-->
ಪಯಣ : ಸಂಚಿಕೆ - 52 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 52 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 52 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ "ಚಿಕ್ಕಬಳ್ಳಾಪುರದ ಜರಮಡುಗು ಜಲಪಾತ" ಕ್ಕೆ ಪಯಣ ಮಾಡೋಣ ಬನ್ನಿ....

              
ಬಯಲು ಸೀಮೆ ಜಿಲ್ಲೆಗಳಲ್ಲಿ ಜಲಪಾತಗಳು ಅಪರೂಪ. ಹೀಗಾಗಿ ಅಲ್ಲಿ ಅವು ಸಿಕ್ಕರೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗುತ್ತದೆ. ಬರಡು ಜಿಲ್ಲೆ ಎಂದೇ ಕರೆಯಲಾಗುವ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ನೈಸರ್ಗಿಕ ಜಲಪಾತವಿದೆ. ಅದು ಜರಮಡಗು ಜಲಪಾತ. ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಈ ಜಲಪಾತ ಪ್ರಕೃತಿ ಮಡಿಲಲ್ಲಿ ಸೌಂದರ್ಯದ ಸೊಬಗನ್ನು ಮೈಗೂಡಿಸಿಕೊಂಡಿದೆ. ನಿಸರ್ಗ ಪ್ರಿಯರನ್ನು ತನ್ನೆಡೆಗೆ ಆಕರ್ಷಿಸಿ ಮನೋಲ್ಲಾಸಕ್ಕೆ ಕಾರಣವಾಗುತ್ತಿದೆ. 

ಸಣ್ಣಪುಟ್ಟ ಝರಿ ತೊರೆಗಳು ಸೇರಿ ಸೃಷ್ಟಿಯಾಗಿರುವ ಜರಮಡಗು ಜಲಪಾತ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ವಾಯವ್ಯ ದಿಕ್ಕಿನ ಬೆಟ್ಟ ಸಾಲುಗಳಲ್ಲಿ ಬರುತ್ತದೆ. ಇದೊಂದು ಪ್ರಕೃತಿಯ ಅದ್ಭುತ ಸೃಷ್ಟಿ. 60 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. 

ಬೆಟ್ಟಗಳ ಅಪೂರ್ವ ಹಸಿರ ಸಿರಿ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಪ್ರತಿ ಮಳೆಗಾಲದಲ್ಲಿ ಸಹಜ ವೈಭವವನ್ನು ಪಡೆಯುವ ಈ ಜಲಪಾತಕ್ಕೆ ಪ್ರವಾಸಿಗರು ತಂಡೋಪತಂಡವಾಗಿ ಚಾರಣಿಗರಿಗೆ ಹಾಗೂ ಛಾಯಾಗ್ರಾಹಕರಿಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಚಾರಣದಿಂದ ಆಗುವ ಎಲ್ಲಾ ಪ್ರಯಾಸವನ್ನು ಮರೆಯಾಗಿಸುವ ಶಕ್ತಿ ಈ ಜಲಪಾತಕ್ಕಿದೆ. ಜಲಧಾರೆಗೆ ಮೈಯೊಡ್ಡಿ ದಿನವಿಡೀ ನೆನೆದರೂ ಮೈಮನಗಳಿಗೆ ದಣಿವಾಗದು. ದಾರಿ ಮಧ್ಯೆ ಅಲ್ಲಲ್ಲಿ ಸಿಗುವ ತೊರೆಗಳು ಮನತಣಿಸುತ್ತವೆ. 2 ಕಿ.ಮೀ. ದೂರವಿದ್ದಾಗಲೇ ಜಲಪಾತದ ಭೋರ್ಗರೆತ ಕೇಳುತ್ತದೆ. ಬೇಸಗೆಯಲ್ಲಿ ಒಣಗಿ ಸಂಪೂರ್ಣ ಸೊಬಗನ್ನು ಕಳೆದುಕೊಳ್ಳುವ ಜರಮಡುಗು ಜಲಪಾತ ಮಳೆಗಾಲದಲ್ಲಿ ಹಸಿರಿನ ಸಿರಿ ಹೊದ್ದುಕೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಸಕಾಲ. 

ಮಾರ್ಗ : ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ಕೇತೆನಹಳ್ಳಿ ಮಾರ್ಗದಲ್ಲಿ 12 ಕಿ.ಮೀ. ಚಲಿಸಿ ತಿಮ್ಮನಾಯಕನಹಳ್ಳಿಯವರೆಗೆ ವಾಹನ ಮುಖಾಂತರ ಸಾಗಬೇಕು. ಅಲ್ಲಿಂದ 3 ಕಿ.ಮೀ. ದೂರದಲ್ಲಿರುವ ಜರಮಡುಗು ಜಲಪಾತಕ್ಕೆ ಕಾಲ್ನಡಿಗೆಯಲ್ಲೇ ಸಾಗಬೇಕು. ಬೆಂಗಳೂರಿನ ಮಗ್ಗುಲಲ್ಲೇ ಇದ್ದರೂ ಮಾಹಿತಿ ಕೊರತೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ. ಬೆಟ್ಟಗುಡ್ಡಗಳನ್ನು ದಾಟಿ ಜಲಪಾತ ಮುಟ್ಟಬೇಕು. ಅಲ್ಲಿಗೆ ತೆರಳಲು ಉತ್ಸಾಹದ ಜೊತೆ ಸ್ವಲ್ಪ ಎಚ್ಚರವಹಿಸುವುದು ಅಗತ್ಯ. ಕಡಿದಾದ ಇಳಿಜಾರಿನಂತಿರುವ ಗುಡ್ಡಗಳನ್ನು ಹತ್ತಿ ಇಳಿಯಬೇಕು. ಬಂಡೆಗಳನ್ನು ಹತ್ತುವ ಆಸೆಯಿದ್ದರೆ ಜಲಪಾತದ ಮೇಲಕ್ಕೂ ತೆರಳಬಹುದು.

"ಬೆಟ್ಟಗಳ ಅಪೂರ್ವ ಹಸಿರಸಿರಿ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ವನಸಿರಿ, ಪ್ರತಿ ಮಳೆಗಾಲದಲ್ಲಿ ಸಹಜ ವೈಭವವನ್ನು ಪಡೆಯುವ ಜಲಧಾರೆ ಈ ಚಿಕ್ಕಬಳ್ಳಾಪುರದ ಜರಮಡುಗು ಜಲಪಾತ" ಕ್ಕೆ ಬನ್ನಿ ಒಮ್ಮೆ.... 

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************




Ads on article

Advertise in articles 1

advertising articles 2

Advertise under the article