-->
ಜೀವನ ಸಂಭ್ರಮ : ಸಂಚಿಕೆ - 202

ಜೀವನ ಸಂಭ್ರಮ : ಸಂಚಿಕೆ - 202

ಜೀವನ ಸಂಭ್ರಮ : ಸಂಚಿಕೆ - 202
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
             
ಮಕ್ಕಳೇ... ಹಿಂದೆ ಪತಂಜಲ ಯೋಗ ಸೂತ್ರದಲ್ಲಿ ಸಂಯಮದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಸಂಯಮದ ಇನ್ನೊಂದು ರೂಪ ನೋಡೋಣ. ಹಿಂದೆ ಧಾರಣ, ಧ್ಯಾನ ಮತ್ತು ಸಮಾಧಿಗೆ ಸಂಯಮ ಎಂದು ಕರೆದರು. ಇದು ಕೂಡ ಯೋಗ ಸೂತ್ರದಲ್ಲಿ ಬರುತ್ತದೆ. ಮನಸ್ಸು ಇಂದ್ರಿಯಗಳ ಮೂಲಕ ಹೊರಗೆ ಹರಿಯುತ್ತದೆ. ಹೊರಗೆ ಹರಿದು ಆ ವಸ್ತುವಿನಲ್ಲಿ ಬಂದಿಯಾಗುತ್ತದೆ. ಆದ್ದರಿಂದ ಯಾವಾಗಲೂ ಆ ವಸ್ತುವನ್ನು ನೋಡಬೇಕು, ಮುಟ್ಟಬೇಕು, ರುಚಿಸಬೇಕು ಮತ್ತು ಆಘ್ರಾಣಿಸಬೇಕು ಅನಿಸುತ್ತದೆ. ಇದರಿಂದ ಮನಸ್ಸಿನ ಶಕ್ತಿ ಹೊರಮುಖವಾಗಿ ಹರಿದು ಚೆಲ್ಲಲ್ಪಡುತ್ತದೆ. ಹಾಗೆ ಹೊರಮುಖವಾಗಿ ಹರಿಯುವುದನ್ನು ನಿಲ್ಲಿಸುವುದಕ್ಕೆ ಸಂಮಯ ಎನ್ನುವರು. ನೋಡಬೇಕು, ನೋಡಬಾರದಂತಲ್ಲ, ಸುಮ್ಮನೆ ನೋಡುವುದು. ಸುಮ್ಮನೆ ಕೇಳುವುದು. ತಲೆಗೆ ಅಂಟಿಸಿಕೊಳ್ಳಬಾರದು. ಕಾಮವಿಲ್ಲದೆ, ಕ್ರೋದವಿಲ್ಲದೆ, ಸುಮ್ಮನೆ ನೋಡುವುದು. ಎಲ್ಲಾ ಮಾಡುವುದು, ಯಾವುದಕ್ಕೂ ಅಂಟಿಕೊಳ್ಳಬಾರದು, ಸಿಕ್ಕಿಹಾಕಿಕೊಳ್ಳಬಾರದು. ಕಣ್ಣು, ಕಿವಿ, ಬಾಯಿ, ಮೂಗು ಮತ್ತು ಚರ್ಮ ಇವು ಪಂಚದ್ವಾರಗಳು. ರೂಪಜ್ಞಾನ ಕಣ್ಣಿನಿಂದ, ಶಬ್ದ ಜ್ಞಾನ ಕಿವಿಯಿಂದ, ರಸ ಜ್ಞಾನ ನಾಲಿಗೆಯಿಂದ, ವಾಸನೆ ಜ್ಞಾನ ಮೂಗಿನಿಂದ, ಸ್ಪರ್ಶಜ್ಞಾನ ಚರ್ಮದಿಂದ ಆಗುತ್ತದೆ. ಈ ಪಂಚ ವಿಷಯಗಳು ಬಹಳ ಆಕರ್ಷಕ. ಎಷ್ಟು ನೋಡಿದರೂ ಸಾಕು ಅನಿಸುವುದಿಲ್ಲ. ಎಷ್ಟು ಕೇಳಿದರು ಸಾಕು ಅನಿಸುವುದಿಲ್ಲ. ಎಷ್ಟು ರುಚಿಸಿದರು ಸಾಕುಅನಿಸುವುದಿಲ್ಲ. ಎಷ್ಟು ಮುಟ್ಟಿದರು ಬೇಡ ಅನಿಸುವುದಿಲ್ಲ. ಎಷ್ಟು ವಾಸನೆ ತೆಗೆದುಕೊಂಡರು ಮುಗೀತು ಅನಿಸುವುದಿಲ್ಲ. ಮನಸ್ಸಿಗೆ ಮತ್ತೆ ಮತ್ತೆ ಬೇಕು ಅನಿಸುತ್ತದೆ. ಅದರ ಸುಳಿಗೆ ಸಿಲುಕಿದರೆ ಹೊರಗೆ ಬರಲು ಸಾಧ್ಯವಿಲ್ಲ. ಊಟ ಮಾಡಬೇಕು, ಸಾಕು ಅನಿಸಿದಾಗ, ನಿಲ್ಲಿಸಬೇಕು. ನೋಡಬೇಕು, ಹೆಚ್ಚು ನೋಡುವುದು ಬೇಡ ಅನಿಸಿದಾಗ, ನಿಲ್ಲಿಸಬೇಕು. ಅಷ್ಟು ಹಿಡಿತ ಮನಸ್ಸಿನ ಮೇಲೆ ಬೇಕು. ಬಹಳ ಕಷ್ಟ ಇದೆ. ಪ್ರಯೋಗ ಮಾಡಿ ನೋಡಿ. ಟಿವಿ ಮುಂದೆ ಕೂರುವುದು. ಯಾವುದೋ ಒಂದು ಸುಂದರ ಕಾರ್ಯಕ್ರಮ ನಡೆಯುತ್ತಿರುತ್ತದೆ. ಮಧ್ಯಕ್ಕೆ ಬಂದಿರುತ್ತದೆ. ಆ ಕ್ಷಣವೇ ಸಾಕು ಅಂತ ಬಂದ್ ಮಾಡಿದರೆ ಸಂಯಮ. ಅದು ಬಹಳ ಕಷ್ಟದ ಕೆಲಸ. ಯಾವುದು ರುಚಿರುಚಿಯಾಗಿರುತ್ತದೆ ಅದನ್ನು ಅಷ್ಟಕ್ಕಷ್ಟೇ ಸಾಕು ಅಂತ ನಿಲ್ಲಿಸಬೇಕು. ಅದು ಕಷ್ಟ. ಒಂದು ವೇಳೆ ಇಂದ್ರಿಯಗಳ ಮೇಲೆ, ಮನಸ್ಸಿನ ಮೇಲೆ ನಿಗ್ರಹ ಬಂತು ಅಂದರೆ, ಅದು ಸಂಯಮ.

ಇಂದ್ರಿಯಗಳ ಮೂಲಕ ಮನಸ್ಸು ಹೊರ ಹರಿಯುವುದನ್ನು ನಿಯಂತ್ರಿಸಬೇಕು. ಇಂದ್ರಿಯಗಳು, ದ್ವಾರಗಳು, ಇವುಗಳ ಮೂಲಕ ಮನಸ್ಸು ಹರಿಯುತ್ತದೆ. ಇವುಗಳನ್ನು ನಿಯಂತ್ರಿಸುವುದು ಸಂಯಮ. ಸಂಯಮ ಎಂದರೆ ನಿಗ್ರಹ. ನಮ್ಮ ನಿಯಂತ್ರಣದಲ್ಲಿ ಹರಿಯಬೇಕು. ನಮ್ಮ ಹಿಡಿತ ತಪ್ಪಿ ಮನಸ್ಸು ಓಡಿತು ಅಂದರೆ ಅದು ಯಾವುದರಲ್ಲಾದರೂ ಅಂಟಿಕೊಳ್ಳುತ್ತದೆ. ಎಲ್ಲಾ ದ್ವಾರಗಳನ್ನು ನಿಗ್ರಹಿಸಿ, ಮನಸ್ಸನ್ನು ನಿಯಂತ್ರಣಕ್ಕೆ ತರಬೇಕು. ನಮ್ಮ ಹಿಂದ್ರಿಯಗಳ ಮೇಲೆ ನಾವೇ ನಿಗ್ರಹ ಮಾಡುವುದು. ಬೇಡ ಅನ್ನುವುದನ್ನು ಸಹ ನಿಗ್ರಹಿಸಬೇಕು. ಇದಕ್ಕೆ ಮನುಷ್ಯ ಪ್ರಯತ್ನ ಮಾಡಬೇಕು. ಮನುಷ್ಯ ಆಂತರಿಕವಾಗಿ ಶ್ರೀಮಂತನಾಗಬೇಕಾದರೆ, ಮನಸ್ಸು ಶ್ರೀಮಂತ ವಾಗಲು ಸಂಯಮ ಸಾಧಿಸಬೇಕು. ಒಂದು ಹಂತದವರೆಗೆ ನೋಡುವುದು, ಬೇಡ ಅಂದ ಕ್ಷಣ ಬಿಟ್ಟು ಬಿಡುವುದು. ಕೇಳ್ತಾ ಕೇಳ್ತಾ ಮನಸ್ಸು ಮಗ್ನವಾಗಿರಬೇಕು. ಬೇಡ ಅಂದಾಕ್ಷಣ ಬಿಟ್ಟು ಬಿಡುವುದು. ಮಾಡುವಾಗ ಮಗ್ನತೆ ಇರಬೇಕು. ನೋಡುವಾಗ ಮಗ್ನತೆ ಇರಬೇಕು. ಬೇಡ ಅಂದ ಕ್ಷಣ ಬಿಡಬೇಕು. ನಮ್ಮ ಹಿಡಿತದಾಗ ನಾವು ಇರಬೇಕು. ಉದಾಹರಣೆಗೆ ಹಿಂದಿನ ಕಾಲದ ಬಾವಿ ನೆನಸಿಕೊಳ್ಳಿ. ನೀರನ್ನು , ಬಿಂದಿಗೆಯಿಂದ , ಹಗ್ಗದ ಸಹಾಯದಿಂದ ಸೇದುತ್ತಿದ್ದರು. ಮೊದಲು ತಿರುಗಣಿಗೆ ಹಗ್ಗ ಹಾಕಿ, ಹಗ್ಗದ ಒಂದು ಬದಿಯನ್ನು ಬಿಂದಿಗೆಗೆ ಕಟ್ಟುತ್ತಿದ್ದರು. ಅದನ್ನು ನೀರಿನೊಳಗೆ ನಿಧಾನವಾಗಿ ಇಳಿಬಿಡುತ್ತಿದ್ದರು. ನೀರನ್ನು ಬಿಂದಿಗೆಗೆ ಮುಳುಗಲು ಜಗ್ಗುತ್ತಿದ್ದರು. ನೀರು ಬಿಂದಿಗೆ ತುಂಬಿದ ಕ್ಷಣ ಎರಡು ಕೈಗಳಿಂದ ಮೇಲಕ್ಕೆ ಸೇದುತ್ತಿದ್ದರು. ಅದನ್ನು ಹೇಗೆ ಸೇದುತ್ತೇವೆ ಎಂದರೆ, ಒಂದು ಕೈಯಲ್ಲಿ ಎಳೆಯುವುದು, ತಕ್ಷಣ ಇನ್ನೊಂದು ಕೈಯಿಂದ ಆ ಹಗ್ಗ ಹಿಡಿದು, ಇನ್ನೊಂದರಿಂದ ಹಗ್ಗದ ಮುಂದಕ್ಕೆ ಕೈಹಾಕಿ, ಹಿಡಿದು ಎಳೆಯುತ್ತೇವೆ. ಒಂದೇ ಕೈಯಿಂದ ನೀರನ್ನು ಸೇದಲು ಸಾಧ್ಯವಾಗುವುದಿಲ್ಲ. ಎರಡು ಕೈ ಬಳಸುತ್ತೇವೆ. ಒಂದಕ್ಕೆ ಆಯಾಸ ಆಗದಂತೆ ಒಂದರ ಬಳಿಕ ಮತ್ತೊಂದು ಹಸ್ತ ಬಳಸಿ ಸೇದುತ್ತೇವೆ. ಬರೀ ಹಿಡಿಯುವುದಲ್ಲ. ಹಿಡಿಯಬೇಕು ಮತ್ತೆ ಬಿಡಬೇಕು. ಹೀಗೆ ಬಿಡುವುದಕ್ಕಾಗಿ ಹಿಡಿಯುವುದು. ಹಿಡಿಯುವುದು ಏತಕ್ಕೆ? ಬಿಡುವುದಕ್ಕೆ. ಒಂದೇ ಕೈ ಹಿಡಿದರೆ ನೀರು ಮೇಲೆ ಬರುವುದಿಲ್ಲ. ಬಿಡುವುದು ಹಿಡಿಯುವುದು, ಬಿಡುವುದು ಹಿಡಿಯುವುದು ಹೀಗೆ ಮಾಡಿದರೆ, ನೀರಿನ ಬಿಂದಿಗೆ ಮೇಲೆ ಬರುತ್ತದೆ. ನೋಡೋದು, ನೋಡದೆ ಇರಬೇಕು. ಕೇಳುವುದು, ಕೇಳದೆ ಇರಬೇಕು. ಮಾಡುವುದು, ಮಾಡದೆ ಇರಬೇಕು. ಕೆಲಸ ಮಾಡುತ್ತಾ ಇರೋದು, ಸಮಯ ಬಂತು ನಿಲ್ಲಿಸಿ ಮಲಗುವುದು. ಮಲಗುವಾಗ ಮಲಗಬೇಕು. ಏಳುವಾಗ ಏಳಬೇಕು. ಮಾಡುವಾಗ ಮಾಡಬೇಕು. ನೋಡುವಾಗ ನೋಡಬೇಕು. ಯಾವಾಗಲೂ ನೋಡುವುದಲ್ಲ. ಯಾವಾಗಲೂ ಕೇಳುವುದಲ್ಲ. ಯಾವಾಗಲೂ ತಿನ್ನುವುದಲ್ಲ. ಇರಬೇಕು ಇರಬಾರದು ಇದು ಸಂಯಮ. ಎಲ್ಲಿಗೆ ಹೋಗಬೇಕು ಅಲ್ಲಿಗೆ ಹೋಗಬೇಕು. ಕಾಲು ಹೋದಲ್ಲೆಲ್ಲ ಹೋಗುವುದಲ್ಲ. ಮನಸ್ಸು ಬಯಸುತ್ತದೆ, ಕಾಲು ಹೇಳುತ್ತದೆ ನನಗೆ ಆಗುವುದಿಲ್ಲ ಅಂತ. ಕಾಲಿನ ಮಾತು ಕೇಳಬೇಕೆ ವಿನಹ, ಮನಸ್ಸಿನ ಮಾತನ್ನಲ್ಲ
.
ಒಬ್ಬ ನೌಕರ ಒಂದು ಊರಲ್ಲಿ ಕೆಲಸ ಮಾಡುತ್ತಿದ್ದನು. ಆತ ಆತನ ಹೆಂಡತಿ, ಎರಡು ಮಕ್ಕಳು ಇದ್ದರು. ಒಂದು ಸುಂದರ ಮನೆಯಲ್ಲಿ ವಾಸವಾಗಿದ್ದರು. ಜೊತೆಗೆ ಒಂದು ಬೀದಿನಾಯಿಯನ್ನು ತಂದು ಜೊತೆ ಇಟ್ಟುಕೊಂಡಿದ್ದರು. ಬೀದಿ ನಾಯಿ ಎಂದರೆ ಸ್ವತಂತ್ರ. ಅದು ಒಮ್ಮೆ ಮಾಲೀಕ ಹಾಕಿದ ಬ್ರೆಡ್ ನಿಂದಾಗಿ, ಅದು ಆ ಮನೆಗೆ ಜೋತು ಬಿದ್ದಿತ್ತು. ಆ ಮನೆಯ ಸದಸ್ಯನಂತೆ ಆಗಿ ಹೋಯಿತು. ನಾಯಿಯನ್ನು ಮನೆಯಲ್ಲಿ ಎಲ್ಲರೂ ಪ್ರೀತಿಸುತ್ತಿದ್ದರು. ಅದಕ್ಕೆ ದಿನ ಸ್ನಾನ ಮಾಡಿಸುತ್ತಿದ್ದರು. ಅದಕ್ಕೆ ಒಳ್ಳೆಯ ತಿಂಡಿ ಹಾಕುತ್ತಿದ್ದರು. ಅದು ಮೊದಲು ಸ್ವಾತಂತ್ರ್ಯ ಇತ್ತು. ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಿತ್ತು. ವರುಷ ಹೋಯ್ತು. ನಾಯಿ ಮನೆಯ ಮಾಲೀಕ ಆಗಿತ್ತು. ಬಂದವರಿಗೆಲ್ಲ ಆ ನೌಕರ ಹೇಳುತ್ತಿದ್ದ, ಈ ಮನೆಯ ನಿಜವಾದ ಯಜಮಾನ ಯಾರು ಅಂದರೆ ಇದೆ ಅಂತ. ಬಂದವರಿಗೆಲ್ಲ ನಾಯಿಯನ್ನು ತೋರಿಸುತ್ತಿದ್ದನು. ನಾವು ಇರಲಿ ಇಲ್ಲದಿರಲಿ ಈ ಮನೆ ರಕ್ಷಣೆ ಮಾಡುವವನು ಇವನೇ ಎನ್ನುತ್ತಿದ್ದನು. ಈ ನಾಯಿಯನ್ನು ಕೊಂಡಾಡುತ್ತಿದ್ದರು. ಈ ಮಾತು ಕೇಳಿ ನಾಯಿ ತಿಳಿದುಕೊಂಡಿತ್ತು, ನಾನೇ ಈ ಮನೆ ಮಾಲೀಕ ಅಂತ ಭಾವಿಸಿತ್ತು. ಇಲ್ಲಿ ಇರುವುದೆಲ್ಲವೂ ನನ್ನದೇ ಎಂದು ಭಾವಿಸಿತ್ತು. ಒಂದು ದಿನ ಈ ನೌಕರರಿಗೆ ಬೇರೆ ಊರಿಗೆ ವರ್ಗವಾಯಿತು. ಆತ ನಾಯಿ ಬಿಟ್ಟು, ಮನೆಯ ಎಲ್ಲ ಸಾಮಾನುಗಳನ್ನು ಸಾಗಿಸಿದ. ಮನೆಯ ಕೀಲಿ ಕೈ ಮಾಲೀಕರ ಕೈಗೆ ನೀಡಿ ಹೊರಟು ಹೋದನು. ನಾಯಿ ಮಾತ್ರ ಅಲ್ಲೇ ಕುಳಿತಿತ್ತು. ಗೇಟು ಮುಚ್ಚಿದೆ. ಊಟ ಇಲ್ಲ. ನೀರಿಲ್ಲ. ಅಲ್ಲೇ ಕುಳಿತಿದೆ. ಹಸಿವಾಗಿದೆ. ಕಣ್ಣಲ್ಲಿ ನೀರು ಬಂದಿದೆ. ಮಾಲೀಕನ ದಾರಿ ಕಾಯ್ತಾ ಕುಳಿತಿದೆ. ಜೊತೆಗೆ ಮಾಲೀಕ ತಾನೇ ಅಂತ ಕುಳಿತಿದೆ. ಅವಾಗ ಅದರ ಗೆಳೆಯ ಬೀದಿ ನಾಯಿ ಈ ನಾಯಿಯನ್ನು ಹುಡುಕುತ್ತಲೇ ಇತ್ತು. ಈ ದಿನ ಸಿಕ್ಕಿತು. ನೋಡಿ ಹೇಳಿತು, ಏನೋ ದಪ್ಪ ಆಗಿದ್ದಿ, ಅದ್ಭುತ ಆಗಿದ್ದಿ, ಇಲ್ಲೇಕೆ ಕುಳಿತೆ ಅಂದಿತು. ಈ ನಾಯಿ ಹೇಳಿತು, ನಾನು ನನ್ನ ಮನೆಯಲ್ಲಿ ಕುಳಿತಿದ್ದೇನೆ ಅಂದಿತು. ಅದಕ್ಕೆ ಆ ನಾಯಿ ಹೇಳಿತು, ಮತ್ತೆ ಮನೆಯ ಹೊರಗೆ ಏಕೆ ಕುಳಿತೆ ಅಂದಿತು. ಈ ನಾಯಿ ಹೇಳಿತು, ಕೀಲಿ ಹಾಕಿದ್ದಾರೆ ಅದಕ್ಕೆ ಕುಳಿತೆ ಅಂದಿತು. ಆಗ ಆ ನಾಯಿ ಕೇಳಿತು, ನೀನು ಕೀಲಿ ಹಾಕಿದ್ದು ಏನು? ಅಂದಿತು. ಇಲ್ಲ ಅಂದಿತು ಈ ನಾಯಿ. ಹಾಗಾದರೆ ಹೇಗೆ ನಿನ್ನ ಮನೆ ಆಯಿತು ಅಂದಿತು ಆ ನಾಯಿ. ಈ ನಾಯಿ ಹೇಳಿತು ಕುಳಿತಿದ್ದೀನಲ್ಲ, ಮಾಲೀಕ ಹೇಳಿದ್ದ, ಈ ಮನೆಯಲ್ಲಿ ನಿಜ ಮಾಲಿಕ ನೀನು ಅಂತ. ಮುಚ್ಚಿದರೇನು? ತೆರೆದರೇನು? ನಾನೇ ಮಾಲೀಕ ಅಂದಿತ್ತು ಈ ನಾಯಿ. ಆಗ ಆ ನಾಯಿ ಹೇಳಿತು ಮನುಷ್ಯರು ಹಾಗೆ ಹೇಳುತ್ತಾರೆ, ಅವರನ್ನು ನಂಬಬಾರದು, ಪ್ರಸಂಗ ಬಂದರೆ ಹೀಗೆ ಕೀಲಿ ಹಾಕಿಕೊಂಡು ಹೋಗುತ್ತಾರೆ. ಆ ಮಾತನ್ನು ನೀನು ಏಕೆ ತಲೆಗೆ ಹಾಕಿಕೊಂಡಿದ್ದಿ?. ನೀ ಹೀಗೆ ಕುಳಿತರೆ ನಿಜವಾದ ಮಾಲೀಕ ಬಂದು ಬಡಿಯುತ್ತಾನೆ. ಎದ್ದು ಬಾ ಅಂದಿತು. ಮನುಷ್ಯರು ಅಪ್ರಾಮಾಣಿಕರು. ನಾವು ಪ್ರಾಮಾಣಿಕರು ಎಂದು ಹೇಳಿ ಜೊತೆಯಲ್ಲಿ ಕರೆದೊಯ್ಯಿತು.

ನಾವು ಯೋಚನೆ ಮಾಡಬೇಕು. ಯಾವುದು ಸರಿ. ಯಾವುದು ತಪ್ಪು, ಯಾವುದನ್ನ ನೋಡಬೇಕು?. ಎಷ್ಟು ನೋಡಬೇಕು?. ಎಷ್ಟು ನೋಡಬಾರದು?. ಯಾವುದು ತಿನ್ನಬೇಕು?. ಯಾವುದನ್ನು ತಿನ್ನಬಾರದು?. ಪ್ರಚಾರಕ್ಕೆ ಮನಸೋಲಬಾರದು. ವಿಚಾರ ಮಾಡಬೇಕು. ಕಂಡದ್ದನ್ನೆಲ್ಲಾ, ಬಹಳ ವರ್ಣನೆಗೆ ಒಳಪಟ್ಟಿದ್ದೆಲ್ಲ, ತನಗೆ ಹಿತವಾಗಿದೆ ಎನ್ನುವ ಭಾವನೆಯನ್ನು ಪರಿತ್ಯಾಗ ಮಾಡಿ, ಯೋಚಿಸಿ ತೀರ್ಮಾನಿಸಬೇಕು. ಕಣ್ಣು ಎಷ್ಟು ಬಳಸಬೇಕು?. ಕಿವಿ ಎಷ್ಟು ಬಳಸಬೇಕು?. ಮೈ, ಕೈ , ನಾಲಿಗೆ, ಮೂಗು ಇವುಗಳನ್ನು ಎಷ್ಟು ಬಳಸಬೇಕು?. ಅಷ್ಟೇ ಬಳಸುವುದಕ್ಕೆ ಸಂಯಮ ಮಾಡೋದು. ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************


Ads on article

Advertise in articles 1

advertising articles 2

Advertise under the article