ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 71
Saturday, May 3, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 71
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
ಮಕ್ಕಳ ಜಗಲಿಯ ಪ್ರಿಯ ಓದುಗರಿಗೆಲ್ಲ ನನ್ನ ನಮಸ್ಕಾರಗಳು.. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಒಂದು ವರ್ಷ ಕಳೆದು ಹೋಯಿತು... ಮಕ್ಕಳ ಜಗಲಿಯ ಒಂದು ವರ್ಷದ ನನ್ನೀ ಒಡನಾಟದಿಂದ ನನಗಾದ ಅನುಭವ ಅಪಾರ.. ಎಷ್ಟೋ ಮಹಾನ್ ವ್ಯಕ್ತಿಗಳ ಪರಿಚಯ, ವಿಷಯಗಳ ಸಂಗ್ರಹ, ಮಕ್ಕಳ ಜಗಲಿಯಲ್ಲಿ ನಾನು ಒಬ್ಬ ಸದಸ್ಯೆ ಎಂದು ಹೇಳಲು ಹೆಮ್ಮೆ ಇದೆ ನನಗೆ.. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ಇಚ್ಚಿಸುತ್ತೇನೆ...
ಶಾಲೆಯಲ್ಲಿ ನಾವು ಹೇಳಿಕೊಡುವ ವಿದ್ಯೆ ಹಾಗು ವಿಚಾರಗಳು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆಯೋ ಅದರ ದುಪ್ಪಟ್ಟು ಪ್ರಭಾವ ಬೀರುವುದು ಮನೆಯ ವಾತಾವರಣ ಎಂದರೆ ತಪ್ಪಾಗಲಾರದು... ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೊನೆಯ ದಿನ ಮಕ್ಕಳಿಗೆಲ್ಲ ಪದವಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮದ ತಯಾರಿಯ ತಾರಾತುರಿಯಲ್ಲಿ ನಾವಿದ್ದೆವು. ಆಗ ಮಕ್ಕಳೆಲ್ಲ ತಮ್ಮ ತಮ್ಮ ಪೋಷಕರ ಜೊತೆ ಬಂದು ಕುಳಿತುಕೊಂಡು ತಯಾರಿಯ ಸಂಭ್ರಮವನ್ನು ಅನುಭವಿಸುತ್ತಿದ್ದರು. ಅವರಿಗೆ ಎಲ್ಲಿಲ್ಲದ ಖುಷಿ, ಪದವಿ ಪ್ರದಾನದ ಉಡುಗೆಯನ್ನು ತೊಟ್ಟು ಸಭೆಯ ಎದುರು ನಿಲ್ಲಲು. ಎಲ್ಲ ತಯಾರಿಯ ನಂತರ ಕಾರ್ಯಕ್ರಮ ಆರಂಭವಾಯಿತು. ನಮ್ಮ ನಿರೀಕ್ಷೆಗಿಂತಲೂ ಅಚ್ಚುಕಟ್ಟಾಗಿ ಕಾರ್ಯಕ್ರಮವೂ ನಡೆಯಿತು ಎನ್ನುವುದು ಸಂತಸದ ವಿಷಯ.
ಪೋಷಕರೆಲ್ಲರ ಸಕಾರಾತ್ಮಕ ಅಭಿಪ್ರಾಯಗಳ ಸ್ವೀಕಾರದೊಂದಿಗೆ, ಅವರನ್ನೆಲ್ಲ ಬೀಳ್ಕೊಡುವ ಮಧ್ಯದಲ್ಲೇ ಒಂದು ಮಗು, ಮಾತಾಜಿ... ಮಾತಾಜಿ.... ಎಂದು ನನ್ನ ಬಳಿ ಓಡಿ ಬಂದಿತು.. ಆಗ ಪುಟ್ಟ ನಿನಗೆ ಹಸಿವಾಗಿಲ್ಲವೇ? ಬೇಗ ಊಟಕ್ಕೆ ನಡೆ.. ಎಂದು ನಾನು ಕೈ ಹಿಡಿದು ಎಳೆಯಲು, ಆ ಮಗು ನನ್ನನು ಕೈ ಹಿಡಿದು ಎಳೆದು.. ಆ ಪುಟ್ಟ ಕೈಗಳಿಂದ ನನ್ನ ಪಾದಗಳನ್ನು ಹಿಡಿದು ನಮಸ್ಕರಿಸಿತು. ಮಕ್ಕಳ ಈ ಪ್ರೀತಿ, ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲಾದೀತೆ?.. ಕಣ್ಣುತುಂಬಿಕೊಂಡು ಆ ಮಗುವನ್ನು ಬಾಚಿ ತಬ್ಬಿಕೊಂಡು, ಒಳ್ಳೆಯದಾಗಲಿ ಮಗು ಮುಂದೆ ಒಳ್ಳೆಯ ವ್ಯಕ್ತಿಯಾಗು ಎಂದು ಆಶೀರ್ವದಿಸಿದೆ. ಆದರೆ ಆ ಮಗುವಿಗೆ ಆ ಆಶೀರ್ವಾದಕ್ಕಿಂತ ಹೆಚ್ಚಿನದ್ದೇನೋ ಬೇಕಿತ್ತು. ಊಟಕ್ಕೆ ಹೋಗದೆ ಅಲ್ಲೇ ನಿಂತಿದ್ದ ಮಗು, ನನ್ನ ಬಳಿ ಬಂದು, ನನ್ನನ್ನು ಹತ್ತಿರ ಕರೆದು ಕಿವಿಯಲ್ಲಿ, "ಮಾತಾಜಿ ನಾನು ನಿಮಗೆ ಬೇಜಾರು ಮಾಡಿಲ್ಲ ತಾನೇ?, ನನ್ನಿಂದ ನಿಮ್ಮ ಮನಸ್ಸಿಗೆ ಯಾವುದೇ ನೋವಾಗಿಲ್ಲ ತಾನೇ, ಹಾಗೇನಾದರೂ ನನ್ನಿಂದ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸಿಬಿಡಿ" ಎಂದು ಗಂಭೀರತೆಯ ಮಾತುಗಳನ್ನು ಆಡತೊಡಗಿತು. ನಾ ಹೇಳಿದೆ "ಛೆ ಇಲ್ಲ ಮಗು ನೀ ಏಕೆ ಇಂದು ಈ ರೀತಿ ಮಾತನಾಡುತ್ತಿರುವೆ..?" ಎಂದು ಕೇಳಿದೆ. ಆಗ ಮಗು ಹೇಳಿತು.. "ಮನೆಯಿಂದ ಬರುವಾಗ ಅಮ್ಮ ಹೇಳಿದಳು, ನಿನ್ನ ಮಾತಾಜಿಯ ಆಶೀರ್ವಾದವನ್ನು ತೆಗೆದುಕೊಂಡು ಹಾಗೆಯೇ, ಕ್ಷಮೆಯನ್ನು ಕೇಳಿಬಾ.. ಏಕೆಂದರೆ ಅವರು ನಿನಗೆ ಅಮ್ಮನ ಸಮಾನವೇ.. ಒಂದು ವರ್ಷ ನಿನ್ನ ಎಲ್ಲ ತರಲೆ, ಕೀಟಲೆ, ಕೆಟ್ಟ ಚಾಳಿಗಳನ್ನು ಸಹಿಸಿ ನಿನಗೆ ಪಾಠ ಕಲಿಸಿದ್ದಾರೆ, ಅವರಿಗೆ ನೋವಾದರೆ, ಅದು ನನಗೆ ನೋವಾದಂತೆ.." ಎಂದು. ಅದಕ್ಕೆ "ನಿಮಗೆ ಬೇಜಾರು ಮಾಡಿಸಿದರೆ ಅಮ್ಮನಿಗೆ ಬೇಜಾರು ಮಾಡಿದಂತೆ ಆಗುತ್ತದೆಯಂತೆ ಮಾತಾಜಿ.. ಪ್ಲೀಸ್.. ನನ್ನನ್ನು ಆಶೀರ್ವದಿಸಿ" ಎಂದು, ಅಂಗಲಾಚಿದ ಧ್ವನಿಯಲ್ಲಿ ಆ ಮುಗ್ಧ ಮನಸ್ಸು ಕೇಳುವಾಗ, ಕಣ್ಣಂಚಲ್ಲಿ ನೀರು ತುಂಬುವುದರ ಜೊತೆ ಗಂಟಲು ಬಿಗಿದು ಬಂದಿತ್ತು. ಒಮ್ಮೆಲೇ ಆ ಮಗುವನ್ನು ಬಿಗಿದಪ್ಪಿ. "ಇಲ್ಲ ಮಗು, ನಿನ್ನ ಅಮ್ಮ ನಿನ್ನನ್ನು ಎಷ್ಟು ಪ್ರೀತಿಸುತ್ತಾರೋ ನಾನು ನಿನ್ನನ್ನು ಅಷ್ಟೇ ಪ್ರೀತಿಸುತ್ತೇನೆ. ಈಗ ಬಾ ಊಟ ಮಾಡುವಂತೆ." ಎಂದು ಕರೆದುಕೊಂಡು ಹೋದೆ...
ಸಣ್ಣ ವಯಸ್ಸಿನ ಮಕ್ಕಳ ಮನಸ್ಸು ಮುಗ್ಧವಾದದ್ದು. ಹಾಗಿರುವಾಗ ಅವರನ್ನು ಪ್ರೀತಿಸುವವರು ಏನು ಹೇಳಿದರೂ ಅದನ್ನು ನಿಜವೆಂದು ನಂಬಿ ಬಿಡುತ್ತವೆ. ಆದ್ದರಿಂದಲೇ ಪೋಷಕರು ಮಕ್ಕಳಲ್ಲಿ ಈ ರೀತಿಯ ಸಕಾರಾತ್ಮಕ ವಿಚಾರಗಳಿಗೆ ನೀರೆರೆಯುವುದರ ಮೂಲಕ ಅವರ ಬೃಹತ್ ಬೆಳವಣಿಗೆಗೆ ಕಾರಣರಾಗಬೇಕು.. ಈ ಸಂಸ್ಕಾರ ಮನೆಯಿಂದಲೇ ಬರಬೇಕು ಎನ್ನುವುದು ನನ್ನ ಅನಿಸಿಕೆ.. ಧನ್ಯವಾದಗಳು
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************