹಿತ ಕಾಯಿಗಳಾಗುತ್ತವೆ. 
ಈ ಬೀಜಗಳು ಒಣಗಿದಾಗ ಬಿಳಿ ಅಥವಾ ಕಪ್ಪು ಬಣ್ಣದ ನೂರಾರು ಬೀಜಗಳಾಗುತ್ತವೆ. ಆದರೆ ಈ ಬೀಜಗಳು ಎಳತಿರುವಾಗಲೇ ಅದರ ಗೋಳಾಕಾರದ ಕಾಯಿಗಳನ್ನು ನಿರ್ದಿಷ್ಟ ರೀತಿಯಲ್ಲಿ ಗೀರಲಾಗುತ್ತದೆ. ಅಂದರೆ ಉದ್ದಕ್ಕೂ ಗಾಯಗೊಳಿಸಲಾಗುತ್ತದೆ. ರೈತರಿಗೆ ಇದು ವಿಪರೀತ ಕೆಲಸದ ಒತ್ತಡ ನೀಡುತ್ತದೆ. ಗಸಗಸೆ ಸಸ್ಯದ ಮೌಲ್ಯ ಆಗಸದೆತ್ತರ ಏರಲು ಈ ಸಮಯದಲ್ಲಿ ನಡೆಯುವ ಕಾಯಿಯ ಗೀರುವಿಕೆ ಕಾರ್ಯವೇ ಕಾರಣವಾಗುತ್ತದೆ. ಬಲಿಯಲಾರಂಭಿಸಿದ ಪ್ರತೀ ಕಾಯಿಯನ್ನು ಕೂಡ ಬೆಳಗ್ಗೆ 7 ರಿಂದ ಸಂಜೆ 5ರ ಒಳಗೆ ಗೀರಲಾಗುತ್ತದೆ. ಆ ಗೀರಿದ ಗಾಯದಲ್ಲಿ ರಬ್ಬರ್ ದ್ರವ ಒಸರಿದಂತೆ ಒಂದು ರೀತಿಯ ಗಟ್ಟಿಯಾದ ದ್ರವ ಸೋರಲಾರಂಭಿಸುತ್ತದೆ. ಒಂದು ದಿನ ಹಾಗೇ ಬಿಟ್ಟು ಮರುದಿನ ಆ ಕಾಯಿಗಳಿಂದ ಒಸರಿ ಗಟ್ಟಿಯಾದ ವಸ್ತುವನ್ನು ಅತ್ಯಂತ ಜಾಗ್ರತೆಯಾಗಿ ವಿಶೇಷ ಸಾಧನದಿಂದ ಕೆರೆದು ತೆಗೆದು ಸಂಗ್ರಹಿಸಲಾಗುತ್ತದೆ. ಈ ವಸ್ತುವಿಗೇ ಅತ್ಯಂತ ಮೌಲ್ಯ ಇರುವುದು..! ಮಕ್ಕಳೇ, ಹೀಗೆ ದೊರೆಯುವ ಆ ವಸ್ತು ಏನೆಂದು ಗೊತ್ತೇ? ಅದೇ ಅಫೀಮು!! ಅಂದರೆ ಮಾದಕ ದ್ರವ್ಯ! ನೋಡಲು ಮಂದವಾದ ಟಾರ್ ನಂತೆ ಕಾಣಿಸುವ ಈ ದ್ರವವನ್ನು ನಾರ್ಕೊಟಿಸ್ಟ್ ವಿಭಾಗವು ಹಲವು ಅಗತ್ಯಗಳಿಗಾಗಿ ಬಳಸುತ್ತದೆ. ರೈತರಿಗೆ ಹೆಚ್ಚು ಹಣ ನೀಡಿ ಖರೀದಿಸುತ್ತದೆ! ಇದನ್ನು ವೈದ್ಯಕೀಯ ವಿಚಾರಗಳಿಗಾಗಿಯೇ ಬೆಳೆಸಲು ಸರಕಾರ ಪರವಾನಗಿ ಕೊಡುವುದಾದರೂ ಮಾದಕವಸ್ತುವಾದ ಹೆರಾಯಿನ್, ಮಾರ್ಫಿನ್, ಅಫೀಮು ಇತ್ಯಾದಿಗಳಿಗೆ ಇದೇ ಕಚ್ಚಾ ವಸ್ತುವಾಗಿದೆ.

ಮೆಡಿಕಲ್ ಭಾಷೆಯಲ್ಲಿ ಇದನ್ನು ಬ್ಲ್ಯಾಕ್ ಡೈಮಂಡ್ ಎನ್ನಲಾಗುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಉತ್ಪಾದಕ ದೇಶವೆಂದು ಹಿಂದೆ ಅಫ್ಘಾನಿಸ್ತಾನ್ ಹೆಸರು ಪಡೆದಿದ್ದರೆ ಈಗ ಮ್ಯಾನ್ಮಾರ್ ಆ ಸ್ಥಾನ ಪಡೆದಿದೆಯಂತೆ. ಕೊಲಂಬಿಯ, ಲಾವೋಸ್, ಮೆಕ್ಸಿಕೋ ಗಳಲ್ಲಿ ಕೂಡ ಹೆಚ್ಚು ಬೆಳೆಯಲಾಗುವ ಈ ಗಸಗಸೆಯ ಉತ್ಪನ್ನಕ್ಕೆ ವಿಶ್ವಾದ್ಯಂತ ಗ್ರಾಹಕರಿದ್ದಾರೆ. ಪ್ರಮುಖವಾಗಿ ನೋವು ನಿವಾರಕವಾಗಿ, ರಕ್ತಹೆಪ್ಪುಗಟ್ಟಿ ಹೃದಯ ಸ್ಥಂಭನವಾದಾಗ, ಮಾನಸಿಕ ಅಸ್ವಸ್ಥತೆ ಗಳಿಗೆ, ಕ್ಯಾನ್ಸರ್ ಚಿಕಿತ್ಸೆಗೆ, ಖಿನ್ನತೆ, ಭಯ, ಟೈಫಾಯ್ಡ್ ಜ್ವರ, ಮೂಳೆಗಳ ಸುಸ್ಥಿತಿಗೆ, ಮೂತ್ರಕೋಶದ ಸಮಸ್ಯೆಗಳಿಗೆ, ನಿದ್ರಾಹೀನತೆಯೇ ಮೊದಲಾದ ಸಂದರ್ಭಗಳಲ್ಲಿ ವೈದ್ಯಕೀಯವಾಗಿ ಚುಚ್ಚುಮದ್ದಿನ ರೂಪ ಅಥವಾ ಮೌಖಿಕವಾಗಿ ಬಳಸಲ್ಪಡುತ್ತದೆ. ಅಡುಗೆ ಹಾಗೂ ಸೌಂದರ್ಯ ವರ್ಧಕವಾಗಿಯೂ ಗಸಗಸೆ ಬೀಜದ ಎಣ್ಣೆ ಬಳಕೆಯಲ್ಲಿದೆ. ಇದರ ಹಿಂಡಿ ಜಾನುವಾರಿಗೆ ಆಹಾರವಾಗಿದೆ. ಸಾವಿರಾರು ವರ್ಷಗಳಿಂದ ಅಫೀಮು ಔಷಧಿಯಾಗಿ ಬಳಸಲ್ಪಡುತ್ತಿದ್ದು 17 ನೇ ಶತಮಾನದಿಂದ ಲಾಭದಾಯಕ ಸರಕಾಗಿ ಮಾರ್ಪಟ್ಟಿತು. ಇದರ ಮಾರಾಟದ ಬಗ್ಗೆ ಹಲವಾರು ಯುದ್ಧಗಳೇ ನಡೆದುವು! ಪ್ರಾಚೀನ ನಾಗರೀಕತೆಗಳಾದ್ಯಂತ ಅಫೀಮನ್ನು ಆಹಾರ, ಔಷಧ, ಆಚರಣೆ, ನೋವು ನಿವಾರಕವಾಗಿ ಬಳಸುತ್ತಿದ್ದುದೇ ಅಲ್ಲದೆ ಮೈಸೀನಿಯಾದ ನಾಗರೀಕತೆಯಲ್ಲಿ ರಾಜಮನೆತನಗಳ ಸಮಾಧಿಗಳ ಮೇಲೆ ಇದನ್ನು ಪೂಜಾವಸ್ತುವಾಗಿ ಚಿತ್ರಿಸಲಾಗುತ್ತಿತ್ತು. ಮೆಡಿಟರೇನಿಯನ್ ಪ್ರದೇಶ ಮಾನವ ಬಳಕೆಯ ಅತ್ಯಂತ ಹಳೆಯ ಪುರಾತತ್ವ ಶಾಸ್ತ್ರದ ಪುರಾವೆ ಹೊಂದಿದೆ ಎನ್ನಲಾಗಿದೆ. ಅತ್ಯಂತ ಹಳೆಯ ಬೀಜಗಳು ನವ ಶಿಲಾಯುಗಕಿಂತಲೂ ಹಿಂದಿನವೆಂದು ಪ್ರಾಚೀನ ಗ್ರೀಸ್ ಪುರಾವೆಗಳಲ್ಲಿದೆಯಂತೆ! ಸುಮೇರಿಯನ್ ನಾಗರೀಕತೆಯಲ್ಲಿದನ್ನು ಸಂತೋಷ ಸಸ್ಯವೆನ್ನುತ್ತಿದ್ದರು.ಅಸಿರಿಯನ್ನರು, ಬ್ಯಾಬಿಲೋನಿಯನ್ನರು, ಈಜಿಪ್ಟಿಯನ್ನರು ಇದನ್ನು ಮುಂದುವರಿಸಿದರು. ಮೆಡಿಟರೇನಿಯನ್ ಕಾಲದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಮಾಂತ್ರಿಕ ಸಸ್ಯ ವೆಂದು, ವಿಷಕಾರಿ ಸಸ್ಯವೆಂದೂ ಗುರುತಿಸಲಾಗಿತ್ತು. ಈಜಿಪ್ಟ್ ನಲ್ಲಿ ಪುರೋಹಿತ, ಜಾದೂಗಾರರು ಬಳಸುತ್ತಿದ್ದರು ಮಾತ್ರವಲ್ಲದೇ ಯೋಧರಿಗೆ ಮಾತ್ರ ಸೀಮಿತವಾಗಿತ್ತು.

ಅಫೀಮಿನ ನಿದ್ರಾಜನಕ ಸಾಮರ್ಥ್ಯ ಉಲ್ಲೇಖಿಸಿ ಇದರ ನಿರ್ಧಿಷ್ಟ ಹೆಸರು ಸೋಮ್ನಿಫೆರಮ್. ಅಂದರೆ ನಿದ್ರೆ ತರುವುದು ಎಂದರ್ಥ. ಪಾಪವೆರೇಸಿ ಕುಟುಂಬದ ಗಸಗಸೆ ಸಸ್ಯದಲ್ಲಿ ಖಾದ್ಯ ಬೀಜ ನೀಡುವ 52 ಪ್ರಭೇದಗಳಿದ್ದು Popaver somnifferum ಎಂಬುದು ಇದರ ಸಸ್ಯ ಶಾಸ್ತ್ರೀಯ ಹೆಸರಾಗಿದೆ.

ಮಕ್ಕಳೇ... ನಮ್ಮ ಬಳಕೆಯ ಸಸ್ಯ ಉತ್ಪನ್ನವೊಂದರ ಬೆನ್ನುಹತ್ತಿದಾಗ ಅನಾವರಣಗೊಂಡ ರೋಚಕ ಕತೆ ನಿಮ್ಮಂತೆ ನನಗೂ ವಿಶೇಷ ಅನುಭವ ನೀಡಿತು. ನಾವು ಕಾಣುತ್ತಿರುವ ಈ ನಿಸರ್ಗ ಸಾಮಾನ್ಯವಾದುದಲ್ಲ ಎಂದು ಮತ್ತೆ ಮತ್ತೆ ಅನಿಸುವಂತೆ ಮಾಡಿತಲ್ಲವೇ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************



Ads on article

Advertise in articles 1

advertising articles 2

Advertise under the article