ಪಯಣ : ಸಂಚಿಕೆ - 49 (ಬನ್ನಿ ಪ್ರವಾಸ ಹೋಗೋಣ)
Friday, June 27, 2025
Edit
ಪಯಣ : ಸಂಚಿಕೆ - 49 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿ ದುರ್ಗ ಕ್ಕೆ ಪಯಣ ಮಾಡೋಣ ಬನ್ನಿ....
ಮೊದಲ ನೋಟಕ್ಕೆ ಬಾಗಿಲೇ ಕಾಣದಂತಹ ಉಚ್ಚಂಗಿ ದುರ್ಗದ ಕೋಟೆಗೆ ಆರು ಬಾಗಿಲುಗಳಿರುವ 9ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಉಚ್ಚಂಗಿ ದುರ್ಗದ ಕೋಟೆಯ ಒಟ್ಟು ಸುತ್ತಳತೆ ಸುಮಾರು 25 ಕಿ.ಮೀಟರ್‌ಗಳು ! ಆಳವಾದ ಕಂದಕಗಳು, ಎತ್ತರದ ಗೋಡೆ, ಬುರುಜು - ಬತ್ತೇರಿಗಳನ್ನು ಒಳಗೊಂಡ ಈ ಅಭೇದ್ಯ ಕೋಟೆ ಕದಂಬ ರಾಜರಿಂದ ಹಿಡಿದು ಬ್ರಿಟಿಷರವರೆಗೆ ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನು ಇಲ್ಲ. ಹಲವು ರಾಜಮಹಾರಾಜರಿಗೆ ಆಶ್ರಯ ತಾಣವಾಗಿದ್ದ ಉಚ್ಚಂಗಿದುರ್ಗ ದಾವಣೆಗೆರೆಯಿಂದ ಹರಪನಹಳ್ಳಿಗೆ ಹೋಗುವ ಹಾದಿಯಲ್ಲಿ 28 ಕಿಲೋಮೀಟರ್ ದೂರದಲ್ಲಿದೆ.
'ಗ್ವಾಲಿಯರ್' ಕೋಟೆ ಹೋಲುವ ಇನ್ನೊಂದು ಕೋಟೆಯನ್ನು ಕರ್ನಾಟಕದಲ್ಲಿ ನೋಡಬೇಕೆಂದರೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗಕ್ಕೆ ಬರಬೇಕು. ಊರಿನ ಬೆಟ್ಟದ ಮೇಲೆ ಕಾಣುವ ಮನೋಹರ ಕೋಟೆ ನೋಡುವುದೇ ಕಣ್ಣಿಗೆ ಹಬ್ಬ, ಪಲ್ಲವರು, ಕದಂಬರು, ಗಂಗರು, ದುರ್ಗದ ಪಾಳೇಗಾರ ಕಾಲದ ಗತವೈಭವಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಸ್ಥಳ ಉಚ್ಚಂಗಿದುರ್ಗ. ಶಕ್ತಿ ದೇವತೆ ಉಚ್ಚಂಗೆಮ್ಮ ನೆಲೆ ನಿಂತ ಧಾರ್ಮಿಕ ಕೇಂದ್ರವೂ
ಇಲ್ಲಿನ ಕೋಟೆ ನಾಲ್ಕು ಮೂಲೆಗಳನ್ನು ಹೊಂದಿದ್ದು, ಹೊರ ಮುಖವಾಗಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸುಮಾರು 100 ಅಡಿ ಅಂತರ ಇದೆ. ನಾಲ್ಕು ಮೂಲೆಗಳಲ್ಲೂ ಚೌಕಾಕಾರದ ಬುರುಜುಗಳಿವೆ. ಇವು ಸುಮಾರು 50 ಅಡಿ ಎತ್ತರವಾಗಿರುವಂತೆ ಭಾಸವಾಗುತ್ತದೆ. ಕೋಟೆಯೊಳಗಿನ ಅರಮನೆಯನ್ನು ಕಲ್ಲು ಮತ್ತು ಗಾರೆ ಬಳಸಿ ಕಟ್ಟಲಾಗಿದೆ. ಅರಮನೆ ಮುಂಭಾಗದ ಛಾವಣಿ ಮೇಲಿನ ಕಟ್ಟಡದಲ್ಲಿ ಮನೋಹರ ಉಬ್ಬು ಶಿಲ್ಪಗಳನ್ನು ಕಾಣಬಹುದು. ಈಗ ಅರಮನೆಯ ಛಾವಣಿ ಬಿದ್ದು ಹೋಗಿದ್ದು, ಬುರುಜುಗಳು ಮತ್ತು ಸುತ್ತಲೂ ಬೃಹದಾಕಾರದ ಗೋಡೆಗಳು ಉಳಿದುಕೊಂಡಿವೆ.
ಶಾಸನವೊಂದರ ಪ್ರಕಾರ, ಉಚ್ಚಂಗಿಯನ್ನು ಆಳುತ್ತಿದ್ದುದು ದೇವಪ್ಪಯ್ಯ, ನಂತರ ನೊಳಂಬ ಪಲ್ಲವರ ನೊಳಂಬಳಿಗೆ, ಬಳಿಕ ಕಲ್ಯಾಣ ಚಾಲುಕ್ಯರ ನೇರ ಆಡಳಿತಕ್ಕೆ ಒಳಗಾಯಿತು. ನಂತರ ಉಚ್ಚಂಗಿ ಪಾಂಡ್ಯರು, ಹೊಯ್ಸಳರು, ವಿಜಯನಗರದ ರಾಯರು ಆಳಿದರು. ನಂತರ ಚಿತ್ರದುರ್ಗದ ಪಾಳೇಗಾರರು. ಇವರ ನಂತರ ಹರಪನಹಳ್ಳಿ ಪಾಳೇಗಾರರು ಬಹಳ ಕಾಲ ಆಳ್ವಿಕೆ ನಡೆಸಿದರು.
ಈ ಕೋಟೆಯ ನಿರ್ಮಾಣದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಹಲವು ದಾಖಲೆ ಆಧಾರಗಳಿಂದ ಹೇಳುವುದಾದರೆ, ಕ್ರಿಶ. 971ಕ್ಕಿಂತ ಮೊದಲೇ ನಿರ್ಮಾಣವಾಗಿರಬಹುದು ಎನ್ನಲಾಗುತ್ತದೆ. ಆನೆಹೊಂಡ, ಅರಿಸಿನ ಹೊಂಡ, ಹೊಸ ಹೊಂಡ, ಸಗಣಿ ಹೊಂಡ, ಹಾಲಮ್ಮನ ಹೊಂಡ, ಬೆಕ್ಕಹೊಂಡ ಮತ್ತು ಹಿರೇಹೊಂಡಗಳನ್ನು ಈ ಪರಿಸರದಲ್ಲಿ ಕಾಣಬಹುದು. ಉಚ್ಚಂಗಿ ದುರ್ಗಕ್ಕೆ ಸ್ವಂತ ವಾಹನದಲ್ಲೂ ಹೋಗಬಹುದು. ಹರಪನಹಳ್ಳಿ ಗಳಿಂದ ಬಸ್ ಸೌಲಭ್ಯವೂ ಇದೆ. ದಾವಣಗೆರೆಯಿಂದ 28 ಕಿ.ಮೀ. ದೂರವಿದೆ.
"ಕರ್ನಾಟಕದ ಗ್ವಾಲಿಯರ್ ಎಂದೇ ಪ್ರಸಿದ್ಧಿ ಪಡೆದಿರುವ, ಹಲವಾರು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿರುವ, ಅದ್ಭುತವಾದ ಕೋಟೆ, ಉಚ್ಚಂಗೆಮ್ಮ ನೆಲೆ ನಿಂತ ಧಾರ್ಮಿಕ ಕೇಂದ್ರವಾದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿ ದುರ್ಗ" ಕ್ಕೆ ಬನ್ನಿ ಒಮ್ಮೆ ಪ್ರವಾಸಕ್ಕೆ...
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************