ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 92
Tuesday, August 12, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 92
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.. ಹಿಂದಿನ ವಾರ ಜೀವಕೋಶ ಸಿದ್ದಾಂತದ ಬಗ್ಗೆ ಚರ್ಚಿಸುವಾಗ ಎರಡು ವಿಷಯಗಳು ನಮಗೆ ತಿಳಿದವು. ಮೊದಲನೆಯದು ಎಲ್ಲಾ ಜೀವಿಗಳು ಕೋಶಗಳಿಂದ ಮಾಡಲ್ಪಟ್ಟಿವೆ. ಎರಡನೆಯದು ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕೋಶಗಳಿಂದ ಅವತರಿಸುತ್ತವೆ. ಅಂದರೆ ಜೀವಕೋಶಗಳು ತಮ್ಮ ತದ್ರೂಪುಗಳನ್ನು ಸೃಷ್ಟಿಸುತ್ತವೆ ಎಂದಾಯಿತು. ಈ ರೀತಿ ತನ್ನದೇ ಆದ ತದ್ರೂಪಗಳನ್ನು ತಯಾರಿಸುವುದು ಎಂದರೆ ಒಂದು ಏಕ ಕೋಶಿಕ ಜೀವಿಯ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಈ ರೀತಿ ಸಂಖ್ಯೆ ಹೆಚ್ಚುವುದನ್ನು ನಾವು ವಂಶಾಭಿವೃದ್ಧಿ ಎಂದು ಹೇಳುವುದು.
ಈ ವಂಶಾಭಿವೃದ್ಧಿ ಸಾಮರ್ಥ್ಯವನ್ನು ಕೋಶಕ್ಕೆ ನೀಡಿರುವ ಆ ಮಹಾನುಭಾವ ಯಾರು? ಒಂದು ಜೀವಕೋಶ ಎಂದರೆ ಹೆಚ್ಚೂ ಕಡಿಮೆ 95% ನೀರು. ನೀವು ಹೇಳುವ ನಮ್ಮ ದೇಹದ ಅತೀ ಕಠಿಣ ಮತ್ತು ಒಣ ವಸ್ತುವೆಂದರೆ ಹಲ್ಲು. ಕತ್ತೆ ಕಿರುಬದ ಹಲ್ಲುಗಳು ಎಂತಹ ಮೂಳೆಗಳನ್ನೂ ಕಟಕಟನೆ ನುರಿದು ತಿಂದು ಬಿಡುತ್ತವೆ. ಈ ಕತ್ತೆ ಕಿರುಬಗಳ ಹಲ್ಲಿನಲ್ಲಿ 58% ದಷ್ಟು ನೀರು ಇದೆಯಂತೆ. ನೀರು ತನ್ನ ತದ್ರೂಪನ್ನು ತಯಾರಿಸಲಾರದು. ಉಳಿದವು ಪ್ರೋಟೀನುಗಳು, ಕಾರ್ಬೊಹೈಡ್ರೇಟುಗಳು ಮತ್ತು ಕೊಬ್ಬು. ಬೇರೆ ಬೇರೆ ರೂಪದಲ್ಲಿರುತ್ತವೆ. ಕಾರ್ಬೊಹೈಡ್ರೇಟುಗಳನ್ನು ಸಸ್ಯಗಳೇ ತಮ್ಮ ದ್ಯುತಿ ಸಂಶ್ಲೇಷಣೆಯ ವೇಳೆ ತಯಾರಿಸಬೇಕಷ್ಟೇ. ಇನ್ನು ಪ್ರೋಟೀನುಗಳು ಜೀವಕೋಶದ ಒಳಗಿರುವ ರೈಬೋಸೋಮುಗಳೆಂಬ ಕಾರ್ಖಾನೆಯಲ್ಲಿ ಸಿದ್ದವಾಗುವಂತವು. ಇನ್ನು ಕೊಬ್ಬಿಗಾಗಿ ನಾವು ಎಣ್ಣಿಕಾಳುಗಳನ್ನೋ, ಮಾಂಸ, ಮೊಟ್ಟೆಗಳನ್ನೋ ಅವಲಂಬಿಸಬೇಕಾಗಿದೆ. ಇವುಗಳೆಲ್ಲ ನಿರ್ಜೀವ ವಸ್ತುಗಳು. ಜೈವಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತಾ ಜೀವ ವ್ಯಾಪಾರಗಳಿಗೆ ಕಾರಣವಾಗುತ್ತವಷ್ಟೇ.
ಹಾಗಾದರೆ ವಂಶೋತ್ಪತ್ತಿ ಸಾಮರ್ಥ್ಯ ಹೊಂದಿರುವ ಆ ರಾಸಾಯನಿಕ ಯಾವುದು? ಅವುಗಳೇ ನ್ಯೂಕ್ಲಿಯಿಕ್ ಆಮ್ಲಗಳು. ಕೆಳ ವರ್ಗದ ಜೀವಿಗಳಲ್ಲಿ ರೈಬೋಸ್ ನ್ಯೂಕ್ಲಿಯಿಕ್ ಆಮ್ಲಗಳು (RNA) ಈ ಕೆಲಸವನ್ನು ಮಾಡಿದರೆ ಮೇಲ್ವರ್ಗದ ಜೀವಿಗಳಲ್ಲಿ ಈ ಕೆಲಸವನ್ನು ಮಾಡಲು ಡಿ ಆಕ್ಸಿ ರೈಬೋಸ್ ನ್ಯೂಕ್ಲಿಯಿಕ್ ಆಮ್ಲಗಳಿವೆ (DNA). ಅಂದರೆ ಈ ಭೂಮಿಯ ಮೇಲೆ ತನ್ನದೇ ತದ್ರೂಪನ್ನು ತಯಾರಿಸುವ ಸಾಮರ್ಥ್ಯ ಇರುವ ಏಕೈಕ ವಸ್ತು ಎಂದರೆ ಅವು ನ್ಯೂಕ್ಲಿಯಿಕ್ ಆಮ್ಲಗಳು. ಈ ನ್ಯೂಕ್ಲಿಯಿಕ್ ಆಮ್ಲಗಳು ಇರುವುದರಿದಲೇ ಕೋಶಗಳು ಪುನರುತ್ಪತ್ತಿ ಹೊಂದಬಲ್ಲವು. ಏಕ ಕೋಶಿಕ ಜೀವಿಗಳಲ್ಲಿ ಇದು ವಂಶಾಭಿವೃದ್ಧಿಯಾದರೆ ಬಹುಕೋಶೀಯ ಜೀವಿಗಳಲ್ಲಿ ಇದು ಬೆಳವಣಿಗೆ. ಯಾವುದೇ ಕೋಶ ರಚನೆಯಿಲ್ಲದೇ ಬರಿಯ ನ್ಯೂಕ್ಲಿಯಿಕ್ ಆಮ್ಲವನ್ನು ಮಾತ್ರ ಹೊಂದಿರುವ ವೈರಸ್ಗಳು ಕೂಡಾ ವಂಶಾಭಿವೃದ್ಧಿ ನಡೆಸಬಲ್ಲವು. ಆದರೆ ನಾವು ವೈರಸ್‌ಗಳನ್ನು ವೈರಸ್ ಕಣಗಳು ಎನ್ನಬಹುದೇ ಹೊರತು ಜೀವಿಗಳೆನ್ನಲಾಗದು. ಏಕೆಂದರೆ ಅವುಗಳಲ್ಲಿ ಕೋಶ ರಚನೆ ಇಲ್ಲ. ಜೀವಿ ಎಂದರೆ ಕೋಶ ರಚನೆ ಹೊಂದಿರಬೇಕು ಮತ್ತು ವಂಶಾಭಿವೃದ್ಧಿ ಸಾಮರ್ಥ್ಯವಿರಬೇಕು. ಇದೇ ಜೀವಕೋಶ ಸಿದ್ದಾಂತ.
ಅಂದರೆ ಜೀವಿಯ ಸೃಷ್ಟಿ ಬಹಳ ಸುಲಭ ಎಂದಾಯಿತು. ಒಂದು ಲಕೋಟೆ ತೆಗೆದುಕೊಂಡು ಅದರೊಳಗೆ ಒಂದಷ್ಟು ನೀರು ಅದರೊಳಗಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ಮತ್ತೊಂದಷ್ಟು ವಸ್ತುಗಳನ್ನು ಸೇರಿಸಿ ಅದರೊಳಗೊಂದು ತುಂಡು ನ್ಯೂಕ್ಲಿಯಿಕ್ ಆಮ್ಲವನ್ನು ಎಸೆದು ಬಿಟ್ಟರೆ ಅದು ಒಂದು ಕೋಶವಾಗಿ ಬಿಡುತ್ತದೆ. ಅದು ವಂಶಾಭಿವೃದ್ಧಿ ನಡೆಸುತ್ತಾ ತನ್ನ ಪೀಳಿಗೆಯನ್ನು (progeny) ಮುಂದುವರೆಸಿಕೊಂಡು ಹೋಗುತ್ತದೆ. ಇಲ್ಲಿ ನೀರಿನಲ್ಲಿ ಬೆರೆತು ಹೋಗಿರುವ ಜೀವಕೋಶದ ಘಟಕಗಳನ್ನು ನಾವು ಕೋಶ ರಸ (cytoplasm). ಈ ಕೋಶ ರಸವನ್ನು ಆವರಿಸಿರುವ ಲಕೋಟೆಯು ಕೋಶ ಪೊರೆ (cell membrane) ಅಥವಾ ಕೋಶ ರಸ ಪೊರೆ (plasma membrane). ಆದರೆ ಇಲ್ಲಿ ನ್ಯೂಕ್ಲಿಯಿಕ್ ಆಮ್ಲ ನಗ್ನವಾಗಿದೆ. ಅದರ ಸುತ್ತ ಯಾವುದೇ ಪೊರೆ ಇಲ್ಲ. ಅಂದರೆ ಇವು ನಿಶ್ಚಿತ ಕೋಶ ಕೇಂದ್ರವಲ್ಲ. ನಿಶ್ಚಿತ ಕೋಶಕೇಂದ್ರ ಹೊಂದಿರದ ಜೀವಿಗಳು ಪ್ರೋಕ್ಯಾರಿಯೋಟ್ ಗಳು. ಲ್ಯಾಟಿನ್ ನಲ್ಲಿ pro ಅಂದರೆ ಹಿಂದುಳಿದ karyous ಎಂದರೆ ಕೋಶ ಕೇಂದ್ರ. ಪ್ರೋಕ್ಯಾರಿಯೋಟ್ ಗಳಿಗೆ ಉದಾಹರಣೆ ಎಂದರೆ ಬ್ಯಾಕ್ಟೀರಿಯಾಗಳು. ಆದರೆ ಮುಂದುವರಿದ ಜೀವಿಗಳಲ್ಲಿ ಪ್ರತ್ಯೇಕ ಕೋಶ ಕೇಂದ್ರವಿದೆ. ಅಂದರೆ ಅವುಗಳ ಕೋಶ ಕೇಂದ್ರಗಳು ಕೂಡಾ ಜೀವಕೋಶದಂತೆ ಪೊರೆಯೊಂದರಿಂದ ಆವೃತ್ತವಾಗಿವೆ. ಇವುಗಳನ್ನು ಯೂಕ್ಯಾರಿಯೋಟ್ ಗಳು (eukaryotes) ಎನ್ನುವುದು.
ಲ್ಯಾಟಿನ್ ನಲ್ಲಿ eu ಎಂದರೆ ನಿಜವಾದ ಅಥವಾ ಸ್ವತಂತ್ರ ಎಂದರ್ಥ. ಇಷ್ಟೇ ಅಲ್ಲ ಜೀವಕೋಶಗಳೊಳಗೆ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸಲು ಅಂದರೆ ಉಸಿರಾಟ, ಪ್ರೋಟೀನ್ ತಯಾರಿಕೆ, ದ್ಯುತಿ ಸಂಶ್ಲೇಷಣೆ, ಸಾಗಾಣಿಕೆ ಇತ್ಯಾದಿ ಪ್ರತ್ಯೇಕ ರಚನೆಗಳಿವೆ. ಅವುಗಳನ್ನು ಅಂಗಕಣಗಳು ಅಥವಾ ಕಣದಂಗಗಳು (organelles) ಎನ್ನುತ್ತೇವೆ. ಅದನ್ನು ಅಂಗಕಣ ಎನ್ನಬೇಕಾದರೆ ಅವುಗಳ ಸುತ್ತಲೂ ಲಕೋಟೆ ಇರಬೇಕು. ಆದ್ದರಿಂದ ಜೀವಕೋಶಗಳಲ್ಲಿರುವ ಅಂಗಕಣಗಳಾದ ಮೈಟೊಕಾಂಡ್ರಿಯ, ರೈಬೋಸೋಮ್, ಹರಿದ್ರೇಣು, ಲೈಸೋಸೋಮ್ ಇತ್ಯಾದಿಗಳು ಕೂಡಾ ಲಕೋಟೆಯ ಒಳಗಿವೆ..
ನೋಡಿದಿರಾ ಒಂದು ಕೋಶ ಹಿಂದುಳಿದಿದೆಯೇ ಮುಂದುವರಿದಿದೆಯೇ ಎಂದು ನಿರ್ಧರಿಸುವುದು ಒಂದು ಲಕೋಟೆ. ಅಂಗಡಿಯಿಂದ ಸಾಮಗ್ರಿಗಳನ್ನು ತಂದು ವ್ಯರ್ಥ ಎಂದು ಎಸೆದುಬಿಡುವ ಲಕೋಟೆಗಳು ಯಾರದೋ ಹಣೆ ಬರೆಹ ಬರೆಯುತ್ತವೆ ಎಂಬುದು ಅಚ್ಚರಿಯಲ್ಲವೇ.
ನಮಗೆ ಈ ವಾರ ಜೀವಜಾಲದ ಲಕೋಟೆಗಳ ಬಗ್ಗೆ ಹೇಳುತ್ತೀರಿ ಎಂದಿದ್ದೀರಿ ಆದರೆ ಏನು ಹೇಳಿಲ್ಲವಲ್ಲ ಎಂದು ಆರೋಪಿಸಬೇಡಿ. ನನ್ನ ಶಿಷ್ಯ ಮತ್ತು ಮಿತ್ರ ಶ್ರೀ ಗೌತಮ್ ನಾನು ಬಹಳ ಹಿಂದೆ ಬರೆದ ಲೇಖನವೊಂದನ್ನು ಸಮರ್ಥಿಸುವ ಸಾಹಿತ್ಯ ಕಳುಹಿಸಿದ್ದಾನೆ. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕಾದುದರಿಂದ ನಾನು ಹೊರಳು ಹಾದಿಯನ್ನು ಕ್ರಮಿಸಬೇಕಾಯಿತು. ನೀವು ಕಾದಿರುವ ವಿಷಯಕ್ಕೆ ಇನ್ನೆರಡು ಬುಧವಾರ ಕಾಯಬೇಕು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************