ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 76
Friday, July 18, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 76
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು. ಮೊನ್ನೆ ಅಷ್ಟೇ ಗುರು ವಂದನ ಕಾರ್ಯಕ್ರಮವನ್ನು ಮುಗಿಸಿದ್ದೇವೆ. "ಗುರುವಿನ ಗುಲಾಮನಾಗುವವರೆಗೂ ದೊರೆಯದಣ್ಣ ಮುಕುತಿ" ಎಂಬ ಈ ಸಾಲುಗಳಂತೆ, ಗುರುಗಳ ಗುಲಾಮರಾಗಿ ನಾವು ಎಲ್ಲಿಯವರೆಗೂ ಇರುತ್ತೇವೋ ಅಲ್ಲಿಯವರೆಗೂ ನಾವು ಕಲಿತದ್ದೆಲ್ಲವೂ ನಮ್ಮ ಕೈ ಹಿಡಿಯುತ್ತದೆ, ಇಲ್ಲವಾದಲ್ಲಿ ನಾವು ಏನೇ ಕಲಿತಿದ್ದರೂ ಅವೆಲ್ಲವೂ ವ್ಯರ್ಥ.
ಹೀಗೆ ಅಂದು ತರಗತಿಯಲ್ಲಿ ಆ ದಿನದ ವಿಶೇಷವನ್ನು ಮಕ್ಕಳೆಲ್ಲರಿಗೂ, ಗುರುಕುಲದ ಚಿತ್ರಗಳನ್ನು ತೋರಿಸುತ್ತಾ, ನಮ್ಮ ಪೂರ್ವಜರ ಕಾಲದ ವಿದ್ಯಾಭ್ಯಾಸಗಳ ರೀತಿಯನ್ನು ಹೇಳುತ್ತಾ ಮಕ್ಕಳಿಗೆ ವಿವರಿಸುತ್ತಾ ಇದ್ದೆ. ಆಗಿನ ಕಾಲದ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ, ಬಾಂಧವ್ಯ, ಗೌರವಗಳು ಹಾಗೂ ಗುರುಕಾಣಿಕೆ ಹೀಗೆ ಎಲ್ಲ ವಿಚಾರಗಳ ಬಗ್ಗೆ ಕಥೆಯ ರೂಪದಲ್ಲಿ ಮಕ್ಕಳಿಗೆ ಚುಟುಕಾದ ವಿವರಣೆಯನ್ನು ನೀಡುತ್ತಿದ್ದೆ. ತುಂಬಾ ಉತ್ಸಾಹದಿಂದ ಕಥೆಯನ್ನು ಮಕ್ಕಳು ಅನುಭವಿಸುತ್ತಿದ್ದರು. ನಂತರ ಕಥೆಯ ಮಧ್ಯದಲ್ಲಿ ಒಂದು ಮಗು ಎದ್ದುನಿಂತು ಕೇಳಿತು, "ಮಾತಾಜಿ, ಗುರುಕಾಣಿಕೆ ಎಂದರೇನು? ಅಯ್ಯೋ, ಏನಿಲ್ಲ ಪುಟ್ಟ, ಟೀಚರ್ಸ್ ಡೇ ಅಂತ ನೀವೆಲ್ಲ ನಮಗೆ ಗಿಫ್ಟ್ ಕೊಡುವುದಿಲ್ಲವೇ? ಅದನ್ನೇ ಗುರುಕಾಣಿಕೆ ಎನ್ನುವುದು." ಓ ಹೌದಾ? ಎಂದು ಮಗು ಸುಮ್ಮನೆ ಕುಳಿತಿತು. ನಂತರ ನಿತ್ಯದ ಚಟುವಟಿಕೆಯಂತೆ ತರಗತಿಗಳನ್ನು ಮುಂದುವರಿಸಿದೆ. ಕೆಲವು ಸಮಯಗಳ ನಂತರ, ಅದೇ ಪ್ರಶ್ನೆ ಕೇಳಿದ ಮಗು ನನ್ನ ಬಳಿ ಬಂದು ಹೇಳಿತು, ತನ್ನ ಹೋಂವರ್ಕ್ ಪುಸ್ತಕವನ್ನು ನನ್ನ ಬಳಿ ಹಿಡಿದು "ಮಾತಾಜಿ ಇಲ್ಲಿ ನೋಡಿ, ನೀವು ಯಾವಾಗಲೂ ಬೈತಿದ್ರಿ ಅಲ್ಲ ನಿನ್ನ ಅಕ್ಷರ ಸರಿ ಇಲ್ಲ ನಿನ್ನ ಅಕ್ಷರ ಸರಿ ಇಲ್ಲ ಅಂತ, ಈಗ ನೋಡಿ ನಾನು ಸ್ವಲ್ಪ ಸುಧಾರಿದ್ದೇನೆ. ಚೆಂದ ಆಗಿಲ್ವಾ ನಂದು ಇವಾಗ ಬರಹ? ಎಂದೆಲ್ಲ ಸುಮಾರು ಪೀಠಿಕೆ ಹಾಕಿದ. ನಾನು ಹೇಳಿದೆ, ಹೌದು ಮಾರಾಯ ಒಳ್ಳೆ ಆಯ್ತು ಇನ್ನು ಒಳ್ಳೇ ಮಾಡಲಿಕ್ಕೆ ಪ್ರಯತ್ನ ಪಡುವ ಆಯ್ತಾ." ಎಂದು ಹೇಳಿದೆ. "ಮತ್ತೆ ಮಾತಾಜಿ ಈ ಸರ್ತಿ ಟೀಚರ್ಸ್ ಡೇ ಗೆ ನಿಮಗೆ ಒಂದು ಸರ್ಪ್ರೈಸ್ ಉಂಟು ಆಯ್ತಾ" ಎಂದು ಹೇಳಿದ. ನಾನು ಆಶ್ಚರ್ಯದಿಂದ ಕೇಳಿದೆ ಹೌದ ಮಾರಾಯ ಎಂತ ಸರ್ಪ್ರೈಸ್? ನಂತರ ಅವನ ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು. "ನೋಡಿ ಮಾತಾಜಿ ಪ್ರತಿಸರ್ತಿ ನಿಮಗೆ ಪೆನ್ನು ಪೆನ್ಸಿಲ್ ಎಲ್ಲ ಕೊಟ್ಟರೆ ಅದು ಬೇಗ ಖಾಲಿ ಆಗ್ತದೆ. ಅದಿಕ್ಕೆ ಈ ಸರ್ತಿ ನಾನು ಡಿಫ್ರೆಂಟ್ ಗಿಫ್ಟ್ ಕೊಡುವ ಅಂತ ಇದ್ದೇನೆ. ಅದು ನನ್ನ ದುಂಡಾದ ಬರಹ. ಈ ಗಿಫ್ಟಿಂದ ನಿಮಗೆ ಖುಷಿನಾ ಮಾತಾಜಿ?" ಎಂದು ಮುಗ್ಧ ನಗುವಿನ ಮೂಲಕ ಮಗು ಕೇಳಿತು. ಒಂದು ಕ್ಷಣ ನನಗೆ ಅವನ ಮೇಲೆ ಹೆಮ್ಮೆ ಅನಿಸಿತು. ನಾನು ಕೇಳಿದೆ "ಇತರ ಗಿಫ್ಟ್ ಎಲ್ಲ ಕೊಡಬಹುದು ಅಂತ ನಿನಗೆ ಯಾರು ಹೇಳಿ ಕೊಟ್ಟಿದ್ದು?" ಆಗ ಅವನು ಹೇಳಿದ. "ಅಯ್ಯೋ ಮಾತಾಜಿ ಅವತ್ತು ನೀವೇ ಹೇಳಿದ್ದಲ್ಲ ನಿಮಗೆ ಮರೆತು ಹೋಯ್ತಾ? ನೀವು ಅವಾಗ ಒಂದು ದಿನ ಹೇಳಿದ್ರಿ, ಮಕ್ಕಳೇ ನೀವು ಚಂದ ಮಾಡಿ ಓದುವುದು ನಾವು ಹೇಳಿದ ಮಾತನ್ನು ಕೇಳುವುದು ಚಂದ ಮಾಡಿ ಬರೆಯುವುದು ಇದೇ ನಮಗೆ ದೊಡ್ಡ ಗಿಫ್ಟ್ ಅಂತ. ಅದಕ್ಕೆ ನಾನು ಅದನ್ನೇ ಗಿಫ್ಟ್ ಆಗಿ ಕೊಡುವ ಅಂತ ಯೋಚನೆ ಮಾಡಿದ್ದೇನೆ. ಖುಷಿ ಅಲ್ವಾ ನಿಮಗೆ?"
ಈ ಮಾತುಗಳನ್ನು ಕೇಳಿದ ನನಗೆ ಒಂದು ಮನದಟ್ಟಾಯಿತು. ಏನೆಂದರೆ ನಾವು ಹೇಳಿದ ಮಾತುಗಳನ್ನು ಮಕ್ಕಳು ಕೇಳುವುದೇ ಇಲ್ಲ ಸುಮ್ಮನೆ ಅವರ ಪಾಡಿಗೆ ಕಾಲ ಕಳೆಯುತ್ತಾರೆ ಎಂಬುದು ನಮ್ಮ ತಪ್ಪು ಕಲ್ಪನೆ. ಅವರು ಶಾಲೆಯಲ್ಲಿ ನಾವು ಹೇಳುವ ಪ್ರತಿಯೊಂದು ಪದಗಳನ್ನು ಗಮನಿಸುತ್ತಾರೆ, ಮನೆಯಲ್ಲಿ ಮಕ್ಕಳೆದುರು ಪೋಷಕರು ಆಡುವ ಮಾತುಗಳು, ಶಾಲೆಯಲ್ಲಿ ಶಿಕ್ಷಕರು ಆಡುವ ಮಾತುಗಳು ಇವೆರಡೂ ಅವರ ಮನಸ್ಸಿನಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ, ಎನ್ನುವುದು ಶತಸಿದ್ಧ. ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಮಕ್ಕಳಿಗೆ ಏನನ್ನಾದರೂ ಹೇಳುವಾಗ ಅವರ ಮೇಲೆ ಅದು ಪರಿಣಾಮ ಬೀರಬೇಕು, ಆ ರೀತಿಯಲ್ಲಿ ಹೇಳುವ ಕೌಶಲ್ಯತೆಯನ್ನು ನಾವು ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ನಮ್ಮ ತಯಾರಿ ಅತ್ಯಾವಶ್ಯಕ.
ಧನ್ಯವಾದಗಳು
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************