-->
ಜೀವನ ಸಂಭ್ರಮ : ಸಂಚಿಕೆ - 198

ಜೀವನ ಸಂಭ್ರಮ : ಸಂಚಿಕೆ - 198

ಜೀವನ ಸಂಭ್ರಮ : ಸಂಚಿಕೆ - 198
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                     

ಮಕ್ಕಳೇ, ಹಿಂದಿನ ಲೇಖನದಲ್ಲಿ ಬದುಕು ಸುಂದರದ ಬಗ್ಗೆ ತಿಳಿದುಕೊಂಡಿದ್ದೇವೆ. ಬದುಕನ್ನು ಕರ್ಮದಿಂದ ಕಟ್ಟಬೇಕು. ಹಾಗಾದರೆ ಕರ್ಮದ ಸ್ವರೂಪ ಏನು ಅನ್ನೋದನ್ನ ತಿಳಿದುಕೊಳ್ಳೋಣ. 

1. ಕರ್ಮ ಸುಖ - ದುಃಖಕ್ಕೆ ಕಾರಣವಾಗುತ್ತದೆ: ಕರ್ಮವೂ ಸುಖವನ್ನು ಕೊಡುತ್ತದೆ. ಕರ್ಮವು ದುಃಖವನ್ನೂ ಕೊಡುತ್ತದೆ. ಆದ್ದರಿಂದ ತಿಳಿದುಕೊಂಡು ಕರ್ಮವನ್ನು ಮಾಡಬೇಕು. ತಿಳಿದರೆ ಎಂತಹ ಕರ್ಮ ಮಾಡಬೇಕೆಂದು ಗೊತ್ತಾಗುತ್ತದೆ. ಒಂದೇ ಕರ್ಮ ಒಬ್ಬರಿಗೆ ಸುಖ ಕೊಡುತ್ತದೆ, ಮತ್ತೊಬ್ಬರಿಗೆ ದುಃಖ ಕೊಡುತ್ತದೆ. ಉದಾಹರಣೆಗೆ, ಸಂತ ತುಕಾರಾಂ ವಿಠಲ ಎಂದೊಡನೆ ಆ ಪದ ತುಕಾರಾಮನಿಗೆ ಸುಖ ನೀಡುತ್ತಿತ್ತು. ಆದರೆ ಆ ಪದ ತುಕಾರಾಮನ ಪತ್ನಿಗೆ ದುಃಖ ಉಂಟು ಮಾಡುತ್ತಿತ್ತು. ಏಕೆಂದರೆ ತುಕಾರಾಂ ಈ ದಿನ ಕೆಲಸ ಮಾಡುವುದಿಲ್ಲ ಅಂತ ಪತ್ನಿಗೆ ಗೊತ್ತಾಗುತ್ತಿತ್ತು. ಒಂದೇ ಕರ್ಮ ಹೆಂಡತಿಗೆ ದುಃಖ ನೀಡಿದ್ದು, ಗಂಡನಿಗೆ ಸುಖ ಕೊಟ್ಟಿತ್ತು. ಕೆಲಸ ಮಾಡದಿದ್ದರೆ ಊಟಕ್ಕೆ ಏನು ಮಾಡುವುದು?. ಊಟ ತಿನ್ನದೇ ಇದ್ದರೆ, ಸುಖ ಎಲ್ಲಿ ?. ಅಂತ ದುಃಖ ಉಂಟಾಗಿತ್ತು. ಕರ್ಮ ಕೆಟ್ಟದ್ದಲ್ಲ. ಅದನ್ನು ತೆಗೆದುಕೊಳ್ಳುವ ರೀತಿ ಭಿನ್ನ. ಎಂತಹ ಕರ್ಮ ಇದ್ದರೂ ಸುಖ-ದುಃಖ ಆಗುತ್ತದೆ.

ಶಂಕರಾಚಾರ್ಯ ಎಂಟು ವರ್ಷದ ಬಾಲಕ. ನಾನು ಜ್ಞಾನಗಳಿಸಲು ಹೋಗಬೇಕು, ಅನುಮತಿ ಕೊಡು, ಎಂದು ತಾಯಿಯನ್ನು ಕೇಳುತ್ತಾನೆ. ಒಬ್ಬನೇ ಮಗ, ಬುದ್ದಿವಂತ, ತಾಯಿ ಅನುಮತಿ ನೀಡಿದಳು. ಆ ಅನುಮತಿ ಶಂಕರಾಚಾರ್ಯರಿಗೆ ಸುಖ ಕೊಟ್ಟಿತ್ತು. ತಾಯಿಗೆ ದುಃಖ ಉಂಟು ಮಾಡಿತ್ತು. ಒಂದು ಕರ್ಮ ಒಬ್ಬರಿಗೆ ಲಾಭ ಮತ್ತೊಬ್ಬರಿಗೆ ನಷ್ಟ. ನಮ್ಮ ಮನೆ ತುಂಬಿದೆ ಅಂದರೆ ಬೇರೆಯವರ ಮನೆ ಸ್ವಲ್ಪ ಸ್ವಲ್ಪ ಖಾಲಿಯಾಗಿದೆ ಎಂದೇ ಅರ್ಥ. ಈ ಜಗತ್ತಿನಲ್ಲಿ ಏರು ಇಳಿವು ಇರುತ್ತದೆ. ಒಂದು ಗುಡ್ಡ ಜರಿದರೆ ಅದು ತಗ್ಗನ್ನು ತುಂಬಿದೆ ಅಂತ ಅಲ್ಲವೇ. ಒಂದು ಕಡೆ ತಗ್ಗು ಇದ್ದರೆ, ಇನ್ನೊಂದು ಕಡೆ ಗುಡ್ಡ ಇದೆ ಅಂತ ಅಲ್ಲವೇ. ಅವು ಪರಸ್ಪರ ಹೊಂದಾಣಿಕೆ ಇರುತ್ತದೆ. ಯೋಚನೆ ಮಾಡಿ, ಎಂತಹ ಕರ್ಮ ಮಾಡಬೇಕು?. ಅಂತ. ಯಾವುದೊ ಒಂದು ಕರ್ಮ ಸುಖ ನೀಡುತ್ತದೆ ಎಂದು ನಿರೀಕ್ಷಿಸುತ್ತೇವೆ. ಆದರೆ ಅದು ಸುಖನೀಡುವುದಿಲ್ಲ. ಉದಾಹರಣೆಗೆ : ಒಕ್ಕಲುತನ, ಬಿತ್ತನೆ ಮಾಡಿದಾಗ ಇಷ್ಟು ಪಸಲು ದೊರಕುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ಪಸಲು, ಮಣ್ಣಿನ ಫಲವತ್ತತೆ, ಬಿಸಿಲು, ನೀರು, ಹವಾಮಾನ, ಬೀಜದ ಗುಣಮಟ್ಟ, ಮಾರುಕಟ್ಟೆ ಇವುಗಳನ್ನು ಅವಲಂಬಿಸಿರುತ್ತದೆ. ಎಲ್ಲಾ ಅನುಕೂಲವಾಗಿದ್ದರೆ ಹೆಚ್ಚು ಬೆಲೆ ಬರುತ್ತದೆ. ಅವುಗಳಲ್ಲಿ ಯಾವುದಾದರೊಂದು ವ್ಯತ್ಯಾಸವಾದರೆ ಬೆಲೆ ಕುಸಿತವಾಗುತ್ತದೆ. ಆದ್ದರಿಂದ ಯಾವಾಗಲೂ ಸಂತೋಷವನ್ನು ನಿರೀಕ್ಷೆ ಮಾಡುವುದಲ್ಲ. ಚೆನ್ನಾಗಿ ಕೆಲಸ ಮಾಡುವುದು. ಹೆಚ್ಚು ಕಡಿಮೆ ಆದರೆ ತಡೆದುಕೊಳ್ಳುವುದು.

2. ಬಾಹ್ಯದಲ್ಲಿ ಕಾರ್ಯ, ಆಂತರ್ಯದಲ್ಲಿ ಸಂಸ್ಕಾರ ಉಂಟಾಗುತ್ತದೆ : ಉದಾಹರಣೆಗೆ ಒಬ್ಬ ಇಸ್ಪೀಟ್ ಆಟ ಆಡಿ ಸೋತ ಎಂದು ಭಾವಿಸಿ. ಸೋತ ಕೂಡಲೇ ಸಂಪತ್ತು ಕಳೆದುಕೊಂಡ. ಹೊರಗೆ ಹಣ ಕಳೆದುಕೊಂಡ. ಒಳಗೆ ತಾಪ ಮಾಡಿಕೊಂಡ. ಇದು ಒಳಗೆ ಸಂಸ್ಕಾರ ಉಂಟಾಯಿತು. ಇಸ್ಪೀಟ್ ಆಡಿದ್ದರ ಸಂಸ್ಕಾರ ಮನಸ್ಸಿನ ಒಳಗೆ ಉಂಟಾಯಿತು. ಮಕ್ಕಳು ನಕ್ಕರೆ ಮನೆಗೆ ಬೆಳಕು ಬೀಳುತ್ತದೆ. ಮನಸ್ಸಿನಲ್ಲಿ ಸಂತೋಷ ಉಂಟಾಗುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಸಂಸ್ಕಾರ, ಹೊರಗೆ ಒಂದು ಕಾರ್ಯ, ಎರಡು ಸಮನಾಗಿ ಹೋಗುತ್ತದೆ. ಆದ್ದರಿಂದ ಕರ್ಮ ಮಾಡುವಾಗ ಜಾಗರೂಕತೆ ಬೇಕು. ಏಕೆಂದರೆ ಏನೇ ಮಾಡಿದರೂ ಸಂಸ್ಕಾರ ರೂಪದಲ್ಲಿ ಮನಸ್ಸಿನಲ್ಲಿ ಉಳಿಯುತ್ತದೆ. ಯಾರಿಗಾದರೂ ಬೈದರೆ ಹೊರಗೆ ಜಗಳ ಹಚ್ಚುತ್ತದೆ. ಒಳಗೆ ತಾಪ ಆಗುತ್ತದೆ. ಬೈಗುಳ ಸಂಸ್ಕಾರವಾಗಿ ಉಳಿಯುತ್ತದೆ. ಪ್ರಸಂಗ ಬಂದಾಗ ಆ ಸಂಸ್ಕಾರ ಕೆಲಸ ಶುರುಮಾಡುತ್ತದೆ. ಒಳಗೆ ಉಳಿದ ಸಂಸ್ಕಾರ ಬೀಜ ಇದ್ದಂತೆ. ಹುದುಗಿಕೊಂಡು ಇರುತ್ತದೆ. ಪ್ರಸಂಗ ಬಂದರೆ ಎದ್ದುಬಿಡುತ್ತದೆ. ಒಳ್ಳೆಯ ಶಬ್ದ ಬಳಸಿದರೆ ಅದು ಸಂಸ್ಕಾರವಾಗಿ ಉಳಿಯುವುದರಿಂದ ಒಳ್ಳೆಯದನ್ನೇ ಮಾಡಬೇಕು. ಪ್ರಸಂಗ ಬಂದಾಗ ಅದೇ ಹೊರಹೊಮ್ಮುತ್ತದೆ. ಪಾಂಡವರಿಗೆ ಮತ್ತು ಕೌರವರಿಗೆ ಪ್ರತ್ಯೇಕ ರಾಜ್ಯ ಇತ್ತು. ಇಬ್ಬರೂ ಪಗಡೆ ಆಡಿದರು. ಪಾಂಡವರು ಸೋತರು. ರಾಜ್ಯ ಎಲ್ಲ ಅಡವಿಟ್ಟಿದ್ದರು. ಕೊನೆಗೆ ದ್ರೌಪದಿಯನ್ನೇ ಅಡವಿಟ್ಟರು. ಆಗ ದುಶ್ಯಾಸನ ದ್ರೌಪತಿಯ ಜಡೆ ಬಿಚ್ಚಿದನು. ಬಿಚ್ಚಿದ ಜಡೆ ಮತ್ತೆ ಕಟ್ಟಲಿಲ್ಲ. ಅದು ಏನು ಮನಸ್ಸಿನಲ್ಲಿ ಸಂಸ್ಕಾರವಾಗಿ ಹೊಕ್ಕಿತ್ತೋ, ಅದು ಮುಂದೆ 15 , 20 ವರ್ಷದಲ್ಲಿ ಕೌರವರ ನಾಶಕ್ಕೆ ಕಾರಣವಾಗಿತ್ತು. ನೂರಾರು ವರ್ಷದಿಂದ ಕಟ್ಟಿದ್ದ ಕೌರವರ ಸಾಮ್ರಾಜ್ಯ ಉರುಳಿ ಬಿದ್ದಿತ್ತು. ಎಂತಹ ಸಂಸ್ಕಾರ ಹಾಕಿಕೊಳ್ಳಬೇಕು ಅಂತ ವಿಚಾರ ಮಾಡಬೇಕು. ಯಾವುದಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟನ್ನು ಮನಸ್ಸಿನೊಳಗೆ ಬಿಡಬೇಕು. ಎಲ್ಲಾ ಬಿಡಬಾರದು. ಬಿಟ್ಟಿದ್ದು ಸಂಸ್ಕಾರವಾಗಿ ಮುಂದೆ ನಮಗೆ ತೊಂದರೆಯಾಗುತ್ತದೆ. ಸಾಧನೆ ಏನಂದರೆ ನೋಡಿದ್ದಾಗಲಿ ,ಕೇಳಿದ್ದಾಗಲಿ, ಮೂಸಿದ್ದಾಗಲಿ, ಮುಟ್ಟಿದ್ದಾಗಲಿ, ಮಾತಾಗಲಿ ಯಾವುದು ಒಳಗಿದ್ದರೆ ನಮಗೆ ಶೋಭೆ ಬರುತ್ತದೆಯೊ ಅದನ್ನು ಮಾತ್ರ ಬಿಡಬೇಕು. ಎಷ್ಟೋ ಅಷ್ಟು ಬಿಡಬೇಕು. ಈಗ ಹೂ ಗಿಡಕ್ಕೆ ದಿನ ನೀರು ಹಾಕುತ್ತಿದ್ದರೆ, ಸುವಾಸನೆ ಮನಸ್ಸಿನಲ್ಲಿ ಸಂಸ್ಕಾರವಾಗಿ ಉಳಿಯುತ್ತದೆ.

3. ಆಸಕ್ತಿ ಹೆಚ್ಚಿದಂತೆ ಸಂಸ್ಕಾರ ಆಳವಾಗಿ ಬೇರು ಬಿಡುತ್ತದೆ: ಉದಾಹರಣೆಗೆ, ಜಗಳ ಮಾಡುವುದೇ ಆಸಕ್ತಿ ಇದ್ದರೆ, ಅದೇ ಸಂಸ್ಕಾರ ಬಲಿಷ್ಠವಾಗಿರುತ್ತದೆ. ಆಸಕ್ತಿ ಹೆಚ್ಚಿದಂತೆ ಸಂಸ್ಕಾರ ಬಲಿಷ್ಠವಾಗುತ್ತದೆ. ಆಸಕ್ತಿಗೆ ಸಂಸ್ಕಾರಕ್ಕೆ ಸಂಬಂಧವಿದೆ. ಆಸಕ್ತಿ ಕಡಿಮೆಯಾಯಿತು, ಸಂಸ್ಕಾರ ಕಡಿಮೆಯಾಗುತ್ತದೆ. ಸಂಸ್ಕಾರ ಕಡಿಮೆ ಮಾಡಬೇಕಾದರೆ, ಆಸಕ್ತಿ ಕಡಿಮೆ ಮಾಡಬೇಕು. 20 ವರ್ಷ ಕಳ್ಳತನ ಮಾಡಿದ್ದಾನೆ ಎಂದಿಟ್ಟುಕೊಳ್ಳಿ. ಅದು ಸಂಸ್ಕಾರವಾಗಿ ಆಳವಾಗಿ ಬೇರು ಬಿಟ್ಟಿರುತ್ತದೆ. ಕಳ್ಳತನದ ಆಸಕ್ತಿ ಕಡಿಮೆ ಮಾಡಿದರೆ. ಕಳ್ಳತನದ ಸಂಸ್ಕಾರ ಕಡಿಮೆಯಾಗುತ್ತದೆ. ಕೆಲವರು ಆಸ್ತಿಯನ್ನು ಮಕ್ಕಳಿಗೆ ವಿಲ್ ಮಾಡಿರುತ್ತಾರೆ. ವಿಲ್ ಮಾಡಿದ ನಂತರ ಆ ಆಸ್ತಿಯ ಬಗ್ಗೆ ಒತ್ತಡ ತಲೆಯಿಂದ ಕಡಿಮೆಯಾಗುತ್ತದೆ. ಆ ಆಸ್ತಿ ಆತ ಸತ್ತ ಮೇಲೆ ಮಕ್ಕಳಿಗೆ ಹಂಚಿಕೆಯಾಗುತ್ತದೆ. ಈಗ ಏನು ಹಂಚಿಕೆಯಾಗಿಲ್ಲ. ಆದರೆ ಆ ವಿಲ್ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.

3. ಸಂಸ್ಕಾರವು ಕಾಮನೆಗೆ ಕಾರಣವಾಗುತ್ತದೆ: ಸಂಸ್ಕಾರ ಎಂಬುವುದು ತಿಗಣೆಯಂತೆ ಅವಿತುಕೊಂಡಿರುತ್ತದೆ. ಕತ್ತಲೆಯಾಗಿ ಮಲಗಿದರೆ ಸಾಕು ಕಚ್ಚುತ್ತದೆ. ಅದೇ ರೀತಿ ಸಂಸ್ಕಾರ ಮುರಿದ ಮುಳ್ಳಿನಂತೆ. ಹೆಜ್ಜೆ ಇಟ್ಟಾಗ ನೋಯುತ್ತದೆ. ಇಲ್ಲದಿದ್ದರೆ ಯಾವ ನೋವು ಇಲ್ಲ. ಸಂಸ್ಕಾರವು ಪ್ರಸಂಗ ಬಂದಾಗ ಆಸೆ, ಬಯಕೆಯನ್ನು ಉಂಟುಮಾಡುತ್ತದೆ. ಸಂಸ್ಕಾರ ಇರುವುದರಿಂದ ಬೇಕು ಬೇಕು ಅನಿಸುತ್ತದೆ.

4. ದುಃಖಕ್ಕೆ ಕಾರಣ ಕಾಮನೆ: ಅತೀ ನಿರೀಕ್ಷೆ ಮಾಡಿದರೆ ದುಃಖಕ್ಕೆ ಕಾರಣವಾಗುತ್ತದೆ. ಕೆಲವರು ಹೀಗೆ ಆಗಬೇಕು ಅಂತ ಅತೀ ನಿರೀಕ್ಷೆ ಇಟ್ಟಿರುತ್ತಾರೆ. ಒಮ್ಮೊಮ್ಮೆ ಆ ನಿರೀಕ್ಷೆ ದಕ್ಕುವುದಿಲ್ಲ. ಅದು ದುಃಖಕ್ಕೆ ಕಾರಣವಾಗುತ್ತದೆ. ನಿರೀಕ್ಷೆ ಅತಿಯಾದ ಆಸೆ, ಲೋಭ ಬಹಳ ಆಯಿತು ಅಂದರೆ ದುಃಖ ಆಗುತ್ತದೆ. ಕಾರಣ ಕಾಮನೆ. ಕಾಮನೆ ಅಂದರೆ ಅತೀ ವಿಷಯದ ಅಭಿಲಾಷೆ. ಅತೀ ಬಯಕೆ. ಅತೀ ಆಸೆ. ದುಃಖಕ್ಕೆ ಕಾರಣ. ಕಾಮನೆ ಅನ್ನುವುದು ಪಾರ್ಥೇನಿಯಂ ಗಿಡದಂತೆ. ಆಸಕ್ತಿ ಮತ್ತು ಅತೀ ಬಯಕೆ ದುಃಖಕ್ಕೆ ಕಾರಣ. ಯಾವುದೇ ಇರಲಿ ಅತೀ ಆಗಬಾರದು. ಎಷ್ಟೇ ಒಳ್ಳೆಯದಿರಲಿ ಅತಿ ಆಗಬಾರದು. ಬಯಕೆ ಒಂದು ಮಟ್ಟಕ್ಕೆ ಹೋಗಿ ಕಡಿಮೆಯಾಗಬೇಕು. ಅತೀ ಆಯ್ತು ಅಂದರೆ ಕೆಡಲು ಶುರು ಮಾಡುತ್ತದೆ. ದೇಹ, ಮನಸ್ಸು, ಬುದ್ಧಿ, ಮತ್ತು ಮಾತು ಬಳಕೆ ಯಾವುದೇ ಇರಲಿ ಮಿತಿ ಇರಲಿ. ಆಸಕ್ತಿ ಅತಿ ಆಯ್ತು, ದುಃಖ ಶುರುವಾಗುತ್ತದೆ. ಆಸಕ್ತಿ ಕಡಿಮೆಯಾಯಿತು, ದುಃಖ ಕಡಿಮೆಯಾಗುತ್ತದೆ.

ಬಹಳಷ್ಟು ಯುದ್ಧಕ್ಕೆ ಅತೀ ಆಸಕ್ತಿ ಕಾರಣ. ಆಸಕ್ತಿ ಹೆಚ್ಚಿದಷ್ಟು ದುಃಖದ ತೀವ್ರತೆ ಹೆಚ್ಚುತ್ತದೆ. ಆಸಕ್ತಿ ಹೆಚ್ಚಾದಂತೆ ಸ್ವಾತಂತ್ರ್ಯ ಮರೆಯಾಗುತ್ತದೆ. ಹುಲಿ ಬೋನಿಗೆ ಬೀಳುತ್ತದೆ. ಬೋನಿಗೆ ಬಿದ್ದ ಮೇಲೆ ಸ್ವಾತಂತ್ರ್ಯ ಹೋಯಿತು. ಏಕೆ?. ಹುಲಿಗೆ ಬೋನಿನಲ್ಲಿ ಇಟ್ಟ ಬಲಿ ಮೇಲೆ ಅಷ್ಟು ಆಸಕ್ತಿ ಅದಕ್ಕೆ. ಯಾವಾಗ ಸ್ವಾತಂತ್ರ್ಯ ಹೋಯ್ತು ಸುಖವು ಹೋಗುತ್ತದೆ. ಎಷ್ಟೋ ಅಷ್ಟು ಇದ್ದರೆ ಒಳ್ಳೆಯದು. ಆಸಕ್ತಿ ಕಡಿಮೆಯಾದಂತೆ ಸ್ವಾತಂತ್ರ್ಯ ಹೆಚ್ಚಾಗುತ್ತದೆ. ಇದನ್ನೇ ಮುಕ್ತಿ ಎನ್ನುವರು. ಸುಖದ ಸೂತ್ರ ಅಂದರೆ ಸ್ವಾತಂತ್ರ್ಯ ಹೆಚ್ಚಿ ದುಃಖ ಕಡಿಮೆಯಾಗುವುದು. ಅಲ್ಲವೆ ಮಕ್ಕಳೆ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article