ಪಯಣ : ಸಂಚಿಕೆ - 55 (ಬನ್ನಿ ಪ್ರವಾಸ ಹೋಗೋಣ)
Friday, August 8, 2025
Edit
ಪಯಣ : ಸಂಚಿಕೆ - 55 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ "ದಾವಣಗೆರೆ ಜಿಲ್ಲೆಯ ಹೊನ್ನಾಳಿ" ಗೆ ಪಯಣ ಮಾಡೋಣ ಬನ್ನಿ....
ತನ್ನ ವಿಶಿಷ್ಟ ಸಂಸ್ಕೃತಿ, ಭಾಷೆಯಿಂದ ಗಮನ ಸೆಳೆದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಐತಿಹಾಸಿಕ ಹಿನ್ನಲೆ ಇದೆ. ಅದನ್ನು ಸಾರಿ ಹೇಳುವಂತೆ ಪಾಳೇಗಾರರು ಕಟ್ಟಿದ ಕೋಟೆಯ ದಿಡ್ಡಿಬಾಗಿಲ ಅವಶೇಷ ತುಂಗಭದ್ರಾ ನದಿಗೆ ಮುಖಮಾಡಿ ನಿಂತಿದೆ.
ಪಟ್ಟಣದ ಆಕರ್ಷಣೆಗಳಲ್ಲಿ ಮುಖ್ಯವಾದುದು ತುಂಗಭದ್ರಾ ತೀರದ ಪ್ರಶಾಂತ ವಾತಾವರಣದಲ್ಲಿರುವ ದ್ವಿತೀಯ ಮಂತ್ರಾಲಯವೆಂದೇ ಪ್ರಸಿದ್ಧಿ ಪಡೆದಿರುವ ರಾಘವೇಂದ್ರ ಸ್ವಾಮಿಗಳ ಮಠ, ಮಾರಿಕಾಂಬ ದೇವಸ್ಥಾನ. ಶ್ರೀ ಹಳದಮ್ಮ ದೇವಸ್ಥಾನ, ದುರ್ಗಾಂಬ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನಗಳೊಂದಿಗೆ ಜಾಮಿಯಾ ಮಸೀದಿ ಹಾಗೂ ಚರ್ಚ್, ಬ್ರಿಟಿಷರ ಕಾಲದ ಹಳೆಯ ಕಟ್ಟಡಗಳೂ ಗಮನ ಸೆಳೆಯುತ್ತವೆ.
ಹೊನ್ನಾಳಿಗೆ ಅಂಟಿಕೊಂಡಿರುವ ಹಿರೇಕಲ್ಮಠದಲ್ಲಿನ ಪ್ರಸಿದ್ಧ ಬೃಹಚ್ಛಿಲಾಮಠ (ಹಿರೇಕಲ್ಮಠ) ಸಂಪೂರ್ಣ ಶಿಲೆಯಿಂದಲೇ ನಿರ್ಮಾಣವಾಗಿದೆ. ಚಿನ್ನಪ್ಪ ಸ್ವಾಮಿ ಗದ್ದುಗೆ ಇರುವ ಈ ದಿವ್ಯ ಸನ್ನಿಧಿ ಸರ್ವಧರ್ಮೀಯರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಬ್ರಿಟಿಷರ ಕಾಲದಲ್ಲಿ ತುಂಗಭದ್ರಾ ತೀರದ ಪ್ರಕೃತಿ ಮಡಿಲಲ್ಲಿ ನಿರ್ಮಿತವಾದ ಪ್ರವಾಸಿ ಮಂದಿರ ಮಹಾತ್ಮಾ ಗಾಂಧೀಜಿಯವರು ಪದಾರ್ಪಣೆ ಮಾಡಿ ಸ್ವಾತಂತ್ರಯ ಚಳುವಳಿಗೆ ಸ್ಫೂರ್ತಿ ನೀಡಿದ ಸ್ಥಳವಾಗಿದೆ. ಇನ್ನು ಹೊನ್ನಾಳಿ - ತುಮ್ಮಿನಕಟ್ಟೆ ರಸ್ತೆಯಲ್ಲಿ ಐದು ಕಿ.ಮೀ. ದೂರದಲ್ಲಿ ಬಳ್ಳೇಶ್ವರದಲ್ಲಿ ಜೈನಧರ್ಮೀಯರ ಪವಿತ್ರ ಕ್ಷೇತ್ರ ಪಾರ್ಶ್ವನಾಥ ಬಸದಿ ಹಾಗೂ ಬಳ್ಳಲಿಂಗೇಶ್ವರ ದೇವಸ್ಥಾನ ಸರ್ವಧರ್ಮೀಯರ ನೆಲೆಗೆ ಸಾಕ್ಷಿಯಾಗಿದೆ.
ಹೊನ್ನಾಳಿಗೆ ಹದಿನೈದು ಕಿ.ಮೀ. ದೂರದಲ್ಲಿ ಗೋವಿನಕೋವಿ ಗ್ರಾಮದ ಸಮೀಪದಲ್ಲಿನ ತುಂಗಭದ್ರಾ ನದಿಯ ಮಧ್ಯದಲ್ಲಿ ನಿಸರ್ಗ ನಿರ್ಮಿತ ನಡುಗಡ್ಡೆಯಲ್ಲಿನ ಗಡ್ಡೆರಾಮೇಶ್ವರ ದೇವಸ್ಥಾನ ಅದ್ಭುತವೂ ಆಕರ್ಷಣೀಯವೂ ಆಗಿದೆ. ಹದಿನೈದು ಕಿ.ಮೀ. ದೂರದ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡ ತೀರ್ಥರಾಮೇಶ್ವರ ದೇವಸ್ಥಾನ, ದೇವಸ್ಥಾನದ ಆವರಣದಲ್ಲಿರುವ ಪವಿತ್ರ ತೀರ್ಥಕುಂಡ. ಇವುಗಳು ಇಲ್ಲಿನ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾಗಿವೆ. ಬೆಳವಳದ ಈ ನೆಲದಲ್ಲಿ ಹಚ್ಚ ಹಸಿರಾಗಿ ಬೆಳೆದ ಬೆಳೆಯನ್ನು ಬೆಟ್ಟದ ಮೇಲಿನಿಂದ ನೋಡುವುದೇ ಒಂದು ಅವಿಸ್ಮರಣೀಯ ಅನುಭವ.
ಇಲ್ಲಿನ ಸಮೀಪದ ಬೆಳಗುತ್ತಿ ತನ್ನದೇ ಆದ ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ. ಇಲ್ಲಿ ಹಿಂದೆ ಆಳಿದ ಅರಸರು, ಮನೆತನದ ಅರಮನೆ, ಅವರ ವಂಶಸ್ಥರು ಈಗಲೂ ಇಲ್ಲಿ ಇದ್ದಾರೆ. ಇಲ್ಲಿನ ಐತಿಹಾಸಿಕ ಸಾಕ್ಷಿಯಾಗಿ ಉಮಾಮಹೇಶ್ವರ ದೇವಸ್ಥಾನ ಇನ್ನಿತರೆ ದೇವಸ್ಥಾನಗಳು ನೆಲೆಗೊಂಡಿವೆ. ಹೊನ್ನಾಳಿ - ಹರಿಹರ ಮುಖ್ಯರಸ್ತೆಯಲ್ಲಿ ಹೊನ್ನಾಳಿಗೆ 8 ಕಿ.ಮೀ.
ಇಲ್ಲಿ ಬಿದನೂರು ಸಂಸ್ಥಾನದ ದೊರೆಗಳು ಕಟ್ಟಿಸಿದ ದೇವಸ್ಥಾನಗಳು ಇವೆ. ಹೊನ್ನಾಳಿಯಿಂದ 8 ಕಿ.ಮೀ. ದೂರದಲ್ಲಿರುವ ಕರಡಿಕಲ್ಲು ಗುಡ್ಡ ಪ್ರಕೃತಿ ಸೌಂದರ್ಯದೊಂದಿಗೆ ಧಾರ್ಮಿಕ ಕ್ಷೇತ್ರವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ 25 ಕಿ.ಮೀ. ದೂರದಲ್ಲಿರುವ ಸೂರಗೊಂಡನಕೊಪ್ಪ ಗ್ರಾಮದ ಸೇವಾಲಾಲ್ ದೇವಸ್ಥಾನ ಬಣಜಾರ್ ಸಮಾಜದ ಮುಖ್ಯ ಧಾರ್ಮಿಕ ಕೇಂದ್ರವಾಗಿದೆ. ತಾಲ್ಲೂಕಿನ ಸವಳಂಗದಲ್ಲಿರುವ ವಿಶಾಲವಾದ ಕೆರೆಯೂ ಪ್ರೇಕ್ಷಣೀಯ ತಾಣವಾಗಿದೆ.
"ಹಲವು ದೇವಾಲಯಗಳ, ಐತಿಹಾಸಿಕ ಸ್ಥಳಗಳ ಕೇಂದ್ರ ಈ ಊರು. ತುಂಗಭದ್ರ ಒಂದು ಕಡೆಯಾದರೆ - ಮತ್ತೊಂದು ಕಡೆ ಬೆಟ್ಟಗುಡ್ಡಗಳ ಸಾಲು. ಅನೇಕ ರಾಜವಂಶರ ಮತ್ತು ಬ್ರಿಟಿಷ್ ಆಡಳಿತದ ಅನೇಕ ಕುರುಹುಗಳು ಇಲ್ಲಿವೆ." ಬನ್ನಿ ಒಮ್ಮೆ ಹೊನ್ನಾಳಿಗೆ..
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************