-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 177

ಸ್ಫೂರ್ತಿಯ ಮಾತುಗಳು : ಸಂಚಿಕೆ - 177

ಸ್ಫೂರ್ತಿಯ ಮಾತುಗಳು : ಸಂಚಿಕೆ - 177
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                            
ಬಹು ಅರ್ಥದಲ್ಲಿ “ಕಿಚ್ಚು” ಪದವನ್ನು ಬಳಸುತ್ತೇವೆ. ಬೆಂಕಿಯ ಕಿಡಿ ಎಂಬಲ್ಲಿ ಅಗ್ನಿಯೆಂಬ ಅರ್ಥವಾದರೆ ಹೊಟ್ಟೆ ಕಿಚ್ಚು ಎಂದಾಗ ಮತ್ಸರ ಎಂದು ತಿಳಿಯುತ್ತೇವೆ. ಅಗ್ನಿ, ಉರಿ, ಬೆಂಕಿ, ಹಠ, ಅತೃಪ್ತಿ, ಅಸಮಾಧಾನ, ಅಸೂಯೆ, ಮತ್ಸರ ಹೀಗೆ ನಾನಾ ಸಂದರ್ಭಗಳಲ್ಲಿ ಅರ್ಥ ವ್ಯತ್ಯಾಸವಾಗುತ್ತದೆ. ಕಿಚ್ಚು ಅಪಾಯಕಾರಿಯೇ ಉಪಕಾರಿಯೇ ಎಂಬ ಪ್ರಶ್ನೆಗೆ ಉತ್ತರವೂ ದ್ವಂದ್ವವೇ. ಕಟ್ಟಿಗೆಯ ಉರಿ ಅಥವಾ ಕಿಡಿ ಆಹಾರ ಬೇಯಿಸುವ ದೃಷ್ಟಿಯಿಂದ ಉಪಕಾರಿ. ಸತ್ತ ಹೆಣ ಸುಡುವುದಾದರೂ ಬೆಂಕಿ ಬೇಕು. ಬೆಂಕಿಯು ಊರನ್ನು ಸುಡು ಸುಡುವುದಾದರೆ ಎಲ್ಲರಿಗೂ ಭಯ.

ಸರದಾರ ವಲ್ಲಭ ಭಾಯಿ ಪಠೇಲರು ಭಾರತೀಯರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಮೊಳಕೆಯೊಡೆಯುವಂತೆ ಮಾಡಿದರು ಎನ್ನುವಾಗ ಕಿಚ್ಚಿಗೆ ಪ್ರೇರಣೆ ನೀಡಿದರು ಅಥವಾ ಹುಮ್ಮಸ್ಸನ್ನುಂಟುಮಾಡಿದರು ಎಂದು ಭಾಸವಾಗುತ್ತದೆ. ನೃತ್ಯ ಮಾಡುವ ಕಿಚ್ಚು ಶ್ಲಾಘನೀಯ ಎಂದಾಗ ತೀವ್ರವಾದ ಇಚ್ಛೆ ಅಥವಾ ಬಯಕೆಯೆಂದೂ ಮನನವಾಗುತ್ತದೆ. ಪರೀಕ್ಷೆಯಲ್ಲಿ ರೇಂಕ್ ಪಡೆಯಲೇ ಬೇಕೆಂಬ ಮನಸ್ಸಿನೊಳಗಿನ ಕಿಚ್ಚು ವಿದ್ಯಾರ್ಥಿಗಳನ್ನು ಸಾಧನಾ ಶೀಲರನ್ನಾಗಿಸುತ್ತದೆ ಎಂದಾಗ ಹಠ ಎಂದು ತಿಳಿಯುತ್ತೇವೆ. 

ಅವರ ಭಾಷಣದ ಕಿಚ್ಚು ಸಮಾಜದ ಶಾಂತಿಯನ್ನು ಕೆಡಿಸಿತು ಎಂದು ಮಾತನಾಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಮಾತು ಕೂಡಾ ಬೆಂಕಿಯಂತೆ ನಾಶದ ಕೆಲಸಗಳಿಗೆ ಹೇತುವಾಗುತ್ತದೆ. ಚಾಡಿಯ ಮಾತುಗಳು ಸಂಸಾರಗಳನ್ನು ಒಡೆದು ಹಾಕಿದ, ಸಂಬಂಧಗಳ ನಡುವೆ ಕಂಪನಗಳನ್ನುಂಟು ಮಾಡಿದ ಅನೇಕ ದೃಷ್ಟಾಂತಗಳಿವೆ. ಸಮುದಾಯಕ್ಕೆ ಪ್ರೇರಣಾದಾಯಕವಾಗಿರುವ ಮಾತಿನ ಕಿಚ್ಚು ಅಪೇಕ್ಷಣೀಯ. ತನ್ನವರನ್ನು ಮತ್ತು ಎಲ್ಲರನ್ನು ಸಂತಸ ಪಡಿಸುವ “ಕಿಚ್ಚು” ಪ್ರತಿಯೊಬ್ಬರಲ್ಲೂ ಬೇಕೇ ಬೇಕು. ಸಮಾಜದೊಳಗೆ ಬಿರುಕು ಅಥವಾ ಅಪಾಯಗಳಿಗೆ ಇಂಬು ನೀಡುವ ಕಿಚ್ಚಿನ ಮಾತು ಮತ್ತು ಕೃತಿಗಳು ಬೇಡವೇ ಬೇಡ. 

ನಾನೋದಿದ ಕಥೆಯೊಂದು ಹೀಗಿದೆ. ಹೊಟ್ಟೆಯೊಳಗಿನ ಕಿಚ್ಚು ಎಷ್ಟು ದುರದೃಷ್ಟಕರ ಎಂಬ ನೀತಿ ಈ ಕಥೆಯೊಳಗಡಗಿದೆ. ದೂರದೂರೊಳಗೆ ಬಹಳ ಪ್ರೀತಿಯಿಂದ ಬದುಕುವ ದಂಪತಿಯ ಒಂದು ಮನೆ. ಅವರೊಳಗೆ ಜಗಳಗಳು ಆಗುತ್ತಿರಲಿಲ್ಲ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಬಹಳ ಅನ್ಯೋನ್ಯತೆಯಿಂದಿದ್ದ ದಂಪತಿಗಳನ್ನು ನೋಡಿದ ಅದೇ ಊರಿನ ಯುವಕನೊಬ್ಬನಿಗೆ ಹೊಟ್ಟೆ ಕರುಬತೊಡಗಿತು. ಗಂಡ ಹೆಂಡಿರನ್ನು ಪೂರ್ವ ಪಶ್ಚಿಮಗೊಳಿಸಲು (ಅಗಲುವಂತೆ ಮಾಡಲು) ನಿರ್ಧರಿಸಿದನು. ಒಂದು ಮುಂಜಾನೆ ಗಂಡ ಹೊಲಕ್ಕೆ ಹೋದ ಸಮಯವನ್ನೇ ಸುಸಂದರ್ಭವೆಂದು ಭಾವಿಸಿ ಆ ಯುವಕ ಈ ದಂಪತಿಗಳ ಮನೆಗೆ ಬರುತ್ತಾನೆ. ಮಾತು ಬೆಳೆಸುತ್ತಾ, ನಿನ್ನ ಗಂಡ ಹಿಂದಿನ ಜನ್ಮದಲ್ಲಿ ಉಪ್ಪಾರನಾಗಿದ್ದ. ಅವನ ಮೈ ಈಗಲೂ ಉಪ್ಪೇ ಇದೆ, ಅವನಿಗೆ ತಿಳಿಯದಂತೆ ಅವನ ಮೈ ನೆಕ್ಕಿ ನೋಡು ಎಂದು ಹೇಳಿದ. ನಂತರ ಆ ಯುವಕ ಹೊಲದೆಡೆಗೆ ಹೋಗಿ ಗಂಡನ ಜೊತೆ ಮಾತು ಬೆಳೆಸುತ್ತಾ ನಿನ್ನ ಹೆಂಡತಿ ಪೂರ್ವ ಜನ್ಮದಲ್ಲಿ ಹೆಣ್ಣುನಾಯಿಯಾಗಿದ್ದಳು. ಅವಳಿಗೆ ಹಿಂದಿನ ಜನ್ಮದ ನೆಕ್ಕುವ ವಾಸನೆ ಈಗಲೂ ಇದೆ ಎಂದು ಹೇಳಿದನು. ಯುವಕನು ರಾತ್ರಿಗಾಗಿ ಕಾಯುತ್ತಿದ್ದನು. ಹೊಲದಿಂದ ಗಂಡ ಮರಳಿದ. ಇಬ್ಬರೂ ಯುವಕ ಹೇಳಿದುದನ್ನು ಪರೀಕ್ಷೆಗೊಳಪಡಿಸುವ ಚಿಂತನೆಯಲ್ಲಿದ್ದರು. ರಾತ್ರಿಯಾಯಿತು. ಗಂಡ ಊಟ ಮಾಡಿ ಮಲಗಿದನು, ನಿದ್ದೆ ಬಾರದಿದ್ದರೂ ಬಂದವರಂತೆ ನಟಿಸುತ್ತಿದ್ದನು. ಹೆಂಡತಿಯು ತನ್ನ ಕೆಲಸ ಮುಗಿಸಿ ಮಲಗಲು ಬಂದಳು. ಗಂಡನಿಗೆ ಒಳ್ಳೆಯ ನಿದ್ದೆ ಬಂದಿದೆ ಎಂದು ಭಾವಿಸಿದಳು. ತನ್ನ ನಾಲಿಗೆಯನ್ನು ಹೊರ ಚಾಚಿ ಆತನ ಮೈಯನ್ನು ಮೆಲ್ಲಗೆ ನೆಕ್ಕಿದಳು. ಮೈಯು ಉಪ್ಪುಪ್ಪಾಗಿರುವುದನ್ನು ನೋಡಿ, “ಛೀ, ಉಪ್ಪಾರ” ಎಂದು ಉದ್ಗರಿಸಿದಳು. ತಕ್ಷಣ ಗಂಡ, “ಛೀ ಹೆಣ್ಣು ನಾಯಿ” ಎಂದು ಹೇಳಿಯೇ ಬಿಟ್ಟ. ಪರಸ್ಪರ ಬೈದಾಟ ಬೆಳೆಯಿತು. ಹೊಯ್ದಾಟವೂ ಆಯಿತು. ಮರುದಿನ ನೋಡಿದರೆ ಹೆಂಡತಿ ತವರಿಗೆ ಹೋಗಿದ್ದಳು. ಯುವಕನೊಬ್ಬನ ಹೊಟ್ಟೆಕಿಚ್ಚು ಅನ್ಯೋನ್ಯರಾಗಿದ್ದ ಗಂಡ ಹೆಂಡಿರನ್ನು ಬೇರ್ಪಡಿಸಿ ಅವರ ಸಂಸಾರವನ್ನು ಸಂಹಾರಗೊಳಿಸಿತ್ತು. 

ಹೊಟ್ಟೆಕಿಚ್ಚಿರುವುದು ಬಲು ಅಪಾಯಕಾರಿ. ಹೊಟ್ಟೆಕಿಚ್ಚಿಗೆ ರಾಮಾಯಣದ ಮಂಥರೆ ಸರಿಯಾದ ನಿದರ್ಶನ. ಮಂಥರೆಯ ಹೊಟ್ಟೆ ಕಿಚ್ಚಿನ ಮಾತು ಕೈಕೇಯಿಯ ಮನಸ್ಸನ್ನೂ ಕದಡಿತು. ಪರಿಣಾಮ ಶ್ರೀರಾಮನಿಗೆ ವನವಾಸ. 
 ಆದುದರಿಂದ ನಮಗೆ ಊರ್ಧ್ವಮುಖಿಯಾಗಿ ಏರಬೇಕೆಂಬ ಕಿಚ್ಚಿರಲಿ. ನಮಗೆ ಅಥವಾ ಅನ್ಯರಿಗೆ ಕೇಡುಗಳನ್ನುಂಟು ಮಾಡುವ ಕಿಚ್ಚು ಯಾರಲ್ಲೂ ಇರದಿರಲಿ. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article