ಜೀವನ ಸಂಭ್ರಮ : ಸಂಚಿಕೆ - 199
Monday, July 21, 2025
Edit
ಜೀವನ ಸಂಭ್ರಮ : ಸಂಚಿಕೆ - 199
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಭಗವದ್ಗೀತೆಯಲ್ಲಿ ಬರುವ ಕರ್ಮ ಯೋಗದ ಬಗ್ಗೆ ತಿಳಿದುಕೊಳ್ಳೋಣ. ಕರ್ಮ ಯೋಗ ಇದರಲ್ಲಿ ಎರಡು ಪದಗಳಿವೆ. ಕರ್ಮ ಮತ್ತು ಯೋಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಕರ್ಮ: ನಾವು ಮಾಡುವ ಎಲ್ಲಾ ಕೆಲಸಗಳನ್ನು ಕರ್ಮ ಎನ್ನುತ್ತೇವೆ. ಎಲ್ಲಾ ಕರ್ಮಗಳು ಕರ್ಮಯೋಗಗಳಲ್ಲ. ಕರ್ಮ, ಯೋಗ ರೂಪತಾಳಬೇಕು ಅಥವಾ ಯೋಗ ರೂಪ, ಕರ್ಮ ಆಗಬೇಕು. ಬದುಕು ನಿಸರ್ಗದ ಕಾಣಿಕೆ. ಈ ಬದುಕನ್ನು ವರ್ಷ ವರ್ಷ ಬಳಸುತ್ತೇವೆ. ಕೊನೆಯ ಉಸಿರಿರುವ ತನಕ ಬಳಸುತ್ತೇವೆ. ಸಂತೋಷ, ಅಸಂತೋಷ, ಸುಂದರ, ಕುರೂಪ, ಜ್ಞಾನಿ ಮತ್ತು ಅಜ್ಞಾನಿಯಾಗಿ ಬಾಳುವುದು ನಮ್ಮ ಕೈಯೊಳಗೆ ಇದೆ. ನಿಸರ್ಗ, ದೇಹದಲ್ಲಿ ಮತ್ತು ಹೊರಗೆ ಬೇಕಾದುದನ್ನೆಲ್ಲ ಇಟ್ಟಿದೆ. ಆಯ್ಕೆ ನಮಗೆ ಬಿಟ್ಟಿದೆ. ಇವುಗಳನ್ನು ಬಳಸುವ ರೀತಿಯ ಮೇಲೆ ಬದುಕು ಸುಂದರವೊ, ಕುರೂಪವೋ ನಿರ್ಧಾರವಾಗುತ್ತದೆ.
ಕರ್ಮ ಮಾಡಲು ಬೇಕಾದ ಸಾಧನಗಳನ್ನು ನಿಸರ್ಗ ನಮ್ಮಲ್ಲಿ ಅಳವಡಿಸಿದೆ. ಮೂರು ರೀತಿಯ ಸಾಧನೆಗಳನ್ನು ಅಳವಡಿಸಿದೆ. ಈ ಸಾಧನಗಳನ್ನು ಬಳಸಿ ಕೆಲಸ ಮಾಡುತ್ತೇವೆ. ಹೊರಗೆ ಜಗತ್ತು ಶ್ರೀಮಂತವಾಗಿದೆ. ಮೂರು ರೀತಿಯ ಸಾಧನಗಳು ಅವು ಯಾವುವೆಂದರೆ ದೇಹ, ತಲೆ ಮತ್ತು ಭಾವ.
1. ದೇಹ : ಈ ದೇಹ ಬಳಸಿ ಬಾಹ್ಯಕರ್ಮ ಮಾಡುತ್ತೇವೆ. ಇದು ಬಾಹ್ಯ ಸಾಧನ. ಕೈ ಬಳಸಿ ಕೆಲಸ ಮಾಡುತ್ತೇವೆ. ಕಾಲು ಬಳಸಿ ನಡೆಯುತ್ತೇವೆ. ನಡೆಯುವುದು ಕೆಲಸವೇ. ಇಂದ್ರಿಯ ಬಳಸಿ ಕೆಲಸ ಮಾಡುತ್ತೇವೆ. ಕಣ್ಣಿನಿಂದ ನೋಡುತ್ತೇವೆ. ಕಿವಿಯಿಂದ ಕೇಳುತ್ತೇವೆ. ನಾಸಿಕದಿಂದ ವಾಸನೆ ಗ್ರಹಿಸುತ್ತೇವೆ. ನಾಲಿಗೆಯಿಂದ ರುಚಿಸುತ್ತೇವೆ ಮತ್ತು ಮಾತನಾಡುತ್ತೇವೆ. ಚರ್ಮದಿಂದ ಸ್ಪರ್ಶ ಮಾಡುತ್ತೇವೆ. ಇವೆಲ್ಲ ಬಾಹ್ಯಕರ್ಮಗಳು.
2. ತಲೆ : ಇದು ಆಂತರಿಕ ಕರ್ಮಸಾಧನ. ತಲೆ ಅಂದರೆ ಬುದ್ಧಿ. ಈ ಬುದ್ಧಿ ಬಳಸಿ ಜಗತ್ತನ್ನು ತಿಳಿದುಕೊಳ್ಳುತ್ತೇವೆ. ಈ ಜಗತ್ತು ಹೇಗಿದೆ?. ಅದರ ಸ್ವರೂಪ ಏನು?. ಅನ್ನುವುದನ್ನು ತಿಳಿದು ಕೊಳ್ಳುತ್ತೇವೆ. ಬರೀ ಕೆಲಸ ಮಾಡುವುದು ಮುಖ್ಯವಲ್ಲ. ತಿಳಿದು ಮಾಡುವುದು ಮುಖ್ಯ. ಅರಿತು ಮಾಡುವುದು ಮುಖ್ಯ. ಸರಿಯಾಗಿ ಅರಿತಾಗ ಕರ್ಮ ಅಂಟುವುದಿಲ್ಲ. ಅಂದರೆ ಬಂಧನ ಉಂಟುಮಾಡುವುದಿಲ್ಲ. ಏತಕ್ಕಾಗಿ ಕರ್ಮ ಮಾಡುತ್ತಿದ್ದೇವೆ ಅನ್ನುವುದು ತಿಳಿಯುತ್ತದೆ. ತಿಳಿದಾಗ ಜಗತ್ತು ಇದ್ದಕ್ಕಿದ್ದಂತೆ ಗೊತ್ತಾಗುತ್ತದೆ. ಈ ಜಗತ್ತಿನಲ್ಲಿರುವ ವಸ್ತುಗಳು ಕಾಯಂ ಅಲ್ಲ. ಅಗಲುತ್ತವೆ. ಎಲ್ಲಾ ಜಡ ಹಾಗೂ ಮಿಶ್ರ. ಇದರಲ್ಲಿ ಒಳ್ಳೆಯವು ಇವೆ ಹಾಗೂ ಪ್ರತಿಯೊಂದರಲ್ಲೂ ಕೊರತೆ ಇದೆ. ಪ್ರತಿಯೊಂದು ಸ್ವತಂತ್ರವಲ್ಲ, ಅವಲಂಬಿತ, ಬಂಧಿತ. ಆವಸ್ಥೆಯಲ್ಲಿ ಮತ್ತು ಕಾಲದಲ್ಲಿ ಬದಲಾಗುತ್ತದೆ. ಪ್ರತಿಯೊಂದು ಚಲನಶೀಲ ಮತ್ತು ಪರಿಣಾಮಶೀಲ ಎನ್ನುವ ಜ್ಞಾನ ಉಂಟಾಗುತ್ತದೆ. ಆದ್ದರಿಂದ ಜಗತ್ತಿನ ಜ್ಞಾನ ಅಷ್ಟೊಂದು ಮಹತ್ವ.
3. ಭಾವ : ಇದು ಆಂತರಿಕ ಸಾಧನ. ಭಾವವೇ ಅನುಭವಿಸುವುದು. ಒಬ್ಬೊಬ್ಬರು ಒಂದೊಂದಕ್ಕೆ ಒತ್ತು ನೀಡುತ್ತಾರೆ. ಕೆಲವರು ದೈಹಿಕ ಕೆಲಸಕ್ಕೆ, ಕೆಲವರು ಬುದ್ಧಿ ಜ್ಞಾನಕ್ಕೆ, ಮತ್ತೆ ಕೆಲವರು ಅನುಭವಿಸಲು ಒತ್ತು ಕೊಡುತ್ತಾರೆ. ಮನುಷ್ಯ ಈ ಮೂರು ರೀತಿಯ ಕಾರ್ಯಗಳನ್ನು ಮಾಡಬೇಕು. ಜೀವನಕ್ಕೆ ರಸ ತುಂಬುವುದು, ಸವಿ ಮಾಡುವುದು, ಆನಂದ ತುಂಬುವುದು, ಬದುಕು ಮಧುರ ಆಗುವುದು, ಬದುಕು ಶ್ರೀಮಂತ ಆಗುವುದು ಅನುಭವದಿಂದ.
ಉದಾಹರಣೆಗೆ ; ಒಂದು ಹೂ ಕೈಯಲ್ಲಿ ಹಿಡಿದೆ. ಇದು ದೈಹಿಕ ಕೆಲಸ. ಇದು ಗುಲಾಬಿ ಹೂ, ಕೆಂಪು ಬಣ್ಣ, ಅದರ ಗಾತ್ರ, ಆಕಾರ ತಿಳಿದೆ ಇದು ಬುದ್ಧಿ ಕರ್ಮ. ಇದರಿಂದ ಸಂತೋಷ ವಾಗುವುದಿಲ್ಲ. ಆ ಹೂವಿನ ಸೌಂದರ್ಯ ಮನಸ್ಸು ತುಂಬಿ ಅನುಭವಿಸಿದಾಗ ಆನಂದವಾಗುತ್ತದೆ. ಎಲ್ಲಾ ಕರ್ಮಗಳಿಗಿಂತ ಮಹತ್ವ ಅನುಭವಿಸುವುದು.
ನಾವು ಹುಟ್ಟಿದಾಗ ದೈಹಿಕ ಶಕ್ತಿ ಕಡಿಮೆ. ಬುದ್ಧಿ ಶಕ್ತಿ ಕಡಿಮೆ ಆದರೆ ಭಾವಶಕ್ತಿ ಹೆಚ್ಚು. ಹಾಗಾಗಿ ಮಗು ನಕ್ಕರೆ ಮನೆ ಹಾಗೂ ಇಡೀ ಊರೇ ನಗುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಶಕ್ತಿ ಹೆಚ್ಚಿತು. ಬುದ್ಧಿ ಬೆಳೆಯಿತು ಆದರೆ ಭಾವ ಬಾಡಿತು. ಹಾಗಾಗಿ ಇಂದು ಜಗಳ, ಮತ್ಸರ, ವೈರತ್ವ ಹೆಚ್ಚಿದೆ. 80 ವರ್ಷದ ತಾಯಿ 60 ವರ್ಷದ ಮಗನಿಗೆ ಅಡುಗೆ ಮಾಡಿ ನೀಡುತ್ತಾಳೆ. ಮಗನಿಗೆ 60 ವರ್ಷ ಆದರೂ ಆ ತಾಯಿಗೆ ಚಿಕ್ಕ ಮಗು ಇದ್ದ ಹಾಗೆ. ಊಟ ಬಡಿಸುವಾಗ ಯಾವುದೇ ಆಸೆ ಇಲ್ಲದೆ ಪ್ರೀತಿಯಿಂದ ಬಡಿಸುತ್ತಿದ್ದಾಳೆ. ತನಗೆ ಗೊತ್ತಿರುವ ಅಡುಗೆ ಮಾಡಿ ನೀಡುವಾಗಿನ ಭಾವ ಆಕೆಗೆ ಆನಂದ ಕೊಡುತ್ತದೆ. ಆಕೆಯ ಪ್ರೇಮ ಭರಿತ ಊಟ ಮಗನಿಗೆ ಆನಂದ ತಂದಿದೆ. ಆನಂದ ಕೊಟ್ಟಿದ್ದು ರುಚಿಯಲ್ಲ. ಆಶೆರಹಿತ ಪ್ರೇಮ. ಹಾಗಾಗಿ ಭಾವ ಸುಖ, ದುಃಖ, ಪ್ರೇಮ ಅಥವಾ ದ್ವೇಷ ಅನುಭವಿಸುತ್ತದೆ.
ಈ ಮೂರರ ಸಮನ್ವಯ ಅಂದರೆ ದೇಹ ಬುದ್ಧಿ ಮತ್ತು ಭಾವ ಸಮನ್ವಯದಿಂದ ಮಾಡಿದರೆ ಅದನ್ನು ಕರ್ಮ ಎನ್ನುವರು. ಜೀವನ ಎಂದರೆ ಕಾರ್ಯಕ್ಷಮತೆ ಹೊಂದಿರುವ ದೇಹ, ತೀಕ್ಷ್ಣ ಬುದ್ಧಿ ಮತ್ತು ಮಧುರ ಭಾವಗಳ ಸಮಚ್ಚಯ. ಇದರಲ್ಲಿ ಒಂದು ಕೊರತೆ ಆದರೆ ಅಲ್ಪಾಂಗ ಅಥವಾ ನ್ಯೂನಾಂಗ ಎನ್ನುತ್ತೇವೆ. ದೇಹ ಸಮರ್ಥ ಇದೆ, ಭಾವ ಮಧುರ ಇದೆ, ತಲೆಯಲ್ಲಿ ಜ್ಞಾನವಿಲ್ಲ ಅಂದರೆ ವ್ಯಕ್ತಿತ್ವ ರೂಪಿತವಾಗಿಲ್ಲ ಎಂದು ಅರ್ಥ. ದೇಹ ಸಮರ್ಥ, ತೀಕ್ಷ್ಣ ಬುದ್ಧಿ ಇದೆ, ಭಾವವಿಲ್ಲ ಅಂದಾಗ ಜೀವನ ರುಚಿಸುವುದಿಲ್ಲ. ಹಾಗೆಯೇ ಭಾವ ಮಧುರ, ತೀಕ್ಷ್ಣ ಬುದ್ಧಿ , ದೇಹ ಸಮರ್ಥವಿಲ್ಲ ಅಂದಾಗ ಬದುಕೆ ಇಲ್ಲ. ಹಾಗಾಗಿ ದೇಹ ಕೆಲಸ ಮಾಡುವ ಸಾಧನ, ಬುದ್ಧಿ ವಿಚಾರ ಮಾಡುವ ಸಾಧನ ಮತ್ತು ಭಾವ ಅನುಭವಿಸುವ ಸಾಧನ. ಇದಕ್ಕೆ ಕ್ರಮವಾಗಿ ದೈಹಿಕ ಕರ್ಮ, ಬೌದ್ಧಿಕ ಕರ್ಮ ಮತ್ತು ಭಾವ ಕರ್ಮ ಎನ್ನುತ್ತೇವೆ. ಈ ಮೂರು ಕರ್ಮಗಳು ಸಮನ್ವಯಗೊಂಡು,ಈ ಮೂರು ದುಡಿಯಬೇಕು. ಇದಕ್ಕೆ ಕರ್ಮ ಎನ್ನುತ್ತೇವೆ.
ಯೋಗ: ಯೋಗದಲ್ಲಿ ಮೂರು ಮುಖ್ಯ ಅಂಶಗಳು ನಿಸ್ಕಾಮತ್ವ, ಕುಶಲತೆ ಮತ್ತು ಸಮಾಧಿ.
1. ನಿಸ್ಕಾಮತ್ವ: ಅಂದರೆ ಕೆಲಸದ ಫಲದಲ್ಲಿ ಆಸೆ ಇರಬಾರದು. ಕೆಲಸದಲ್ಲಿ ತನ್ಮಯನಾಗಿ, ಮಗ್ನನಾಗಿರಬೇಕು. ಯಾವಾಗ ತನ್ಮಯರಾಗುತ್ತೇವೆಯೋ ಆಗ ಆ ಕೆಲಸದಲ್ಲಿ ಪ್ರತೀ ಕ್ಷಣ ಕ್ಷಣ ಅನುಭವಿಸುತ್ತೇವೆ. ಆ ಅನುಭವವೇ ಸಂತೋಷ ಕೊಡುತ್ತದೆ. ಇದಕ್ಕೆ ವರ್ತಮಾನದಲ್ಲಿ ಬದುಕುವಿಕೆ ಎನ್ನುತ್ತೇವೆ.
2. ಕುಶಲವೇ: ಯೋಗ ಅಂದರೆ ಕರ್ಮದಲ್ಲಿ ಕುಶಲತೆ. ಕುಶಲತೆ ಎಂದರೆ ಕೌಶಲ್ಯ. ಏನೇ ಮಾಡಲಿ ಅದು ಸ್ವಚ್ಚ ಮತ್ತು ಸುಂದರವಾಗಿರಬೇಕು. ಅದರಿಂದ ಆನಂದ ಆಗಬೇಕು. ಬಟ್ಟೆಯನ್ನು ಹಾಕಿಕೊಳ್ಳಲಿ, ವಸ್ತುಗಳನ್ನೇ ಜೋಡಿಸಲಿ, ಚಿತ್ರವನ್ನೇ ಬರೆಯಲಿ, ಹಾಡನ್ನೇ ಹಾಡಲಿ, ಮೂರ್ತಿಯನ್ನೇ ಕೆತ್ತಲಿ, ಮಾತನ್ನೇ ಹಾಡಲಿ, ವಿಚಾರವನ್ನೇ ಮಾಡಲಿ, ಏನೇ ಮಾಡಿದರು ಆನಂದ ಆಗುವಂತೆ ಮಾಡುವುದೇ ಕೌಶಲ.
ನೋಡುವುದೇ ಇದ್ದರೆ ಸಂತೋಷವಾಗುವಂತೆ ನೋಡಬೇಕು. ಕೇಳುವುದೇ ಇದ್ದರೆ ಸಂತೋಷವಾಗುವಂಥದನ್ನೇ ಕೇಳಬೇಕು. ರುಚಿಸುವುದೇ ಇದ್ದರೆ ಸವಿ ಸವಿಯಾಗುವಂತೆ ರುಚಿಸಬೇಕು. ಇದಕ್ಕೆ ಕುಶಲತೆ ಎನ್ನುತ್ತೇವೆ. ಇದಕ್ಕೆ ಪ್ರಾವೀಣ್ಯತೆ ಬೇಕು. ರೂಡಿಸಬೇಕು. ಏನೇ ಮಾಡಿದರು ಸೌಂದರ್ಯ ವ್ಯಕ್ತವಾಗಬೇಕು.
3. ಸಮಾಧಿ : "ಯೋಗಹ ಸಮಾಧಿಹಿ" ಅಂದರೆ ಯೋಗದ ಇನ್ನೊಂದು ಅರ್ಥ ಸಮಾಧಿ.
ಸಮಾಧಿ ಎಂದರೇನು?. ಸಮಾಧಿ ಎಂದರೆ ಮನಸ್ಸನ್ನು ಅಲುಗಾಡದಂತೆ, ಹೊಯ್ದಾಡದಂತೆ, ಗಟ್ಟಿಯಾಗಿ ಚಲಿಸದಂತೆ, ಇಡುವುದು. ಇಟ್ಟಲ್ಲಿ ಮನಸು ಇದ್ದರೆ, ಆ ಮನಸ್ಸು ಇದ್ದು ಇಲ್ಲದಂತಾಗುತ್ತದೆ. ಇದಕ್ಕೆ ಅಮನ ಎನ್ನುವರು.
ಉದಾಹರಣೆಗೆ;
ನಾನು ಒಂದು ಹೂವನ್ನು ಅನುಭವಿಸುತ್ತೇನೆ ಎಂದಿಟ್ಟುಕೊಳ್ಳಿ, ಇದರಲ್ಲಿ ನಾಲ್ಕು ಹಂತ.
1. ಮೊದಲು ಹೂವಿನ (ಹೊರವಸ್ತು) ಮೇಲೆ ಮನಸ್ಸನ್ನು ಗಟ್ಟಿಯಾಗಿ ಇಟ್ಟು ನೋಡುತ್ತೇನೆ. ಇದು ಹೊರ ಸಮಾಧಿ.
2. ಎರಡನೇ ಹಂತದಲ್ಲಿ ಆ ಹೂವಿನ (ಹೊರವಸ್ತು) ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅದೇ ಆಕಾರ, ಬಣ್ಣ , ಗಾತ್ರ ಇರುತ್ತದೆ. ಅದರಲ್ಲಿ ಗಟ್ಟಿಯಾಗಿ ಮನಸ್ಸನ್ನು ಇಡುತ್ತೇನೆ. ಇದಕ್ಕೆ ಒಳಸಮಾಧಿ ಎನ್ನುತ್ತೇವೆ.
3. ಮೂರನೇ ಹಂತದಲ್ಲಿ ಹೂವಿನ ಮತ್ತು ಮನಸ್ಸಿನ ಚಿತ್ರದ ಕೇವಲ ಸೌಂದರ್ಯದಲ್ಲಿ ಮನಸ್ಸನ್ನು ಗಟ್ಟಿಯಾಗಿ ಇಡುತ್ತೇನೆ. ಇದಕ್ಕೆ ಸೌಂದರ್ಯ ಸಮಾಧಿ ಎನ್ನುತ್ತಾರೆ.
4. ನಾಲ್ಕನೇ ಹಂತದಲ್ಲಿ ಇದರಿಂದ ಸಂತೋಷ ಉಂಟಾಗುತ್ತದೆ. ಆ ಸಂತೋಷದಲ್ಲಿ ಮನಸ್ಸನ್ನು ಗಟ್ಟಿಯಾಗಿ ಇಡುತ್ತೇನೆ ಇದಕ್ಕೆ ಆನಂದ ಸಮಾಧಿ ಎನ್ನುತ್ತಾರೆ.
ಈ ನಾಲ್ಕರಲ್ಲಿ ಒಂದು ಇಲ್ಲ ಅಂದರೆ ಅನುಭವಕ್ಕೆ ಅರ್ಥ ಇಲ್ಲ. ಹೊರಗಿನ ಹೂವು ಶಾಶ್ವತವಲ್ಲ. ಆದರೆ ಮನಸ್ಸಿನಲ್ಲಿ ಮೂಡಿದ ಹೂವು ಶಾಶ್ವತ. ನಾನು ಬೇಕಾದಾಗ ಆ ಹೂವನ್ನು ಕಲ್ಪನೆಯ ಮೂಲಕ ಬಳಸಬಹುದು. ಹೀಗೆ ಕರ್ಮದ 3 ಸಾಧನ ಮತ್ತು ಯೋಗದ ಮೂರು ಅಂಶಗಳು ಕೂಡಿ ಮಾಡುವುದೇ ಕರ್ಮಯೋಗ. ಇದರಿಂದ ಬದುಕು ಸವಿ ಸವಿ, ಸಂತೋಷ ಮತ್ತು ಶ್ರೀಮಂತ ಅಲ್ಲವೇ. ಮಕ್ಕಳೆ
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************