ನಿಷ್ಪಾಪಿ ಸಸ್ಯಗಳು : ಸಂಚಿಕೆ - 115
Thursday, August 14, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 115
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಸಮೃದ್ಧವಾಗಿದ್ದ ಭಾರತದಿಂದ ಬ್ರಟೀಷರು, ಪೋರ್ಚುಗೀಸರು , ಫ್ರೆಂಚರು, ಡಚ್ಚರು ಇಲ್ಲಿಂದ ಸಾಂಬಾರ ವಸ್ತುಗಳನ್ನು, ಚಿನ್ನ ಬೆಳ್ಳಿ, ಮುತ್ತು, ರತ್ನಗಳನ್ನು ಇಂಚಿಂಚೂ ಬಿಡದೆ ದೋಚಿದ್ದೇ ಅಲ್ಲದೆ ಭಾರತವನ್ನು ಐದಾರು ಶತಮಾನಗಳ ಕಾಲ ಗುಲಾಮಗಿರಿಗೆ ತಳ್ಳಿದರು. ಭಾರತಕ್ಕೆ ಬರುವಾಗ ತಮ್ಮ ಉಪಯೋಗಕ್ಕಾಗಿ ಪರಕೀಯರು ಕೆಲವು ಸಸ್ಯಗಳನ್ನೂ ತಂದರೆಂದು ಇತಿಹಾಸವು ತಿಳಿಸುತ್ತದೆ. ಪೋರ್ಚುಗೀಸರು 15ನೇ ಶತಮಾನದಲ್ಲಿ ತಮ್ಮ ವಶದಲ್ಲಿದ್ದ ತೋಟ, ಗದ್ದೆಗಳ ಬದುಗಳಿಗೆ ನೆಡಲು ತಮ್ಮ ದೇಶದಿಂದ ಕ್ಯಾಕ್ಟಸ್ ಜಾತಿಯ ಕತ್ತಾಳೆ ಎಂಬ ಸಸ್ಯವನ್ನು ತಂದರು. ಬೆಳೆಗಳಿಗೆ ಇದೊಂದು ನೈಸರ್ಗಿಕ ರಕ್ಷಣೆ ನೀಡುವ ಸಸ್ಯವಾಗಿದೆ. ಕಡಿಮೆ ನೀರೇ ಇದ್ದರೂ, ಬಂಜರು ಭೂಮಿಯೇ ಆದರೂ ಯಾವುದೇ ರೋಗ ತಗುಲಿಸಿ ಕೊಳ್ಳದ, ಕೀಟನಾಶಕದ ಅಗತ್ಯವೇ ಇಲ್ಲದ ಈ ನಿಷ್ಪಾಪಿ ಸಸ್ಯ ಇದೀಗ ನಮ್ಮ ಬಯಲು ಸೀಮೆಯ ಜನರಿಗೆ ತುತ್ತಿನ ಚೀಲವನ್ನು ತುಂಬುವ ಸಾಮರ್ಥ್ಯ ಪಡೆದುಕೊಂಡಿದೆ. ಕೃಷಿಯೇ ಹಿಡಿಸದ ಮೊಳಕಾಲ್ಮೂರು, ಚಳ್ಳಕೆರೆಯಂತಹ ತಾಲೂಕುಗಳಲ್ಲಿ ಕತ್ತಾಳೆಯೇ ಉಪಕಸುಬಿನ ಮೂಲ! ಕೋಲಾರ ಜಿಲ್ಲೆಯಲ್ಲಿ ಗಿಡಗಂಟಿಗಳ ನಡುವೆ ಬೆಳೆದು ನಿಲ್ಲುವ ಕತ್ತಾಳೆಯನ್ನು ಕಡಿದು ಸ್ವಚ್ಛಗೊಳಿಸಲು ಸ್ಥಳೀಯರಿಗೆ ಸಾಧ್ಯವಾಗದಾಗ ಮುಂಗಾರಿನ ಸಮಯದಲ್ಲಿ ತಮಿಳುನಾಡಿನಿಂದ ಕುಟುಂಬ ಸಮೇತರಾಗಿ ಬರುವ ಜನರು ಕತ್ತಾಳೆ ಕಡಿದು ನಾರು ತೆಗೆದು ಮಾರುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲಿ ಕತ್ತಾಳೆ ಕಡಿದು ಸ್ವಚ್ಛಗೊಳಿಸುವ ಕೆಲಸ ಮಾಡಿದವರಿಗೆ ಬೇರೆ ಸಂಬಳ ಕೊಡುವ ಕ್ರಮವಿಲ್ಲ. ಪರಸ್ಪರ ಸಹಕಾರವೇ ಇಲ್ಲಿ ಪ್ರಮುಖವಾಗುತ್ತದೆ. ಹೀಗೆ ಬಯಲು ಸೀಮೆಯಲ್ಲಿ ಬೆಳೆದ ಕತ್ತಾಳೆ ಕರಾವಳಿಯ ಬಂದರುಗಳಲ್ಲಿ ಹಡಗುಗಳ ಲಂಗರು ಹಾಕುವ ದಪ್ಪ ಹಗ್ಗದ ಕಚ್ಚಾ ವಸ್ತುವಾಗುತ್ತದೆ!!
ಕನ್ನಡದಲ್ಲಿ ಕತ್ತಾಳೆ, ಕತ್ತಾಳಿ, ದೆವ್ವಬಾಳೆ, ರಾಕ್ಷಸ ಬಾಳೆ, ಕಲ್ನಾರು, ನೀಲಿ ಭೂತಾಳೆ, ರಕ್ಕಸ ಪಟ್ಟಿ ಎಂದೆಲ್ಲ ಕರೆಸಿಕೊಳ್ಳುವ ಕತ್ತಾಳೆ ಮೆಕ್ಸಿಕೊ ಗೆ ಸ್ಥಳೀಯ ಸಸ್ಯವಾಗಿದೆ. Agavaceae ಕುಟುಂಬಕ್ಕೆ ಸೇರಿದ ಕತ್ತಾಳೆಗೆ ಅಗೇವ್ ಲಸಲಾನಾ ಎಂಬ ಶಾಸ್ತ್ರೀಯ ಹೆಸರಿದೆ. ಏಕದಳ ಸಸ್ಯಗಳ ಗುಂಪಿನ ಕತ್ತಾಳೆಯನ್ನು ತುಳು ಭಾಷೆಯಲ್ಲಿ ದಡ್ಪಲೆ ಎನ್ನುವರು. ಆಂಗ್ಲ ಭಾಷೆಯಲ್ಲಿ Cenchury plant. ಇದರಲ್ಲಿ 275 ಕ್ಕಿಂತಲೂ ಹೆಚ್ಚು ಪ್ರಭೇದಗಳಿವೆ. ಕೈಗಾರಿಕಾ ದೃಷ್ಟಿಯಿಂದ ಹಾಗೂ ಅಲಂಕಾರಕ್ಕಾಗಿ ಭಾರತಕ್ಕೆ ಬಂದ ಕತ್ತಳೆಯ ಕೃಷಿ 17 ನೇ ಶತಮಾನದಿಂದ ಆರಂಭವಾಯಿತೆನ್ನಲಾಗುತ್ತದೆ.
ದಪ್ಪ ತಿರುಳಿರುವ ಎಲೆಗಳನ್ನು ಹೊಂದಿದ ಕತ್ತಾಳೆ ಭೂಮಿಯ ಗಡಿ ಗುರುತುಗಳಾಗಿ, ಪ್ರಾಣಿಗಳಿಂದ ರಕ್ಷಣೆಗಾಗಿ, ಭೂ ಸವೆತ ತಡೆಗಟ್ಟಲು, ಜಾಗದ ರಕ್ಷಣೆಗಾಗಿ ಮೊದಮೊದಲು ಬಳಸಲ್ಪಟ್ಟಿತ್ತಾದರೂ ದಿನ ಕಳೆದಂತೆ ಕೃಷಿಕನಿಗೆ ದುಡ್ಡು ತಂದು ಕೊಡುವ ವಾಣಿಜ್ಯ ಸಸ್ಯವಾಗಿ ರೂಪಾಂತರಗೊಂಡಿತು. ಮಣ್ಣಿನ ಲವಣಾಂಶ ಹಾಗೂ ಮಳೆ ಪ್ರಮಾಣ ಅವಲಂಬಿಸಿ 7ರಿಂದ 10 ವರ್ಷ ಬದುಕಬಲ್ಲ ಕತ್ತಾಳೆಯ ಕಾಂಡದ ಸುತ್ತಲೂ ಕಮಲದಳಗಳಂತೆ ಬಹು ಸುಂದರವಾದ ಎಲೆಗಳಿರುತ್ತವೆ. ಒಂದೆರಡು ಮೀಟರ್ ಉದ್ದ 10 ರಿಂದ 15 ಸೆಂ.ಮೀ ಅಗಲವಿರುವ ಎಲೆಗಳು ಕಾಂಡವೇ ರೂಪಾಂತರಗೊಂಡಂತಿದೆ. ದಪ್ಪನೆಯ ಎಲೆಗಳ ಅಂಚುಗಳಲ್ಲೂ ಚೂಪಾದ ಮುಳ್ಳು, ಉದ್ದನೆಯ ಎಲೆಯ ತುದಿಯಲ್ಲಿರುವ ಒಂದಿಂಚಿನಷ್ಟುದ್ದದ ಮುಳ್ಳಂತೂ ಗಟ್ಟಿಯಾಗಿದ್ದು ಚೂಪಾಗಿರುತ್ತದೆ. ಇದನ್ನು ಹಿಂದೆ ಕಿವಿ ಮೂಗು ಚುಚ್ಚಲೂ ಬಳಸುತ್ತಿದ್ದರಂತೆ!
ಗಿಡಕ್ಕೆ ಎಂಟು ಹತ್ತು ವರ್ಷಗಳಾದಾಗ ಮಧ್ಯ ಭಾಗದಿಂದ ಒಂದು ದಿಂಡು ನೇರವಾಗಿ ಕಂಬದಂತೆ ಹೊರಟು 5 - 10 ಮೀಟರ್ ಎತ್ತರ ಬೆಳೆಯುತ್ತದೆ. ಇದರ ತುದಿಯಲ್ಲಿ ಹೂಗೊಂಚಲುಗಳು ಇರುತ್ತವೆ. ಸುಂದರವಾದ ಹಳದಿ ಪುಟ್ಟ ಹೂಗಳ ಜೊತೆ ಬಲ್ಬಿಲುಗಳೆಂಬ ಕಾಯಿಯಂತಹ ರಚನೆಯಾಗಿ ಅವುಗಳೇ ಮರಿಗಿಡಗಳಾಗಿ ರೂಪಾಂತರವಾಗಿ ಕ್ರಮೇಣ ಆ ದಿಂಡು ಒಣಗಿ ಭೂಮಿಗೊರಗಿದಾಗ ಆಗಸದಲ್ಲಿದ್ದು ಪೂರ್ಣ ಬಲಿತ ಪುಟಾಣಿ ಮರಿಗಿಡಗಳೆಲ್ಲ ಭೂಮಿಯಲ್ಲಿ ಪರಿಸ್ಥಿತಿ ನೋಡಿಕೊಂಡು ನೆಲೆಯೂರಿ ಮೊಳೆತು ಬೇರುಗಳನ್ನು ಹರಡಿಸುತ್ತದೆ..! ತಾಯಿ ಗಿಡ ಒಣಗುತ್ತದೆ. ಈ ಸೃಷ್ಟಿಯ ವೈಚಿತ್ರ್ಯವನ್ನು ನೀವು ಒಮ್ಮೆಯಾದರೂ ನೋಡಲೇ ಬೇಕು.
ಮನುಷ್ಯ ಕಳ್ಳಿ ಜಾತಿಯ ಕತ್ತಾಳೆಯಲ್ಲೂ ತನ್ನ ಹಿತದ ಜಾಡನ್ನರಸಿದ್ದಾನೆ..! ಅದೂ ಹೂವುಗಳು ಅರಳಲು ಆರಂಭಿಸಿದರೆ ಸಾಕು. ಅದನ್ನು ಕತ್ತರಿಸಿ ದಿಂಡಿನ ರಸವನ್ನು ಹುಳಿಬರಿಸಿ ಉತ್ಕೃಷ್ಟ ಮದ್ಯವನ್ನು ತಯಾರಿಸುತ್ತಾರೆ. ಮೆಕ್ಸಿಕೋದಲ್ಲಿ ಇದನ್ನು ಪಲ್ಕ್ ಎನ್ನುವರು. ಕತ್ತಾಳೆ ಬೆಳೆಯುವಲ್ಲೆಲ್ಲ ಇದು ಜನಪ್ರಿಯವಾಗಿದೆ! ಮೆಕ್ಸಿಕೋದಲ್ಲಿ ಈ ಮಾದಕ ಪಾನೀಯವನ್ನು ರಾಷ್ಟ್ರೀಯ ಪಾನೀಯವಾಗಿ ಸ್ವೀಕರಿಸಲಾಗಿದೆ. ಪಾನೀಯ ತಯಾರಿಸಿ ಉಳಿದ ವಸ್ತುಗಳನ್ನು ಅತ್ಯಂತ ಉಪಯುಕ್ತ ಕಾರ್ಟಿಸಾನ್ ಹಾಗೂ ಲೈಂಗಿಕ ಹಾರ್ಮೋನ್ ತಯಾರಿಸಲು ಬಳಸುವರು. ಇಷ್ಟು ಮಾತ್ರವಲ್ಲದೇ ಕತ್ತಾಳೆಯ ಎಲೆಗಳು ಮಾನವನಿಗೆ ಬಲು ಉಪಕಾರಿಯಾಗಿದೆ. ಅದು ಹೇಗಂತೀರಾ?ಕತ್ತಾಳೆಯ ಎಲೆಗಳನ್ನು ಪುಡಿಮಾಡಿ ಮೊಂಡಾದ ಚಾಕುಗಳಿರುವ ಚಕ್ರದ ನಡುವೆ ಉಜ್ಜಿದಾಗ ಎಲೆಯ ನಾರುಗಳು ದೊರೆಯುತ್ತವೆ. ಕತ್ತಾಳೆ ನಾರಿಗೂ ಪ್ರಸಿದ್ಧವಾಗಿದೆ. ಇವನ್ನು ಬಿಸಿಲಿನಲ್ಲಿ ಒಣಗಿಸದೆ ಕೃತಕ ಬಿಸಿಗೆ ಒಣಗಿಸುತ್ತಾರೆ. ಹೀಗೆ ಒಣಗಿದ ನಾರು ಹೆಚ್ಚು ಬೆಲೆಬಾಳುವ ವಸ್ತುವಾಗಿ ಕೈಗಾರಿಕೆಗಳಲ್ಲಿ , ಗೃಹೋಪಯೋಗಿ ವಸ್ತುಗಳಲ್ಲಿ ಬಳಕೆಯಾಗುತ್ತದೆ. ಕತ್ತಾಳೆ ನಾರಿಗೆ ಬೆಂಕಿ ತಾಗಿದರೆ ಹತ್ತಿಯ ರಾಶಿಯಂತೆ ಭಗ್ಗನೆ ಕೆಂಪು ಛಾಯೆಯ ಹಳದಿ ಬೆಳಕಿನಲ್ಲಿ ಹೊತ್ತಿ ಉರಿಯುತ್ತದೆ. ಕಾಗದ ಸುಟ್ಟಂತೆ ವಾಸನೆ ಇರುವುದು.
ಹಲ್ಲುನೋವು, ಮೂಳೆಮುರಿತ, ಕೂದಲು ಉದುರುವಿಕೆಗಳಿಗೆ ನೈಸರ್ಗಿಕ ಪರಿಹಾರ ನೀಡುವ ಕತ್ತಾಳೆಯನ್ನು ಐತಿಹಾಸಿಕವಾಗಿ ಅಜ್ಟೆಕ್ ಮತ್ತು ಮಾಯನ್ನರು ಬಟ್ಟೆ ಹಾಗೂ ಕಾಗದಕ್ಕಾಗಿ ಬಳಸಿದ್ದರೆನ್ನಲಾಗಿದೆ.
ಕತ್ತಾಳೆ ನಾರಿನಿಂದ ಬಟ್ಟೆ, ಸಾಬೂನು, ಹಾಸಿಗೆ ಸೋಫಗಳ ಒಳಗೆ ತುಂಬಿಸಲು, ದಾರ, ಬಣ್ಣ ಬಳಿಯುವ ಬ್ರಷ್, ಕಾಲೊರೆಸುವ ಮ್ಯಾಟ್, ಪಾತ್ರೆ ತೊಳೆಯುವ ನಾರು, ಚೀಲ, ಚಾಪೆ, ಕಾಗದ, ಪಾದರಕ್ಷೆ, ಟೋಪಿಗಳನ್ನು ತಯಾರಿಸುವುದಲ್ಲದೇ ಫೈಬರ್ ಗ್ಲಾಸ್, ರಬ್ಬರ್, ಕಾಂಕ್ರೀಟ್ ಉತ್ಪನ್ನಗಳಿಗೆ ಕಚ್ಚಾವಸ್ತುವಾಗಿದೆ. ಆಟೊಮೊಬೈಲ್ ಉದ್ಯಮದಲ್ಲೂ ಬಳಕೆಯಿದೆ. ಉಪ್ಪು ನೀರಲ್ಲೂ ಈ ನಾರು ಬಣ್ಣ ಕಳೆದುಕೊಳ್ಳದು! ಆದ್ದರಿಂದಲೇ ಬೇಡಿಕೆ ಪಡೆದುಕೊಂಡಿದೆ. 2020ರಲ್ಲಿ ಜಾಗತಿಕ ಕತ್ತಾಳೆ ಉತ್ಪಾದನೆ 2,10,000 ಟನ್ ಗಳಷ್ಟಿತ್ತು. ಬ್ರಜಿಲ್ ಅತಿ ದೊಡ್ಡ ಉತ್ಪಾದಕ ದೇಶ. ಪ್ರತಿ ಎಲೆ ಸಾಮಾನ್ಯವಾಗಿ 1000 ದಷ್ಟು ನಾರುಗಳನ್ನು ನೀಡುತ್ತದೆ. ತನ್ನ ಜೀವಿತ ಕಾಲದಲ್ಲಿ ಒಂದು ಗಿಡವು ಏಳರಿಂದ ಹತ್ತು ವರ್ಷಗಳ ನಡುವೆ 200 - 250 ಎಲೆಗಳನ್ನು ನೀಡುತ್ತವೆ. ಒಂದು ಎಲೆಯು ಒಂದರಿದ ಎರಡು ರೂಪಾಯಿ ಬೆಲೆ ಬಾಳುತ್ತದೆ.1930 ರಿಂದ ಬ್ರೆಜಿಲ್ನಲ್ಲಿ ವಾಣಿಜ್ಯ ಬೆಳೆಯಾಗಿ ನೆಡುವಿಕೆ ಆರಂಭವಾಗಿ 1960 ರ ನಂತರ ನೂಲುವ ಗಿರಣಿಗಳನ್ನು ಸ್ಥಾಪಿಸಲಾಯಿತು. ಕತ್ತಾಳೆಯ ಹೂ ಬಿಡುವ ಅವಧಿ ದೀರ್ಘ ವಾಗಿದ್ದು ಜೇನು ನೊಣಕ್ಕೆ ಅಮೂಲ್ಯ ಮೇವನ್ನು ಒದಗಿಸುತ್ತದೆ ಮಾತ್ರವಲ್ಲದೆ ಈ ಜೇನುತುಪ್ಪಕ್ಕೂ ಬೇಡಿಕೆಯಿದೆ. ನಾರು ತೆಗೆದು ಉಳಿದ ಕಸವೂ ಉತ್ತಮ ಗೊಬ್ಬರವೆಂದು ಬೇಡಿಕೆ ಪಡೆದಿದೆ. ಇದರ ಗಡ್ಡೆಯ ತಿರುಳು ರುಚಿಕರವಾದ ಆಹಾರವಾಗಿದೆ. ಇಂದು ಅಂಗಾಂಶ ಕೃಷಿಯ ಮೂಲಕವೂ ಕತ್ತಾಳೆಯ ಕೃಷಿ ನಡೆಸುವುದು ಸುಲಭವೆನಿಸಿದೆ.
ಉದ್ಯಾನವನಗಳ ಸೌಂದರ್ಯ ಹೆಚ್ಚಿಸುವ ಘನತೆ ಪಡೆದ ಕತ್ತಾಳೆ ವೆನೆಜುವೆಲ ದ ಬ್ಯಾಕ್ರ್ವಿಸಿಮೆಟೊದ ಲಾಂಛನದಲ್ಲಿ ಕತ್ತಾಳೆ ಸ್ಥಾನ ಪಡೆದಿದೆ. ಹವಾಯಿ, ಫ್ಲೋರಿಡಾಗಳಲ್ಲಿ ಆಕ್ರಮಣ ಸಸ್ಯವೆಂದು ಪರಿಗಣಿಸಿದರೂ ಯಾವುದೇ ಕೀಟನಾಶಕದ ಅಗತ್ಯವಿಲ್ಲದೆ, ರಸಗೊಬ್ಬರದ ಹಂಗಿರದೆ ಸಮೂಲವಾಗಿ ಬಳಕೆಗೆ ಬರುವ ಕತ್ತಾಳೆ ಎಂಬ ವಿಶಿಷ್ಟ ಸಸ್ಯವು ಪ್ರಕೃತಿಯ ವಿಶೇಷ ಕೊಡುಗೆಯೆಂದರೆ ತಪ್ಪಲ್ಲ ಅಲ್ಲವೇ?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************