-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 87

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 87

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 87
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.. ಒಂದು ವಿಶಾಲವಾದ ಹುಲ್ಲುಗಾವಲಿನ ಮಧ್ಯೆ ಬೃಹತ್ತಾದ ಒಂದು ಒಂಟಿ ಮರವನ್ನು ಊಹಿಸಿಕೊಳ್ಳಿ. ಸೊಂಪಾದ ಎಲೆಗಳು, ಅದರ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಖಗ ಮೃಗಗಳು. ಒಳಗಿರುವ, ಮರದ ಕೆಳಗಿರುವವರಿಗೆ ಒಂದಿನಿತೂ ಬಿಸಿಲು ಸೋಕುವುದಿಲ್ಲ. ಕಾರಣ ಸುಸ್ಪಷ್ಟ. ಎಲೆಗಳ ಹಂದರ ಬಿಸಿಲನ್ನು ತಾನಿರಿಸಿಕೊಂಡು ನೆರಳನ್ನು ಕೆಳಕ್ಕಿಳಿಸುತ್ತದೆ. ಈಗ ನೋಡೋಣ ಈ ಎಲ್ಲ ಎಲೆಗಳೂ ಒಂದೇ ತೆರನ ಬಿಸಿಲು ದೊರೆಯುತ್ತದೆಯೇ ಎಂದು. ಅದು ಹೇಗಾದರೂ ಹೊರ ಭಾಗದಲ್ಲಿರುವ ಎಲೆಗಳಂತೂ ದಂಡಿಯಾಗಿ ಬಿಸಿಲು ದೊರೆಯತ್ತದೆ. ಆದರೆ ಒಳಭಾಗದಲ್ಲಿರುವ ಎಲೆಗಳ ಗತಿ ಏನು? ಅವುಗಳಿಗೆ ನೇರ ಬಿಸಿಲು ಮರಿಚಿಕೆಯೇ. ನೀವು ಮರದ ಎಲೆಗಳ ಛಾವಣಿಯ ಒಳಕ್ಕಿಳಿಯುತ್ತಾ ಹೋದಂತೆ ಬೆಳಕು ಕ್ಷೀಣವಾಗುತ್ತಾ ಸಾಗುತ್ತದೆ. ಅಂದರೆ ಒಳಗಿನೆಲೆಗಳಿಗೆ ಸೋಸಿದ ಬೆಳಕೇ (diffused light) ಗತಿ.

ಹಾಗೇ ಮರದ ನೆರಳಿನಲ್ಲಿ ಇದನ್ನೆಲ್ಲಾ ಯೋಚಿಸುತ್ತಾ ನಿಂತ ನಿಮಗೆ ಹಾಗೆ ಬೀಸಿದ ತಂಗಾಳಿ ನಿಮ್ಮ ಮುಚ್ಚಿರುವ ಕಣ್ಣನ್ನು ತೆರೆಸಿತಲ್ಲವೇ? ಹೀಗೆ ನಿಮ್ಮ ಕಣ್ಣನ್ನೇ ತೆರೆಸಿದ ಆ ಕುಳಿರ್ಗಾಳಿ ಎಲೆಗಳನ್ನು ಎಷ್ಟು ಕದಲಿಸಿರಬಹುದಲ್ಲವೇ? ಇಲ್ಲಿಯ ತನಕ ಸೂರ್ಯನಿಗೆ ನೇರವಾಗಿ ತೆರೆದುಕೊಂಡಿದ್ದ ಎಲೆ ಸರಕ್ಕನೆ ಮಗ್ಗಲು ಬದಲಿಸುತ್ತದೆ. ಆಗ ಒಮ್ಮೆಲೇ ಎಲೆಯ ಮೇಲೆ ಬೀಳುವ ಬೆಳಕಿನ ಪ್ರಮಾಣದಲ್ಲಿ ತೀವ್ರ ಏರುಪೇರಾಗುತ್ತದೆ. ಸೋಲಾರ್ ಪ್ಯಾನೆಲ್ ಮೇಲೆ ಬೀಳುವ ಬೆಳಕಿನ ತೀವ್ರತೆಯಲ್ಲಿ ತೀವ್ರ ಏರುಪೇರಾದಾಗ ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರವಾಹದಲ್ಲಿ ತೀವ್ರ ಏರುಪೇರಾಗುತ್ತದೆ ಮತ್ತು ಏರಪೇರಾಗಲೇ ಬೇಕು ತಾನೇ? ಇದು ಎಲೆಗಳಲ್ಲಿ ಕೂಡಾ ಹಾಗೇ ಆಗುತ್ತಿರಬಹುದಲ್ಲ ಎಂದು ನಿಮಗೆ ಅನ್ನಿಸುತ್ತಿರಬಹುದು. ಅದು ನಿಜ ಕೂಡಾ. ಈ ವೋಲ್ಟೇಜ್ ಏರಿಳಿತ ಹೇಗೆ ನಿಮ್ಮ ಕಣ್ಣು ಮತ್ತು ನಿಮ್ಮ ಅಮೂಲ್ಯವಾದ ವಿದ್ಯುತ್ ಉಪಕರಣಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ತಾನೆ? ಅದಕ್ಕಾಗಿ ನೀವು ದುಬಾರಿಯಾದ ವೋಲ್ಟೇಜ್ ಸ್ಟೆಬಿಲೈಸರ್ ಅನ್ನು ಬಳಸುತ್ತೀರಿ ತಾನೇ. ನಿಜ ಹಾಗಾದರೆ ಗಾಳಿ ಬೀಸಿದಾಗ, ಸೂರ್ಯನ ಮೇಲೆ ಮೋಡ ಹಾದುಹೋದಾಗ ಎಲೆಗಳಿಗೂ ಇಂತಹದೇ ಕಿರಿಕಿರಿಯಾಗುತ್ತದೆ. ಅಂದರೆ ಅಲ್ಲಿ ನಡೆಯುವ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ವರ್ಗಾವಣೆಯ ಸರಣಿ (proton/electron transfer pathway) ಕೂಡಾ ಕಿರಿಕಿರಿ ಅನುಭವಿಸುತ್ತದೆ (pathway will be noisy). ಹಾಗಾದರೆ ಈಗ ಸಸ್ಯಗಳಿಗೂ ವೋಲ್ಟೇಜ್ ಸ್ಟೆಬಿಲೈಸರ್ ಅಳವಡಿಸಬೇಕಾಗುತ್ತದೆ ತಾನೆ? ಇದಕ್ಕೆ ಪ್ರಕೃತಿ ಒಂದು ದಾರಿ ಕಂಡು ಹುಡುಕಿರಲೇ ಬೇಕು ತಾನೇ?

ಹಾಗಾದರೆ ಪ್ರಕೃತಿ ವೋಲ್ಟೇಜ್ ಸ್ಟೆಬಿಲೈಸರ್ ಅಳವಡಿಸಿದೆಯೇ ಅಥವಾ ಬೇರೆ ದಾರಿ ಕಂಡುಕೊಂಡಿದೆಯೇ ಎನ್ನುವುದನ್ನು ಮುಂದಿನ ವಾರ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 




Ads on article

Advertise in articles 1

advertising articles 2

Advertise under the article