-->
ಜೀವನ ಸಂಭ್ರಮ : ಸಂಚಿಕೆ - 203

ಜೀವನ ಸಂಭ್ರಮ : ಸಂಚಿಕೆ - 203

ಜೀವನ ಸಂಭ್ರಮ : ಸಂಚಿಕೆ - 203
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
               
ಮಕ್ಕಳೇ, ಈ ಕಥೆ ಓದಿ.... ಒಂದು ಅರಣ್ಯ. ಆ ಅರಣ್ಯಕ್ಕೆ ಹೋಗುವ ದಾರಿಯಲ್ಲಿ ತಾಯಿ ಮತ್ತು ಮಗ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಸುತ್ತ ಸಣ್ಣ ತೋಟ ಮಾಡಿಕೊಂಡಿದ್ದರು. ಅದರಲ್ಲಿ ಬಗೆ ಬಗೆಯ ಹಣ್ಣುಗಳನ್ನು ಬೆಳೆದಿದ್ದರು. ಬರುವವರಿಗೆ, ಹಸಿದವರಿಗೆ ಒಂದು ಹಣ್ಣು ಮತ್ತು ನೀರನ್ನು ಹುಡುಗ ನೀಡುತ್ತಿದನು. ನೋಡಿ, ಎಷ್ಟು ಚೆನ್ನಾಗಿದೆ? ತಿನ್ನಿ ಎನ್ನುತ್ತಿದ್ದನು. ಬಂದವರೆಲ್ಲ ಹಣ್ಣು ತಿಂದು, ಸಂತೋಷಪಟ್ಟು, ಊರಲೆಲ್ಲ ಈ ಹುಡುಗನ ಹೆಸರನ್ನು ಪ್ರಸಾರ ಮಾಡಿದ್ದರು. ಆತ ಬೇರೆ ಏನು ನೀಡಿರಲಿಲ್ಲ. ನೀಡಿದ್ದು ಒಂದು ಹಣ್ಣು. ನೂರಾರು ಗಿಡಗಳು ಇದ್ದವು ಆದರೆ ನೀಡಿದ್ದು ಒಂದು ಹಣ್ಣು. ಆತನ ಹೆಸರು ಸುತ್ತಮುತ್ತ ಊರಲೆಲ್ಲ ಹೆಸರಾಗಿತ್ತು. 

ಒಮ್ಮೆ ರಾಜ ಅರಣ್ಯಕ್ಕೆ ಬೇಟೆಗೆ ಹೋಗಿದ್ದನು. ಮಧ್ಯಾಹ್ನ ಆಗಿತ್ತು. ಹಸಿವಾಗಿತ್ತು, ದಾಹವಾಗಿತ್ತು. ಸುತ್ತಮುತ್ತ ನೋಡಿದ. ಆಗ ಈ ಗುಡಿಸಲು ಕಂಡಿತು. ನೇರವಾಗಿ ಅಲ್ಲಿಗೆ ಬಂದನು. ಹುಡುಗ, ರಾಜನ ಮುಖ ನೋಡಿ ಕೇಳಿದ, "ನನ್ನ ಹತ್ತಿರ ಹಣ್ಣು ಇದೆ, ನನ್ನ ಹತ್ತಿರ ನೀರು ಇದೆ. ಬಹುಶಃ ತಮಗೆ ಹಸಿವು ದಾಹ ಆಗಿರುವ ಅಂತಿದೆ ಬನ್ನಿ ಕುಳಿತುಕೊಳ್ಳಿ" ಎಂದು ಒಂದು ಮರದ ಕೆಳಗೆ ಕಲ್ಲಿನ ಹಾಸಿಗೆ ಮೇಲೆ ಕುಳ್ಳಿರಿಸಿ, ಒಂದು ಹಣ್ಣು, ನೀರು ನೀಡಿದನು. ಹೇಳಿದ ರೀತಿ ನೋಡಿ. ನಿಮ್ಮಲ್ಲಿ ಹಸಿವು ಇದೆ. ನನ್ನಲ್ಲಿ ಹಣ್ಣು ಇದೆ. ನಿಮ್ಮಲ್ಲಿ ದಾಹ ಇದೆ. ನನ್ನಲ್ಲಿ ನೀರು ಇದೆ. ಎಂಥಾ ಸುಂದರ ಭಾವ ಆ ಹುಡುಗನದು!. ಹೇಳಿದ "ಈ ಹಣ್ಣುಗಳು ಬಹಳ ರುಚಿ ಇದೆ ತಿನ್ನಿ" ಅಂದನು. ಹಣ್ಣು ತಿಂದು ನೀರು ಕುಡಿದ ರಾಜನಿಗೆ ಸಂತೋಷವಾಗಿತ್ತು. ರಾಜ ಹೇಳಿದ "ನನಗೆ ಸಂತೋಷವಾಗಿದೆ, ನಿನಗೇನು ಬೇಕು ಕೇಳು" ಕೊಡುತ್ತೇನೆ ಎಂದನು. ಆ ಹುಡುಗ ಹೇಳಿದ "ಬೇಡುವಷ್ಟು ಬಡವ ನಾನಲ್ಲ" ಎಂದನು. ಆಗ ರಾಜ ಹೇಳಿದ "ನಿನ್ನದು ಬರೀ ಗುಡಿಸಲು, ಇಲ್ಲೇನಿದೆ ಶ್ರೀಮಂತ ಆಗಲು" ಎಂದನು. ಆಗ ಹುಡುಗ ಹೇಳಿದ "ಏನಿಲ್ಲ ಮಹಾರಾಜರೇ... ಕೊಡುವಂತಹದು ನನ್ನಲ್ಲಿ ಇದೆಯಲ್ಲ, ಅದೇ ಶ್ರೀಮಂತಿಕೆ" ಅಂದನು. ಯಾರು ಬೇಡ ಅನ್ನುವುದಿಲ್ಲ, ಅಂತಹ ವಸ್ತು ನನ್ನಲ್ಲಿ ಇದೆ ಮಹಾರಾಜರೇ.." ಎಂದನು.

"ರಾಜರಿಗೆ ರಾಜರೇ ಆಮಂತ್ರಣ ನೀಡಿ ಔತಣ ನೀಡುತ್ತಾರೆ. ಅಂತಹದರಲ್ಲಿ ನನ್ನ ಬಳಿ ಮಹಾರಾಜರೇ ಬಂದಿದ್ದಾರೆ, ನನ್ನ ಔತಣ ಸ್ವೀಕರಿಸುತ್ತಾರೆ ಅಂದಮೇಲೆ ನಾನೆಷ್ಟು ಶ್ರೀಮಂತ?" ಅಂದನು. ಶ್ರೀಮಂತಿಕೆ ಎಂದರೆ ನಮ್ಮಲ್ಲಿ ಬಹಳ ತಪ್ಪು ತಿಳುವಳಿಕೆ ಇದೆ. ಯಾವುದು ಸಿರಿವಂತಿಕೆ?. ನಾನು ಕೊಡಬಲ್ಲೆ ಇದು ಸಿರಿವಂತಿಕೆ. ನನಗೆ ನೀವು ಕೊಡಿ ಅಂದರೆ ಬಡವ. ಮಹಾರಾಜ ಈ ಮಾತು ಕೇಳಿ ಸಂತೋಷ ಪಟ್ಟನು. ಸಿರಿವಂತಿಕೆ ಎಂದರೇನು? ಎಂದು ತಿಳಿದುಕೊಂಡು ಅರಮನೆಗೆ ಹೋದನು.

ವಿದೇಶದಲ್ಲಿ ರಾಕ್ ಫೆಲ್ಲರ್ ಎನ್ನುವ ಸಿರಿವಂತನಿದ್ದನು. ಜಗತ್ತಿನ ಆಗರ್ಭ ಶ್ರೀಮಂತ. ಆದರೆ ಬಡವರಂತೆ ಬದುಕುತ್ತಿದ್ದನು. ಆತನಿಗೆ ಆತನ ತಂದೆ ಬಳಸಿಕೊಟ್ಟ ಕೋಟನ್ನೇ ಹಾಕಿಕೊಂಡು ತಿರುಗಾಡುತ್ತಿದ್ದನು. ದೊಡ್ಡ ಕಚೇರಿ ಹೊಂದಿದ್ದನು. ಆತನ ಕಾರ್ಯದರ್ಶಿ ಒಮ್ಮೆ ರಾಕ್ ಫೆಲ್ಲರ್ ನನ್ನು ಕೇಳಿದ, ಅವರ ಡ್ರೆಸ್ ನೋಡಿ. "ಮಹಾನುಭಾವರೇ, ಜಗತ್ತಿನ ಸಿರಿವಂತರು ಹೀಗೇಕೆ ನೀವು..?" ಎಂದು ಕೇಳಿದ. ಆಗ ರಾಕ್ ಫೆಲ್ಲರ್ ಹೇಳಿದ "ಹೀಗಿರುವುದರಿಂದಲೇ ನಾನು ಶ್ರೀಮಂತ. ನಾನು ಹರಕು ಹಾಕಿದರು ಸಿರಿವಂತನೆ. ಒಳ್ಳೆ ಬಟ್ಟೆ ಹಾಕಿದರು ಸಿರಿವಂತನೇ. ನನ್ನ ಬಡವ ಅಂತ ಯಾರು ಅನ್ನುತ್ತಾರೆ?. ನಾನು ಕೊಡೋದು ವಿನಹ ಹಾಕುವುದಲ್ಲ". ರಾಕ್ ಫೆಲ್ಲರ್ ನೀಡುವುದರಲ್ಲಿ ಪ್ರಸಿದ್ಧ. "ನಾನು ಕೋಟ್ಯಾಧೀಶ ಇದೇ ನನ್ನ ಧರ್ಮ. ದುಡಿದು ಗಳಿಸಿ, ಸಂಪಾದಿಸಿ ಸಂಗ್ರಹಿಸಿದ್ದೇನೆ. ನನಗಾಗಿ ಅಲ್ಲ ಜಗತ್ತಿಗಾಗಿ. ಹೆಚ್ಚು ದುಡಿಯೋದು, ಗಳಿಸುವುದು, ಕಡಿಮೆ ಬಳಸುವುದು, ಜಗತ್ತನ್ನು ಸುಂದರಗೊಳಿಸಲು ನನ್ನ ದುಡಿಮೆ ಬಳಸುವುದು". 

ಜಾರ್ಜ್ ಬರ್ನಾಡ್ ಷಾ ಒಬ್ಬ ಸಾಹಿತಿ. ಅವರು ಒಂದು ಸುಂದರ ಮಾತನ್ನಾಡಿದ್ದಾರೆ. ಸಂಪತ್ತು ಕೈ ಕಾಲು ಇದ್ದಂತೆ. ಕೈ ಕಾಲು ಬಳಸಿದರೆ ಉಳಿಯುತ್ತದೆ. ಬಳಸದಿದ್ದರೆ ನಾಶವಾಗುತ್ತದೆ. ಹಾಗೆ ಹಣ. ಸಂಪತ್ತು ಸರಿಯಾಗಿ ಬಳಸಿದರೆ ಉಳಿಯುತ್ತದೆ. ಇಲ್ಲದಿದ್ದರೆ ನಾಶವಾಗುತ್ತದೆ. ಕೈ ಕಾಲು ಇರುವುದು ಚಂದ ಮಾಡುವುದಕ್ಕೆ ಅಲ್ಲ. ಈಗ ಬೆರಳಿಗೆ ಉಂಗುರ ಹಾಕುತ್ತೇವೆ. ಬಂಗಾರದ ಕಡಗ ಕೈಗೆ ಹಾಕುತ್ತೇವೆ. ಇವೆಲ್ಲ ಹಾಕಿದ ಬಳಿಕ ಅದು ಹೇಗೆ ಬಳಕೆಯಾಗುತ್ತದೆ?. ಈ ಆಭರಣ ಹಾಕಿದ ಕೈ ಒಕ್ಕಲುತನ ಮಾಡುತ್ತದೆಯೆ?. ಮಣ್ಣು ಹದ ಮಾಡುತ್ತದೆಯೆ?. ಇಲ್ಲ. ಆಗ ಕೈ ಹೇಳುತ್ತವೆ ಈ ಮನುಷ್ಯ ನಮಗೆ ಏನು ಹಾಕಿದ್ದಾನೆ. ಅದನ್ನು ನೋಡೋದಕ್ಕೆ ನಮ್ಮ ಬಳಸಿದ ವಿನಹ, ಕೈ ಬೆರಳು ಬಳಸಲು ಅಲ್ಲ. ನಮ್ಮ ಕೆಲಸ ಏನು ಇಲ್ಲ ಅಂತ ಕ್ರಮೇಣ ದುರ್ಬಲವಾಗಿ ನಾಶ ಹೊಂದುತ್ತವೆ. ಬಳಸಿದರೆ ಮಾತ್ರ ಬದುಕುವುದು. ಇಲ್ಲ ಅಂದರೆ ನಾಶ. ಹೊಳೆಯಲ್ಲಿ ನೀರು ಹರಿದಂತೆ, ಜೀವನದಲ್ಲಿ ಸಮೃದ್ಧಿ ಹರಿಯುತ್ತಿರಬೇಕು. ಇಲ್ಲ ಅಂದರೆ ಕೆರೆಯಂತೆ ಆಗುತ್ತದೆ. ಕೆರೆಯಲ್ಲಿ ನೀರು ಹರಿಯುವುದಿಲ್ಲ. ಕ್ರಮೇಣ ಕಡಿಮೆಯಾಗಿ, ಹೊಲಸಾಗಿ ಅಲ್ಲಿಗೆ ಯಾರು ಹೋಗದಂತೆ ಆಗುತ್ತದೆ. 

ಹಿಂದೆ ಋಷಿಗಳು ಇದ್ದರು. ಅವರದು ರೈತ ಜೀವನ. ನದಿ ಪಕ್ಕದಲ್ಲಿ ಒಂದು ಸುಂದರ ಕುಟೀರ ಕಟ್ಟಿಕೊಂಡು.. ಕುಟೀರದ ಸುತ್ತ ಹೂ, ಹಣ್ಣಿನ ಗಿಡ ನೆಟ್ಟು, ನೂರಾರು ಹಸುಗಳನ್ನು ಸಾಕುತ್ತಿದ್ದರು. ಅಲ್ಲಿ ಚಿನ್ನ, ಬೆಳ್ಳಿ, ಮುತ್ತು ಮತ್ತು ರತ್ನ ಇರಲಿಲ್ಲ. ತುಂಬಿ ಹರಿಯುವ ನದಿ, ಶ್ರೀಮಂತ ನಿಸರ್ಗ, ಹಾಡುವ ಹಕ್ಕಿಗಳು, ಪ್ರೀತಿಸುವ ವಿದ್ಯಾರ್ಥಿಗಳು, ಜ್ಞಾನ ಪಿಪಾಶವುಳ್ಳ ಜನ ಇದ್ದರು. ಹಣ್ಣು, ಹಂಪಲ, ಹಾಲು ಹೈನು ತುಂಬಿತ್ತು. ಇವುಗಳ ಮಧ್ಯೆ ಋಷಿ ಹಾಡಿಕೊಂಡು ಇರುತ್ತಿದ್ದನು. ಮಕ್ಕಳಿಗೆ ವಿದ್ಯೆ ನೀಡುತ್ತಿದ್ದರು. ನೋಡಿ ಎಂತಹ ಶ್ರೀಮಂತಿಕೆ!. ಇದು ಸಮೃದ್ಧ ಜೀವನ. ಮೈ ಮನಸ್ಸು ಸಮೃದ್ಧವಾಗಿತ್ತು. ಮೈಯಲ್ಲಿ ಉತ್ಸಾಹ, ಮನಸ್ಸಿನಲ್ಲಿ ತೃಪ್ತಿ ತುಂಬಿತ್ತು ಆಗ ಶ್ರೀಮಂತರು.

ನಾವು ಪರಿಶ್ರಮದಿಂದ ದುಡಿದದ್ದು, ನಮ್ಮನ್ನು ಶ್ರೀಮಂತ ಮಾಡುತ್ತದೆ. ಇದಕ್ಕೆ ಅಸ್ತೇಯಾ ಎನ್ನುವರು. ನಮ್ಮದಷ್ಟೇ ಬಳಸಿ ಆನಂದ ಪಡುವುದಕ್ಕೆ ಅಸ್ತೇಯ ಎನ್ನುವರು. ಬೇರೆಯವರದು ಬೇಕು, ಅದು ನನ್ನಲ್ಲಿ ಇಲ್ಲ ಎಂದರೆ ಸ್ತೇಯ. ಋಷಿಗಳು ಹೇಳಿದ್ದು ನಾವು ನಾರು ಬಟ್ಟೆ ಹಾಕಿ ಸಂತೋಷ ಪಡುತ್ತೇವೆ. ನೀವು ಪಿತಾಂಬರ ಧರಿಸಿ ಸಂತೋಷ ಪಡುತ್ತೀರಿ. ನಾವು ನೀವು ಸಮ ಸಂತೋಷಿಗಳೇ ಅಂದರು. ಸಂತೋಷದಲ್ಲಿ ನಮಗೆ ನಿಮ್ಮಲ್ಲಿ ವ್ಯತ್ಯಾಸವೇನು?. ಸಂತೋಷ ನಮ್ಮಿಬ್ಬರಿಗೂ ಸಮ. ನಮ್ಮನ್ನು ಬಡವರನ್ನಾಗಿ, ಶ್ರೀಮಂತರನ್ನಾಗಿ ಮಾಡುವುದು ಸಂತೋಷ. ಸಂತೋಷ ತೃಪ್ತಿ ಇದ್ದರೆ ಶ್ರೀಮಂತ. ಸಂತೋಷವಿಲ್ಲ ಅತೃಪ್ತಿ ಇದ್ದರೆ ಬಡವ. ಉಟ್ಟಿರುವುದು, ತೊಟ್ಟಿರುವುದು ಮಹತ್ವವಲ್ಲ. ಸಂತೋಷ ಮಹತ್ವದ್ದು. 

ಕೆಲವರು ದೊಡ್ಡ ಚೇರ್ ಮೇಲೆ ಕುಳಿತು ಸಂತೋಷ ಪಡಬಹುದು. ಕೆಲವರು ನೆಲದ ಮೇಲೆ ಕುಳಿತು ಸಂತೋಷ ಪಡುತ್ತಾರೆ. ಅವರ ಸಂತೋಷಕ್ಕೆ, ಇವರ ಸಂತೋಷಕ್ಕೆ ಏನು ವ್ಯತ್ಯಾಸವಿಲ್ಲ. ನಿಮ್ಮ ವೈಭವ ನೋಡಿ ಅದು ನನಗಿಲ್ಲ ಅಂತ ಅನಿಸಿದರೆ ಬಡವ. ಎಂತಹ ವೈಭವ ಅಂತ ಸಂತೋಷ ಪಟ್ಟರೆ ಸಿರಿವಂತ. 
ಸಾಗರದ ಬಳಿ ಹೋಗಿ ನೀರು ಕುಡಿದು ನೋಡಿ. ಎಂದು ತೃಪ್ತಿಯಾಗುವುದಿಲ್ಲ. ಕುಡಿದಷ್ಟು ಕುಡಿದಷ್ಟು ದಾಹ ಶುರುವಾಗುತ್ತದೆ. ಯಾಕೆ?. ಅದು ಉಪ್ಪು ನೀರು. ಸಂಪತ್ತು ಗಳಿಸಿದಷ್ಟು ತಾಪ ಹೆಚ್ಚಾಗುತ್ತಿತ್ತು ಅಂದರೆ ಅದು ಉಪ್ಪು ನೀರು ಕುಡಿದಂತೆ. ಏನದೆ ಅದರಲ್ಲಿ ಆನಂದ ಪಡಬೇಕು. ಜಗತ್ತೇ ಸಂಪತ್ತು, ನೋಡಿದ್ದಲ್ಲೆಲ್ಲಾ ಸಂಪತ್ತು ಇದೆ. ನಾವೆಲ್ಲರೂ ಸಿರಿವಂತರೇ, ನಮ್ಮ ಮನಸ್ಸು ಸಂತೋಷವಾಗಿ ಇತ್ತು ಅಂದರೆ. ಅವರು ಅಷ್ಟೇ, ನಾವು ಅಷ್ಟೇ. ಅವರು ಸಂತೋಷಪಡಲಿ, ನಾವೂ ಸಂತೋಷ ಪಡುತ್ತೇವೆ. ಅವರು ಅವರಲ್ಲಿ ಇದ್ದಿದ್ದನ್ನು ಬಳಸಿ ಸಂತೋಷ ಪಡುತ್ತಾರೆ. ನಾವು ನಮ್ಮಲ್ಲಿರುವುದನ್ನು ಬಳಸಿ ಸಂತೋಷ ಪಡುತ್ತೇವೆ. ಉದಾಹರಣೆಗೆ, ಅವರು ವಾಷಿಂಗ್ ಮಿಷನ್ ನಲ್ಲಿ ಬಟ್ಟೆ ತೊಳೆದು ಹಾಕಿ ಸಂತೋಷ ಪಡುತ್ತಾರೆ. ನಾವು ಕಲ್ಲಿನ ಮೇಲೆ ಬಟ್ಟೆ ತೊಳೆದು ಹಾಕಿ ಸಂತೋಷ ಪಡುತ್ತೇವೆ. ಮಹತ್ವದ್ದು ಯಾವುದು?. ಸ್ವಚ್ಛ ಬಟ್ಟೆ ಮಹತ್ವದ್ದು. ತೊಳೆಯುವುದು ಮಹತ್ವದ್ದು. ಅವರೊಂದು ರೀತಿ ತೊಳೆಯುತ್ತಾರೆ. ನಾವೊಂದು ರೀತಿ ತೊಳೆಯುತ್ತೇವೆ. ಅವರದು ಸ್ವಚ್ಛಬಟ್ಟೆ. ನಮ್ಮದು ಸ್ವಚ್ಛ ಬಟ್ಟೆ. ಹಾಕಿಕೊಂಡ ಬಳಿಕ ಅವರಿಗೂ ಆನಂದ, ನಮಗೂ ಆನಂದ. ನಾವು ಸಮ. ಈ ದೃಷ್ಟಿಕೋನ ಬಂದರೆ ನಾವೆಲ್ಲರೂ ಶ್ರೀಮಂತರೇ.

ನಾವು ನಮ್ಮ ಮನೆಗೆ ಹೋದಾಗ ಮನೆಯವರು ನಗುನಗುತ್ತಾ ಬಾಗಿಲು ತೆಗೆಯುತ್ತಾರೆ. ಮಹಾರಾಜ ಅರಮನೆಗೆ ಹೋದರೆ ಸೇವಕ ಬಂದು ಬಾಗಿಲು ತೆಗೆಯುತ್ತಾನೆ, ನಮಸ್ಕರಿಸುತ್ತಾನೆ, ಅದು ಕೃತ್ರಿಮ. ಭೂಮಿಯೆ ಸಂಪತ್ತು. ಭೂಮಿ ಇಲ್ಲ ಅಂದರೆ ಬದುಕೆ ಇಲ್ಲ. ಬದುಕಿಗೆ ಬೇಕಾದದ್ದು ಎಲ್ಲ ಇದೆ ಈ ಭೂಮಿಯಲ್ಲಿ. ಅಡುಗೆ ಮನೆ ತುಂಬಿದ್ದರೆ ನಾವು ಶ್ರೀಮಂತರು. ಆಹಾರ, ನೀರು, ಗಾಳಿ, ಬೆಳಕು ಮತ್ತು ಪ್ರೀತಿಸುವ ಜನರ ಕೊರತೆ ಇಲ್ಲದಿರುವುದೇ ಶ್ರೀಮಂತಿಕೆ. ಇವೆ ನಿಜವಾದ ಸಂಪತ್ತು. ಯಾರ ಮನೆಯಲ್ಲಿ ಆತಿಥ್ಯಕ್ಕೆ ಅವಕಾಶ ಇದೆಯೋ? ಆನಂದವಾಗಿ ಆತಿಥ್ಯ ನೀಡುವವರೊ, ಅವರೇ ಶ್ರೀಮಂತರು. ದಾಹದಿಂದ ಬಂದವನಿಗೆ ನೀರು ನೀಡುವವರೇ ಸಿರಿವಂತರು. ಅಲ್ಲವೇ ಮಕ್ಕಳೆ?.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************

Ads on article

Advertise in articles 1

advertising articles 2

Advertise under the article