ಸ್ಫೂರ್ತಿಯ ಮಾತುಗಳು : ಸಂಚಿಕೆ - 164
Monday, May 12, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 164
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು ಜ್ಞಾನ ಮೂಲಗಳು. ಮತಿಯೆಂದರೆ ಮಾನಸಿಕ ಜ್ಞಾನ. ಶೃತಿಯೆಂದರೆ ಸಂಪಾದಿಸಿದ ಜ್ಞಾನ, ಅವಧಿಯೆಂದರೆ ಬಾಹ್ಯ ಸಂವೇದನೆ. ವೀರನಾಥನಿಗೆ ಅವರ ಗುರು ಇಟ್ಟ ಹೆಸರು ಸನ್ಮತಿ. ಸನ್ಮತಿಯೆಂದರೆ ಉತ್ತಮ ಮತಿ ಎಂದು ಅರ್ಥ. ಮತಿಯೇ ಜ್ಞಾನ.
ಜ್ಞಾನದ ಬಗ್ಗೆ ಸರ್ವಜ್ಞನ ಮಾತು.
ಜ್ಞಾನದಿಂ ಮೇಲಿಲ್ಲ, ಶ್ವಾನದಿಂ ಕೀಳಿಲ್ಲ
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ
ಜ್ಞಾನವೇ ಮೇಲು ಸರ್ವಜ್ಞ|
ಜ್ಞಾನದಿಂದಲಿ ಇಹವು, ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ ಸರ್ವಜ್ಞ|
ಜ್ಞಾನದ ಪ್ರಭಾವ ಸರ್ವಜ್ಞನ ಈ ಮಾತುಗಳಲ್ಲಿ ಅರ್ಥವತ್ತಾಗಿ ಮೂಡಿ ಬಂದಿದೆ. ಆದರೆ ಜ್ಞಾನವು ತ್ರಿಕಾಲಜ್ಞಾನವಾಗಿರಬೇಕು. ತ್ರಿಲೋಕ ಸಂಚಾರಿ ನಾರದನಿಗೂ ವಿಶೇಷ ಗೌರವ ಸಲ್ಲುತ್ತಿತ್ತೆಂದರೆ ಅದು ಅವನ ಜ್ಞಾನಕ್ಕೆ ತಾನೇ? ಜ್ಞಾನದ ಮೂಲಗಳನ್ನು ವ್ಯಾಖ್ಯಾನಿಸುವಾಗ ಸೋಮೇಶ್ವರ ಶತಕದ ಚರಣವೊಂದು ನೆನಪಾಗುತ್ತದೆ.
ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ||
ಜ್ಞಾನವು ಹೇಗೆ ನಮಗೊದಗುತ್ತದೆ. ನಾವು ಸರ್ವಜ್ಞರಾಗುವುದು ಹೇಗೆ ಎಂಬುದನ್ನು ಸೋಮೇಶ್ವರ ಶತಕ ತಿಳಿಸುತ್ತದೆ. ವರ್ಧಮಾನರು ಸರ್ವಜ್ಞರಾದುದೂ ಹಾಗೆಯೇ. ಅವರು ಸುಜ್ಞಾನಿಯಾಗಿದ್ದರು. ಅವರ ಮಾನಸಿಕ ಅಥವ ಸ್ವಯಂ ಜ್ಞಾನ ಬಹಳ ಆಳ ಮತ್ತು ಅಗಲ. ಮತಿಯು (ಸ್ವಯಂ ಜ್ಞಾನ, ಮಾನಸಿಕ ಜ್ಞಾನ) ಬಲವಾಗಿದ್ದವರು ಭಗವಂತನಿಗೆ ಸಮಾನರಾಗುತ್ತಾರೆ. ಅದೇ ರೀತಿಯಲ್ಲಿ ಗುರು ಮುಖೇನ ಆಲಿಸಿದ, ಅಥವಾ ಹಿರಿಯರ ಬಾಯಿಗಳಿಂದ ಆಲಿಸಿದ ಜ್ಞಾನವೂ ಸ್ವಯಂ ಜ್ಞಾನದ ಬೇರನ್ನು ಬಲಗೊಳಿಸುತ್ತದೆ. ಜ್ಞಾನದ ಆಳ ಹರವುಗಳು ಮತ್ತೂ ವಿಶಾಲಗೊಳ್ಳುತ್ತವೆ. ಮತಿಯೊಳಗಿನ ಸುಜ್ಞಾನ ಮತ್ತು ಇತರರಿಂದ ಪಡೆದ (ಶೃತ) ಜ್ಞಾನದ ಜೊತೆಗೆ ಬಾಹ್ಯ ಸಂವೇದನೆಯ ಮೂಲಕ ಪಡೆಯುವ ಜೀವನಾನುಭವವು ಮನುಷ್ಯನನ್ನು ಬಹಳ ಎತ್ತರಕ್ಕೇರಿಸುತ್ತದೆ. ಆತ ಭಗವಾನ್ ಆಗುತ್ತಾನೆ. ವರ್ಧಮಾನ ಮಹಾವೀರರು ಭಗವಾನ್ ಆಗಲು ಅವರ ಅತುಲ್ಯ ಮಹಾಜ್ಞಾನವೇ ಕಾರಣ. ಶೃತ ಮತ್ತು ಪಠಿತ ಜ್ಞಾನವು ಅನುಭವಗಳೊಂದಿಗೆ ಬೆರೆತಾಗ ಅದು ಪಾಂಡಿತ್ಯವಾಗುತ್ತದೆ. ಪಾಂಡಿತ್ಯ ಬಂದರೆ ಸಾಕೇ? ಪಾಂಡಿತ್ಯವು ಜೀವನದ ಅನುಸರಣೆಯಾಗಬೇಕು, ಸಹಜೀವಿಗಳಿಗೆ ಹಿತವಾಗಬೇಕು, ಲೋಕ ಹಿತಕ್ಕೇ ಕಾರಣವಾಗಬೇಕು. ಅದಕ್ಕಾಗಿ ಪಾಂಡಿತ್ಯವು ಸದಾ ವಿತರಣೆಯಾಗುತ್ತಲೇ ಇರಬೇಕು. ಅದು ಲೋಕ ಹಿತ ಜ್ಞಾನವಾಗುತ್ತದೆ. ಪಠಣ, ಮನನ, ಪ್ರವಚನಗಳೂ ಆಗುತ್ತಿರಬೇಕು.
ಗ್ರಹಾಂಬೆಲ್ ವಿದ್ಯುತ್ ಬಲ್ಬು ಕಂಡುಕೊಂಡ. ಅದು ವಿಶೇಷ ಜ್ಞಾನ. ಅವನ ಜ್ಞಾನವು ಲೋಕಕ್ಕೆ ವಿತರಣೆಯಾಗದೇ ಅತ ಅಸ್ತಂಗತನಾಗಿರುತ್ತಿದ್ದರೆ ಲೋಕಕ್ಕೆ ಏನೂ ಪ್ರಯೋಜನವಾಗುತ್ತಿರಲಿಲ್ಲ. ಅದನ್ನವನು ಲೋಕದ ಮುಂದೆ ಪ್ರತ್ಯಕ್ಷೀಕರಿಸಿದ, ಪ್ರವಚಿಸಿದ. ಅವನ ಜ್ಞಾನ ಲೋಕಕ್ಕೇ ಬೆಳಕಾಯಿತು. ಪಾಂಡಿತ್ಯವು (ಜ್ಞಾನ) ಶೋಧನೆಗೆ ಕಾರಣವಾಗುತ್ತದೆ. ಸಂಶೋಧನೆಗಳು ಸಮಾಜಕ್ಕೆ ಬೆಳಕಾಗುತ್ತವೆ, ದಾರಿದೀಪವಾಗುತ್ತವೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************