ಜೀವನ ಸಂಭ್ರಮ : ಸಂಚಿಕೆ - 189
Monday, May 12, 2025
Edit
ಜೀವನ ಸಂಭ್ರಮ : ಸಂಚಿಕೆ - 189
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ... ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ.
ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಗುಣಗಳು ದೈವಿ ಗುಣ. ಬದುಕಿನಲ್ಲಿ ಅಂಧಕಾರ ಚೆಲ್ಲುವ ಗುಣ ಅಸುರಿಗುಣ. ಬದುಕನ್ನು ರಸಮಯಗೊಳಿಸುವ ಗುಣ ದೈವಿ ಗುಣ. ಬದುಕನ್ನು ಕಹಿ ಕಹಿಗೊಳಿಸುವ ಗುಣಗಳು ಅಸುರಿ ಗುಣಗಳು. ಬದುಕು ನಮಗೆ ಹೇಗೆ ಬೇಕು ಹಾಗೆ ಆಗುತ್ತದೆ. ಇಡೀ ಜೀವನ ರಸಪೂರ್ಣಗೊಳಿಸಬೇಕೆಂದು ನಿರ್ಣಯ ಮಾಡಿದರೆ, ಅದಕ್ಕೆ ಪೂರಕವಾದ ಗುಣಗಳನ್ನು ನಾವು ರೂಡಿಸಿಕೊಳ್ಳಬೇಕಾಗುತ್ತದೆ. ಬದುಕನ್ನೆಲ್ಲ ಕಹಿ ಕಹಿಗೊಳಿಸಬೇಕೆಂದು ಇಚ್ಛೆ ಇದ್ದರೆ, ಅದಕ್ಕೆ ಪೂರಕ ಗುಣಗಳು ಇವೆ. ಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಾಗುತ್ತದೆ. ಬೇರೆಯವರು ನಮ್ಮ ಬದುಕನ್ನು ಕಟ್ಟಲು ಆಗುವುದಿಲ್ಲ. ಜೀವ ವಿಕಾಸದಲ್ಲಿ ಮಾನವ ವಿಕಾಸ ಇತ್ತೀಚಿನದು ಎಂದು ಹೇಳುತ್ತೇವೆ. ನಿಸರ್ಗ ವಿಕಾಸ ಮಾಡುವಾಗ ಬದುಕಿಗೆ ಏನೇನು ಬೇಕು ಎಲ್ಲಾ ಅಳವಡಿಸಿದೆ. ನಮಗೆ ದೇಹ ಬೇಕು. ಮಾತುಗಳು ಬೇಕು. ಮಾತಿಗೆ ಬೇಕಾದ ಅವಯವ ಬೇಕು. ನೋಡೋದಕ್ಕೆ, ಕೇಳೋದಕ್ಕೆ, ಮುಟ್ಟೋದಕ್ಕೆ, ಮೂಸೋದಿಕ್ಕೆ, ತಿನ್ನೋದಕ್ಕೆ, ಅನುಭವಿಸಲಿಕ್ಕೆ ಮತ್ತು ವಿಚಾರ ಮಾಡೋದಿಕ್ಕೆ ಏನೇನು ಅವಯವ ಬೇಕೋ? ಅದನ್ನೆಲ್ಲ ಅಳವಡಿಸಿದೆ. ಇವುಗಳನ್ನು ಎಲ್ಲಾ ಮನುಷ್ಯರು ಹೊಂದಿಯೇ ಈ ಜಗತ್ತಿಗೆ ಬಂದಿರುತ್ತಾರೆ. ಇವುಗಳನ್ನು ಬಳಸುವುದು. ಆ ಬಳಿಕ ಬದುಕನ್ನು ಕಟ್ಟಿಕೊಳ್ಳುವುದು. ಬದುಕನ್ನು ಸಂಪತ್ತಿನಿಂದ ಕಟ್ಟುವುದಕ್ಕೆ ಆಗುವುದಿಲ್ಲ. ರೂಪದಿಂದ, ಶಬ್ದದಿಂದ, ಸ್ಪರ್ಶದಿಂದ, ರಸದಿಂದ, ಗಂಧದಿಂದ, ಸುಖ-ದುಃಖಗಳಿಂದ ಮತ್ತು ಒಳ್ಳೆಯ ಮತ್ತು ಕೆಟ್ಟ ವಿಚಾರಗಳಿಂದ ಕಟ್ಟಿಕೊಳ್ಳಬೇಕಾಗುತ್ತದೆ. ಬದುಕು ಒಂದು ದೃಷ್ಟಿಯಿಂದ ಸಮೃದ್ಧವಾಗಿರುತ್ತಿದೆ. ಆದರೆ ಸಮೃದ್ಧಗೊಳಿಸುವ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ. ಬದುಕಿನ ಅಂಗಳದೊಳಗೆ ಏನು ಬೆಳೆಯಬೇಕು? ಎನ್ನುವುದನ್ನು ನಾವು ವಿಚಾರ ಮಾಡಬೇಕು. ಪ್ರತಿಯೊಬ್ಬ ಮನುಷ್ಯನ ದೇಹದೊಳಗಿನ ಅಂಗಳ (ಮನಸ್ಸು) ದಲ್ಲಿ ಸೌಂದರ್ಯ, ಸುಗಂಧ, ಮಧುರತೆ ತುಂಬಿರಬೇಕು. ಮನೆ ಸುಂದರವಾಗಿ ಕಾಣಬೇಕಾದರೆ ಮನೆ ಕಾಂಪೌಂಡ್ ಒಳಗೆ ಹೂಗಿಡ, ಹಣ್ಣಿನ ಗಿಡ, ಅಲಂಕಾರಿಕ ಗಿಡ ಹಾಕಿದರೆ, ಕಣ್ಣಿಗೆ ಆನಂದ, ತಂಪು. ಸುಗಂಧ, ತಂಗಾಳಿ ಬೀಸಿ, ಸೌಂದರ್ಯ ತುಂಬಿರುತ್ತದೆ. ಹಣ್ಣಿನ ಮಧುರ ರಸ ಸವಿಗೊಳಿಸುತ್ತದೆ. ಒಂದು ವೇಳೆ ಮನೆ ಕಂಪೌಂಡ್ ಒಳಗೆ ತಿಪ್ಪೆ ಹಾಕಿಕೊಂಡಿದ್ದರೆ, ಮನೆಯಲ್ಲಿದ್ದರೂ ದುರ್ವಾಸನೆ ಬೀರುತ್ತದೆ. ನಮ್ಮಲ್ಲಿರುವ ಅಂಗಳ ಬಳಸಿಕೊಳ್ಳುವುದು ಕಲಿಯಬೇಕು. ತಿಪ್ಪೆ ಹಾಕಿ ಆನಂದ ವಾಗಿರಲು ಸಾಧ್ಯವಿಲ್ಲ. ಬೆವರ ಸುರಿಸಿ, ಅಂಗಳ ಸ್ವಚ್ಛ ಮಾಡಿ, ಸುಂದರ ಗಿಡದ ಬೀಜ ಹಾಕಿ, ನಿರ್ವಹಿಸಿದರೆ, ನೀರುಣಿಸಿದರೆ, ಮನೆ ಒಳಗೆ, ಹೊರಗೆ ಆನಂದವಾಗುತ್ತದೆ. ದಾರಿಯಲ್ಲಿ ಹೋಗುವವರು ಒಂದು ಕ್ಷಣ ಒಳಗೆ ಬರಬೇಕು ಅನಿಸಬೇಕು. ಹಾಗಿರಬೇಕು. ಒಳಗೆ ಬಂದ ಕೂಡಲೇ ಕಣ್ಮುಚ್ಚಿ, ಮೂಗು ಮುಚ್ಚಿ, ಹೊರಗೆ ಹೋಗಬೇಕು ಅನಿಸಬಾರದು. ರವೀಂದ್ರನಾಥ ಠಾಕೂರ್ ಹೇಳುತ್ತಾರೆ. "ಭಗವಂತ ಪ್ರತಿದಿನ ದಾರಿಯಲ್ಲಿ ಬರುತ್ತಾನೆ. ಯಾವ ಮನೆ ಸ್ವಚ್ಛ ಇದೆ ಅಲ್ಲಿಗೆ ತಾನಾಗೆ ಬರುತ್ತಾನೆ. ಯಾವ ಮನೆ ಹೊಲಸಿದೆ ಅಲ್ಲಿಂದ ದೂರ ಹೋಗುತ್ತಾನೆ. ದೇವರನ್ನು ಬರ ಮಾಡಿಕೊಳ್ಳುವ ವಾತಾವರಣ ಮಾಡಿಕೊಳ್ಳುವುದು ಮಹತ್ವದ್ದು, ವಿನಹ ದೇವನ ಹತ್ತಿರ ಹೋಗುವುದಲ್ಲ ಅಥವಾ ದೇವರನ್ನು ಬರ ಮಾಡಿಕೊಳ್ಳುವುದಲ್ಲ. ಸ್ವಚ್ಛ ಇದ್ದರೆ ತಾನೆ ಬರುತ್ತಾನೆ."
ನಮ್ಮ ಮನಸ್ಸಿನ ಅಂಗಳ ಎಷ್ಟು ವಿಸ್ತಾರ ಅಂದರೆ ಜಗತ್ತನ್ನೇ ವ್ಯಾಪಿಸುತ್ತದೆ. ನೂರು ವರ್ಷ ವ್ಯಾಪಿಸುತ್ತಲೇ ಇರುತ್ತದೆ. ಇದರಲ್ಲಿ ನಮಗೆ ಬೇಕಾದುದನ್ನು ಬೆಳೆಯಬಲ್ಲೆವು. ಬೇಕಾದರೆ ಸವಿ ಬೆಳೆಯಬಲ್ಲೆವು. ಇಲ್ಲ ಕಹಿ ಬೆಳೆಯಬಲ್ಲೆವು. ಬೇಕಾದರೆ ಸೌಂದರ್ಯ ಬೆಳೆಯಬಲ್ಲೆವು. ಇಲ್ಲಾ ಕುರೂಪ ಬೆಳೆಯಬಲ್ಲೆವು. ಬೇಕಾದರೆ ಮಧುರ ಮಧುರ ಸುಗಂಧ ಬೆಳೆಯಬಹುದು. ಇಲ್ಲದಿದ್ದರೆ ದುರ್ಗಂಧ ತುಂಬಬಲ್ಲೆವು. ನಮ್ಮ ಕೈಯಲ್ಲಿ ನಮ್ಮ ಜೀವನ ಸಿಕ್ಕಿದೆ. ಜೀವನದ ಅಂಗಳ ಸಿಕ್ಕಿದೆ. ಹೇಗೆ ಕಟ್ಟಿದರೆ ಸಂತೋಷವಾಗುತ್ತದೆಯೋ ಹಾಗೆ ಕಟ್ಟಬೇಕು. ಜೀವನದ ತುಂಬಾ ಬರೀ ಬಡಿದಾಟವಲ್ಲ. ಸುತ್ತಮುತ್ತ ಪ್ರೇಮ ಹರಡಬಲ್ಲೆವು. ಇಲ್ಲವೇ ದ್ವೇಷ ಹರಡಬಲ್ಲೆವು. ನಮ್ಮ ಬದುಕು ಸವಿಯಾದರೆ ನಮ್ಮ ಸುತ್ತಮುತ್ತ ಸವಿಯಾಗುತ್ತದೆ. ನಮ್ಮ ಬದುಕು ಕಹಿ ಆದರೆ, ನಮ್ಮ ಸುತ್ತಮುತ್ತ ಕಹಿಯಾಗುತ್ತದೆ. ಸುಮ್ಮನೆ ಬದುಕುವುದಲ್ಲ ಅಥವಾ ಕೇವಲ ಸಂಗ್ರಹಕ್ಕೆ ಕಳೆಯುವುದಲ್ಲ. ಬದುಕನ್ನು ಸಂತೋಷಕ್ಕಾಗಿ, ಅನುಭವಕ್ಕಾಗಿ, ಆನಂದಕ್ಕಾಗಿ ಕಳೆಯಬೇಕು. ಹಾಗಾದರೆ ಹೇಗೆ ಬದುಕು ಕಟ್ಟಿಕೊಳ್ಳಬೇಕು?, ಏನು ಬೆಳೆದರೆ ಬದುಕು ಕೆಡುತ್ತದೆ ? ನೋಡೋಣ. ಅದರಲ್ಲಿ ಡಂಬಾಚಾರ ಒಂದು. ಡಂಬಾಚಾರ ಎಂದರೆ ತೋರಿಕೆಗಾಗಿ ಬದುಕಬೇಕು ಅನಿಸುತ್ತದೆ. ನಾಲ್ಕು ಜನರಿಗೆ ತೋರಿಸಬೇಕು ಅಂತ ಬದುಕುತ್ತೇವೆ. ಈ ಜೀವನ ಮೇಲು ಜೀವನ. ಆಳ ಇಲ್ಲ. ಮೇಲೆ ಬದುಕಲು ಶುರು ಮಾಡುತ್ತೇವೆ. ಒಳಗೆ ಬದುಕು ಇಲ್ಲ. ಮನೆ ಸುಂದರ ಇದೆ. ಆದರೆ ಮನೆ ಒಳಗಿನ ವಾತಾವರಣ ಸುಂದರ ಇಲ್ಲ. ಮನೆ ಅಷ್ಟು ಸುಂದರವಾಗಿದೆ. ಬಣ್ಣ ಅಪ್ಯಾಯಮಾನ. ಪೀಠೋಪಕರಣ, ಆಭರಣ ತುಂಬಿದೆ. ಆದರೆ ಒಳಗೆ ಸೌಂದರ್ಯ ಇಲ್ಲ.
ಗುರುದೇವ ರಾನಡೆಯವರು ಸಂತರು. ಒಂದು ದಿನ ರಾನಡೆ, ಮಿತ್ರ ಉಪಕುಲಪತಿ ಜೊತೆ ಪಟ್ಟಣದ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಮಿತ್ರ ಒಂದು ಮನೆ ತೋರಿಸಿ, ಆ ಮನೆ ಎಷ್ಟು ಸುಂದರವಾಗಿದೆ? ಅಂದರು. ಅದಕ್ಕೆ ಗುರುದೇವ ರಾನಡೆ ಹೇಳಿದರು "ಅಷ್ಟೇ ಸೌಂದರ್ಯ ಒಳಗೆ ಇದ್ದರೆ, ಆ ಮನೆ ಸೌಂದರ್ಯ ಅಂತ ಒಪ್ಪಿಕೊಳ್ಳಬೇಕು" , ಅಂದರು. "ಹೊರಗೆಷ್ಟು ಸುಂದರ ಅದೇ, ಒಳಗಿನ ಜನರು ಅಷ್ಟೇ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಸುಂದರವಾಗಿದ್ದರೆ ಸಂತೋಷವಾಗುತ್ತದೆ" ಅಂದರು. ಅಷ್ಟರಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಹಳ್ಳಿಯ ವಯಸ್ಸಾದ ಮುದುಕಿ ಹಸಿವಾಗಿತ್ತು, ಮನೆಯ ಗೇಟ್ ತೆಗೆದು ಒಳ ಹೋಗಲು ಪ್ರಯತ್ನಿಸುತ್ತಿದ್ದಳು. ಗೇಟ್ ಶಬ್ದ ಕೇಳಿ ಮಾಲೀಕ, ಮುದುಕಿಯನ್ನು ನೋಡಿ, ನಾಯಿಯನ್ನು ಛೂ ಬಿಟ್ಟನು. ಪಾಪ ಆ ವಯಸ್ಸಾದ ಮುದುಕಿ ಒಳಗೆ ಹೋಗಲು ಆಗಲಿಲ್ಲ. ಆಗ ರಾನಡೆ ಹೇಳಿದರು. "ಮನೆ ಸೌಂದರ್ಯ ಬಣ್ಣದಿಂದ ಬರುವುದಲ್ಲ ಮನೆಯಲ್ಲಿ ಇರುವವರ ಪ್ರೇಮದಿಂದ ಬರುತ್ತದೆ". ಹಾಗೆ ನಮ್ಮ ದೇಹ ಬಹಳ ಸುಂದರ, ಅದ್ಭುತ ಇರಬಹುದು. ಆದರೆ ಮನಸ್ಸು ಕುರೂಪ ಇದ್ದರೆ, ಏನು ಮಾಡುವುದು?. ದೇಹ ಕಪ್ಪು ಇದ್ದರೇನು?. ಒರಟು ಇದ್ದರೇನು?. ಮನಸ್ಸು ಪ್ರೇಮ ಇತ್ತು ಅಂದರೆ ಅದು ಸುಂದರ ದೇಹ. ಒಳ ಸೌಂದರ್ಯ ಇಲ್ಲದೆ ಹೋದರೆ, ದರ್ಪ ಬರುತ್ತದೆ. ಇದಕ್ಕೆ ಡಂಬಾಚಾರ ಎನ್ನುತ್ತೇವೆ. ಒಳಗಿಲ್ಲ, ಮೇಲಿದೆ. ನಾವು ಹೊರಗೆ ಕಟ್ಟುತ್ತೇವೆ, ಒಳಗೆ ಕಟ್ಟುವುದನ್ನು ಮರೆಯುತ್ತೇವೆ. ನಾವು ಮೇಲೆ ತೋರಿಸುತ್ತೇವೆ, ಒಳಗೆ ಏನು ಇಲ್ಲ. ಪ್ಲಾಸ್ಟಿಕ್ ಹೂವು ಬಾಡುವುದಿಲ್ಲ. ಯಾವಾಗಲೂ ಅರಳಿರುತ್ತದೆ. ಆದರೆ ಏನು ಮಾಡುವುದು?. ಅದರೊಳಗೆ ಮಕರಂದ ಇಲ್ಲ. ಯಾವ ದುಂಬಿ ಹೋಗುವುದಿಲ್ಲ. ಆದರೆ ನಿಜ ಹೂ ಬಾಡುತ್ತದೆ. ಅದರಲ್ಲಿ ಮಕರಂದ ಇದೆ. ಅಲ್ಲಿಗೆ ದುಂಬಿ ಹಾರುತ್ತವೆ. ನಿಜ ಹೂವಿಗೆ ಒಳಗಿನ ಜೀವದಿಂದ ಹೊಮ್ಮಿದ ಸೌಂದರ್ಯ ಇದೆ. ಆದರೆ ಪ್ಲಾಸ್ಟಿಕ್ ಹೊರಗೆ ಮಾತ್ರ ಸೌಂದರ್ಯ. ಪ್ಲಾಸ್ಟಿಕ್ ಹೂ ಮೆಚ್ಚಿಕೊಳ್ಳುವುದು ಡಂಬ ಜೀವನ. ನಿಜ ಹೂ ಮೆಚ್ಚಿಕೊಳ್ಳುವುದು ಸಹಜ ಜೀವನ, ಪ್ರೇಮ ಜೀವನ. ಬದುಕನ್ನು ಮೇಲಿನಿಂದ ಕಟ್ಟುವುದಲ್ಲ, ಒಳಗಿನಿಂದ ಕಟ್ಟಬೇಕಾಗುತ್ತದೆ. ಮೇಲೆ ತೋರಿಸುವುದು ಎಷ್ಟು ಮಹತ್ವವೋ, ಒಳಗಿನ ಭಾವ ಅದಕ್ಕಿಂತ ಹೆಚ್ಚು ಮಹತ್ವದ್ದು. ಇದಕ್ಕೆ ಅಂತ ಸತ್ವ ಎನ್ನುವರು. ಅಂತಸತ್ವ, ವಸ್ತುವಿಗೆ ಬೆಲೆ ತಂದು ಕೊಡುತ್ತದೆ. ಅಂತಸತ್ವ ಇಲ್ಲದಿದ್ದರೆ ಕೇವಲ ಹೊದಿಕೆ ಇರುತ್ತದೆ. ದಾನ, ಸೇವೆಯಂತಹ ಕೆಲಸದಲ್ಲಿ ಪ್ರೇಮ ಭಾವದಲ್ಲಿ ತೊಡಗಬೇಕು. ಅದರಿಂದ ಕೆಲಸ ಅಚ್ಚುಕಟ್ಟಾಗಿ ಸುಂದರವಾಗಿರುತ್ತದೆ. ಏಕೆಂದರೆ ಒಳಗೆ ಪ್ರೇಮ ಭಾವ, ಹೊರಗೆ ಕೆಲಸ. ಆ ಪ್ರೇಮ ಭಾವ ಈ ಕೆಲಸಕ್ಕೆ ಸೌಂದರ್ಯ ಕೊಟ್ಟಿದೆ. ಇದು ಆಡಂಬರಕ್ಕೆ ಮಾಡಿದ್ದಲ್ಲ ಭಾವಕ್ಕಾಗಿ ಮಾಡಿದ್ದು. ಜನ ನೋಡಲಿ ಅಂತ ಮಾಡೋದು ಆಡಂಬರ. ಭಾವತುಂಬಿ ಮಾಡುವುದು ಆತ್ಮ ಸಂತೋಷಕ್ಕೆ. ಪೂಜೆ, ಧ್ಯಾನ, ದಾನ ಮಾಡುತ್ತಾ ಇದ್ದಾಗ ನಾಲ್ಕು ಜನ ಸಂತೋಷಪಟ್ಟರೆ ಇದು ಹೊರಗಿನ ಪೂಜೆ ಅಂತ ಭಾವಿಸಬೇಕು. ನಮಗೆ ಆನಂದ ಆಗುತ್ತಿದ್ದರೆ ಒಳಗಿನ ಪೂಜೆ ಎಂದು ಭಾವಿಸಬೇಕು. ಪೂಜೆ ಸತ್ವ ಪೂರ್ಣ ಆಗುವುದಿಲ್ಲ. ಮನುಷ್ಯನ ಕರ್ಮಗಳೆಲ್ಲ ಸತ್ವಪೂರ್ಣ ಆಗುವುದು ಭಾವದಿಂದ. ಪ್ರೇಮ ಭಾವವೇ ಅಂತಶಕ್ತಿ. ಯಾವುದೇ ಕೆಲಸವಾಗಲಿ ಪ್ರೇಮದಿಂದ ಮಾಡಿದರೆ ಆಯಿತು. ಯಾರು ನೋಡಿದರೇನು?. ಬಿಟ್ಟರೇನು?. ಮಾಡಿ ಸಂತೋಷ ಪಟ್ಟರೆ ಸಾಕು.
ಒಬ್ಬ ಹುಡುಗನಿಗೆ ಹಸಿವು ಆಗಿದೆ, ದಾಹ ಆಗಿದೆ. ಕರೆದು ಪ್ರೀತಿಯಿಂದ ನೀಡಿದರೆ ಸತ್ವ ಪೂರ್ಣ ದಾನ. ಅದರ ಬದಲು ಯಾರು ಇಲ್ಲ ಅಂತ ಹೊರಗೆ ಕಳುಹಿಸಿದರೆ, ಯಾರಾದರೂ ನೋಡುತ್ತಾ ಇದ್ದಾಗ ಕರೆದರೆ ಡಂಭಾಚಾರ. ಗೆಳೆಯರಿದ್ದಾಗ ಕರೆದು ತಿನ್ನುವುದಕ್ಕೆ ನೀಡಿ, ಕಳುಹಿಸಿದರೆ ಗೆಳೆಯರು ಹೊಗಳಿಕೆ ಶುರು ಮಾಡಿದರೆ ಡಂಬಾಚಾರ. ಬರೀ ತೋರಿಸುವುದಕ್ಕೆ ಮಾಡುವುದು. ನಮ್ಮ ಮನಸ್ಸಿನ ಅಂಗಳದಲ್ಲಿ ಹೊಲಸು ಹಾಕಿಕೊಂಡರೆ, ಅಂತಹ ಬದುಕು ಹೊಲಸು ಬದುಕು.
ಕನಕದಾಸರು ಹಾಡಿದಾಗ ಶ್ರೀ ಕೃಷ್ಣ ಗೋಡೆ ಸೀಳಿ ದರ್ಶನ ನೀಡಿದ, ಇದು ಅಂತಹ ಸತ್ವದಾನ. ಜನ ಇಲ್ಲ ಅಂತ ಹಾಡದೆ ಹೋಗುತ್ತಾರಲ್ಲ ಅದು ಡಂಬಾಚಾರ. ತಾಯಿ, ಹೆಂಡತಿ ಊಟ ನೀಡುವುದು ಹೃದಯದಿಂದ ಕೂಡಿದ್ದು. ಪಂಚತಾರಾ ಹೋಟೆಲ್ ನವರು ನೀಡುವುದು ಡಂಬಾಚಾರ. ಅವರು ಮಾಡುವ ನಮಸ್ಕಾರ, ಸತ್ಕಾರ ಎಲ್ಲದರ ಹಿಂದೆ ಹಣ ಇದೆ, ಪ್ರೀತಿ ಇಲ್ಲ. ಹಣ ಇಲ್ಲದಿದ್ದಾಗ ಅವರು ತೋರುವ ತಾತ್ಸಾರ ಇವೆಲ್ಲ ಡಂಬಾಚಾರ. ಇದರಿಂದ ಹೊರಗಿನ ಸುಖ ಅಷ್ಟೇ, ಒಳಗೆ ಸಂತೋಷ ಇಲ್ಲ. ನಮ್ಮ ಸುತ್ತಮುತ್ತ ಇಂತಹ ಡಂಬಾಚಾರ ಜನರೇ ತುಂಬಿದ್ದಾರೆ. ಮಕ್ಕಳೇ, ನಿಮ್ಮ ಬದುಕು ಸುಂದರವಾಗಲು ಡಂಬಾಚಾರ ಬೇಡ ಅಲ್ಲವೇ..?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************