-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 112

ನಿಷ್ಪಾಪಿ ಸಸ್ಯಗಳು : ಸಂಚಿಕೆ - 112

ನಿಷ್ಪಾಪಿ ಸಸ್ಯಗಳು : ಸಂಚಿಕೆ - 112
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

    
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಎಡೆಬಿಡದೆ ಆಶಾಢ ಮಾಸದ ಮಳೆ 'ಧೋ' ಎಂದು ಸುರಿಯುತ್ತಿದೆ. ತುಳುವರಿಗೆ ಆಟಿ! ಇಂದು ಆಟಿ ತಿಂಗಳಲ್ಲಿ ಬಂದಿರುವ ಅಮವಾಸ್ಯೆ !. ತುಳುನಾಡಿನುದ್ದಗಲಕ್ಕೂ ಒಂದು ವಿಶೇಷ ಪರ್ವ ದಿನ. ಈ ವಿಶೇಷತೆಗೆ ಕಾರಣವಾದುದೇನೆಂದರೆ ಅದೊಂದು ಮರ! 

ಹೌದು ಮಕ್ಕಳೇ, ಆಟಿ ಅಮವಾಸ್ಯೆಯಂದು ಎಲ್ಲಾ ಔಷಧಿಗಳೂ ಈ ಮರದಲ್ಲಿ ಸೇರಿರುತ್ತದೆ ಎಂಬ ನಂಬಿಕೆ ಹಾಗೂ ಪ್ರತೀತಿಯಿದೆ. ಮಾನವೀಯತೆ ಮತ್ತು ದೈವಿಕತೆಯ ನಡುವಿನ ಪವಿತ್ರಕೊಂಡಿಯಾಗಿ ಸಾಂಸ್ಕೃತಿಕ ಸಂಕೇತವಾಗಿ ಕಾಣಿಸಿಕೊಳ್ಳುವ ಈ ಮರವೇ ಕನ್ನಡದ ಹಾಲೆಮರ, ಹಾಳೆಮರ, ಮದ್ದಾಲೆ ಮರ, ಏಳೆಲೆ ಹೊನ್ನೆ. ತುಳುವಿನಲ್ಲಿ ಪಾಲೆದ ಮರ. ಆಂಗ್ಲ ಭಾಷೆಯಲ್ಲಿ ಡೆವಿಲ್ ಟ್ರೀ, ಸಂಸ್ಕೃತದಲ್ಲಿ ಸಪ್ತಪರ್ಣಿ, ಸಪ್ತವರ್ಣಿ. ಕೊಂಕಣಿಯಲ್ಲಿ ಸ್ನಾಂತ್ರೂಕ್, ಮಲಯಾಳದಲ್ಲಿ ಏರಿಪಾಲಂ. ಅಪೊಸೈನೇಸಿಯೆ ಕುಟುಂಬದ ಅಲ್ ಸ್ಟೋನಿಯ ಸ್ಕಾಲರಿಸ್ (Alstonia schlaris) ನಾಮಧೇಯದ ಹಾಲೆಮರವನ್ನು ಉರುವಲಾಗಿ ಬಳಕೆ ಮಾಡುವುದು ಬಹಳ ಕಡಿಮೆಯಾದರೂ ಇದರ ಪ್ರತಿ ಭಾಗ ಸುಸ್ಥಿರ ಜೀವನೋಪಾಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಪಶ್ಚಿಮ ಬಂಗಾಳದ ರಾಜ್ಯವೃಕ್ಷವಾಗಿರುವ ಈ ಹಾಲೇಮರದ ತೊಗಟೆ, ರೆಂಬೆ, ಎಲೆ ಹೀಗೆ ಎಲ್ಲೇ ಗಾಯಮಾಡಿದರೂ ಚಿಲ್ಲನೆ ಹಾಲು ಒಸರುತ್ತದೆ!. ಅದಕ್ಕೇ ಅದು ಹಾಲೇಮರ! ಆ ಮರದಲ್ಲಿ ದೆವ್ವಗಳಿರುತ್ತವೆ ಎಂದು ನಂಬಿದವರಿಗೆ Devil tree..! ಆಗ್ನೇಯ ಏಷ್ಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ಫಿಲಿಪೈನ್ಸ್ ಶ್ರೀಲಂಕಾ ಇಂತಹ ಹಲವಾರು ದೇಶಗಳಲ್ಲಿ ಹರಡಿರುವ ಹಾಲೇಮರ ತುಳುನಾಡಿನಲ್ಲಿ ಹಲವಾರು ವಿಚಾರಗಳ ಜೊತೆ ಥಳಕು ಹಾಕಿಕೊಂಡು ಶ್ರೇಷ್ಠತೆಯನ್ನು ಗಳಿಸಿದೆ.

ಆಟಿ ಅಮವಾಸ್ಯೆ ದಿನ ಬೆಳಕು ಹರಿವ ಮೊದಲೇ ಈ ಮರದ ತೊಗಟೆಯನ್ನು ಚೂಪಾದ ಕಲ್ಲಿನಿಂದ ಜಜ್ಜಿ ತೆಗೆದು ಅದಕ್ಕೆ ಬೆಳ್ಳುಳ್ಳಿ, ಕಾಳುಮೆಣಸು, ಓಮದ ಕಾಳು ಸೇರಿಸಿ ರಸ ತೆಗೆದು ಬಿಳೀಕಲ್ಲನ್ನು ಕೆಂಡದಲ್ಲಿ ಕಾಯಿಸಿ ಒಗ್ಗರಣೆಯಂತೆ ರಸಕ್ಕೆ ಹಾಕುವರು. ಬರೀ ಹೊಟ್ಟೆಗೆ ಈ ರಸವನ್ನು ಒಂದೆರಡು ಚಮಚ ಸೇವನೆ ಮಾಡುವುದೇ ತುಳುನಾಡಿಗೆ ಬಹು ದೊಡ್ಡ ಸಂಭ್ರಮ. ವರ್ಷ ಪೂರ್ತಿ ರೋಗ ನಿರೋಧಕ ಶಕ್ತಿ ನೀಡಲು ಈ ಒಂದು ದಿನ ಸೇವಿಸುವ ಮದ್ದೇ ಸಾಕೆಂದು ಪರಂಪರೆಯಿಂದ ಬಂದ ನಂಬಿಕೆ. ಈ ಮದ್ದು ದೇಹಕ್ಕೆ ಉಷ್ಣವಾದುದು ಎಂದರಿತಿದ್ದ ನಮ್ಮ ಹಿರಿಯರು ಮೆಂತೆಯ ಗಂಜಿ ಉಣ್ಣುವ ಸಂಪ್ರದಾಯವನ್ನೂ ಜೊತೆಸೇರಿಸಿಕೊಂಡರು.

ಹಾಲೇ ಮರ ಆಟಿ ಅಮವಾಸ್ಯೆಯಂದು ಮಾತ್ರ ಕಾಣಿಸಿಕೊಳ್ಳುವುದಲ್ಲ. ದೀಪಾವಳಿಯಲ್ಲೂ ಪಾಲುಪಡೆಯುತ್ತದೆ! . ಭೂಮಿಯಿಂದ ತಳ್ಳಲ್ಪಟ್ಟ ಬಲಿಚಕ್ರವರ್ತಿ ಪಾತಾಳದಿಂದ ದೀಪಾವಳಿಯ ಪಾಡ್ಯದಂದು ಭೂಮಿಗೆ ಬರುವನೆಂಬ ನಂಬಿಕೆಯಿದೆ. ಈ ಬಲಿಯನ್ನು ನೆನಪಿಸಿಕೊಳ್ಳಲು ಇದೇ ಹಾಲೇಮರದ ಐದಾರು ಅಡಿಗಳುದ್ದದ ಕೊಂಬೆಯೊಂದನ್ನು ತುಳಸಿಕಟ್ಟೆ ಎದುರು, ದೈವ ದೇವರ ಗುಡಿಗಳೆದುರು ಊರುತ್ತಾರೆ. ಈ ಕೊಂಬೆಯ ತುದಿಯಲ್ಲಿ ಹಣತೆ ಬೆಳಗಿ ಇದಿರಿಗೆ ಸುವಸ್ತುಗಳನ್ನು ಬಡಿಸಿ ಸಾಕ್ಷಾತ್ ಬಲಿಯೇ ಬಂದು ಇದಿರು ನಿಂತಂತೆ ಆರಾಧಿಸುತ್ತಾರೆ. ನಮ್ಮ ಜನಪದೀಯ ನಂಬಿಕೆಯಲ್ಲಿ ನಿಷ್ಪಾಪಿ ಸಸ್ಯವೊಂದು ಹೇಗೆ ದೈವತ್ವಕ್ಕೇರುತ್ತದೆ ಎಂಬುವುದಕ್ಕೆ ಒಂದು ಉತ್ತಮ ಉದಾಹಣೆ.

ಹಾಲೆಮರ ಭಾರತದಾದ್ಯಂತ ಕಾಣಿಸಿಕೊಳ್ಳುತ್ತದೆ.15 - 20 ಮೀಟರ್ ಗಳಷ್ಟೆತ್ತರ ಬೆಳೆಯಬಲ್ಲದಾದರೂ ಸಾಮಾನ್ಯವಾಗಿ ಪೊದೆ ಅಥವಾ ಗಿಡವೆಂದು ಪರಿಗಣಿಸಲಾಗುತ್ತದೆ. 10-13 ಸೆ.ಮೀ ಉದ್ದವಿರುವ ಅಂಡಾಕಾರದ ನಾಲ್ಕರಿಂದ ಏಳು ಮುದ್ದಾದ ಹಸಿರು ಎಲೆಗಳು ಬಟ್ಟಲಿನಂತೆ ವರ್ತುಲವಾಗಿ ಒಂದೇ ಗಿಣ್ಣಿನಲ್ಲಿ ಜೋಡಣೆಯಾಗಿರುತ್ತವೆ. ಒಂದು ಒಂದೂವರೆ ಸೆ.ಮೀ ಗಾತ್ರದ ಸಣ್ಣ ತೊಟ್ಟಿನ ಬಿಳಿ ಬಣ್ಣದ ಹೂಗೊಂಚಲು ಕೂಡ ವಿಶಿಷ್ಠವಾದ ಘಮ ಹೊಂದಿದ್ದು 20 ರಿಂದ 45 ಸೆ.ಮೀ ಉದ್ದದ ಕಾಯಿಗಳಾಗುತ್ತದೆ. ಕೊಳವೆಯಂತೆ ಬಿಳಿ ಚುಕ್ಕೆಗಳ ಕಂದು ಕಾಯಿಗಳು ಸಾಮಾನ್ಯವಾಗಿ ಎರಡೆರಡರಂತೆ ಇಳಿಬಿದ್ದಿರುತ್ತವೆ. ಇದರೊಳಗೆ ಒಂದು ಸೆ.ಮೀ. ಉದ್ದದ ಬೀಜಗಳು ಹಿಂಭಾಗದಲ್ಲಿ ಕುಚ್ಚಿನಂತಹ ಕಂದು ರೋಮ ಹೊಂದಿರುತ್ತಾ ಮಾತೆಯಿಂದ ದೂರ ಹಾರಲು ಸಂಕಲ್ಪ ಮಾಡಿಕೊಂಡಿರುತ್ತವೆ. 

ಮರದುದ್ದಕ್ಕೂ ಕೊಡೆಯ ಕಡ್ಡಿಗಳಂತೆ ರೆಂಬೆ ಕೊಂಬೆಗಳು ಜೋಡಣೆಗೊಂಡು ಇಡೀ ಮರವು ಅಲಂಕರಿಸಿದ ರಥದಂತೆ ನೇರವಾಗಿರುತ್ತದೆ. ವಿಶಾಲವಾಗಿ ಬೆಳೆವ ಕೆಲವು ಮರಗಳಡಿ ಯಾವೊಂದು ಸಸ್ಯಗಳೂ ಮೊಳಕೆಯೊಡೆಯಲಾರವು. ಆದರೆ ಹಾಲೆ ಮರವು ನಿಸ್ಸಾರ ಭೂಮಿಯನ್ನು ಅರಣ್ಯಭೂಮಿಯಾಗಿಸಲು, ಹೊಸ ಕಾಡು ನಿರ್ಮಾಣಗೊಳ್ಳಲು ಸೂಕ್ತ ವಾತಾವರಣದ ನಿರ್ಮಾಣಕ್ಕೆ ಯೋಗ್ಯವಾಗಿದೆ. ಹಲವಾರು ಪ್ರಭೇದಗಳಿಗೆ ನೆರಳು, ಆಶ್ರಯ ಒದಗಿಸುತ್ತ ಸ್ವಚ್ಛ ಮೇಲಾವರಣ ಒದಗಿಸಿ ನೈಸರ್ಗಿಕ ಪ್ರಪಂಚದ ಸಂಕೀರ್ಣವಾದ ಪದರದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ಸಾಂಸ್ಕೃತಿಕ ಸಂಕೇತ ಮೀರಿ ಈ ಮರವು ಸ್ಥಳೀಯ ಆವಾಸಸ್ಥಾನಗಳಲ್ಲಿ ಪರಿಸರ ಸಮತೋಲನ ಹಾಗೂ ಜೀವವೈವಿಧ್ಯತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದಟ್ಟ ಎಲೆಗಳು ಪಕ್ಷಿ, ಬಾವಲಿ, ಕೀಟ, ಸಣ್ಣ ಸಸ್ತನಿಯಂತಹ ವೈವಿಧ್ಯಮಯ ಸಸ್ಯ, ಪ್ರಾಣಿಗಳಿಗೆ ಆವಾಸ ಮತ್ತು ಪೋಷಣೆ ನೀಡುತ್ತದೆ. ವಿಸ್ತಾರವಾದ ಬೇರಿನ ವ್ಯವಸ್ಥೆ ಮಣ್ಣಿನ ಸವೆತ ತಡೆದು ನೀರಿನ ವೇಗದ ಹರಿವಿಗೆ ತಡೆಯೊಡ್ಡಿ ಅಂತರ್ಜಲ ಪೂರಣಕ್ಕೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.

ತೀವ್ರವಾದ ಮಳೆಗಾಳಿ ಸುರಿಯುವ ಕಾಲ ಸಹಜವಾಗಿಯೇ ಮಾನವನ ಹೊಟ್ಟೆಯನ್ನು ಮಾತ್ರವಲ್ಲ ಮನಸನ್ನೂ ನಡುಗಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಚರ್ಮರೋಗ, ಜ್ವರ, ನೆಗಡಿಯಂತಹ ಕಾಯಿಲೆಗಳು ಸುಳಿದಾಡತೊಡಗುತ್ತವೆ. ಇದೇ ವೇಳೆ ಹಾಲೆಮರದ ರಸ ಆರೋಗ್ಯ ವರ್ಧಕ ಟಾನಿಕ್ ನಂತೆ ವರ್ತಿಸುತ್ತದೆ. ಅಮೀಬಾದಿಂದ ಬರುವ ಆಮಶಂಕೆ, ಚರ್ಮದ ಅಸ್ವಸ್ಥತೆ, ಅತಿಸಾರ, ಹಾವಿನ ಕಡಿತ, ನಂಜು ನಾಶಕ, ಕ್ರಿಮಿ ನಾಶಕ, ಗಾಯ ಸ್ವಚ್ಛಗೊಳಿಸಲು, ನೆಗಡಿ ಜ್ವರ ನಿವಾರಣೆ, ಪಂಚ ಕರ್ಮ ಚಿಕಿತ್ಸಾ ವಿಧಾನದಲ್ಲಿ ಶುದ್ಧೀಕರಣ ಪ್ರಕ್ರಿಯೆಗೂ ಬಳಕೆಯಾಗುವ ಅಪೂರ್ವ ವನೌಷಧವಾಗಿದೆ.

ಸ್ಲೇಟು, ದೇವರ ಪಟ, ತರಗತಿಗಳ ಕರಿಹಲಗೆಗಳ ರಚನೆಯಲ್ಲಿ ಸಹಕರಿಸುವ ಹಾಲೆಮರ ಬೆಂಕಿಪೆಟ್ಟಿಗೆ, ಲೇಖನಿ ಹಿಡಿ, ಬಾಚಣಿಗೆ ತಯಾರಿಗೂ ಉಪಯೋಗಿಸಲ್ಪಡುತ್ತದೆ. ಆದರೂ ಹಾಲೆಮರ ಅಸಾಧಾರಣ ಸಂರಕ್ಷಣಾ ಸವಾಲು ಎದುರಿಸುತ್ತಿದೆ. ಆವಾಸಸ್ಥಾನ ನಷ್ಟ, ಅರಣ್ಯ ನಾಶ, ಅತಿಯಾದ ಶೋಷಣೆ ಹಾಲೆಮರದ ಅಸ್ಥಿತ್ವ ಮತ್ತು ಅದು ಬೆಂಬಲಿಸುವ ಪರಿಸರ ವ್ಯವಸ್ಥೆಗೆ ಅಪಾಯವಾಗಿದೆ. ರಸ್ತೆಯ ಬದಿಗಳಲ್ಲಿ ನೆರಳಿಗಾಗಿ, ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ನೆಟ್ಟು ಇದರ ಸಂಖ್ಯೆಯಲ್ಲಿ ಏರಿಕೆ ಮಾಡಬಹುದು. ಇದ್ದ ಮರಗಳನ್ನು ಉಳಿಸಿ ಬೆಳೆಸುವುದೂ ನಮ್ಮ ಆದ್ಯ ಕರ್ತವ್ಯವೇ ತಾನೇ?

ಸರಿ ಮಕ್ಕಳೇ, ಹಾಲೆಮರದ ಪರಿಚಯ ಮಾಡಿಕೊಳ್ಳಿರಿ. ಅದರಲ್ಲಿ ಹಾಲು ಬರುವ ಕಾರಣ ಅದರಲ್ಲಿ ಕೆಟ್ಟ ಶಕ್ತಿಗಳು ನೆಲೆಯಾಗಿರುತ್ತವೆ ಎಂಬ ಮೂಢನಂಬಿಕೆ ಇರುವುದನ್ನು ನಾವೇ ಹೋಗಲಾಡಿಸಬೇಕು ಅಲ್ಲವೇ?

ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************




Ads on article

Advertise in articles 1

advertising articles 2

Advertise under the article