-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 166

ಸ್ಫೂರ್ತಿಯ ಮಾತುಗಳು : ಸಂಚಿಕೆ - 166

ಸ್ಫೂರ್ತಿಯ ಮಾತುಗಳು : ಸಂಚಿಕೆ - 166
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
               
ಘೃಷ್ಟಂ ಘೃಷ್ಟಂ ಪುನರಪಿ ಪುನಶ್ಚಂದನಂ ಜಾರುಗಂಧಂ
ಛಿನ್ನಂ ಛಿನ್ನಂ ಪುನರಪಿ ಪುನಃ ಸ್ವಾದುಚೈವೇಕ್ಷುದಂಡಂ
ದಗ್ಧಂ ದಗ್ಧಂ ಪುನರಪಿ ಪುನ: ಕಾಂಚನಂ ಕಾಂತವರ್ಣಂ
ನ ಪ್ರಾಣಾಂತೇ ಪ್ರಕೃತಿವಿಕೃತಿರ್ಜಾಯತೇ ಜೋತ್ತಮಾನಾಂ

ದೊರಗಾದ ಕಲ್ಲಿನ ಮೇಲೆ ಎಷ್ಟು ಬಾರಿ ಅರೆದರೂ ಗಂಧದ ಸುವಾಸನೆ ವರ್ಧಿಸುತ್ತದೆ. ಕಬ್ಬಿನ ಕೋಲನ್ನು ಎಷ್ಟು ಬಾರಿ ಕತ್ತರಿಸಿದರೂ ಅದರ ಸಿಹಿಗುಣ ಹೋಗದು. ದಹಿಸುವ ಬೆಂಕಿಯಲ್ಲಿ ಚಿನ್ನವನ್ನು ಮತ್ತೆ ಮತ್ತೆ ಕಾಯಿಸಿದರೂ ಅದರ ಕಾಂತಿ ಹೆಚ್ಚುವುದೇ ಹೊರತು ಕಡಿಮೆಯಾಗದು. ಹಾಗೆಯೇ ಕಷ್ಟಗಳೇನೇ ಬರಲಿ, ಉತ್ತಮರ ಗುಣದಲ್ಲಿ ಮಾರ್ಪಾಟು ಇರದು. 

ಏನೇ ಸಂಕಟ ಬಂದರೂ ಉತ್ತಮರಾಗಿದ್ದರೆ, ನಾವೂ ಹೆಚ್ಚು ಹೆಚ್ಚು ಪ್ರಕಾಶಿಸುತ್ತೇವೆಯೇ ಹೊರತು ಕಳೆಗುಂದುವುದಿಲ್ಲ. ಉತ್ತಮರಾಗುವುದು ಹೇಗೆ? ಉತ್ತಮರಾಗಲು ಜ್ಞಾನಿಗಳಾಗಿರಬೇಕು. “ಜಾನಾತಿ ಇತಿ ಜ್ಞಾನಿ:” ಎನ್ನುವರು. ಜಾನಾತಿ ಎಂದರೆ ತಿಳಿದವನು ಎಂದರ್ಥ. ಏನನ್ನು ತಿಳಿದಿರಬೇಕು? ನಾರದರನ್ನು ತ್ರಿಲೋಕ ಜ್ಞಾನಿಯೆನ್ನುವರು. ಅವರಿಗೆ ಸ್ವರ್ಗ, ಮರ್ತ್ಯ ಮತ್ತು ಪಾತಾಳ ಎಂಬ ಮೂರೂ ಲೋಕಗಳ ಜ್ಞಾನವಿತ್ತು ಎನ್ನುವರು. ಹಾಗೆಯೇ ಅವರನ್ನು ತ್ರಿಕಾಲ ಜ್ಞಾನಿ ಎಂದೂ ಹೇಳುತ್ತಾರೆ. ಭೂತ, ವರ್ತಮಾನ ಮತ್ತು ಭವಿಷ್ಯತ್‌ ಕಾಲಗಳೇ ಆ ಮೂರು ಕಾಲಗಳು. ನಾರದರಿಗೆ ಕಲಹ ಪ್ರಿಯ ಎನ್ನುವರು. ಕ ಎಂದರೆ ಕಮಲನಾಭ ಎಂದರೆ ಬ್ರಹ್ಮ, ಲ ಎಂದರೆ ಲಕ್ಷ್ಮೀ ಪತಿ ಅಥವಾ ಮಹಾ ವಿಷ್ಣು. ಹ ಎಂದರೆ ಹರ ಅಥವಾ ಶಿವ. ನಾರದರು ತ್ರಿಕಾಲ ಜ್ಞಾನಿಯಾದುದರಿಂದಲೆ ಉತ್ತಮರೆನಿಸಿಕೊಂಡರು. “ಕಲಹ” ಪ್ರಿಯರಾದರು.

ದೇವರ ವಿಗ್ರಹಗಳು ಅಥವಾ ಮೂರ್ತಿಗಳು ಪೂರ್ವತಃ ಗಟ್ಟಿಯಾದ ಬಂಡೆ ಕಲ್ಲುಗಳು. ಆ ಕಲ್ಲುಗಳಿಗೆ ಸಂಸ್ಕಾರ ಕೊಟ್ಟು ಶಿಲ್ಪಿಯು ಮೂರ್ತಿಯನ್ನು ಕೆತ್ತುತ್ತಾನೆ. ಉಳಿಯ ಪೆಟ್ಟೇ ಸಂಸ್ಕಾರದ ಒಂದು ಭಾಗ. ಪೆಟ್ಟು ಬಿದ್ದಂತೆ ವಿಗ್ರಹ ನಯ ಅಥವ ನುಣ್ಣನೆಯಾಗುತ್ತದೆ, ಉತ್ತಮ ಸ್ವರೂಪ ಪಡೆಯುತ್ತದೆ. ಪ್ರತಿಷ್ಠಾ ಸಂಸ್ಕಾರದ ನಂತರ ಪೂಜನೀಯವಾಗುತ್ತದೆ. ಆ ಮೂರ್ತಿಯನ್ನು ದೇವರ ಪ್ರತಿರೂಪವಾಗಿ ಆರಾಧಿಸುತ್ತೇವೆ. ನಾವೂ ಆರಾಧನೆ ಅಥವಾ ಗೌರವ ಪಾತ್ರರಾಗಲು ನಮಗೂ ಹಲವು ಪೆಟ್ಟುಗಳು ಬೀಳಲೇ ಬೇಕು. ಜೀವನದಲ್ಲಿ ಪಡೆಯುವ ಸೋಲುಗಳು ಮೊದಲ ಪೆಟ್ಟು. ನಾವು ಮಾಡುವ ತಪ್ಪುಗಳು ಮತ್ತು ಪಡೆಯುವ ಅನುಭವಗಳೂ ಬೇರೆ ಬೇರೆ ಪೆಟ್ಟುಗಳೇ ಆಗಿರುತ್ತವೆ. ಬಿದ್ದವನು ಮತ್ತೆ ಅದೇ ಜಾಗದಲ್ಲಿ ಬೀಳಲಾರನಂತೆ. ಜಾಗರೂಕತೆ ವಹಿಸುತ್ತಾನೆ. ಜಾಗರೂಕತೆಯನ್ನು ಅನುಭವವೇ ಕಲಿಸುತ್ತದೆ.
ವಿದ್ಯಾಸಂಪನ್ನರನ್ನು ಉತ್ತಮರೆಂದು ಭಗವದ್ಗೀತೆಯ ಐದನೇ ಅಧ್ಯಾಯದ ಶ್ಲೋಕ ಸಂಖ್ಯೆ ಹದಿನೆಂಟರಲ್ಲಿ ಹೀಗೆ ವಿವರಿಸಿದೆ:

ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ 
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ

ವಿದ್ಯಾ ವಿನಯ ಸಂಪನ್ನರು ಯಾಕೆ ಉತ್ತಮರೆಂದು ಈ ಶ್ಲೋಕದಲ್ಲಿ ಕಾರಣವಿದೆ. ಪಂಡಿತರು ಸಮದರ್ಶಿಗಳು ಎಂದು ಶ್ಲೋಕದ ಕೊನೆಯಲ್ಲಿದೆ. ಪಂಡಿತರೆಂದರೆ ವಿದ್ಯಾವಂತ ಅಥವಾ ಜ್ಞಾನಿ. ವಿದ್ಯೆ ವಿನಯವನ್ನು ಕಲಿಸುತ್ತದೆ ಎಂದು ಹಿರಿಯರನೇಕರು ಹೇಳಿದ್ದಾರೆ. ವಿನಯಿಯಾದವನು ಸಮದರ್ಶಿ ಎಂದರೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ. ಜಾತಿ, ಅಂತಸ್ತು, ಪಕ್ಷ, ಧರ್ಮ ಇವಾವುದನ್ನೂ ಗಮನಿಸುವುದಿಲ್ಲ. ಅವನು ಬ್ರಾಹ್ಮಣರಲ್ಲಿ ಗೋವುಗಳಲ್ಲಿ ಆನೆಗಳಲ್ಲಿ ನಾಯಿಗಳಲ್ಲಿ ಮೇಲು ಕೀಳೆಂದು ವಿಂಗಡಣೆ ಮಾಡುವುದಿಲ್ಲ. ಚಂಡಾಲನನ್ನೂ ಇತರೆಲ್ಲರಂತೆ ಗೌರವಿಸುತ್ತಾನೆ, ಆದರಿಸುತ್ತಾನೆ, ಪ್ರೀತಿಸುತ್ತಾನೆ. ಆದುದರಿಂದ ವಿನಯಿಯೇ ಉತ್ತಮ. ವಿನಯಿಯಾಗಲು ಜ್ಞಾನಿಯಾಗಬೇಕು. ಬ್ರಾಹ್ಮಣ ಎಂದರೆ ಜ್ಞಾನಿ, ಜಾತಿಯಲ್ಲ. ಆದುದರಿಂದ ಉತ್ತಮರೆಂದರೆ ಸಮದರ್ಶಿ, ವಿನಯಿ. ಅನುಭವಿ ಮತ್ತು ಜ್ಞಾನಿಯೆಂಬುದರಲ್ಲಿ ಸಂಶಯವಿಲ್ಲ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article