-->
ಪಯಣ : ಸಂಚಿಕೆ - 57 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 57 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 57 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ "ತುಮಕೂರು ಜಿಲ್ಲೆಯ ಸಂಪಿಗೆ" ಗೆ ಪಯಣ ಮಾಡೋಣ ಬನ್ನಿ....
                   
ತುರುವೇಕೆರೆ ತಾಲೂಕಿಗೆ ಸೇರಿದ ಈ ಊರು ತುಮಕೂರು - ಮೈಸೂರು ರಸ್ತೆಯಲ್ಲಿ ಕಲ್ಲೂರು ಅಡ್ಡರಸ್ತೆಯಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿದೆ. ಇದು ವೈಷ್ಣವರು ನೆಲೆಗೊಂಡ ಗ್ರಾಮವಾಗಿತ್ತು.

ಗೌರಮ ಋಷಿಯ ಕುಲದಲ್ಲಿ ಹುಟ್ಟಿದ ಭಾಸ್ಕರನೆಂಬ ಬ್ರಾಹ್ಮಣನು ವ್ಯಾಸ ಋಷಿಯ ದರ್ಶನವನ್ನು ಹೊಂದಲಿಚ್ಛಿಸುವನಾಗಿ ಹಿಮವತ್ ಪರ್ವತಕ್ಕೆ ಹೋಗಿ ಎಲ್ಲಾ ಪುಣ್ಯ ಸ್ಥಳಗಳನ್ನು ಸಂದರ್ಶನ ಮಾಡಿ, ಶ್ರೀ ಮದ್ವಾಸ ಋಷಿಯನ್ನು ಕಾಣಲಿಚ್ಛಿಸಿದಾಗ ವ್ಯಾಸರು ಪ್ರತ್ಯಕ್ಷನಾಗಿ ನೀರು ವರಕ್ಕೆ ತಕ್ಕವನಾಗಿದ್ದೀಯಾ? ಎಂದು ವ್ಯಾಸ ಋಷಿ ಭಾಸ್ಕರನಿಗೆ ಹೇಳಿದನು. ಭಾಸ್ಕರನು ವ್ಯಾಸ ಮಹರ್ಷಿಯನ್ನು ಕುರಿತು ಏನು ಮಾಡಿದರೆ ಶ್ರೇಯಸ್ಸುಂಟಾಗುವುದು ಎಂದು ಹೇಳಿದರು. 
ಫೋಟೋ - 1

ವ್ಯಾಸರು ಮಾಧವನೆಂಬ ಬ್ರಾಹ್ಮಣನ ತೀರ್ಥಯಾತ್ರೆಯ ಕಥೆಯನ್ನು ವಿವರಿಸಿದರು. ಆ ಬ್ರಾಹ್ಮಣರು ಎಲ್ಲಾ ಪುಣ್ಯ ಕ್ಷೇತ್ರಗಳನ್ನು ತಿರುಗಿಕೊಂಡು ರಾತ್ರಿಯ ಸಮಯ ಕಳೆಯಲು ಒಂದು ಮಂಟಪವನ್ನು ಸೇರಿದರು. ಅಂದು ರಾತ್ರಿ ಪ್ರಕಾಶಮಾನವಾದ ಒಂದು ಹುತ್ತ ಕಾಣಿಸಿಕೊಂಡಿತು. ತಕ್ಷಣ ಅನಂತರ ಆಕಾಶದಲ್ಲಿ ವೀಣೆ, ಮೃದಂಗ ಮೊದಲಾದ ಸಂಗೀತಗಳು ಕೇಳಿಸಿದವು. ನಂತರ ಹುತ್ತದ ಸುತ್ತಾ ಜೀವ ಸ್ತ್ರೀಯರು ಕಾಣಿಸಿಕೊಂಡರು. ಅವರು ಪರಮಭಕ್ತಿ ಪೂರ್ವಕವಾಗಿ ದಿವ್ಯವಾದ ಪುಷ್ಪಫಲ, ಭಕ್ಷ್ಯಗಳಿಂದ ಪೂಜೆ ಮಾಡಿ ಒಂದೇ ನಿಮಿಷ ಮಾತ್ರದಲ್ಲಿ ಸಮಸ್ತ ಸ್ತ್ರೀಯರು ಅಂತರ್ಧಾನರಾದರು. ಅದೇ ಸಮಯದಲ್ಲಿ ನಾರದ ಮುನಿಗಳು ಅಲ್ಲಿಗೆ ಬಂದು ಆ ಹುತ್ತಕ್ಕೆ ನಮಸ್ಕರಿಸುತ್ತಿದ್ದರು. ಆಗ ತಕ್ಷಣ ನಾರದ ಮುನಿಗಳಿಗೆ ನಮಸ್ಕಾರ ಮಾಡಿ, ಈ ಹುತ್ತದಲ್ಲಿ ಯಾರು ಇದ್ದಾರೆ? ಇದರ ಬಗ್ಗೆ ವಿವರವಾಗಿ ಹೇಳಿ ಎಂದು ಕೇಳಿದಾಗ...
ಫೋಟೋ - 2

ಆಗ ನಾರದರು, 'ಅಯ್ಯಾ..? ಬ್ರಾಹ್ಮಣ ನೀನು ಧನ್ಯನು, ಕೇಳು ಈ ಹುತ್ತವು ರಾತ್ರಿಯಲ್ಲಿ ಅಗ್ನಿಗೆ ಸಮಾನವಾಗಿ ಕಾಣುತ್ತದೆ. ಇದರಲ್ಲಿ ಶ್ರೀ ಹರಿಯು ನೆಲೆಸಿರುವುದೇ ಮುಖ್ಯ ಕಾರಣ. ಈ ಹುತ್ತದ ಬಳಿಗೆ ಶುಭಕರವೂ, ಮನೋಹರವೂ, ಕಾಂತಿಯುತವೂ ಆದ ಶ್ರೀನಿವಾಸ ವಿಗ್ರಹವಿದೆ. ಈ ವಿಗ್ರಹಗಳು ಗರುಡನಿಂದ ವಹಿಸಲ್ಪಟ್ಟಿವೆ. ಈ ಪ್ರದೇಶದಲ್ಲಿ ಚಂಪಕನೆಂಬ ಪ್ರಸಿದ್ಧವಾದ ಸುಧನ್ವನ ಪಟ್ಟಣವಿತ್ತು. ಅದು ಕ್ರಮೇಣ ನಾಶವಾಗಿ ಆ ಪ್ರದೇಶವು ಕಾಡಾಯಿತು. ಇದನ್ನು ಅರಿತ ಜನರು ಆ ಹುತ್ತವನ್ನು ಅಗೆದು ನೋಡಿದಾಗ ಅಲ್ಲಿ ಇರುವ ಶ್ರೀನಿವಾಸ ಮೂರ್ತಿ ವಿಗ್ರಹವನ್ನು ಕಂಡು ಭಕ್ತರೆಲ್ಲರೂ ಸೇರಿ ದೇವರ ಮಂದಿರವನ್ನು ನಿರ್ಮಿಸಿದರು. ಅಲ್ಲಿರುವ ಹೊಂಡವನ್ನು ಅಗಲ ಮಾಡಿದರು. ಅಂದಿನಿಂದ ಭಕ್ತಾದಿಗಳು ಗುಂಪು ಗುಂಪಾಗಿ ಬಂದು ಪೂಜೆಯನ್ನು ಮಾಡುತ್ತಿದ್ದಾರೆ. ಪ್ರತಿ ವೈಶಾಖ ಮಾಸದಲ್ಲಿ ದಿವ್ಯವಾದ ರಥೋತ್ಸವವನ್ನು ಮತ್ತು ಇತರ ಮಾಸಗಳಲ್ಲಿ ಮಹೋತ್ಸವಗಳನ್ನು ಮಾಡುತ್ತಾರೆ. ಈ ಪ್ರದೇಶವು ಸಂಪಿಗೆ ಗ್ರಾಮವೆಂದು ಪ್ರಸಿದ್ದಿಯಾಯಿತು. 
ಫೋಟೋ - 3

ಸಂಪಿಗೆಯಲ್ಲಿ ಇನ್ನೊಂದು ವಿಶೇಷವೆಂದರೆ ದೇವಸ್ಥಾನಕ್ಕೆ ಕೊಂಚ ದೂರದಲ್ಲಿ ಬೋರೆಯ ಮೇಲೆ ಎರಡು ಬೇವಿನ ಮರಗಳಿವೆ. ಅವುಗಳ ಎಲೆಗಳು ಸಿಹಿಯಾಗಿರುವವು. ಆ ಮರದ ಬಳಿಯಲ್ಲಿ ಸುಧನ್ವನು ತಂದೆಯಿಂದ ಕಾದ ಎಣ್ಣೆಯಲ್ಲಿ ಹಾಕಲ್ಪಟ್ಟನು. ಆ ಮರದ ಬಳಿಯಲ್ಲಿ ಮುಂಗಾರಿನಲ್ಲಿ ಬಿದ್ದ ನೀರು ಎಣ್ಣೆಯಂತೆ ಕಾಣುವುದು. ಯಾರು ಶ್ರೀನಿವಾಸನ ಮಹಿಮೆಯನ್ನು ಕೇಳುತ್ತಾನೋ ಅಥವಾ ಕೇಳಿಸುತ್ತಾನೋ, ದಾನಾರ್ಥಿಯೂ ಧನವನ್ನೂ, ಆರೋಗ್ಯವನ್ನೂ, ವಿದ್ಯೆಯನ್ನೂ, ಆಯಸ್ಸನ್ನೂ ಪಡೆಯುವನು. ಸಮಸ್ತ ಅಪೇಕ್ಷೆಗಳನ್ನು ಹೊಂದುವನು.

"ಊರು ನಮ್ಮ ನಿಮ್ಮ ಎಲ್ಲರ ಇತಿಹಾಸವನ್ನು ಹೇಳುತ್ತದೆ - ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯವಾಗಿ ಎಲ್ಲರ ಅಸ್ತಿತ್ವವನ್ನು ಹೇಳುವಂಥದ್ದಾಗಿದೆ : ಅಂತಹ ಒಂದು ಊರು ಈ ಸಂಪಿಗೆ ಊರು" 

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article