-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 113

ನಿಷ್ಪಾಪಿ ಸಸ್ಯಗಳು : ಸಂಚಿಕೆ - 113

ನಿಷ್ಪಾಪಿ ಸಸ್ಯಗಳು : ಸಂಚಿಕೆ - 113
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ? ಮಳೆಗಾಲ ಕಾಲಿರಿಸುವ ಮೊದಲೇ ಧಾರಾಕಾರ ಮಳೆಗೆ ತೆರೆದುಕೊಂಡ ಭೂಮಿ ಈಗೀಗ ಅಲ್ಲಲ್ಲಿ ಸಡಿಲಗೊಂಡು ಕುಸಿತಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಸ್ಯವರ್ಗ ನಾಶವಾಗುತ್ತಿರುವುದು ಹಾಗೂ ಮಾನವನ ಮಿತಿಯಿಲ್ಲದ ಧನದಾಹಕ್ಕೆ ಗುಡ್ಡಗಳು ಕಣ್ಮರೆಯಾಗುತ್ತಿವೆ. ಭೂಮಿಯಲ್ಲಿ ಬೇರು ಬಿಟ್ಟು ಮೇಲೇರುವ ಗಿಡಮರಗಳನ್ನೇ ನಂಬಿ ಬದುಕುವ ನಿಷ್ಪಾಪಿ ಸಸ್ಯಗಳೂ ಸಾಕಷ್ಟಿವೆ ಗೊತ್ತಾ? ಅವುಗಳಲ್ಲೊಂದು ನಮ್ಮ ನಡುವಿರುವ ಆಕಾಶಬಳ್ಳಿ!

ಸಸ್ಯ ಶಾಸ್ತ್ರೀಯವಾಗಿ ಕುಸ್ಕುಟಾ ರಿಫ್ಲೆಕ್ಸಾ (Cuscata reflexa) ಎಂಬುದು ಒಂದು ಪರಾವಲಂಬಿ ಸಸ್ಯ. ಭಾರತೀಯ ಉಪಖಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತದೆ. ದಟ್ಟವಾದ ಕಾಡು ಅಥವಾ ವಿರಳವಾಗಿರುವ ಗಿಡಮರಗಳ ಮೇಲೆ ಹೀಗೆ ಎಲ್ಲಾದರೂ ಸರಿ. ಅತಿಥೇಯ ಸಸ್ಯಗಳ ಮೇಲೆ ತಾನು ಸವಾರಿ ಮಾಡುತ್ತಾ ಪೋಷಕಾಂಶಗಳನ್ನು ಹೀರಿಕೊಳ್ಳುತ್ತಾ ರಾರಾಜಿಸುತ್ತದೆ!

ಎತ್ತರವಾದ ಮರಗಳ ಮೇಲಿಂದ ದಾರದಂತೆ ಇಳಿಬೀಳುವ ಬಿಳಲಿಗೆ ಎಲೆಗಳಿಲ್ಲವೆಂದರೆ ಅಚ್ಚರಿಯಲ್ಲವೇ? ಆಕಾಶದಲ್ಲಿ ತೇಲುತ್ತಿರುವ ಈ ಚಿನ್ನದ ಬಣ್ಣದ ತೆಳುವಾದ ದಾರಕ್ಕೆ ಆಕಾಶಬಳ್ಳಿ, ದಾರದ ಹೂವು ಎನ್ನುವರು. ಭಿಕ್ಷುಕ ಕಳೆ, ಲೇಡೀಸ್ ಲೇಸ್ ಎಂದೂ ಕರೆಸಿಕೊಳ್ಳುವ ಈ ವಿಶೇಷ ಸಸ್ಯವನ್ನು ಸಂಸ್ಕೃತದಲ್ಲಿ ಸ್ವರ್ಣಲತಾ, ತುಳುವಿನಲ್ಲಿ ಮುದೆಲಿಜ್ಜಂದಿ ಬೂರು (ಬುಡವಿಲ್ಲದ ಬಳ್ಳಿ) ಎನ್ನುವರು. ಕುಸ್ಕುಟ ಕಲದ ಈ ಸಸ್ಯ ಕಾನ್ವೊಲ್ಟುಲೇಸ್ ಕುಟುಂಬದ ಸದಸ್ಯ. ರಿಫ್ಲೆಕ್ಸಾ ಪ್ರಭೇದದ ಆಕಾಶಬಳ್ಳಿ. ಇದರಲ್ಲಿ ಸುಮಾರು 100 - 170 ಜಾತಿಗಳನ್ನು ಗುರುತಿಸಲಾಗಿದೆ. ಇದು ಬಯಲು, ಕರಾವಳಿಯಲ್ಲದೆ, ಮಾರ್ಗದ ಬದಿಗಳಲ್ಲಿ, ಮನೆಬಾಗಿಲಿನ ಹೂ ಗಿಡಗಳಲ್ಲೂ ಕಾಣಸಿಗಬಹುದು. ಸಣ್ಣ ದೊಡ್ಡ ಗಿಡಮರಗಳ ಮೇಲೆ ಸೇಮಿಗೆಯಂತೆ ಆವರಿಸಿಕೊಳ್ಳುತ್ತಾ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಬದುಕಬಲ್ಲದು. 

ಈ ಬಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಹಿಚುಕಿದರೆ ನೀರು ಜಿಗುಟಾದ ಲೋಳೆಯಾಗುವುದು. ಆಕಾಶಲತಾ ಬೆಳೆಯುತ್ತಿರುವಾಗ ಹಸಿರಾಗಿದ್ದು ಬೆಳೆದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಗಂಟೆಯಾಕಾರದ ಬಿಳಿ ಪುಟಾಣಿ ಹೂಗಳು ಅಲ್ಲಲ್ಲಿ ಇಡೀ ದಾರದುದ್ದಕೂ ಗೊಂಚಲಾಗಿ ಅರಳುತ್ತವೆ. 10 ಮೀಟರ್ ಗಳಷ್ಟೆತ್ತರದ ವೃಕ್ಷಗಳ ಮೇಲಾವರಣಗಳಿಂದ ನೇತಾಡುವ ದುಂದರ ಹೂಮಾಲೆಗಳನ್ನು ನೋಡುವುದೂ ಒಂದು ಸೊಗಸು!. ಈ ಹೂವುಗಳಿಂದ ಗೋಳಾಕಾರದ ಸೂಕ್ಷ್ಮ ಕಪ್ಪುಕಾಯಿಗಳಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೀಜಗಳೂ ಉತ್ಪತ್ತಿಯಾಗುತ್ತದೆ. ಅತಿಥೇಯ ಸಸ್ಯವನ್ನು ಇದು ಹೇಗೆ ಬಗ್ಗುಬಡಿಯುವುದೆಂದರೆ ಜನಪದರ ಬಾಯಲ್ಲಿ ಇದು ದೆವ್ವದ ಕರುಳಿನ ಕುಟುಂಬ, ದೆವ್ವದ ಕೂದಲು, ಮಾಟಗಾರ್ತಿಯ ಕೂದಲು, ಭಿಕ್ಷುಕನ ಕಸೂತಿ, ಬೆಂಕಿ ಕಸೂತಿ ಎಂಬೆಲ್ಲ ಅನ್ವರ್ಥಕ ಹೆಸರುಗಳಿಗೂ ಕಾರಣವಾಗಿದೆ.

ಮಕ್ಕಳೇ ಈ ಗಿಡವು ಮೊಳಕೆಯೊಡೆಯುವ ಬಗೆ ಹೇಗೆ? ಎಲ್ಲಿ? ಎಂಬ ಪ್ರಶ್ನೆಗಳು ನಿಮ್ಮಲ್ಲೀಗ ಮೂಡಿರಬಹುದಲ್ಲವೇ? ಅದೇ ಸೃಷ್ಟಿಯ ವಿಸ್ಮಯ. ಆಕಾಶಬಳ್ಳಿಯ ಬೀಜಗಳು ಒಣಗಿ ಸಹಜವಾಗಿ ಭೂಮಿಗೇ ಬೀಳುತ್ತವೆ. ಅಲ್ಲೇ ಮೊಳಕೆಯೊಡೆಯುತ್ತವೆ. ಅಲ್ಲಿ 'ಕಾಲ' ವು ಈ ಮೊಳಕೆಗಳಿಗೆ ಬದುಕಿನ ಬಗ್ಗೆ ಸವಾಲೊಡ್ಡುತ್ತದೆ. ಇತರ ಸಸ್ಯಗಳಂತೆ ಭ್ರೂಣದಲ್ಲಿನ ಆಹಾರ ನಿಕ್ಷೇಪಗಳನ್ನೇ ಅವಲಂಬಿಸಿ ಮೊಳಕೆಯೊಡೆಯುತ್ತದೆಯಾದರೂ ಮೊಳಕೆಯೊಡೆದ ಐದರಿಂದ ಹತ್ತು ದಿನಗಳ ಒಳಗೆ ಒಂದು ಸಸ್ಯದ ಬಳಿಗಿದು ಬೆಳೆದು ಮುಟ್ಟದಿದ್ದರೆ ಸತ್ತೇ ಹೋಗುತ್ತದೆ. ಮೊಳಕೆಯೊಡೆದು ರಾಸಾಯನಿಕ ಸಂವೇದನಾ‌ಸುಳಿವುಗಳನ್ನು ಅನುಸರಿಸುವ ಮೂಲಕ ಹತ್ತಿರದ ಸಸ್ಯಗಳ ಕಡೆ ಬೆಳೆಯಲು ಹೊಂದಿಕೊಳ್ಳಬೇಕು. ಬೇಗನೆ ಅತಿಥೇಯ ಸಸ್ಯವನ್ನು ತಲುಪಿ ತನಗೆ ಪ್ರಯೋಜನಕಾರಿ ಆಹಾರವನ್ನು ಹೊಂದಿದ್ದರೆ ಅದರ ನಾಳೀಯ ವ್ಯವಸ್ಥೆಗೆ ತನ್ನನ್ನು ಸೇರಿಸಿಕೊಳ್ಳುತ್ತದೆ. ಅತಿಥೇಯ ಸಸ್ಯದ ಫ್ಲೋಯಮ್ ನಿಂದ ಸಕ್ಕರೆ, ಪೋಷಕಾಂಶಗಳನ್ನು ಪಡೆದುಕೊಳ್ಳತೊಡಗುತ್ತದೆ. ಬಳಿಕ ಮಣ್ಣಿನಲ್ಲಿರುವ ಅವಶೇಷ ಸತ್ತುಹೋಗುತ್ತದೆ.

ಈ ಆಕಾಶವಲ್ಲಿ ಬಿಳಲುಗಳಿಗೆ ಎಲ್ಲ ಸಸ್ಯಗಳ ಸ್ನೇಹ ಹಿಡಿಸುವುದಿಲ್ಲ. 2006 ರಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ ಆಕಾಶವಲ್ಲಿ ತನ್ನ ಅತಿಥೇಯ ಸಸ್ಯಗಳನ್ನು ಪತ್ತೆಹಚ್ಚಲು ವಾಯುಗಾಮಿ ಭಾಷ್ಪಶೀಲ ಸಾವಯವ ಸಂಯುಕ್ತ ಸೂಚನೆಗಳನ್ನು ಬಳಸುತ್ತವೆಯೆಂದು ತಿಳಿಸಿದೆ. ಆದ್ಯತೆಯ ಅತಿಥೇಯ ಸಸ್ಯ ಟೊಮೆಟೊ ಹಾಗೂ ಅತಿಥೇಯವಲ್ಲದ ಗೋಧಿಯಿಂದ ಬಿಡುಗಡೆಯಾಗುವ ಭಾಷ್ಪಶೀಲ ವಸ್ತುಗಳ ನಡುವೆ ಆಯ್ಕೆ ನೀಡಿದಾಗ ಪರಾವಲಂಬಿ ಆಕಾಶವಲ್ಲಿ ಮೊದಲ ಟೊಮೆಟೊ ಗಿಡದತ್ತಲೇ ಬೆಳೆಯಿತು. ಅತಿಥೇಯ ಸಸ್ಯದಿಂದ ಬಿಡುಗಡೆಯಾಗುವ ಸಂಯುಕ್ತ ಗಳಿಗೆ ಆಕರ್ಷಣೆ, ಗೋಧಿಯಿಂದ ಬಿಡುಗಡೆಯಾಗುವ ಸಂಯುಕ್ತದಿಂದ ಹಿಮ್ಮೆಟ್ಟಿಸುವಿಕೆ ಕಂಡುಬಂತೆನ್ನಲಾಗಿದೆ. ಅಂದರೆ ಕೆಲವು ಸಸ್ಯಗಳು ತಮ್ಮ ಉಳಿವಿಗಾಗಿ ಪ್ರತಿರೋಧದ ಭಾಷ್ಪಶೀಲ ಸಂಯುಕ್ತ ಬಿಡುಗಡೆಗೊಳಿಸುವ ಮೂಲಕ ರಕ್ಷಣಾ ತಂತ್ರ ಅನುಸರಿಸುತ್ತವೆ ಎಂದು ತಿಳಿದಂತಾಯಿತು.

ನಿಸರ್ಗ ಎಷ್ಟು ಕೌತುಕಪೂರ್ಣವಲ್ಲವೇ? ನಿಸರ್ಗದಲ್ಲಿ ಇದೊಂದು ಸಹಜ ಪ್ರಕ್ರಿಯೆಯ ಪ್ರಕಾರವೇ ಬದುಕು ನಡೆಸಿದರೂ ಕೃಷಿ, ತೋಟಗಾರಿಕೆ ಸಸ್ಯಗಳ ವಿರೋಧಿಯೇ ಸರಿ. ಹಲವಾರು ದೇಶಗಳು ಇದರ ಬೀಜಗಳು ಯಾವುದೇ ವಸ್ತುಗಳ ಜೊತೆ ಬಾರದಂತೆ ನಿಷೇಧ ಹೇರಿವೆ. ಬಹುಮುಖಿಯಾದ ಇದರ ನಿಯಂತ್ರಣಕ್ಕಾಗಿ ಅತಿಥೇಯ ಗಿಡದಿಂದ ಕೀಳುವುದು, ಕಳೆನಾಶಕ ಬಳಕೆ ಮಾಡಲಾಗುತ್ತದೆ. ಅತಿಥೇಯ ಸಸ್ಯದ ಉಸಿರುಗಟ್ಟಿಸುವಿಕೆ ಆರಂಭಗೊಂಡರೆ ಈ ಬೀಳನ್ನು ಕತ್ತರಿಸಿ ತೆಗೆಯುವುದೇ ಅಂತಿಮ ಹಂತವೆನ್ನಬಹುದು.

ನಿಷ್ಪಾಪಿ ಸಸ್ಯವಾದ ಆಕಾಶವಲ್ಲಿಯು ಮನುಷ್ಯನಿಗೆ ಔಷಧರೂಪದಲ್ಲಿ ಹಲವಾರು ರೋಗಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತದೆ. ಈ ಬಗ್ಗೆ ಹಲವಾರು ಸಂಶೋಧನೆಗಳಾಗಿವೆ. ಇದರ ಕಾಂಡ ಮತ್ತು ಬೀಜಗಳಿಗೆ ಔಷಧೀಯ ಮೌಲ್ಯವಿದೆ. ಅಪಸ್ಮಾರ, ಕಾಮಾಲೆ, ಜ್ವರ, ದೇಹದ ನೋವು, ಚರ್ಮ ರೋಗ, ಕಣ್ಣಿನ ತೊಂದರೆಗಳು, ಯಕೃತ್ತಿನ ಸಮಸ್ಯೆ, ಕೂದಲು ಉದುರುವಿಕೆ, ಮೂತ್ರ ವಿಸರ್ಜನೆಯ ತೊಂದರೆ, ಹಸಿವು ಹೆಚ್ಚಿಸಲು, ಹೃದಯಕ್ಕೆ ಅನುಕೂಲಕರವಾಗಿ, ವಾಯುನಿವಾರಕವಾಗಿ, ಮಧುಮೇಹಿ ವಿರೋಧಿಯಾಗಿ, ರಕ್ತಸ್ರಾವ ಉರಿಯೂತ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸಾಂಪ್ರದಾಯಿಕ ಔಷಧ ಪದ್ದತಿಯಲ್ಲಿ ಕಂಡುಕೊಳ್ಳಲಾಗಿದೆ. ಚೀನ, ಭಾರತಗಳು ಈಗಲೂ ಸಂಶೋಧನೆ ನಡೆಸುತ್ತಿವೆ.

ಕಾಡುಗುಡ್ಡಗಳು ಬೋಳಾದರೆ ಇಂತಹ ಸಸ್ಯಗಳಿಗೆ ಉಳಿಗಾಲವಿದೆಯೇ? ನಾವು ಇದರ ಬದುಕಿನ ಹಕ್ಕನ್ನು ಕಸಿದುಕೊಳ್ಳುವುದು ಉಚಿತವೇ? ನಾವೆಲ್ಲರೂ ಯೋಚಿಸಬೇಕಿದೆ. ನಿಮ್ಮ ಊರಲ್ಲಿ ಈ ಬಳ್ಳಿಯನ್ನು ಹುಡುಕಿ ಗುರುತಿಸುವಿರಲ್ಲವೇ?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************

Ads on article

Advertise in articles 1

advertising articles 2

Advertise under the article