-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 90

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 90

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 90
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.. ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (water tight) ಎಂಬಂತೆ ಅಭ್ಯಸಿಸಲಾಗದು. ಒಂದು ವಿಷಯವನ್ನು ಕೂಲಂಕುಷವಾಗಿ ತಿಳಿಯಬೇಕಾದರೆ ವಿಜ್ಞಾನದ ಎಲ್ಲ ಶಾಖೆಗಳನ್ನು ಸಂಯೋಜಿಸಬೇಕಾಗುತ್ತದೆ ಎಂಬುದು ನಿಮಗೆ ಮನವರಿಕೆಯಾಗಿರಬಹುದು ಅಂದುಕೊಳ್ಳುತ್ತೇನೆ.

ಇತ್ತೀಚೆಗೆ ನನ್ನ ಮಿತ್ರರೊಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ತಮ್ಮ ಮಗ ಮದುವೆಯಾಗಿ ಬಹಳ ವರ್ಷವಾದರೂ ಮಕ್ಕಳಾಗಿಲ್ಲದ ಬಗ್ಗೆ ಬಹಳ ಅಸಮಾಧಾನದಿಂದ್ದರು. ತನ್ನ ಕಛೇರಿಯಿಂದ ಹಿಂದಿರುಗುತ್ತಿದ್ದ ಮಗ ಮತ್ತು ಸೊಸೆಯರ ಎದುರೇ ತಮ್ಮ ಅಸಮಾಧಾನ ಹೊರ ಹಾಕಿದರು. ಆಗ ಅವರ ಮಗ ನಮಗೆ ಯಾವ ಸಾಮಾಜಿಕ ಜವಾಬ್ಧಾರಿ ಸಾಧ್ಯವಿಲ್ಲ ಎಂದು ತಂದೆಯ ಮೇಲೆ ಕೋಪ ಪ್ರದರ್ಶಿಸಿದ. ನಾನು ಹೇಳಿದೆ ಈ ಮಕ್ಕಳು ಎಂಬುದು ಸಾಮಾಜಿಕ ಜವಾಬ್ದಾರಿಯಲ್ಲ ಅದೊಂದು ಜೈವಿಕ ಬದ್ಧತೆ (biological commitment) ಎಂದೆ. ಎಲ್ಲರೂ ಮಕ್ಕಳು (ಗಂಡು) ಇಲ್ಲದಿದ್ದಲ್ಲಿ ಪಿತೃ ಲೋಕದಲ್ಲಿ ಸ್ಥಾನ ಇರುವುದಿಲ್ಲ ಎಂದರೆ ನಾನದನ್ನು ಒಪ್ಪುವುದಿಲ್ಲ. ಆದ್ದರಿಂದ ನಾನು ಆ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ನಾನು ವಿಜ್ಞಾನದ ವಿದ್ಯಾರ್ಥಿಯಾಗಿರುವುದರಿಂದ ಜೈವಿಕ ಉದ್ದೇಶದ ಬಗ್ಗೆ ಮಾತನಾಡಬಲ್ಲೆ. ಆದ್ದರಿಂದ ಮೊದಲು ನಿನ್ನ ಆಯಾಸ ಪರಿಹರಿಸಿಕೊಂಡು ಬಾ ನಿಧಾನವಾಗಿ ಮಾತಾಡೋಣ ಎಂದೆ. ನಾನು ನನ್ನ ಸ್ನೇಹಿತರು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತೆವು.

ಅವರ ಮಗ ಸೊಸೆ ಚಹಾ ಮುಗಿಸಿ ಬಂದರು. ನಾನು ಆರಂಭಿಸಿದೆ. ನೋಡಿ ಸರಿ ಸುಮಾರು 4.5 ಬಿಲಿಯನ್ ವರ್ಷಗಳಷ್ಡು ಹಿಂದೆ ಸೂರ್ಯ ಹುಟ್ಟಿದ. ಆ ಸೂರ್ಯನಿಂದ ಸಿಡಿದ ತುಣುಕೊಂದು ಭೂಮಿಯಾಗಲು ಕೇವಲ 0.3 ಬಿಲಿಯನ್ ವರ್ಷಗಳು ಸಾಕಾಯಿತು. ಅಂದರೆ ಭೂಮಿಯ ವಯಸ್ಸು 4.82 ಬಿಲಿಯನ್ ವರ್ಷಗಳು. ಹಾಗಾದರೆ ಭೂಮಿಯ ಮೇಲೆ ಜೀವಾಂಕುರವಾದದ್ದು ಯಾವಾಗ ಎಂದು ನೀವು ಕೇಳಬಹುದು. ಅದಕ್ಕೆ ಒಂದು ಬಿಲಿಯನ್ ವರ್ಷಗಳು ಬೇಕಾದವು. ಅಂದರೆ ಭೂಮಿಯ ಮೇಲಿನ ಮೊದಲ ಜೀವಿ ಕಾಣಿಸಿಕೊಂಡದ್ದು 3.82 ಬಿಲಿಯನ್ ವರ್ಷಗಳಷ್ಟು ಹಿಂದೆ. ಮೊದಲು ಉಗಮವಾದದ್ದು ಅತ್ಯಂತ ಸರಳವಾದ ಒಂದೇ ಒಂದು ಜೀವಕೋಶವನ್ನು ಹೊಂದಿದ್ದ ಸರಿಯಾದ ಕೋಶ ರಚನೆಯನ್ನೂ ಹೊಂದಿರದ ಒಂದು ರಚನೆ. ಆ ಕೋಶಕ್ಕೂ ತನ್ನ ಬದುಕಿನ ಉದ್ದೇಶ ಸ್ಪಷ್ಟವಿತ್ತು. ಅದೇ ವಂಶಾಭಿವೃದ್ಧಿ.. ಇದು ವೃದ್ದಿಯಾಗುತ್ತಲೇ ಹೋಯಿತು. ಆದರೆ ಪ್ರಕೃತಿ ಸುಮ್ಮನಿರಬೇಕಲ್ಲ. ನಿರಂತರ ಸುಧಾರಣೆ ಮಾಡುತ್ತಲೇ ಹೋಗುತ್ತವೆ. ಏಕ ಕೋಶಿಕ ಜೀವಿಗಳಿಂದ ದ್ವಿಕೋಶ ಬಹು ಕೋಶೀಯ ಜೀವಿಗಳು, ಅಂಗಾಂಶ ರಚನೆ, ಅಂಗಗಳು, ಅಂಗಗಳ ಸಂಕೀರ್ಣತೆ, ಮೆದುಳು, ಮೆದುಳಿನ ಸಂಕೀರ್ಣತೆ ಹೀಗೆ ಮುಂದುವರಿಯುತ್ತದೆ. ಈ ಸಾಗು ಹಾದಿಯನ್ನು ನಾವು ಜೀವ ವಿಕಾಸ (organic evolution) ಎಂದು ಕರೆಯುವುದು. ಈ ಜೀವ ವಿಕಾಸದ ಉತ್ತುಂಗತೆಯೇ ಮಾನವ. ಮಾನವ ಜೀವ ವಿಕಾಸದ ಇತ್ತೀಚಿನ ಉದಯ. 2 ರಿಂದ 3 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾ ಖಂಡದಲ್ಲಿ ಹೋಮೋ ಸೆಪಿಯನ್ಸ್ ಎಂಬ ಈಗಿನ ಮನುಷ್ಯ ಕಾಣಿಸಿಕೊಂಡ. 70 ಸಾವಿರ ವರ್ಷಗಳ ಹಿಂದೆ ಆತನ ವಲಸೆ ಆರಂಭವಾಗಿ 30 ಸಾವಿರ ವರ್ಷಗಳ ನಂತರ ಆತ ವಿಶ್ವವ್ಯಾಪಿಯಾದ. ಅಂದರೆ ಸೂರ್ಯ ಹುಟ್ಟಿ 0.3 ಬಿಲಿಯನ್ ವರ್ಷಗಳಲ್ಲಿ ಭೂಮಿ ಹುಟ್ಟಿತು. ಭೂಮಿ ಹುಟ್ಟಿ 1 ಬಿಲಿಯನ್ ವರ್ಷಗಳ ನಂತರ ಮೊದಲ ಜೀವಿ ಭೂಮಿಯ ಮೇಲೆ ಕಾಣಿಸಿಕೊಂಡಿತು. ಮೊದಲ ಜೀವಿಯಿಂದ ಮಾನವನನ್ನು ವಿಕಾಸಗೊಳಿಸಲು ಭೂಮಿಗೆ 3.5 ಬಿಲಿಯನ್ ವರ್ಷಗಳೇ ಬೇಕಾದವು ಎಂದರೆ ಮೊದಲ ಜೀವಿ ಕಾಣಿಸಿಕೊಳ್ಳಲು ತೆಗೆದುಕೊಂಡ ಸಮಯದ ಮೂರೂವರೆಪಟ್ಟು. ಇದಕ್ಕಾಗಿ ಪ್ರಕೃತಿ ತನ್ನ ಪ್ರಯೋಗಶಾಲೆಯಲ್ಲಿ ಅದೆಷ್ಟು ಸುದೀರ್ಘ ಪ್ರಯತ್ನ ನಡೆಸಿರಬೇಕು ಊಹಿಸಿ. ಇಂತಹ ಕಠಿಣ ಪರಿಶ್ರಮದಿಂದ ರೂಪುಗೊಳಿಸಿದ ವಿಕಾಸದ ಪರಾಕಾಷ್ಠೆಯನ್ನು ನಮಗೆ ಮಕ್ಕಳು ಬೇಡ ಎಂಬ ಬೇಜವಾಬ್ದಾರಿಯುತ ಹೇಳಿಕೆಯಿಂದ ಅಳಿಸಿ ಹಾಕಲು ಹೊರಟಿದ್ದೇವೆ. ಇದು ಎಷ್ಟು ಸರಿ?

ಮುಂದಿನ ವಾರಗಳಲ್ಲಿ ಜೀವ ಸಂಕೀರ್ಣತೆಯ ಬಗ್ಗೆ ತಿಳಿದುಕೊಳ್ಳೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article