ನಿಷ್ಪಾಪಿ ಸಸ್ಯಗಳು : ಸಂಚಿಕೆ - 114
Thursday, August 7, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 114
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ..? ಮಳೆಯಾರ್ಭಟ ಒಂದಿಷ್ಟು ಕಡಿಮೆಯಾಗಿ ಸಣ್ಣ ಪುಟ್ಟ ಸಸ್ಯಗಳು ಲಗುಬಗೆಯಿಂದ ಹೊಸ ಚಿಗುರುಗಳ ಜೊತೆಗೆ ಹೂ ಕಾಯಿ ಬಿಡುವ ತರಾತುರಿಯಲ್ಲಿವೆ, ಗಮನಿಸಿದಿರಾ? ಏಕೆಂದರೆ ಅವು ವಾರ್ಷಿಕ ಸಸ್ಯಗಳು..! ಮಳೆ ಕಳೆದ ಬಳಿಕ ಬಹುಕಾಲ ಬಾಳಲಾರವು. ವಂಶದ ಪೀಳಿಗೆ ಮುಂದುವರಿಯಲು ಬದುಕಿನ ವಸಂತಕಾಲ ಅಮೂಲ್ಯವಾಗಿದೆ.
ಆದರೆ ಬಹುವಾರ್ಷಿಕ ಸಸ್ಯಗಳು ಹಾಗಲ್ಲ. ಮಳೆಗಾಲ ಕಳೆಯುತ್ತಿದ್ದಂತೆ ಮೈತುಂಬಿಕೊಂಡು ಬೆಳೆಯತೊಡಗುತ್ತದೆ. ಮುಗಿಲೆತ್ತರ.. ಆಕಾಶದೆತ್ತರ.. ಬಿದಿರಿನಂತೆ! ಹ್ಹಾಂ.. ಹೌದು ಮಕ್ಕಳೇ, ಬಿದಿರಿನಂತೇ!
ಬಿದಿರನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ಹಲವಾರು ವಿಶೇಷತೆಗಳನ್ನು ಹೊಂದಿರುವ ಬಿದಿರು ಬಹುವಾರ್ಷಿಕ ಸಸ್ಯ. ಬಿದಿರು ತನ್ನ ಗಡಸುತನ, ಗಾತ್ರ ಹಾಗೂ ತನ್ನ ವೈಭವದ ನೋಟದಿಂದ ಮರದಂತೇ ಕಂಡರೂ ಅದೊಂದು ಹುಲ್ಲು!. ಹೌದು ಮಕ್ಕಳೇ, ವೈಜ್ಞಾನಿಕವಾಗಿ ಅದೊಂದು ನಿತ್ಯಹರಿದ್ವರ್ಣ ದೀರ್ಘಕಾಲಿಕ ಹೂ ಬಿಡುವ ಸಸ್ಯಗಳ ವೈವಿಧ್ಯಮಯ ಗುಂಪಾಗಿದ್ದು ಹುಲ್ಲಿನ ಕುಟುಂಬದ ಅತಿ ದೊಡ್ಡ ಹಾಗೂ ದೈತ್ಯ ಸದಸ್ಯ ಈ ಬಿದಿರು. ಅಂದರೆ ಹುಲ್ಲಿನ ಜಾತಿಯ ಸಸ್ಯ!. ಇದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ! ತಂಪಾದ ಪರ್ವತ ಪ್ರದೇಶದಿಂದ ಎತ್ತರದ ಕಾಡುಗಳವರೆಗೆ ವ್ಯಾಪ್ತಿ ಇರುವ ಈ ಬಿದಿರಿನ 115 ತಳಿಗಳಲ್ಲಿ 1400 ಕ್ಕೂ ಹೆಚ್ಚು ಜಾತಿಗಳಿದ್ದು ವಿಶಿಷ್ಠವಾದ ಬೇರು, ಕಾಂಡಗಳ ವ್ಯವಸ್ಥೆಯಿಂದಾಗಿ ಕೆಲವು ಜಾತಿಯ ಬಿದಿರು 24 ಗಂಟೆಗಳ ಅವಧಿಯಲ್ಲಿ 91 ಸೆ.ಮೀ. ನಿಂದ 120 ಸೆ.ಮೀ. ನಷ್ಟು ಎತ್ತರ ಬೆಳೆಯುವುದನ್ನು ಗಮನಿಸಲಾಗಿದೆಯಂತೆ!. ಭಾರತದಲ್ಲೇ 137 ಜಾತಿಗಳಿವೆ. ಎಳೆಯ ಕಾಂಡಗಳ ಮೇಲಿನ ಕಿರಿದಾದ ಎಲೆಗಳು ಕಾಂಡದ ಉಂಗುರಗಳಿಂದ ನೇರವಾಗಿ ಬೆಳೆಯುತ್ತವೆ. ಹರಿತವಾದ ಅಲಗು ಹೊಂದಿರುವ ನಯವಾದ ತುದಿ ಚೂಪಾದ ಎಲೆಗಳು ಹಸಿರಾಗಿದ್ದು ಒಣಗಿದಾಗ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಿದಿರಿನ ಎಲೆಗಳನ್ನು ಪ್ರಾಣಿಗಳು ತಿನ್ನುತ್ತವೆಯಾದರೂ ಆನೆಗೆ ಬಲು ಇಷ್ಟದ ಆಹಾರ. ತಳಿಗನುಸಾರ ಬಿದಿರು 12 ರಿಂದ 120 ವರ್ಷಗಳವರೆಗೆ ಬೆಳವಣಿಗೆ ಕಾಣಬಹುದು. ಇದರ ವಿಶೇಷತೆ ಎಂದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಗೋಧಿಯಂತೆ ಧಾನ್ಯ ಬೆಳೆಯುತ್ತದೆ ಮಾತ್ರವಲ್ಲ ಬಳಿಕ ಸಾಯುತ್ತದೆ. ಬೇರು ಕಾಂಡಗಳ ಮೂಲಕ ಹರಡುವ ಬಿದಿರಿನೊಳಗೆ ಒಂದು ಜೈವಿಕ ಗಡಿಯಾರವು ಅಲಾರಾಂನಂತೆ ಕೆಲಸ ಮಾಡುತ್ತದೆ. ಇದನ್ನು ಬಿದಿರು ಹೂ ಬಿಡುವ ಬಗೆಯಲ್ಲಿ ಗುರುತಿಸಬಹುದು. ಒಂದು ಜಾತಿಯ ಬಿದಿರು ಎಲ್ಲೇ ಇದ್ದರೂ ಒಮ್ಮೆಲೇ ಹೂ ಬಿಟ್ಟು ಧಾನ್ಯ ಉತ್ಪದನೆಯ ಬಳಿಕ ಸಾಮೂಹಿಕವಾಗಿ ಸಾಯುತ್ತದೆ! ಹೂ ಬಿಡುವ ಆವರ್ತನವು ಜಾತಿಯಿಂದ ಜಾತಿಗೆ ವ್ಯತ್ಯಾಸವಿದೆ. ತನ್ನೆಲ್ಲಾ ಶಕ್ತಿಯನ್ನು ಹೂವಿನ ಉತ್ಪಾದನೆಗೆ ತಿರುಗಿಸುತ್ತದೆ ಹಾಗೂ ಬೆಳವಣಿಗೆ ನಿಲುಗಡೆಯಾಗಿ ತನ್ನ ಕೊನೆಯನ್ನು ಕಂಡುಕೊಳ್ಳುವುದು ಮೆದುಳಿಲ್ಲದ ಸಸ್ಯಕ್ಕೂ ಸಾಧ್ಯವೆಂದರೆ ಪ್ರಕೃತಿಯ ಸೀಮಾತೀತ ಸಾಧ್ಯತೆಯ ಹೆಗ್ಗುರುತಲ್ಲವೇ? ಓಟಗಾರನಂತೆ ಕೆಲವು ವರ್ಷ ವಿಸ್ತರಿಸಿಕೊಳ್ಳುವ ಬಿದಿರು ಹವಾಮಾನ ಒಗ್ಗದಿದ್ದರೆ ದೀರ್ಘಕಾಲ ಒಂದೇ ಜಾಗದಲ್ಲಿ ಇರಬಲ್ಲುದೆಂದರೆ ಸಾಮಾನ್ಯದ ಮಾತೇ!?
ಇತಿಹಾಸದಲ್ಲಿ ಬಡತನ ಮತ್ತು ಬರಗಾಲದ ಸಂದರ್ಭದಲ್ಲಿ ಮಾನವನ ಜೀವ ಉಳಿಸುವ ಕಾರ್ಯವನ್ನು ಇವು ಮಾಡಿವೆ ಎಂಬ ಮಾತನ್ನು ಹಿರಿಯರಾಡುತ್ತಾರೆ. ಬಿದಿರಿನ ಅಕ್ಕಿಯಲ್ಲಿ ನಾವು ತಿನ್ನುವ ಅಕ್ಕಿಗಿಂತ ಹೆಚ್ಚು ಪೌಷ್ಟಿಕಾಂಶ ಇದೆ ಎಂದು ಕಂಡು ಕೊಳ್ಳಲಾಗಿದೆ. ತಿನಿಸಿಗೆ ಬಳಸುವ ಕಾರಣ ಇದರ ತೆನೆಗಳು ಒಣಗತೊಡಗಿದಾಗ ಬಿದಿರು ಮೆಳೆಯ ಅಡಿಭಾಗದ ಎಲ್ಲಾ ಕಸ ಗುಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಇಲಿ ಹೆಗ್ಗಣಗಳ ಸಂಖ್ಯೆ ಈ ಕಾಲದಲ್ಲಿ ಹೆಚ್ಚಾಗುವ ಸಂಭವವಿದ್ದು ಬಿದಿರು ತೆನೆ ಬಿಟ್ಟರೆ ಬರಗಾಲ ಬರುವುದೆಂಬ ಹೇಳಿಕೆಗಳೂ ಇವೆ. ಉಷ್ಣವಲಯ, ಉಪೋಷ್ಣವಲಯದ ಪರಿಸರದಲ್ಲಿ ಸಹಜವಾಗಿ ಬೆಳೆಯುವ ಬಿದಿರು ಹಿಂಡು ಹಿಂಡಾಗಿರುತ್ತದೆ.
ನಸುಹಳದಿ, ಹಸಿರು, ಕಂದು, ಕಪ್ಪು ಹೀಗೆ ಹಲವಾರು ಬಣ್ಣಗಳನ್ನು ಹಚ್ಚಿಕೊಂಡ ಬಿದಿರು ಗಂಟುಗಳ ಮೂಲಕವೇ ಬೆಳೆಯುತ್ತಾ ಮೇಲೇರುವುದಾದರೂ ಗಂಟುಗಳಲ್ಲೂ ತುಂಬಾ ಹತ್ತಿರ, ಸ್ವಲ್ಪ ದೂರ, ತುಂಬಾ ದೂರದೂರ ಗಂಟುಗಳಿರುವುದೂ ಪ್ರತ್ಯೇಕತೆಗೆ ಕಾರಣವಾಗಿವೆ. ಎಲ್ಲಾ ಏಕದಳ ಹುಲ್ಲಿನಂತೆ ಬಿದಿರಿನ ಕಾಂಡದೊಳಗೂ ಟೊಳ್ಳಾಗಿ ಸಿಲಿಂಡರಾಕಾರವಾಗಿದೆ. ಕೆಲವು ಜಾತಿಯ ಬಿದಿರಿಗೆ ಭಾರೀ ಮುಳ್ಳುಗಳ ಅಲಂಕಾರವಿದ್ದರೆ ಕೆಲವು ಮುಳ್ಳುಗಳೇ ಇರದ ಬಿದಿರುಗಳು! ಗಾತ್ರದಲ್ಲಾದರೂ ಅಷ್ಟೆ.. ದೈತ್ಯ ಬಿದಿರುಗಳು 46 ಮೀಟರ್ ಅಂದರೆ ಸುಮಾರು 151ಅಡಿಗಳೆತ್ತರ ಬೆಳೆದು 14 ಇಂಚುಗಳಷ್ಟು ದಪ್ಪವಾಗಿ 450 ಕಿಲೇ ತೂಕ ಹೊಂದಿರುತ್ತವೆ ಎಂದರೆ ಇದೇನು ಸಾಮಾನ್ಯ ವಿಚಾರವೇ! ಆದರೆ ಫ್ರೆಂಚ್ ಗಯಾನಾದ ಸವನ್ನಾ ದಲ್ಲಿ ಕೇವಲ 10-20 ಮಿ ಮೀ. ಉದ್ದ 2 ಮಿ.ಮೀ ದಪ್ಪದ ಬಿದಿರೂ ಇದೆಯಂತೆ! ಇದಲ್ಲವೇ ಸೃಷ್ಟಿಯ ಸೊಬಗು! ಬಿದಿರು ಇತರ ಮರಗಳಂತಲ್ಲ. ಮರಗಳನ್ನು ಒಮ್ಮೆ ಕಡಿದರೆ ಮುಗಿಯಿತು. ಬಿದಿರು ಕಡಿದಷ್ಟು ಬೆಳೆಯುತ್ತಲೇ ಇರುತ್ತದೆ. ವರ್ಷವರ್ಷ ಹೊಸ ಚಿಗುರುಗಳು ಜನಿಸುತ್ತಾ ಮುಗಿಯದ ಸಂಪನ್ಮೂಲವಾಗಿದೆ !
ಪೊವಾಸಿ (Poaceae) ಕುಟುಂಬದ ಕಾಡು ಬೆಳೆಯಾದ ಬಿದಿರು ಬಾಂಬುಸೊಯಿಡಿಯೇ (Bambusoideae) ಉಪಕುಟುಂಬಕ್ಕೆ ಸೇರಿದೆ. ವೈಜ್ಞಾನಿಕವಾಗಿ ಇದನ್ನು ಬುಡಗಟ್ಟು ಓಲಿಗೋ (ಮೂಲಿಕೆಯ ಬಿದಿರು), ಬುಡಗಟ್ಟು ಜಂಬೂಸೀ (ಉಷ್ಣವಲಯದ ಪುಡಿ ಬಿದಿರು), ಬುಡಗಟ್ಟು ಅರುಂಡಿನೇರಿಯಸಮಶೀತೋಷ್ಣಿ ಬಿದಿರು) ಎಂದು ವರ್ಗೀಕರಿಸಲಾಗಿದೆ. ಸಂಸ್ಕೃತದಲ್ಲಿ ವಂಶ, ವೇಣು, ಯುವ ಫಲ, ಶತಪರ್ವ ಎಂಬ ಸುಂದರವಾದ ಹೆಸರುಗಳಿವೆ.
ನಿಷ್ಪಾಪಿ ಸಸ್ಯ ಬಿದಿರಿಗೂ ಮಾನವನಿಗೂ ಅವಿನಾಭಾವ ಸಂಬಂಧವಿದೆ. ಮಾನವನ ಜನನದಿಂದ ಮರಣದ ವರೆಗು ಬಿದಿರು ಸಹಾಯಕವಾಗಿ ಜೊತೆ ಸೇರಿದೆ. ನಮ್ಮ ಹಿರಿಯರು ಬಳಸುತ್ತಿದ್ದ ತೊಟ್ಟಿಲು ಬಿದಿರಿನದ್ದಾದರೆ ಶವ ಯಾತ್ರೆಗೆ ಚಟ್ಟಕ್ಕೂ ಬಿದಿರಿನದ್ದೇ ನಿರ್ಮಾಣ!.
ಇಂದು ವಿಶ್ವದಲ್ಲಿ ಒಂದು ಶತಕೋಟಿಗೂ ಹೆಚ್ಚು ಜನ ಬಿದಿರಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಯುನೆಸ್ಕೋ ಪ್ರಕಾರ 70 ಹೆಕ್ಟೇರ್ ಬಿದಿರು 1000 ಮನೆ ನಿರ್ಮಿಸಲು ಸಾಕು! ಭಾರತ ಮತ್ತು ಚೀನಾದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಬಿದಿರನ್ನು ಬಳಸಲಾಗುತ್ತಿದೆ. ಮಾತ್ರವಲ್ಲ 16 ಟನ್ ತೂಕದ ಟ್ರಕ್ ಗಳ ಭಾರವನ್ನು ನಿಭಾಯಿಸುವ ಸಾಮರ್ಥ್ಯದ ಸೇತುವೆಗಳೂ ಇವೆ! ಚೀನಾದಲ್ಲಿ ಕಪ್ಪು ಬಿದಿರಿನ ಚಿಗುರಿನಿಂದ ಮೂತ್ರ ಪಿಂಡದ ಕಾಯಿಲೆಗೆ ಹಾಗೂ ಬೇರು, ಎಲೆಗಳಿಂದ ಲೈಂಗಿಕ ರೋಗ ಹಾಗೂ ಕ್ಯಾನ್ಸರ್ ಗೆ ಔಷಧ ಕಂಡುಕೊಂಡಿದ್ದಾರೆ. ಇಂಡೋನೇಷ್ಯಾದಲ್ಲಿ ಮೂಳೆಯ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯೆಂದು ಪಾರ್ಶ್ವಕೊಂಬೆಗಳ ನೀರನ್ನು ಬಳಸುತ್ತಾರಂತೆ. ವೇಗವಾಗಿ ಬೆಳೆದು ಪಕ್ವವಾಗಿ ಉಕ್ಕಿನಂತೆ ಬಲಯುತವಾಗುವ ಬಿದಿರಿನಿಂದ ಜಗತ್ತಿನಾದ್ಯಂತ ಪೀಠೋಪಕರಣ, ಕರಕುಶಲ ವಸ್ತು, ಬಟ್ಟೆ ತಯಾರಿ, ಇಂಧನವಾಗಿ ಹೀಗೆ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಬಳಸಲಾಗುತ್ತಿದೆ. ತಿರುಳಿನಿಂದ ಮ್ಯಾನ್ಮಾರ್ ಥೈಲ್ಯಾಂಡ್, ಭಾರತಗಳಲ್ಲಿ ಮುದ್ರಣ ಹಾಗೂ ಪತ್ರಿಕೆಗೆ ಬಳಸುತ್ತಾರೆ. ಬಿದಿರಿನ ಮೊಳಕೆಗಳು ಮಾನವನ ಆಹಾರವಾಗಿತ್ತು, ಈಗಲೂ ಬಳಸಲಾಗುತ್ತದೆ. ಈ ಮೊಳಕೆಯ ರಕ್ಷಣೆಗಾಗಿ ನಿಸರ್ಗ ವಿಷ ತುಂಬಿಟ್ಟರೂ ಮಾನವ ಅದನ್ನು ಅತಿ ಸಣ್ಣ ತುಂಡುಗಳಾಗಿ ಕತ್ತರಿಸಿ ಮೂರು ದಿನ ನೀರಲ್ಲಿ ಹಾಕಿಟ್ಟ ಬಳಿಕ ಉಪ್ಪಿನಕಾಯಿ, ಪಲ್ಯ, ಸಾರು, ಗೊಜ್ಜೆಂದು ರುಚಿರುಚಿಯಾಗಿ ಅಡುಗೆಯಲ್ಲಿ ಬಳಸುತ್ತಾರೆ!. ಆದರೆ ಕಳಲೆಯ ಸಿಪ್ಪೆ ಕೂಡ ಜಾನುವಾರುಗಳಿಗೆ ಸಿಗದಂತೆ ಹೂತು ಹಾಕುತ್ತಾರೆ. ಏಕೆಂದರೆ ಕಳಲೆ ಅಷ್ಟೊಂದು ವಿಷ!. ಬಿದಿರಿನ ಬಟ್ಟೆಯನ್ನು 50 ಬಾರಿ ತೊಳೆದರೂ ಬ್ಯಾಕ್ಟೀರಿಯಾ ನಿರೋಧಕತೆ ಕಳೆದುಕೊಳ್ಳದು!ಚೀನಾ ಮತ್ತು ಜಪಾನ್ ನಲ್ಲಿ ಇಂಧನವಾಗಿ ಬಿದಿರಿನ ಇದ್ದಿಲನ್ನು ಬಳಸುವರು. ಈ ಇದ್ದಿಲು ತಯಾರಿಸುವಾಗ ದೊರೆಯುವ ಬಿದಿರಿನ ವಿನೆಗರ್ ಅಥವಾ ಪೈರೋಲಿಗ್ನಿಯಸ್ ಆಮ್ಲವು 400 ವಿಭಿನ್ನ ರಾಸಾಯನಿಕಗಳನ್ನು ಹೊಂದಿದ್ದು ಸೌಂದರ್ಯವರ್ಧಕ, ಕೀಟನಾಶಕ, ಡಿಯೋಡರೆಂಟ್, ಆಹಾರ ಸಂಸ್ಕರಣೆ, ಕೃಷಿಕಾರ್ಯ ಇತ್ಯಾದಿ ನೂರಾರು ರೀತಿಯ ಸಹಕಾರಕ್ಕೆ ಕಾರಣವಾಗಿದೆ.
ಯಾವುದೇ ಆರೈಕೆ, ಗೊಬ್ಬರ, ಕೀಟನಾಶಕ, ನೀರಿನ ಅಗತ್ಯ ಇಲ್ಲದೆಯೂ ಬಿದಿರು ಸಹಜವಾಗಿ ಬೆಳೆದು ಮಾನವ ಜಗತ್ತಿಗೆ ಅಕ್ಷಯಪಾತ್ರೆಯಾಗಿದೆ. ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ವಾತಾವರಣದಲ್ಲಿ ಆಮ್ಲಜನಕ ಹಾಗೂ ಇಂಗಾಲದ ಡೈಆಕ್ಸೈಡ್ ನ ಸಮತೋಲನದಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ. ಇದರ ಉತ್ಪನ್ನಗಳನ್ನು ತಯಾರಿಸುವಾಗ ಪರಿಸರದ ಮೇಲೆ ಅತ್ಯಲ್ಪ ಪರಿಣಾಮಗಳಾಗುತ್ತವೆ.
ಮಕ್ಕಳೇ, ಪ್ರತಿ ವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ. ಇಷ್ಟೊಂದು ವಿಶೇಷತೆಗಳನ್ನು ಒಡಲಲ್ಲಿರಿಸಿಕೊಂಡ ಈ ಬಿದಿರನ್ನು ಗಮನಿಸೋಣ. ಕಾಡು ನೀರಿನ ಹರಿವಿನ ಇಕ್ಕೆಲ, ಜೌಗು ಪ್ರದೇಶಗಳಲ್ಲಿ ನಾಶದ ಭೀತಿಯಲ್ಲಿರುವ ಬಿದಿರನ್ನು ಉಳಿಸಿಕೊಳ್ಳೋಣ. ಇದ್ದ ತಳಿಗಳನ್ನು ನಮ್ಮ ಕಣ್ಣೆದುರು ನಾಶವಾಗದಂತೆ ತಡೆಯೋಣ.
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************