-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 172

ಸ್ಫೂರ್ತಿಯ ಮಾತುಗಳು : ಸಂಚಿಕೆ - 172

ಸ್ಫೂರ್ತಿಯ ಮಾತುಗಳು : ಸಂಚಿಕೆ - 172
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                 

'ಅನಸೂಯಾ' ಸಾಮಾನ್ಯವಾಗಿ ಇದು ನಾಮ ಪದ. ಹೆಣ್ಮಕ್ಕಳಿಗೆ ಇಡಲಾಗುವ ಹೆಸರು. ಇದರ ವಿರುದ್ಧಾರ್ಥಕ ಪದವೇ ಅಸೂಯಾ. ಅಸೂಯಾ ಎಂಬ ಹೆಸರನ್ನಿಡುವವರು ಕಡಿಮೆ ಅಥವಾ ವಿರಳ. ಅಸೂಯೆಯಿಲ್ಲದಿರುವಿಕೆಯೇ ಅನಸೂಯಾ. ಅಸೂಯೆಯನ್ನು ಹೊಟ್ಟೆ ಕಿಚ್ಚು ಅಥವಾ ಮತ್ಸರವೆಂದೂ ವ್ಯಾಖ್ಯಾನಿಸಬಹುದು. ಕಿಚ್ಚು ಎಂದರೆ ಬೆಂಕಿ. ಬೆಂಕಿಯು ಅಪಾಯಕಾರಿ ಮತ್ತು ಉಪಕಾರಿ ಎರಡೂ ಹೌದು. ನಮ್ಮಲ್ಲಿರದ ಅಂಶಗಳು ಇತರರಲ್ಲಿರುವುದನ್ನು ನೋಡಿ ಕರುಬುವುದು, ಬೇಸರಿಸುವುದು ಅಥವಾ ಮನದೊಳಗೆ ಕುದಿಯುತ್ತಿರುವುದೇ ಅಸೂಯೆ. ಇತರರ ಸೌಂದರ್ಯ, ಸಂಪತ್ತು, ಶಕ್ತಿ ಸಾಮರ್ಥ್ಯಗಳನ್ನು ನೋಡಿ ಅಸೂಯೆ ಪಡುವುದು ಮಾನವ ಸಹಜ ಗುಣ. ಅಸೂಯೆ ಮಹಿಳೆಯ ಸೊತ್ತು ಎಂದು ಹೇಳುವವರು ಇದ್ದಾರೆ. ಆದರೆ ಅಸೂಯೆ ಲಿಂಗಾಧಾರಿತವಾಗಿಲ್ಲ, ಪುರುಷ ಮತ್ತು ಸ್ತ್ರೀಯರಲ್ಲಿರುವ ಸಹಜ ಗುಣ ಅಥವಾ ಹುಟ್ಟುಗುಣ ಅಸೂಯೆ.

ಒಂದು ಸಸಿಯನ್ನು ನೋಡೋಣ. ಅದರಲ್ಲಿ ಆಗುವ ಕಾಯಿಗಳು ಇತರ ಕಾಯಿಗಳು ದೊಡ್ಡದಾಗುವುದನ್ನು, ಮಾಗುವುದನ್ನು ನೋಡಿ ಅಸೂಯೆ ಪಡುವುದಿಲ್ಲ. ಒಂದೇ ಗೊಂಚಲಿನಲ್ಲಿದ್ದುಕೊಂಡು ಜೊತೆಯಾಗಿ ಬೆಳೆಯುತ್ತವೆ, ಮಾಗುತ್ತವೆ. ಸಮಾಜಕ್ಕೆ ಉಪಕಾರಿಯಾಗುತ್ತವೆ. ಹೂಗಳ ಗುಣವೂ ಹಾಗೆಯೇ. ತನಗಿಂತ ಕಡಿಮೆ ಸುವಾಸನೆ ಉಳಿದ ಹೂಗಳಿಗಿರಲಿ ಅಥವಾ ದುರ್ವಾಸನಾಯುಕ್ತವಾಗಿರಲಿ ಎಂದು ಭಾವಿಸದೆ ಹುಟ್ಟತ್ತವೆ, ಅರಳುತ್ತವೆ, ಪ್ರಕೃತಿಯ ಸೊಬಗಿಗೆ ಕಾರಣವಾಗುತ್ತವೆ.

ಅಸೂಯೆಗೆ ಸ್ವಾರ್ಥ ಪರ ಮನೋಭಾವವೂ ಕಾರಣವಾಗುತ್ತದೆ. ಅನಸೂಯಾ ಎಂಬ ನಾಮಧೇಯದಿಂದ ಗುರುತಿಸಲ್ಪಡುವವರು ಅಸೂಯಾರಹಿತರೆಂದು ಹೇಳುವಂತಿಲ್ಲ. ಹೆಸರಿಗೂ ಗುಣಕ್ಕೂ ತದ್ವಿರುದ್ಧವಿರುವ ಅನೇಕ ಸಂಗತಿಗಳಿವೆ. ಹಿಂದಿನವರು ಹೆಸರನ್ನಿಡುವಾಗ ಆ ಗುಣಗಳನ್ನು ಮಕ್ಕಳಲ್ಲಿ ಬಯಸುತ್ತಿದ್ದರು. ಇಂದಿನವರ ಹೆಸರಿಗೆ “ಚಿಕ್ಕ” ದಾಗಿರುವುದರದ್ದೇ ಮೊದಲ ಆಯ್ಕೆ. ಚಿಪ್‌, ಕಿಪ್‌, ನಾಸ್.‌ ಪಾಚ್‌ ಮುಂತಾದ ಹೆಸರುಗಳನ್ನೂ ಭವಿಷ್ಯದಲ್ಲಿ ನಾವು ಕಾಣುವಂತಾದರೆ ಆಶ್ಚರ್ಯವಿಲ್ಲ. ಹೆಸರಿಗೊಂದು ಅರ್ಥ ಉದ್ದೇಶ ಅದು ಹಿಂದಿನವರ ಬಯಕೆ.

ಹಿಂದಿನವರನ್ನು non cultured ಎನ್ನುವವರಿಗೆ ಹೆಸರಿನಲ್ಲಿ ಸಂಸ್ಕೃತಿಯಾದರೂ ಯಾಕೆ ಅಲ್ಲವೇ?
ಕಾಗೆಯೊಂದು ಆಹಾರವನ್ನು ಕಂಡಾಗ “ಕಾ ಕಾ ಕಾʼ ಎಂದು ಕೂಗಿ ಬಳಗವನ್ನು ಕರೆಯುತ್ತದೆ. ಬಳಗವೆಂದರೆ ಮಕ್ಕಳು ಕುಟುಂಬ ಮಾತ್ರವಲ್ಲ. ಇಡೀ ಕಾಕ ಕುಲವೇ ಬಂದರೂ ಅದು ಬೇಸರಿಸದು. ಯಾಕೆಂದರೆ ಅವಕ್ಕೆ ಸ್ವಾರ್ಥವಿಲ್ಲ, ಇತರ ಕಾಗೆಗಳು ತಿನ್ನುವುದನ್ನು ಕಂಡು ಅಸೂಯೆ ಪಡುವುದಿಲ್ಲ.

ಪಕ್ಕದ ಮನೆಯೊಡತಿ ಹೊಸ ಬಂಗಾರದೊಡವೆ ತಂದರೆ ಹತ್ತಿರದ ಮನೆಯವರೆಲ್ಲರಿಗೂ ತೋರಿಸಿ ಖುಷಿಪಡುವುದಿದೆ. ತೋರಿಸುವುದು ಮಾತ್ರವಲ್ಲ ಅದನ್ನು ಹಿಡಿಯಲು ಕೊಟ್ಟು “ಭಾರ” ಅಂದಾಜಿಸಲು ಹೇಳುವುದೂ ಇದೆ. ಹದಿನಾರು ಗ್ರಾಂ ಇದ್ದರೆ ಮೂವತ್ತುಗ್ರಾಂ ಎಂದೂ ಹೇಳಿ ನೋಡುಗರ ಹೊಟ್ಟೆ ಉರಿಸಿ ಆನಂದ ಪುಷ್ಕಳರಾಗುವುದೂ ಇದೆ. ಕ್ರಯವನ್ನಂತೂ ಅಧಿಕರಿಸಿ ಹೇಳದೇ ಇದ್ದರೆ ಅವರಿಗೆ ನಿದ್ದೆಯೇ ಬಾರದು. ತನ್ನಲ್ಲಿದೆಯಂದನ್ನು ತೋರಿಸುವ ಅಪೇಕ್ಷೆ ಒಂದೆಡೆಯಾದರೆ ಅವರ ಅಸೂಯೆಯೂ ಈ ಕೃತ್ಯದಲ್ಲಿ ಗುಹ್ಯವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಇತರರಲ್ಲಿರುವುದಕ್ಕಿಂತ ಭಿನ್ನವಾದುವುಗಳನ್ನೇ ತಾನು ಹೊಂದಿರಬೇಕೆಂಬುದರ ಮಾನಸಿಕತೆಗೆ ಅಸೂಯೆಯೇ ಮೂಲ. ಐದುನೂರು ಸಿ.ಸಿ.ಯ ಕಾರನ್ನು ಗೆಳೆಯನೊಬ್ಬ ಖರೀದಿಸಿದರೆ ತಾನು ಸಾವಿರ ಅಥವಾ ಸಾವಿರದ ಇನ್ನೂರು ಸಿ.ಸಿ. ಕಾರು ಖರೀದಿಸಿದರೂ ಅದರ ಹಿಂದೆ ಅಸೂಯಾಗುಣ ಕೆಲಸ ಮಾಡಿರುತ್ತದೆಂಬುದನ್ನು ಒಪ್ಪಲೇ ಬೇಕು. ತನ್ನ ಹೆಂಡತಿಯ ವಯಸನ್ನು, ಶಿಕ್ಷಣ ಅರ್ಹತೆಯನ್ನು ಗಂಡಸರು ಸತ್ಯ ಹೇಳದೇ ಇದ್ದರೆ ಅದೂ ಅಸೂಯಗುಣವೇ ಆಗಿದೆ.

ಮಕ್ಕಳು ಅನಸೂಯಾ ಗುಣವುಳ್ಳವರೆಂದು ಅಭಿಮಾನ ಪಡೋಣವೇ? ತನ್ನ ಪಕ್ಕದವನು ಉಕ್ತ ಲೇಖನದಲ್ಲಿ ತನ್ನಷ್ಟೇ ಸರಿ ಅಂಕ ಪಡೆದಾಗಲೇ ಮುಖ ಸಿಂಡರಿಸುತ್ತಾರೆ. ಇನ್ನು ಹೆಚ್ಚು ಸರಿಯಾದರಂತೂ ಅವರ ಅಸೂಯೆಯ ಕಟ್ಟೆ ಒಡೆದು, “ಕಾಪಿ” ಮಾಡಿದೆ ಎಂದು ಮಿಥ್ಯಾರೋಪ ಮಾಡುವವರೂ ಇದ್ದಾರೆ . ಎಲ್ಲಾ ವಿಚಾರಗಳಲ್ಲೂ ಇತರರ ಔನ್ನತ್ಯವನ್ನು ಸಹಿಸಲಾಗದ ಅಸೂಯಾ ಗುಣ ವೈಯಕ್ತಿಕವಾಗಿ ನಮ್ಮನ್ನೇ ನಾಶಗೊಳಿಸುತ್ತದೆಂಬ ಅರಿವು ನಮಗೆ ಬೇಕು.

ಅಸೂಯಾವಂತರ ಸಾಮಾಜಿಕ ಗೌರವ ಅವನತಿ ಹೊಂದುತ್ತದೆ. ಅವರೊಂದಿಗೆ ಬೆರೆಯುವವರ, ಅವರಿಗೆ ಸಹಕರಿಸುವವರ ಸಂಖ್ಯೆಯೂ ಕಡಿಮೆಯಾಗುತ್ತದೆ, ಶೂನ್ಯಗೊಳ್ಳುತ್ತದೆ ಎಂದರೂ ಅಚ್ಚರಿಯಿಲ್ಲ. ಅವರೊಂದಿಗೆ ಮಾತನಾಡಿಸಲೂ ಅಸಹ್ಯ ಪಡುವವರು ಇರಬಹುದು. ಅಸೂಯೆಯುಳ್ಳವವರ ಮಾನಸಿಕ ಸ್ಥಿತಿಯು ಸದಾ ದುಃಖತಪ್ತವಾಗಿರುತ್ತದೆ. ಅದಕ್ಕಿಂತ ಮಿಗಿಲಾದುದನ್ನು ಪಡೆಯಲೇ ಬೇಕೆಂಬ ಹಠಕ್ಕೆ ಬೀಳುತ್ತಾರೆ. ಅವರ ಮನೋಸ್ಥಿತಿ ಖಿನ್ನಗೊಂಡು ಅನಾರೋಗ್ಯ ಪೀಡಿತರಾಗುತ್ತಾರೆ. ಸಂತೋಷ ಮತ್ತು ನೆಮ್ಮದಿಯಿರದವರಿಗೆ ಆರೋಗ್ಯವಿರದು. ಮುಪ್ಪು ಬೇಗ ಬರುತ್ತದೆ. ಸಂತೋಷವೇ ಯೌವನ ಅಲ್ಲವೇ? ಇವರು ತಮ್ಮ ವಾಂಛೆಯನ್ನು ಈಡೇರಿಸಲು ಸಾಲ ಮಾಡುತ್ತಾರೆ. ಸಾಲ ಮರಳಿ ಪಾವತಿಸಲಾಗದೆ ಸೋಲುತ್ತಾರೆ. ಅಗತ್ಯಕ್ಕೂ ಹಣ ಹೊಂದಿಸಲಾಗದೇ ತೊಂದರೆಗಳನ್ನು ಅನುಭವಿಸುತ್ತಾರೆ. ಮಾನವನಿಗೆ ಇರುವುದರಲ್ಲಿ ತೃಪ್ತಿಹೊಂದುವ ಗುಣವಿದ್ದರೆ ಅಸೂಯೆಯು ಹುಟ್ಟದು. ಅನಸೂಯೆಯೇ ಪರಮ ಸುಖಕರ. 
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 




Ads on article

Advertise in articles 1

advertising articles 2

Advertise under the article