ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 75
Tuesday, April 8, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 75
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ನಾವು ಕಣ್ಣಿನ ಒಳಗಡೆ ಬಣ್ಣದ ಲೋಕದ ಬಗ್ಗೆ ಮಾತಾಡುತ್ತಿದ್ದೆವು. ಕೇವಲ ಮೂರು ರೀತಿಯ ಕೋನ್ ಗಳು ಸಂಶ್ಲೇಷಿಸುವ ದೃಷ್ಟಿಯನ್ನು ನಾವು ತ್ರಿವರ್ಣ ದೃಷ್ಟಿ ಅಂತ ಏನೋ ಕರೆಯುತ್ತೇವೆ. ಆದರೆ ನಾವು ನೋಡುವ ಬಣ್ಣಗಳು ಒಂದೂವರೆ ಲಕ್ಷಕ್ಕೂ ಅಧಿಕ ಎಂಬುದು ನಮಗೆ ಕಣ್ಣಿನ ಮತ್ತು ಮೆದುಳಿನ ಸಾಮರ್ಥ್ಯದ ಅಗಾಧತೆಯನ್ನು ನಾವು ಕಲ್ಪಿಸಿಕೊಂಡು ಹೆಮ್ಮೆಪಡಬೇಕಾಗಿದೆ. ಆದರೆ ಈ ಬಣ್ಣಗಳು ಎಲ್ಲಿಂದ ಬರುತ್ತವೆ? ನಾವು ನೋಡುವ ವಸ್ತುವಿನಿಂದಲೇ? ಅಲ್ಲ ಬದಲಾಗಿ ಅವುಗಳು ಪ್ರತಿಫಲಿಸುವ ಬೆಳಕಿನಿಂದ. ಅಂದರೆ ಬಣ್ಣ ಅಡಗಿರುವುದು ಬೆಳಕಿನಲ್ಲಿ. ಕೆಲವೆಡೆ ಅಂದರೆ ಸಾಮಾನ್ಯವಾಗಿ ಹಿಲ್ ಸ್ಟೇಶನ್ ಗಳಲ್ಲಿ ಮತ್ತು ಕಾರ್ಖಾನೆಗಳ ಆವರಣಗಳಲ್ಲಿ ಹಳದಿ ಬೆಳಕು ಬೀರುವ ದೀಪಗಳನ್ನು ನೀವು ನೋಡಿರುತ್ತೀರಿ. ಇವುಗಳು ಸೋಡಿಯಂ ಆವಿ ದೀಪಗಳು (sodium vapour lamps). ಇವುಗಳು ಹೊರಸೂಸುವ ಬೆಳಕು ಹಳದಿ ಬಣ್ಣದ್ದಾಗಿರುತ್ತವೆ. ಇವುಗಳಲ್ಲಿ ಕೇವಲ ಒಂದೇ ಒಂದು ಬಣ್ಣವಿರುತ್ತದೆ. ಇದರಲ್ಲಿ 589.2 nm ನಲ್ಲಿ ಒಂದು ಪ್ರಬಲವಾದ ಒಂದು D ಗೆರೆ (D - line) ಎಂಬ ತರಂಗಾಂತರವಿದೆ. ಅಂದರೆ ಕೇವಲ ಹಳದಿ ತರಂಗಾಂತರ ಮಾತ್ರ ಇರುವುದರಿಂದ ಇದು ಏಕವರ್ಣೀಯ (monochromatic) ಬೆಳಕು. ಬೀದಿ ದೀಪಗಳಲ್ಲಿ ಬಳಸುವ ಸೋಡಿಯಂ ದೀಪಗಳು ಕಡಿಮೆ ಒತ್ತಡದವು (LPS). ಇವುಗಳಲ್ಲಿ ಹಳದಿ ಬಣ್ಣ ಮಾತ್ರ ಇದೆ. ಕಾರ್ಖಾನೆಗಳಲ್ಲಿ ಬಳಸುವಂತವು ಹೆಚ್ಚಿನ ಒತ್ತಡದವು (HPS) ಇವುಗಳಲ್ಲಿ ಹಳದಿಯೊಂದಿಗೆ ಕಿತ್ತಳೆ ಕೂಡಾ ಇರುತ್ತವೆ. ಇವುಗಳು ಒಂದೇ ಬಣ್ಣ ಹೊಂದಿರುವುದರಿಂದ ವಸ್ತುವಿನ ನಿಜವಾದ ಬಣ್ಣ ತಿಳಿಯುವುದಿಲ್ಲ ಆದರೂ ಅವುಗಳನ್ನು ಏಕೆ ಬಳಸಲಾಗುತ್ತದೆ ಎಂದು ಕೇಳುತ್ತೀರಾ? ಹಳದಿ ಬೆಳಕು ಎತ್ತರದ ಪ್ರದೇಶದ ಮಂಜನ್ನು ತೂರಿಕೊಂಡು ಹೋಗಬಲ್ಲುದು. ರಾತ್ರಿಯ ವೇಳೆಯ ದೃಷ್ಟಿಗೆ ಬಣ್ಣದ ದೃಷ್ಟಿ ಮುಖ್ಯವಲ್ಲ. ಈ ಬಲ್ಬುಗಳ ಬಾಳಿಕೆ ಜಾಸ್ತಿ ಮತ್ತು ವಿದ್ಯುತ್ ಬಳಕೆ ಕಡಿಮೆ. ಆದರೆ ಈ ಬಲ್ಬುಗಳು ಹೊತ್ತಿಕೊಳ್ಳುವುದು ನಿಧಾನ. ಇದೇ ರೀತಿ ರಸ್ತೆ ಸಿಗ್ನಲ್ ಗಳಲ್ಲಿ ಬಳಸುವ ಕೆಂಪು, ಹಸಿರು ಮತ್ತು ಹಳದಿಗಳೂ ಏಕವರ್ಣೀಯ ಬೆಳಕುಗಳು. ಇವೂ ಕೂಡಾ ಕಡಿಮೆ ತರಂಗಾಂತರದ ಬೆಳಕುಗಳಾಗಿರುವುದರಿಂದ ಮಂಜನ್ನೂ ತೂರಿಕೊಂಡು ಹೋಗಿ ಸ್ಪಷ್ಟವಾಗಿ ಕಾಣಿಸುತ್ತವೆ. ಇದಕ್ಕೆ ಭಿನ್ನವಾಗಿ ಪಾದರಸ ಆವಿ ದೀಪಗಳು (Mercury vapour lamps) ನೀಲಿ ಮಿಶ್ರಿತ ಹಸಿರು (bluish green) ಅಥವಾ ಹಸಿರು ಮಿಶ್ರಿತ ನೀಲಿ (greenish blue) ಆಗಿರುತ್ತವೆ. ಆದರೆ ಅವುಗಳಲ್ಲಿ ಕೆಂಪು ಬಣ್ಣ ಇರುವುದಿಲ್ಲ. ಇದು ಬಹುವರ್ಣೀಯವಾದರೂ (polychromatic) ಕೂಡಾ ಏಳೂ ಬಣ್ಣಗಳನ್ನು ಹೊಂದಿಲ್ಲ. ಲೇಸರ್ ಗಳನ್ನು ತೆಗೆದುಕೊಂಡರೆ ಅವು ಏಕವರ್ಣೀಯ ಬೆಳಕುಗಳು. ಆದರೆ ಸೂರ್ಯನ ಬೆಳಕು ಬಹುವರ್ಣೀಯ. ಅದು ಎಲ್ಲ ಏಳು ಬಣ್ಣಗಳನ್ನು ಹೊಂದಿರುತ್ತವೆ.
ನೀವು ಒಂದು ಲೋಹದ ವಸ್ತುವನ್ನು (ಉದಾಹರಣೆಗೆ ಕಬ್ಬಿಣ) ಕಾಯಿಸಿದಿರಿ ಎಂದಿಟ್ಟುಕೊಳ್ಳಿ. ಆ ಲೋಹ ಆಮ್ಲಜನಕದೊಂದಿಗೆ ವರ್ತಿಸಿ ಆ ಲೋಹದ ಮೇಲೆ ಅದರ ತೆಳುವಾದ ಆಕ್ಸೈಡ್ ಪದರ ರೂಪುಗೊಳ್ಳುತ್ತದೆ. ಈ ಪದರವು ಲೋಹ ಮತ್ತೆ ಆಮ್ಲಜನಕದೊಂದಿಗೆ ವರ್ತಿಸದಂತೆ ತಡೆಯುತ್ತದೆ. ಈ ಆಕ್ಸೈಡ್ ಕಡಿಮೆ ಉಷ್ಣತೆಯಲ್ಲಿ ತನ್ನಿಂದ IR ಅಂದರೆ ಶಾಖವನ್ನು ಹೊರಹಾಕುತ್ತದೆ. ಮತ್ತೆ ಕಾಯಿಸಿದರೆ ಕೆಂಪಾಗುತ್ತದೆ (red hot). ಮತ್ತೂ ಬಿಸಿ ಮಾಡುತ್ತಾ ಹೋದ ಹಾಗೆ ಅದು ಹೆಚ್ಚಿನ ಉಷ್ಣತೆಯಲ್ಲಿ ಇತರ ತರಂಗಾಂತರದ ಬೆಳಕನ್ನು ಹೊರಸೂಸಿದರೆ ಲೋಹದ ಉಷ್ಣತೆ 1573K (1300° C) ಕ್ಕಿಂತ ಹೆಚ್ಚಾದಾಗ ಅವು ಬಿಳಿಯ ಬೆಳಕನ್ನು ಹೊರ ಸೂಸಲು ಪ್ರಾರಂಭಿಸುತ್ತವೆ. ಮೇಣದ ಬತ್ತಿಯ ಜ್ವಾಲೆ ಕೆಂಪಾಗಿರುತ್ತದೆ ಎಂದರೆ ಅದರ ಉಷ್ಣತೆಯನ್ನು ಊಹಿಸಿ.
ನಮ್ಮ ಅತಿದೊಡ್ಡ ಬಿಳಿಯ ಬೆಳಕಿನ ಮೂಲ ಸೂರ್ಯನ ಮೇಲ್ಮೈ. ಹಾಗಾದರೆ ಸೂರ್ಯನ ಮೇಲ್ಮೈ ವಿಸ್ತೀರ್ಣ ಎಷ್ಟಿರಬಹುದು? ಮಕ್ಕಳೇ ಇನ್ನೇನು ರಜೆ ಆರಂಭವಾಗಿಯೇ ಬಿಟ್ಟಿತು. ರಜೆಯಲ್ಲಿ ಗೂಗಲ್ ಸಹಾಯದಿಂದ ಈ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************