ನಾನು ಓದಿದ ಪುಸ್ತಕ : ಸಂಚಿಕೆ - 06
Saturday, May 3, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 06
ಪುಸ್ತಕ : ಸ್ಕೂಲ್ ಫೋಬಿಯ
ಓದು ಮತ್ತು ಬರಹ : ಸುಪ್ರಿಯ
ಸಹ ಶಿಕ್ಷಕಿ
ದಿಗಂಬರ ಜೈನ ಆಂಗ್ಲಮಾಧ್ಯಮ ಶಾಲೆ
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
Mob : +91 94820 45181
ಲೇಖಕರು : ಡಾ.ಪಿ.ವಿ.ಭಂಡಾರಿ
’ಶಾಲೆ ನಾ ಒಲ್ಲೆ’ ಎಂಬ ಅಡಿಬರಹದೊಂದಿಗೆ, ಶಾಲೆಗೆ ಹೋಗಲು ಒಲ್ಲದ ಮನಸ್ಸಿನಿಂದಲೇ ಶಾಲಾ ಸಮವಸ್ತ್ರ ಧರಿಸಿ, ಬ್ಯಾಗ್ ಹೆಗಲಿಗೇರಿಸಿ ಅಸಹಾಯಕನಾಗಿ ತಲೆತಗ್ಗಿಸಿ ಕುಳಿತಿರುವ ಪುಟ್ಟ ಬಾಲಕನ ಮೇಲೆ ದೂರದಿಂದ ಭರವಸೆಯ ಬೆಳಕಿನ ಕಿರಣಗಳು ಬೀಳುತ್ತಿರುವ ಸೊಗಸಾದ ಈ ಮುಖಪುಟವು ಪುಸ್ತಕದ ಆಶಯವನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಪುಸ್ತಕವನ್ನು ಓದುವ ಬಯಕೆಯನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿಗಂತೂ ಅನೇಕ ವಿಷಯಗಳ ಬಗ್ಗೆ ಭಯವಿರುತ್ತದೆ. ಗಾಳಿ, ಬೆಂಕಿ, ಹಾವು, ಚೇಳು, ಕತ್ತಲು, ನೀರು ಹೀಗೆ ಭಯಪಡುವ ವಿಷಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ! ಆದರೆ ಕೆಲವು ಮಕ್ಕಳಲ್ಲಿ ಶಾಲೆಯೆಂದರೂ ಭಯವಿರುತ್ತದೆ ಎಂದರೆ ನಾವು ನಂಬಲೇಬೇಕು. ಈ ಭಯದ ಕಾರಣಗಳು ಹಾಗೂ ಅವುಗಳ ನಿವಾರಣ ಕ್ರಮಗಳನ್ನು ಈ ಪುಸ್ತಕದಲ್ಲಿ ಸಣ್ಣ - ಸಣ್ಣ ಕಥೆಗಳ ರೂಪದಲ್ಲಿ ವಿವರಿಸಲಾಗಿದೆ.
ತರಗತಿಯಲ್ಲಿ ಅತಿ ಚರುಕಾದ ವಿದ್ಯಾರ್ಥಿನಿಯಾಗಿದ್ದ ಸ್ವಾತಿ ಇದ್ದಕ್ಕಿದ್ದಂತೆ ಶಾಲೆಗೆ ಹೋಗಲು ನಿರಾಕರಿಸುವುದು, ಶಾಲೆಯ ಪ್ರತಿಯೊಂದು ವಿಷಯದಲ್ಲೂ ನನ್ನ ಮಗನೇ ನಂಬರ್-ಒನ್ ಆಗಿರಬೇಕು ಎಂದು ಏಳನೇ ತರಗತಿಯ ರಾಹುಲ್ ನ ಮೇಲೆ ಒತ್ತಡ ಹೇರುತ್ತಿದ್ದ ಆತನ ಹೆತ್ತವರಿಂದಾಗಿ ಕೊನೆಗೆ ಮಾನಸಿಕ ಸಮಸ್ಯೆಗಳ ಸುಳಿಯಲ್ಲಿ ನರಳಾಡುವ ರಾಹುಲ್, ’ಡಿಸ್ಲೆಕ್ಸಿಯಾ’ ಸಮಸ್ಯೆಯಿಂದ ಬಳಲುತ್ತಿದ್ದ ಅವಿನಾಶ್, ತಂದೆಯ ಕುಡಿತದ ಚಟದಿಂದ ತನ್ನ ತಾಯಿ ಅನುಭವಿಸುವ ದೈಹಿಕ ಹಿಂಸೆಯನ್ನು ತಪ್ಪಿಸುವ ಸಲುವಾಗಿ ಶಾಲೆಯನ್ನೇ ನಿರಾಕರಿಸುವ 5ನೇ ತರಗತಿಯ ಅತ್ಯಂತ ಬುದ್ಧಿವಂತ ಹುಡುಗಿ ಮೇರಿ, ಗಣಿತ ಶಿಕ್ಷಕರ ನಿಂದನೆಗೆ ಒಳಗಾಗಿ ಶಾಲೆಯನ್ನೇ ತ್ಯಜಿಸಿದ ಬಡವರ ಮನೆಯ ಹುಡುಗಿ ಅನಿತಾ, ’ವೆಂಕಟಪ್ಪ’ ಎಂಬ ತನ್ನ ಹೆಸರೇ ಚೆನಾಗಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಹೋಗದ ಹುಡುಗ ಕೊನೆಗೆ ’ಸನತ್’ ಆಗಿ ಬದಲಾದ ಕತೆ.. ಹೀಗೆ ಅನೇಕ ಮಕ್ಕಳ ಮಾನಸಿಕ ಸಮಸ್ಯೆಗಳು ಹಾಗೂ ಅವುಗಳ ಪರಿಹಾರದ ಬಗೆಗೆ ಸ್ವತಃ ಮನೋವೈದ್ಯರೇ ಆಗಿರುವಂತಹ ಡಾ.ಪಿ.ವಿ. ಭಂಡಾರಿಯವರು ಸವಿಸ್ತಾರವಾದ ವೈಜ್ಞಾನಿಕ ವಿಷ್ಲೇಷಣೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ.
ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ,
“ಇಲ್ಲಿ ತಂದೆ ತಾಯಿಯರ ಮಹತ್ವಾಕಾಂಕ್ಷೆಗಳು, ಶಿಕ್ಷಕರ ಶಿಕ್ಷೆ, ಸಹಪಾಠಿಯ ತೀಟೆ, ಹೋಲಿಕೆ, ಸ್ಪರ್ಧೆ ಹೀಗೆ ಹಲವು ಜೇಡಗಳು ಈ ಸ್ಕೂಲ್ ಫೋಬಿಯ ಉಂಟುಮಾಡುತ್ತವೆ. ಈ ಪುಸ್ತಕದಲ್ಲಿ ಮೇಲಿನ ಸಮಸ್ಯೆಗಳು ಹಾಗೂ ಆ ಸಮಸ್ಯೆಗಳ ಪರಿಹಾರದ ಬಗ್ಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ."
2010 ರಲ್ಲಿ ಮೊದಲ ಮುದ್ರಣಗೊಂಡ ಈ ಪುಸ್ತಕ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಇದೀಗ 2024 ರಲ್ಲಿ ಹೊಸತಾದ ಮುಖಪುಟದೊಂದಿಗೆ ಮರುಮುದ್ರಣಗೊಂಡು ಆಸಕ್ತ ಓದುಗರಿಗೆ ಲಭ್ಯವಿದೆ ಎಂಬುದು ಸಂತೋಷದ ವಿಷಯವಾಗಿದೆ. 92 ಪುಟಗಳನ್ನು ಹೊಂದಿರುವ ಈ ಕಿರುಪುಸ್ತಕವು ಒಂದೇ ಓಘ ದಲ್ಲಿ ಓದಿಸಿಕೊಂಡು ಹೋಗುತ್ತದೆ. ಇದು ಎಲ್ಲಾ ಶಿಕ್ಷಕರೂ, ಹೆತ್ತವರೂ ಮತ್ತು ಮಕ್ಕಳನ್ನು ಪ್ರೀತಿಸುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಾಗಿದೆ. ನನಗಂತೂ ಈ ಪುಸ್ತಕದ ಓದು ಶಿಕ್ಷಕಿಯಾಗಿ ನನ್ನ ತರಗತಿಯ ಮಕ್ಕಳನ್ನು ಅರ್ಥೈಸಿಕೊಳ್ಳಲು ಹೊಸ ಹೊಳಹುಗಳನ್ನು ನೀಡಿದೆ.
ಸಹ ಶಿಕ್ಷಕಿ
ದಿಗಂಬರ ಜೈನ ಆಂಗ್ಲಮಾಧ್ಯಮ ಶಾಲೆ
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
Mob : +91 94820 45181
********************************************