ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 91
Wednesday, August 6, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 91
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಈ ಜೀವ ಪ್ರಪಂಚ ಎಂಬುದು ಒಂದು ಅದ್ಭುತ. ಆದರೆ ಎಲ್ಲರೂ ಹೇಳುವ ಅದೊಂದು ಅಂತಹ ಸಂಕೀರ್ಣ ಅಲ್ಲ ಎಂದವರು ಮೆಥಾಯಸ್ ಸ್ಲೀಡೆನ್ ಮತ್ತು ಥಿಯೋಡೋರ್ ಶ್ವಾನ್ ಎನ್ನುವ ಇಬ್ಬರು ಜೀವ ವಿಜ್ಞಾನಿಗಳು. ಇವರು ಜೀವಕೋಶ ಸಿದ್ದಾಂತವನ್ನು (cell theory) ಮಂಡಿಸಿದರು. ಅವರ ಪ್ರಕಾರ ಪ್ರತಿಯೊಂದು ಜೀವಿಯೂ ಅತ್ಯಂತ ಸರಳವಾದ ಜೀವಕೋಶಗಳಿಂದ ಮಾಡಲ್ಪಟ್ಟಿವೆ. ಈ ಜೀವಕೋಶಗಳು ಜೀವಿಯ ರಚನಾತ್ಮಕ (structural) ಮತ್ತು ಕ್ರಿಯಾತ್ಮಕ (functional) ಘಟಕಗಳು ಎಂದು ಕರೆಯಬಹುದು ಎಂದರು. ಆಯ್ತು ಈ ಕೋಶಗಳಿಂದ ಜೀವಿಗಳಾಗುತ್ತವೆ ಸರಿ ಆದರೆ ಈ ಕೋಶಗಳು ಎಲ್ಲಿಂದ ಬರುತ್ತವೆ ಎಂಬ ಪ್ರಶ್ನೆ ಬಂತು. ಏಕೆ ಗೊತ್ತಾ?
ನೀವು ಒದ್ದೆ ಬ್ರೆಡ್ ಅಥವಾ ಹಸಿಕಾಯಿಯನ್ನು ಹೊರಗಡೆ ಇಡುತ್ತೀರಿ. ಎರಡು ದಿನಗಳಲ್ಲಿ ಬೂಸ್ಟು ಬೆಳೆದ ಅವು ಹಾಳಾಗಿರುತ್ತವೆ ಅಲ್ಲವೇ? ಈ ಬೂಸ್ಟು ಒಂದು ಜೀವಿ ಅದು ಎಲ್ಲಿಂದ ಬಂತು? ಕುದಿಸಿಟ್ಟ ಹಾಲು ತೆರೆದಿಟ್ಟರೆ ಮೊಸರಾಗುತ್ತದೆ ದೋಸೆ ಹಿಟ್ಟು ಹುದುಗುತ್ತವೆ. ಈ ಜೀವಿಗಳು ಎಲ್ಲಿಂದ ಬಂದವು? ವಿಜ್ಞಾನಿಗಳಿಗೆ ಎಲ್ಲದರಲ್ಲೂ ಅನುಮಾನ. ಲೂಯಿಸ್ ಪ್ಯಾಶ್ಚರ್ ಒಂದು ಬಕ ಪಾತ್ರೆಯನ್ನು (retort) ತೆಗೆದುಕೊಂಡ. ಅದರ ಒಳಗೆ ಒಂದಷ್ಟು ನೀರು ಹಾಕಿದ. ಅದನ್ನು ಚನ್ನಾಗಿ ಕುದಿಸಿ ಅದರಲ್ಲಿರಬಹುದಾದ ಎಲ್ಲ ಕೋಶಗಳನ್ನು ಕೊಂದ. ಆ ಬಕ ಪಾತ್ರೆಯನ್ನು ಸರಿಯಾಗಿ ಮುಚ್ಚಿದ (sealed). ಒಂದು ವಾರದ ನಂತರ ಅದರಲ್ಲಿರಬಹುದಾದ ಜೀವಿಗಳಿಗಾಗಿ ಹುಡುಕಿದ. ಅಲ್ಲೇನೂ ಸಿಗಲಿಲ್ಲ. ಅಂದರೆ ಜೀವ ನಿರ್ವಾತದಿಂದ (vacuum) ಬರುವುದಿಲ್ಲ ಎಂದ.
ಇದನ್ನೆಲ್ಲಾ ನೋಡಿದ ರುಡಾಲ್ಫ್ ವಿಕ್ರೋವ್ ಜೀವಕೋಶ ಸಿದ್ದಾಂತವನ್ನು ಪುನರೂಪಿಸಿದ (revised cell theory). ಅದರಲ್ಲಿ ಸ್ಲೀಡನ್ ಮತ್ತು ಸ್ವಾನ್ ಅವರ ವಿವರಣೆಯೊಂದಿಗೆ ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕೋಶಗಳಿಂದಲೇ (pre existing cells) ಉದ್ಭವಿಸುತ್ತವೆ ಎಂದ. ಅಂದರೆ ಮನುಷ್ಯ ಈಗಾಗಲೇ ಅಸ್ತಿತ್ವದಲ್ಲಿರುವ ಮನುಷ್ಯನಿಂದ ಬರುತ್ತವೆ. ತೆಂಗಿನ ಮರ ಈಗಾಗಲೇ ಫಲ ಕೊಟ್ಟ ತೆಂಗಿನ ಮರದಿಂದ. ಆದ್ದರಿಂದ ಒಂದು ಕೋಶದಿಂದ ಆರಂಭವಾದ ಜೀವ ತನಗೆ ಬೇಕಾದ ಅಗತ್ಯಗಳನ್ನು ಪೊರೈಸಿಕೊಳ್ಳಲು ಹಲವಾರು ಉತ್ತಮಿಕೆಗಳನ್ನು ಸಾಧಿಸಿಕೊಂಡು ಮನುಷ್ಯನಲ್ಲಿ ತನ್ನ ಪರಾಕಾಷ್ಠೆಯನ್ನು ಕಂಡುಕೊಂಡಿದೆ. ಅಂದರೆ ಈ ಎಲ್ಲದರ ಮೂಲ ಒಂದು ಕೋಶ ಎಂಬುದು ನಿರ್ವಿವಾದ. ಹಾಗಾದರೆ ಈ ಆರಂಭದ ಕೋಶ ಎಂದರೆ ಏನು? ಅದು ರೂಪುಗೊಳ್ಳಲು ಇದ್ದ ಸವಾಲುಗಳಾದರೂ ಏನು ಎಂಬುದನ್ನು ತಿಳಿಯೋಣ.
ಜೀವೋತ್ಪತ್ತಿಗೆ ಬೇಕಾದ ಆರಂಭಿಕ ವಸ್ತುಗಳು ಹೇಗೆ ರೂಪುಗೊಂಡವು/ಎಲ್ಲಿಂದ ಬಂದವು ಎನ್ನುವುದನ್ನು ನನ್ನ ಫೇಸ್‌ಬುಕ್ ಪೇಜ್ Divakara Shetty H ನಲ್ಲಿ ಕೆಲ ವರ್ಷಗಳ ಹಿಂದೆ ವಿವರವಾಗಿ ಬರೆದಿದ್ದೆ. ಅದನ್ನು ಹುಡುಕುವುದೂ ನಿಮಗೆ ಒಂದು ಆಟವೇ.
ನೀವು ಅಂಗಡಿಗೆ ಹೋಗುತ್ತೀರಿ. ಅಲ್ಲಿ ಬೇರೆ ಬೇರೆ ಸಾಮಾನುಗಳನ್ನು ಕೊಳ್ಳುತ್ತೀರಿ. ಸರಿ ತೊಗರಿ ಬೇಳೆ. ಇದನ್ನು ಹಾಗೆಯೇ ತಂದರೆ ಉಳಿದ ಬೇಳೆಗಳೊಂದಿಗೆ ಮಿಶ್ರವಾಗಿ ಅಮ್ಮನ ಹತ್ತಿರ ಬೈಸಿಕೊಳ್ಳಬೇಕಾಗುತ್ತದೆ. ಅಂಗಡಿಯವರು ಈ ಬೇಳೆಯನ್ನು ಪ್ರತ್ಯೇಕವಾಗಿ ಒಂದು ಲಕೋಟೆಗೆ ಹಾಕಿ ಕಟ್ಟಿಕೊಡುವುದು ಬಹಳ ಮುಖ್ಯ. ಅಂದರೆ ಆ ಲಕೋಟೆ ಅಥವಾ ತೊಗರಿ ಬೇಳೆಯ ಚೀಲ ತೊಗರಿ ಬೇಳೆಯನ್ನು ನಿಮ್ಮ ಮನೆಗೆ ಸೇರಿಸುತ್ತವೆ. ಇಲ್ಲವಾದರೆ ತೊಗರಿ ಬೇಳೆಗೆ ಮಣ್ಣು, ಕಲ್ಲು, ಚಾ ಪುಡಿ, ಸಕ್ಕರೆ ಎಲ್ಲವೂ ಸೇರಿಕೊಂಡು ಬಿಡುತ್ತಿದ್ದವು. ಆದರೆ ಮನೆಗೆ ಬಂದ ಕೂಡಲೇ ಹರಿದು ಬಿಸಾಡುವ ಲಕೋಟೆಯ ಮಹತ್ವ ನಮಗೆ ತಿಳಿಯುವುದೇ ಇಲ್ಲ. ಜೀವಜಾಲದ ಈ ಲಕೋಟೆಯೇ ಜೀವಕೋಶಕ್ಕೆ ಜೀವಕೋಶದ ರೂಪ ನೀಡಿದ್ದು.
ಜೀವ ಜಾಲದ ಈ ಲಕೋಟೆಯ ಬಗ್ಗೆ ಮುಂದಿನ ವಾರಕ್ಕೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************