-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 174

ಸ್ಫೂರ್ತಿಯ ಮಾತುಗಳು : ಸಂಚಿಕೆ - 174

ಸ್ಫೂರ್ತಿಯ ಮಾತುಗಳು : ಸಂಚಿಕೆ - 174
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
           
“ಶ್ರೀಮದ್ಭಗವದ್ಗೀತೆ”ಯ ನಾಲ್ಕನೇ ಅಧ್ಯಾಯದ ನಲುವತ್ತನೇ ಶ್ಲೋಕವು ಹೀಗಿದೆ...

“ಅಜ್ಞಶ್ಚಾಶ್ರದ್ದಧಾನಶ್ಚ 
ಸಂಶಯಾತ್ಮಾ ವಿನಶ್ಯತಿ|
ನಾಯಂ ಲೋಕೋಸ್ತಿ ನ ಪರಃ, 
ನ ಸುಖಂ ಸಂಶಯಾತ್ಮನಃ ||”

“ಸಂಶಯವು ವಿನಾಶಕ್ಕೆ ಮೂಲ” ಎಂಬ ಆರ್ಯೋಕ್ತಿಯಿದೆ. ಶ್ರೀಮದ್ಭಗವದ್ಗೀತೆಯ ಮೇಲಿನ ಶ್ಲೋಕವೂ ಇದನ್ನೇ ಬಲವಾಗಿ ಪುಷ್ಟೀಕರಿಸುತ್ತದೆ. ಶ್ಲೋಕದಲ್ಲಿ ಉದ್ಯುಕ್ತವಾಗಿರುವಂತೆ ಅಜ್ಞಾನಿ ಮತ್ತು ಶ್ರದ್ಧೆಯಿಲ್ಲದವನು ಹಾಗೂ ಸಂಶಯಿಯಾದವನು ನಾಶಹೊಂದುತ್ತಾನೆ. ಅಂತಹವರು ಲೌಕಿಕವಾಗಿ, ಪಾರಮಾರ್ಥಿಕವಾಗಿ ಸುಖಿಗಳಾಗಿರುವುದಿಲ್ಲ. ಮನುಷ್ಯನು ಇಹಲೋಕ ಮತ್ತು ಪರಲೋಕದ ಬಗ್ಗೆ ನಂಬಿಕೆಯುಳ್ಲವನು. ಇಹ ಮತ್ತು ಪರ ಎರಡೂ ಲೋಕಗಳಲ್ಲಿ ಸುಖ ಪಡುವ ಕಾತರತೆಯುಳ್ಳವನು ಅವನ ಕಾತರತೆ ಫಲಪ್ರದವಾಗಲು ನಿಸ್ಸಂಶಯಿಯಾಗಬೇಕಾದುದು ಅಗತ್ಯ ಎಂದು ಈ ಶ್ಲೋಕವು ವ್ಯಕ್ತಗೊಳಿಸುತ್ತದೆ.
ನಮ್ಮ ದೇಶವಾಗಲೀ, ವಿದೇಶಗಳೇ ಆಗಲಿ ವಿಶ್ವಾಸದ ಮೇಲೆ ನಿಂತಿದೆ. ಗಾಳಿ ಬೀಸುತ್ತಿರುತ್ತದೆ, ನೀರು ಹರಿಯುತ್ತಿರುತ್ತದೆ ಸೂರ್ಯನ ಬಿಸಿಲು ಮತ್ತು ಬೆಳಕು ಸದಾ ಲಭಿಸುತ್ತಿರುತ್ತದೆ. ಹಗಲು ರಾತ್ರಿಗಳು ಪ್ರತಿ ದಿನವೂ ಮರುಕಳಿಸುತ್ತಿರುತ್ತವೆ. ಈ ಭೂಮಿಯು ನಮಗೆ ಬೇಕಾದ ಆಹಾರವನ್ನು ನಿರಂತರವಾಗಿ ನವ ನವೀನವಾಗಿ ಒದಗಿಸುತ್ತಿರುತ್ತದೆ. ಋತುಮಾನಗಳು ಆಯಾ ಕಾಲಕ್ಕೆ ಘಟಿಸುತ್ತಲೇ ಇರುತ್ತವೆ. ಇವೆಲ್ಲವನ್ನೂ ನಿಯಂತ್ರಿಸುವ ಮಹಾ ಶಕ್ತಿಯೊಂದಿದೆ, ಆ ಮಹಾ ಶಕ್ತಿಯೇ ದೇವರು ಎಂದು ವಿಶ್ವಾಸದಿಂದ ಕೈಮುಗಿಯುತ್ತೇವೆ. ನಮಗೆ ದೇವರ ಬಗ್ಗೆ ದೇವರ ಕಾರ್ಯದ ಬಗ್ಗೆ ನಂಬುಗೆ ಮತ್ತು ಆ ದೇವರ ಬಗ್ಗೆ ಶ್ರದ್ಧೆ ಇದ್ದೇ ಇದೆ; ಇರಲೇ ಬೇಕು.

ನಾವು ಸಸ್ಯವೊಂದನ್ನು ನೆಡುವಾಗ ಹಲವು ಆಶಯಗಳನ್ನು ಹೊಂದಿರುತ್ತೇವೆ. ಈ ಗಿಡಕ್ಕೆ ಜೀವ ಸೇರಬೇಕು, ಇದು ಹುಲುಸಾಗಿ ಬೆಳೆಯಬೇಕು. ನಮ್ಮ ಕಣ್ಮನಗಳನ್ನು ಸಂತಸಗೊಳಿಸಬೇಕು. ಗಿಡ ಮತ್ತು ಅದರ ಬೆಳವಣಿಗೆಯನ್ನು ಕಣ್ತುಂಬುತ್ತಿದ್ದಂತೆಯೇ ಪ್ರತಿಯೊಬ್ಬರ ಮನಸ್ಸೂ ಮುದದಿಂದ ಅಭಿಮಾನ ಪಡುವಂತಾಗಬೇಕು, ಈ ಗಿಡ ಬೆಳೆದು ಹೂ ಹಣ್ಣು ಕಾಯಿಗಳನ್ನು ಕೊಡಬೇಕು, ನಮ್ಮ ಮತ್ತು ಇತರರ ಹಸಿವನ್ನು ತಣಿಸಬೇಕು. ನೆಡಲಾದ ಗಿಡಕ್ಕೆ ಯಾವುದೇ ರೋಗ ಬರಬಾರದು. ಪ್ರಾಣಿಗಳಿಂದ ಹಾನಿಯಾಗಬಾರದು. ಮೂಡಿದ ಫಲಗಳು ಹುಳ ಹುಪ್ಪಡಿಗಳಿಗೆ ಬಲಿಯಾಗಬಾರದು. ಈ ಗಿಡವು ಯಾರದೇ ಸಾವು ನೋವುಗಳಿಗೆ ಕಾರಣವಾಗದೆ ಎಲ್ಲರಿಗೂ ನಲಿವನ್ನುಂಟು ಮಾಡಬೇಕು. ಅದಕ್ಕಾಗಿ ಈ ಗಿಡವನ್ನು ಕಾಲ ಕಾಲಕ್ಕೆ ನೀರು ಗೊಬ್ಬರ ಹಾಕಿ ಪ್ರೀತಿಯಿಂದ ಸಲಹಬೇಕು; ಇವೆಲ್ಲವೂ ನಮ್ಮ ಆಶಯಗಳು. ಈ ಆಶಯಗಳೆಲ್ಲವೂ ಈಡೇರುತ್ತವೆಯೇ ? ಹೌದು, ಈಡೇರುತ್ತವೆ. ನಮ್ಮ ಆಶಯಗಳು ನೆರವೇರುವ ಬಗ್ಗೆ ವಿಶ್ವಾಸ ಮತ್ತು ಭಗವಂತನ ಮೇಲಿನ ಭಕ್ತಿ ಎಲ್ಲವೂ ನಮ್ಮ ಆಶಯವನ್ನು ಈಡೇರಿಸುತ್ತವೆ. ಗಿಡ ಬದುಕುತ್ತದೆಯೋ ಎಂಬ ಸಂಶಯದಿಂದಲೇ ನಮ್ಮ ಕರ್ಮವನ್ನು ಆರಂಭಿಸಿದರೆ, ಯಾವುದೇ ಆಶಯಗಳಾಗಲೀ, ದೇವರ ಬಗ್ಗೆ ಭಕ್ತಿಯಾಗಲೀ ಇಲ್ಲದೇ ಹೋದರೆ ಗಿಡವೂ ಬದುಕದು, ಮಾಡಿದುದೆಲ್ಲವೂ ವ್ಯರ್ಥ ಶ್ರಮವಷ್ಟೇ. 
ಗಿಡ ನಮ್ಮ ಸೃಷ್ಟಿಯಲ್ಲ, ನಾವು ಬೀಜ ಹಾಕಿ ಗಿಡ ಮಾಡಿದರೂ ಅದು ನಮ್ಮ ಸೃಷ್ಟಿಯಾಗದು. ಯಾಕೆಂದರೆ ಬೀಜ ಭಗವಂತನ ಸೃಷ್ಟಿ ಅಲ್ಲವೇ? ಗಿಡ ನೆಟ್ಟಾದ ಮೇಲೆ ಅದನ್ನು ಬದುಕಿಸಲು ಯಾವುದೇ ಪ್ರಾಣ ಶಕ್ತಿಯನ್ನು ನಮಗೆ ನೀಡಲಾಗದು. ಗಿಡಕ್ಕೆ ಬೇಕಾದ ಮಣ್ಣು, ಗಾಳಿ, ನೀರು ಮತ್ತು ಬೆಳಕನ್ನೂ ನಮಗೆ ಸೃಷ್ಟಿಸಲಾಗದು. ಭಗವಂತನ ಪ್ರೇರಣೆಯಂತೆ ಪ್ರಕೃತಿಯೇ ಈ ಕೆಲಸವನ್ನು ಮಾಡುತ್ತದೆ ಎಂಬ ವಿಶ್ವಾಸವಿರದೇ ಇದ್ದರೆ ಹೇಗೆ? ನಾವು ಕಾರ್ಯಕರ್ತರು ಅಥವಾ ಕರ್ಮಿಗಳು ಅಷ್ಟೇ. ಫಲ ಭಗವಂತನ ಕೃಪೆಯೆಂಬುದನ್ನು ಮರೆಯಬಾರದು.

ವೈದ್ಯರು ರೋಗಿಯ ರೋಗವನ್ನು ಪರೀಕ್ಷೆ ಮಾಡಿ ಔಷಧವನ್ನು ಕೊಡುತ್ತಾರೆ. ರೋಗಿಯಲ್ಲಿ ತಾನು ಕಂಡುಕೊಂಡ ದೈಹಿಕ ದೋಷದ ಮೇಲೆ ವೈದ್ಯರಿಗೆ ವಿಶ್ವಾಸವಿರಬೇಕು, ರೋಗ ಪತ್ತೆ ಮಾಡುವ ತನ್ನ ಕ್ಷಮತೆಯ ಮೇಲೆಯೇ ವೈದ್ಯರಿಗೆ ಸಂಶಯವಿದ್ದರೆ ಮುಂದಿನ ಎಲ್ಲ ಪ್ರಕ್ರಿಯೆಗಳೂ ಭಗ್ನಗೊಳ್ಳದಿರುತ್ತವೆಯೇ? ವೈದ್ಯನು ರೋಗ ಪತ್ತೆ ಹಚ್ಚುವ ತನ್ನ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿರುವಂತೆಯೇ ತಾನು ನೀಡುವ ಚಿಕಿತ್ಸೆ ಮತ್ತು ಔಷಧಗಳ ಬಗ್ಗೆಯೂ ಸಂಶಯಿತನಾಗಿರಬಾರದು. ರೋಗಿಗೂ ವೈದ್ಯನ ಬಗ್ಗೆ ಆತನ ರೋಗ ಚಿಕಿತ್ಸಕ ಶಕ್ತಿಯ ಮೇಲೆ. ಆತನು ಕೊಡುವ ಔಷಧದ ಮೇಲೆ ವಿಶ್ವಾಸವಿರಬೇಕು, ಗುಣವಾಗುತ್ತದೆಯೋ ಅಲ್ಲ ಉಲ್ಬಣವಾಗುತ್ತದೆಯೋ ಎಂಬ ಸಂಶಯ ರೋಗಿಯ ಮನಸ್ಸಿನಲ್ಲಿ ಹುಟ್ಟಿದರೆ ಚಿಕಿತ್ಸೆಯ ಶ್ರಮದ ಗುಣಾತ್ಮಕ ಫಲಕ್ಕೆ ಹಿನ್ನಡೆಯಾಗುತ್ತದೆ. ಹಾಗೆಯೇ ಕಾಲಕ್ಕೆ ಸರಿಯಾಗಿ ಔಷಧೋಪಚಾರಗಳನ್ನು ಪಡೆಯುವಲ್ಲಿ ಶ್ರದ್ಧೆಯೂ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

ದನವು ಕೊಡುವ ಹಾಲು, ವಿತರಕನು ಪೂರೈಸುವ ಆಹಾರ ಸಾಮಗ್ರಿ, ಹೋಟೆಲಿನಲ್ಲಿ ವಿತರಣೆಯಾಗುವ ಆಹಾರ, ಬಾಯಾರಿಕೆಗೆ ಕುಡಿಯುವ ನೀರು ಅಥವಾ ಯಾವುದೇ ಪಾನೀಯ, ಬಟ್ಟೆ ಹೊಲಿಯುವ ದರ್ಜಿ, ನಮಗೆ ಸಹಕರಿಸುವ ಕೂಲಿ, ಮಾಲಿ.. ಹೀಗೆ ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ನಮಗೆ ಸಂಶಯವಿದ್ದರೆ ಅದು ನಮ್ಮನ್ನು ಉದ್ಧರಿಸದೆ ಕ್ಷಯಗೊಳಿಸುತ್ತದೆ. ಸಂಶಯಾತ್ಮಾ ವಿನಶ್ಯತಿ ಎಂಬ ಮಾತು ಎಲ್ಲಾ ಕಡೆಯೂ ಎಲ್ಲಾ ಸಂದರ್ಭಗಳಲ್ಲೂ ಮನದಲ್ಲಿ ಅನುರಣಿಸುತ್ತಿರಬೇಕು. “ಮನದೊಳಗಣ ಸಂದೇಹವೇ ಬದುಕಿನ ಮಹಾ ನಂಜು ಅಥವಾ ಪ್ರಾಣಾಂತಿಕ ವಿಷ” ವೆಂದರಿತು ಸಂಶಯವನ್ನು ಕಳಚಿ ಪರಸ್ಪರ ವಿಶ್ವಾಸದಿಂದಿರೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 




Ads on article

Advertise in articles 1

advertising articles 2

Advertise under the article