ಕನಸ ಬೆನ್ನತ್ತಿ ಗೆದ್ದ ಹುಡುಗನ ಕಥೆ
Thursday, July 24, 2025
Edit
ಅನುಭವ ಲೇಖನ : ಕನಸ ಬೆನ್ನತ್ತಿ ಗೆದ್ದ ಹುಡುಗನ ಕಥೆ
ಬರಹ : ಜನಾರ್ಧನ ದುರ್ಗ
ಪದವೀಧರ ಶಿಕ್ಷಕರು
ಮಾದರಿ ಉನ್ನತ ಹಿರಿಯ ಪ್ರಾಥಮಿಕ
ಶಾಲೆ ಹಾರಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99729 91018
“My aim is to become a soldier” ಇಡೀ ತರಗತಿ ಗೊಳ್ಳ್ ಎಂದು ನಕ್ಕಿತು. ನಾನು ಅವನನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲ ಹುಡುಗ ಸ್ವಲ್ಪವೂ ವಿಚಲಿತನಾದಂತೆ ಕಾಣಲಿಲ್ಲ. ಆ ಕಣ್ಣುಗಳಲ್ಲಿನ ಮಹತ್ವಾಕಾಂಕ್ಷೆ ಒಂದು ಅಣುವಷ್ಟು ಕೂಡ ತಗ್ಗಿರಲಿಲ್ಲ..
"ನೋಡಿ ಮಕ್ಕಳೇ, ನೀವು ನಗುವುದ್ಯಾಕೆ? ಅವನ ಆಸಕ್ತಿ, ಅವನ ಇಷ್ಟ, ನಿಮಗೆ ಆಗುವುದಿಲ್ಲ ಅಂತ ಅವನಿಗೆ ಆಗಬಾರದು ಅಂತಿಲ್ಲ, ನೀವು ನಿಮಗೇನು ಆಸೆ ಇದೆ ಅದು ಹೇಳಿ, ಅದು ಬಿಟ್ಟು ಇನ್ನೊಬ್ಬರನ್ನು ನೋಡಿ ನಗುವುದಲ್ಲ." ಸ್ವಲ್ಪ ಬಿರುಸಾಗಿಯೇ ಹೇಳಿದೆ. ತರಗತಿ ಸ್ತಬ್ಧವಾಯಿತು.
“why do you want to become a soldier ?” ಯಾಕೆ ನಿನಗೆ ಅದೇ ಇಷ್ಟ..? “ದೇಶ ಸೇವೆ ಮಾಡ್ಬೇಕುಂತ ಆಸೆ ಸರ್”... ನಿಷ್ಯಬ್ಧತೆಯ ನಡುವೆಯೂ ಒಂದಿಬ್ಬರ ಬಾಯಿಯಿಂದ ತಡೆದು ನಿಂತಿದ್ದ ನಗು ಹೊರಗೆ ಚಿಮ್ಮಲ್ಪಟ್ಟಿತು. ನೋಡಿಯೂ ನೋಡದಂತೆ ಇದ್ದೆ. “ನೋಡ್ವ, ಎಲ್ಲರೂ ಸೇರಿ ಒಂದು ಚಪ್ಪಾಳೆ ಕೊಡಿ ಅವನಿಗೆ”... ಈಗ ನಗು ಚಿಮ್ಮಿಸಿದವರೆಲ್ಲ ಸ್ವಲ್ಪ ನಾರ್ಮಲ್ ಹಾದಿಗೆ ಬಂದಿದ್ರು.
ನೋಡಿ ಮಕ್ಕಳೇ, ಶಿಕ್ಷಣದ ಉದ್ದೇಶ ಏನು..? ಪರೀಕ್ಷೆಗಳಲ್ಲಿ ಅಂಕ ಪಡೆಯುವುದು, ನಾಳೆ ಒಳ್ಳೆಯ ಜಾಬ್ ಮಾಡ್ಕೊಳ್ಳುವುದು, ಅಷ್ಟೇಯ..? ಅಷ್ಟೇ ಅಲ್ಲ, ನಾವು ಬದುಕಿದ್ದೇವೆ ಅಂದರೆ ನಾವು ಏನಾದ್ರೂ ಒಳ್ಳೆಯದನ್ನು ಮಾಡಬೇಕು, ಒಂದು ನಾಲ್ಕು ಜನ ಅಸಹಾಯಕರಿಗಾದರು ಸಹಾಯ ಮಾಡುವಷ್ಟು ನಾವು ಬೆಳೆದು ನಿಲ್ಲಬೇಕು. ಆಗ ಅವರು ಜೀವನ ಪರ್ಯಂತ ನಮ್ಮನ್ನು ನೆನಪಿಟ್ಟು ಹರಸುತ್ತಿರುತ್ತಾರೆ. ಇದೇ ಕಾರಣಕ್ಕೆ ನೋಡಿ ಇವತ್ತು ನಮಗೆ ನಮ್ಮ ಅಜ್ಜನ ಅಜ್ಜ ಯಾರೂಂತ ಗೊತ್ತಿಲ್ಲದಿದ್ದರೂ ವಿವೇಕಾನಂದ, ಗಾಂಧಿ, ಭಗತ್ ಸಿಂಗ್… ಹೀಗೆ ಬಹಳಷ್ಟು ಮಹನೀಯರ ಗುರುತು ಪರಿಚಯವಿದೆ ಮತ್ತು ಅವರ ಸಾಧನೆಯೂ ಗೊತ್ತಿದೆ. ಇಲ್ಲ ಅಂದ್ರೆ ಪ್ರಾಣಿಗಳ ಹಾಗೆ ನಾಳೆ ನಾವು ಸತ್ತೋಗ್ತೀವಿ ಅಷ್ಟೇ, ಆಗ ನಮಗೂ ಪ್ರಾಣಿಗಳಿಗೂ ವ್ಯತ್ಯಾಸಾನೆ ಇರಲ್ಲ… ಅರ್ಥ ಆಯ್ತಾ” …ನನ್ನ ಸರ್ವ ಕಾಲಿಕ ಭಾಷಣವನ್ನು ಬಿಗಿದು ಮಕ್ಕಳನ್ನು ಗಮನಿಸಿದೆ. ಒಂದಷ್ಟು ಬೆನ್ನುಗಳು ನೇರ ಆದ ಹಾಗೆ ಕಂಡು ಸಮಯ ವ್ಯರ್ಥ ಆಗಲಿಲ್ಲ ಎಂದೆನಿಸಿತು.
ಹಾಗೆಂದು ಈ ಹುಡುಗನ ಮೇಲೆ ಮಕ್ಕಳು ನಗಾಡಿದ್ದಕ್ಕೆ ಕಾರಣವು ಇಲ್ಲದಿರಲಿಲ್ಲ. ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವನಿಗೆ ಸ್ಪೋರ್ಟ್ಸ್ ಅಂದ್ರೆ ಎಲ್ಲಿಲ್ಲದ ಉತ್ಸಾಹ. ಹಾಗೆಂದು ಓಡಿಸಿದರೆ ಮತ್ತೆ ನಾಲ್ಕು ದಿನ ಶಾಲೆಯ ಕಡೆಗೆ ಇಲ್ಲ. ಕಾರಣ ಆಗಾಗ ಬಾದಿಸುತ್ತಿದ್ದ ದಮ್ಮು, ಕೆಮ್ಮು! ಅದು ಕೆಮ್ಮಿ ಕೆಮ್ಮಿಯೇ ಸಣಕಲಾದ ದೇಹ!. ಕಡೆಗೂ ಪೋಷಕರ ಕೇಳಿಕೆಯ ಮೇರೆಗೆ ಅವನಿಗೆ ಸ್ಪೋರ್ಟ್ಸ್ ನಿಂದ ಮುಕ್ತಿ ನೀಡಲಾಯಿತು. ಆ ನಿರಾಸೆ ನನಗಾದಂತೆ ಅವನ ಮುಖದಲ್ಲೂ ಎದ್ದು ಕಾಣುತ್ತಿತ್ತು. (ವಿಷಯ ಶಿಕ್ಷಕನಾದರು ಸಮಯವಿದ್ದಾಗ ಸ್ಪೋಟ್ಸ್ ಗೆ ತಯಾರಿ ಮಾಡುವುದು ನನ್ನ ವೈಯಕ್ತಿಕ ಆಸಕ್ತಿಯಾಗಿತ್ತು)
ಆಗ ಅವನು ಆರನೇ ತರಗತಿಯಲ್ಲಿ ಇದ್ದ. ನಾನಾಗಷ್ಟೇ ಲೈಫಲ್ಲಿ ಸೆಟಲ್ ಆಗುವುದೆಂಬ ಸರಕಾರಿ ನೌಕರಿಗೆ (ಶಿಕ್ಷಕ) ಹೆಜ್ಜೆ ಇಟ್ಟ ಸಮಯ.
ಈಗ ಏಳೆಂಟು ವರ್ಷಗಳೆ ಕಳೆದಿವೆ. ಆ ಹುಡುಗರೆಲ್ಲ ಈಗ ಎಲ್ಲಿದ್ದಾರೆಂದು ಯೋಚಿಸದಷ್ಟು ಲೈಪ್ ಬ್ಯುಜಿ ಮಾಡಿಕೊಂಡಾಗಿದೆ. ಈ ನಡುವೆ ಆ ಸಿಹಿ ಸುದ್ದಿ ಸಿಕ್ಕಿತು. ಅವನಿಂದು ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಆಯ್ಕೆಯಾಗಿದ್ದಾನೆ. ಆ ಸಂಭ್ರಮವನ್ನು ಅವನ ಪೋಷಕರು ಹಂಚಿಕೊಂಡಾಗ ಅವರಿಗಿಂತ ಒಂದು ಹಿಡಿ ಹೆಚ್ಛೇ ಸಂಭ್ರಮ ನನ್ನದಾಗಿತ್ತು. ಅಂದಿನ ಎಲ್ಲಾ ನೆನಪುಗಳು ಈಗ ಸ್ಮೃತಿ ಪಟಲದಲ್ಲಿ ನಿಧಾನಕ್ಕೆ ಒಡ ಮೂಡ ತೊಡಗಿತು.
ಅಂದಿನ ಆ ಹುಡುಗನೇ ಈ ಅಭಿಷೇಕ್ ನಾಯಕ್! ಬಡಗನ್ನೂರು ಶಾಲೆಯ ನನ್ನ ಆರಂಭದ ವಿದ್ಯಾರ್ಥಿ. ಮೊನ್ನೆ ಮೊನ್ನೆ ತರಬೇತಿ ಮುಗಿಸಿ ಊರಿಗೆ ಬಂದವನನ್ನು ಕುತೂಹಲದಿಂದಲೇ ಸಂಪರ್ಕಿಸಿದೆ. ಅಂದಿನ ಅದೇ ಮುಗ್ಧತೆ, ಸರಳತೆ, ಅತಿಯಾಗಿ ಸಂಭ್ರಮಿಸದ ನಿರ್ಲಿಪ್ತ ಭಾವ, ಅಷ್ಟೇ ಪಳಗಿದ ಮನಸ್ಸು. ಆಗ್ನಿವೀರ್ ಗೆ ಆಯ್ಕೆಯಾಗಲು ಮಾಡಿದ ತಯಾರಿಯ ಬಗ್ಗೆ ಕೇಳಿದರೆ ಅದರ ಸಾರಾಂಶ ಹೀಗಿತ್ತು…
ಅಭಿಷೇಕ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಸ್ ಡಿ ಎಂ ಕಾಲೇಜ್ ಗೆ ಸೇರುತ್ತಾನೆ. ಅಲ್ಲಿ ಒಂದು ದಿನ ಆತ ತನ್ನಷ್ಟಕ್ಕೆ ಗ್ರೌಂಡ್ ಅಲ್ಲಿ ಓಡುತ್ತಿರುವುದನ್ನು ಗಮನಿಸಿದ ದೈಹಿಕ ನಿರ್ದೇಶಕರು ಅವನ ಓಟದ ಕ್ರಮದಿಂದ ಪ್ರಭಾವಿತರಾಗಿ ಸ್ಪೋರ್ಟ್ಸ್ ಕಡೆಗೆ ಗಮನ ಸೆಳೆಯುತ್ತಾರೆ. ಮೊದಲೇ ಕ್ರೀಡೆಯ ಆಸಕ್ತಿಯಿದ್ದ ಅಭಿಷೇಕ್ ‘ಹೂಮ್’ ಅನ್ನುತ್ತಾನೆ. ಮುಂದೆ ದೈನಂದಿನ ತರಬೇತಿ ಹುಡುಗರನ್ನು ಮೀರಿಸಿ ಓಡುತ್ತಾನೆ. ಮುಂದೆ ಹಲವಾರು ಮ್ಯಾರಥಾನ್ ಓಟಗಳಲ್ಲಿ ಪ್ರಶಸ್ತಿ, ಆಲ್ ಇಂಡಿಯಾ ವರೆಗೂ ಸ್ಪರ್ಧಿಸಿ ಪದಕಗಳನ್ನು ಗೆದ್ದು ಸಂಭ್ರಮಿಸುತ್ತಾನೆ.
ಈಗ ಕ್ರೀಡೆ ಜೊತೆಗೆ ಎನ್ ಸಿ ಸಿ ಅವನ ಜೀವನಕ್ಕೊಂದು ನಿರ್ದಿಷ್ಟ ದಿಕ್ಕನ್ನು ನೀಡುತ್ತದೆ. ಮತ್ತು ಬದುಕನ್ನು ಅರ್ಥವಿಸಿಕೊಡುತ್ತದೆ. ಇದು ಆತನ ಬಾಲ್ಯದ ಕನಸಿಗೆ ಮತ್ತೊಮ್ಮೆ ರೆಕ್ಕೆ ಪುಕ್ಕ ಮೂಡಿಸುತ್ತದೆ. ಈ ನಡುವೆ ಸೈನಿಕ ನೇಮಕಾತಿಯ ಕರೆಗೆ ಹೊರಟು ನಿಂತಾಗ ಕಡಿಮೆ ಎತ್ತರವಿದ್ದ ಕಾರಣಕ್ಕೆ ರಿಜೆಕ್ಟ್!. ಮತ್ತೆ ಹೈಟ್ ಎತ್ತರಿಸಲು ಕಸರತ್ತು ಶುರು. ಹೈಟ್ ಬಂತು ಎನ್ನುವಾಗ ಎತ್ತರಕ್ಕೆ ತಕ್ಕುದಾದ ತೂಕದ ಸಮಸ್ಯೆ.. ಮತ್ತೊಮ್ಮೆ ತೂಕ ಎತ್ತರಿಸುವ ಕಸರತ್ತು. ಹೀಗೆ ಸ್ವಯಂ ದೃಢತೆಯನ್ನು ಮೈಗೂಡಿಸಿಕೊಂಡು ಅಗ್ನಿವೀರ್ ಗಾಗಿ ಕರೆ ಬಂದಾಗ ಯಾವುದೇ ವಿಶೇಷ ತರಬೇತಿ ಪಡೆಯದೆ ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಆಯ್ಕೆ. ಇದೆಲ್ಲವನ್ನೂ ಕೂಡ ಸಾಮಾನ್ಯ ಎನ್ನುವಂತೆ ವಿವರಿಸುವ ಅಭಿಷೇಕ್ ಬಹಳ ಮೆಚ್ಯೂರ್ಡ್ ಆಗಿ ಕಾಣಿಸಿಕೊಳ್ಳುತ್ತಾನೆ.
ಈ ನಡುವೆ ಆರೋಗ್ಯ ಸಮಸ್ಯೆಯ ಕುರಿತು ಪ್ರಶ್ನಿಸದೆ ಇರಲಿಲ್ಲ, “ಸ್ಪೋರ್ಟ್ಸ್ ಗೆ ಸೇರುವಾಗ ಇತ್ತು ಸರ್, ಮುಂದೆ ಪ್ರಾಕ್ಟಿಸ್ ಮಾಡ್ತಾ ಮಾಡ್ತಾ ಈಗ ಯಾವುದೇ ಸಮಸ್ಯೆ ಇಲ್ಲ ,” ಎಂದು ಮಾತು ನಿಲ್ಲಿಸುತ್ತಾನೆ.
ಇಲ್ಲಿ ನಾವು ಗಮನಿಸಬಹುದಾದ ಸಾಮಾನ್ಯ ಸತ್ಯ ಏನೆಂದರೆ ಚಿಕ್ಕ ಮಕ್ಕಳ ಸಣ್ಣಪುಟ್ಟ ಮಾತುಗಳನ್ನು ದೊಡ್ಡವರೆನ್ನುವ ನಾವು ಮಕ್ಕಳಾಟಿಕೆ ಎನ್ನುವಂತೆ ಕಾಣುವುದು ಸಾಮಾನ್ಯ ವಾಡಿಕೆ. ಆದರೆ ಯಾವುದೇ ಮಕ್ಕಳ ಮಾತು, ನಡತೆಯ ಹಿಂದೆ ಇನ್ಯಾವುದೋ ಒಂದು ಪ್ರಭಾವ ಇದ್ದೇ ಇರುತ್ತದೆ. ಅದು ಋಣಾತ್ಮಕವೋ, ಧನಾತ್ಮಕವೋ ಎನ್ನುವುದು ಅವರ ವರ್ತನೆಯಲ್ಲಿ ಗೋಚರಿಸಲ್ಪಡುತ್ತದೆ. ಪೋಷಕರೇ ಇದರ ಹಿಂದಿನ ಪ್ರಮುಖ ರೂವಾರಿಗಳು. ಆದ್ದರಿಂದ ಸಾಧ್ಯವಾದಷ್ಟು ನಮ್ಮ ಮಕ್ಕಳನ್ನು ಒಳ್ಳೆಯ ಪ್ರಭಾವಗಳಿಗೆ ಒಡ್ಡೋಣ.
ಪದವೀಧರ ಶಿಕ್ಷಕರು
ಮಾದರಿ ಉನ್ನತ ಹಿರಿಯ ಪ್ರಾಥಮಿಕ
ಶಾಲೆ ಹಾರಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99729 91018
****************************************