ಅಜ್ಜಿ ಮನೆಯಲ್ಲಿ ಮಳೆಗಾಲದಲ್ಲೊಂದು ದಿನ : ಬರಹ - ವೈಷ್ಣವಿ ಕಾಮತ್, 9ನೇ 'ಸರ್ವತ್ರ' ತರಗತಿ
Sunday, July 13, 2025
Edit
ಬರಹ : ವೈಷ್ಣವಿ ಕಾಮತ್
9ನೇ 'ಸರ್ವತ್ರ' ತರಗತಿ
ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸುಳ್ಯ ತಾಲೂಕಿನ ಒಂದು ಪುಟ್ಟ ಹಳ್ಳಿ ನೆಲ್ಲೂರು. ಅಲ್ಲಿ ಕೆಮ್ರಾಜೆ ಬೊಳ್ಳಾಜೆಯಲ್ಲಿ ನನ್ನ ಅಜ್ಜಿ ಮನೆ. ಮಳೆಗಾಲದಲ್ಲಂತೂ ಈ ಮಲೆನಾಡಿನ ಪ್ರದೇಶದಲ್ಲಿ ಒಂದು ಪುಟ್ಟ ತೋಡು (ಹಳ್ಳ) ತುಂಬಿ ಹರಿಯುತ್ತಿರುತ್ತದೆ. ಅದರ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ.
ಅಜ್ಜಿ ಮನೆಯ ಆ ಸಂಭ್ರಮ ಹೇಳತೀರಲಾಗದು. ಅಜ್ಜಿಯೊಂದಿಗಿನ ಒಡನಾಟ, ಅತ್ತೆ ಮಾವ ಅತ್ತಿಗೆಯ ಜೊತೆಗಿನ ಆನಂದದ ಕ್ಷಣಗಳು ವರ್ಣಿಸಲು ಅಸಾಧ್ಯ. ಎಲ್ಲೋ ಒಂದು ಕಡೆ ಅಜ್ಜನಿಲ್ಲದ ಕೊರಗು. ಆದರೆ ಆ ನೋವನ್ನು ಮರೆಸುವ ಅಜ್ಜಿಯ ಅನುಭವದ ಹಿತನುಡಿಗಳು ಮನಸ್ಸಿಗೆ ಮುದ ನೀಡುತ್ತವೆ. ಮಾವ ಮಾಡಿಕೊಡುವಂತಹ ಹೊಸ ಹೊಸ ತಿಂಡಿ ತಿನಸುಗಳು, ಅತ್ತೆಯೊಂದಿಗಿನ ಹರಟೆ, ಮಾವನ ಮಗಳ ತುಂಟಾಟದೊಂದಿಗೆ ಸಮಯದ ಪರಿವೆಯೇ ಇಲ್ಲದೆ ದಿನ ಕಳೆದೆವು.
ಬೆಳಗ್ಗೆ ಅಜ್ಜಿ ಕೆಂಡದಲ್ಲಿ ಕಾಯಿಸಿದ ಉಬ್ಬು ರೊಟ್ಟಿಯನ್ನು ತಿಂದು, ಹಳ್ಳದ ಜುಳು ಜುಳು ನೀರಿನ ಮಂಜುಳ ನಾದವನ್ನು ಕೇಳಿದ ನಾವು ಆತುರದಿಂದ ತೋಡಿನ ಕಡೆ ಹೊರಟೆವು. ಆದರೆ ವರುಣನ ಆಗಮನವು ನಮ್ಮ ಯೋಜನೆಗಳಿಗೆ ಅಡ್ಡಿಯನ್ನುಂಟುಮಾಡಿತು. ಆದರೂ ಮಳೆನಿಂತ ಮೇಲೆ ಹಳ್ಳದೆಡೆಗೆ ಸಾಗಿದೆವು. ಹಳ್ಳದಲ್ಲಿ ಬಂಡೆಕಲ್ಲುಗಳ ಮೇಲಿಂದ ಹರಿವ ನೀರು ಪುಟ್ಟ ಜಲಪಾತದಂತೆ ನಮ್ಮ ಕಣ್ಮನ ಸೆಳೆಯಿತು. ಈ ಮನಮೋಹಕ ಕ್ಷಣಗಳು ಅವಿಸ್ಮರಣೀಯ. ನೀರಿನೊಂದಿಗಿನ ನಮ್ಮಾಟವು ತುಂಬಾ ಹೊತ್ತಿನ ತನಕ ಸಾಗಿತು. ಹಳ್ಳದ ನೀರಿನ ಭೋರ್ಗರೆತವು ಅಜ್ಜಿ ಮನೆಯವರೆಗೂ ಕೇಳಿಸುತ್ತಿತ್ತು.
ತೋಟದಲ್ಲಿ ಜಿಗಣೆ (ಉಂಬಳ,ಉಂಬುರು) ಗಳ ಕಾಟವೂ ಜೋರಾಗಿತ್ತು. ಮಳೆಯು ಆಗಾಗ ಬರುತ್ತಿದ್ದ ಕಾರಣ ಮನೆಗೆ ಹಿಂತಿರುಗಿದೆವು. ನಂತರ ಅಜ್ಜಿ ನೇಯ್ದ ಜಡೆಯೊಂದಿಗೆ ಅಜ್ಜಿಯೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದೆನು. ಅಜ್ಜಿ ಮನೆಯಲ್ಲಿ ಕಳೆದ ಆ ದಿನ ಮರೆಯಲಾಗದು. ಶಾಲೆಯ ನೆನಪಾದೊಡನೆ 'ಮರಳಿ ಗೂಡಿಗೆ ಪಯಣ ಬೆಳೆಸಿದೆವು.
9ನೇ 'ಸರ್ವತ್ರ' ತರಗತಿ
ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************