-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 159

ಸ್ಫೂರ್ತಿಯ ಮಾತುಗಳು : ಸಂಚಿಕೆ - 159

ಸ್ಫೂರ್ತಿಯ ಮಾತುಗಳು : ಸಂಚಿಕೆ - 159
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಕುಣಿಯು ನುಂಗಿತ್ತ!

ಈಗಿನ ಜನಮಾನಸಕ್ಕೆ ಮಗ್ಗವು ಅಪರಿಚಿತವಾಗಿ ಇರಬಹುದಾದರೂ ಅದರ ಬಗ್ಗೆ ಕೇಳದವರು ಮತ್ತು ಅರಿಯದವರು ವಿರಳ. ನಮ್ಮ ಎಳವೆಯಲ್ಲಿ ಬಟ್ಟೆ ನೇಯುವುದು ಗುಡಿಕೈಗಾರಿಕೆ. ಅಸಂಖ್ಯ ಜನರು ಮಗ್ಗದ ಮೂಲಕವೇ ಸಂಸಾರ ನಡೆಸಲು ಸಂಪಾದನೆ ಮಾಡುತ್ತಿದ್ದ ಕಾಲವದು. ಮಗ್ಗದಿಂದ ಬಟ್ಟೆ ಹೆಣೆಯುವ ಅನೇಕ ಕುಟುಂಗಳಿದ್ದುವು. ಕೆಲವರಿಗೆ ಮಗ್ಗದಲ್ಲಿ ವಸ್ತ್ರ ತಯಾರಿಸುವುದೇ ಕುಲ ಕಸುಬು. ಮಗ್ಗಗಳು ಮಾನವನ ದೈಹಿಕ ಶಕ್ತಿಯ ಸಹಾಯದಿಂದ ನಡೆಯುತ್ತಿದ್ದ ಶೆರೀಫರ ಕಾಲ. ಆದರೆ ಇಂದು ಶೆರೀಫರ ಕಾಲದ ಮಗ್ಗ ಕಣ್ಮರೆಯಾಗಿದೆ. ಇಂದು ಯಂತ್ರಚಾಲಿತ ಮಗ್ಗವಿದೆ. ಅಂದು ಇದ್ದ ಮಗ್ಗ ಇಂದು ಚಿತ್ರಕ್ಕೇ ಮಾತ್ರವೇ ಮೀಸಲಿರಬಹುದು.
ಮಗ್ಗಕ್ಕೆ ಎರಡು ಗೂಟಗಳು. ಈ ಗೂಟವನ್ನು ನೆಲದಲ್ಲಿರುವ ಕುಣಿ (ಕುಳಿ, ಹೊಂಡ) ಯಲ್ಲಿ ನಿಲ್ಲಿಸಿ ದೃಢಗೊಳಿಸಲಾಗುತ್ತದೆ. ಗೂಟಕ್ಕೆ ಎರಡು ಬದಿಗಳಿಂದ ಹಗ್ಗ ಇಳಿಸಲಾಗುತ್ತದೆ. ಕೈಯಲ್ಲಿರುವುದು ಲಾಳಿ. ನೆಯ್ಗೆ ಮಾಡುವ ಮಗ್ಗದ ಪಕ್ಕದಲ್ಲಿ ಉದ್ದುದ್ದವಾಗಿ ದಾರ (ನೂಲು) ಹಾಕಿರುತ್ತಾರೆ. ಇದಕ್ಕೆ ಹಾಸು ಎನ್ನುವರು. ಅಡ್ಡಲಾಗಿ ಹಾಕಿದ ನೂಲು ಹೊಕ್ಕು. ಹಾಸು ಮತ್ತು ಹೊಕ್ಕುಗಳು ಹೆಣೆಯಲ್ಪಟ್ಟಂತೆ ಬಟ್ಟೆಯಾಗಲಾರಂಭ. ಲಾಳಿಯನ್ನು ಹಿಡಿದ ಅಣ್ಣ ಹಾಸು ಹೊಕ್ಕುಗಳನ್ನು ಸೇರಿಸಿ ಬಟ್ಟೆ ಮಾಡುವ ಕರ್ಮಿ (ಕೆಲಸಗಾರ). ಲಾಳಿಯ ನಿಯಂತ್ರಣಕ್ಕೆ ಸರಿಯಾಗಿ ದಾರಗಳು ಹೆಣೆಯಲ್ಪಟ್ಟಾಗ ಸುಂದರವಾದ ನೆಯ್ಗೆ ಬಟ್ಟಯಾಗುತ್ತದೆ. ಲಾಳಿಯು ಸಂಪೂರ್ಣವಾಗಿ ಮಗ್ಗದವನ ನಿಯಂತ್ರಣದಲ್ಲಿರುತ್ತದೆ. ಬಟ್ಟೆಗೆ ಪಥ ಅಥವಾ ದಾರಿಯೆನ್ನುವರು. ನೇಯ್ಗೆಯಿಂದ ಪ್ರತಿಫಲವಾಗಿ ಜೀವನದ ಪಥವು ದೊರೆಯುತ್ತದೆ. ಜೀವನಕ್ಕೆ ಸೂಕ್ತವಾದ ಪಥದ ಅರಿವುಂಟಾಗುತ್ತದೆ. ಪಥವು (ಬಟ್ಟೆಯು) ದೊರೆತ ಮೇಲೆ ಮಗ್ಗಕ್ಕೆ ಕೆಲಸವಿಲ್ಲ. ಹಗ್ಗ ಮಗ್ಗವನ್ನು ನುಂಗಿತು. ಮೋಕ್ಷದ ಪಥವು ದೊರೆತಮೇಲೆ ನಿಯಂತ್ರಿಸುವ ಲಾಳಿಗೂ ಕೆಲಸವಿಲ್ಲ. ಲಾಳಿಯನ್ನೂ ಮಗ್ಗವು ನುಂಗಿತು. ಜೀವನದ ಪಥವು ದೊರೆತಮೇಲೆ ಮೋಕ್ಷದ ದಾರಿಯೂ ಸುಗಮ. 

ಕುಣಿಯೆಂದರೆ (ಹೊಂಡ) ದೇವರ ಮೇಲಿನ ಆಳವಾದ ಭಕ್ತಿ ಅಥವಾ ಶ್ರದ್ಧೆಯ ಸಂಕೇತ. ಮಗ್ಗದ ಲಾಳಿ ಹಿಡಿದ ಕರ್ಮಿಗೆ ಬಟ್ಟೆ ದೊರೆತ ಮೇಲೆ ಎಂದರೆ ಜೀವನದ ಪಥವು ದೊರೆತ ನಂತರದಲ್ಲಿ ಮೋಕ್ಷಕ್ಕೆ ಭಕ್ತಿಯೇ (ಆಳವಾದ ಕುಣಿ) ಬೇಕಾದುದು. ಜೀವನಕ್ಕೆ ಮೋಕ್ಷವನ್ನು ನೀಡುವುದು ಆಳವಾದ ಕುಣಿ ಎಂದರೆ ಆಳವಾದ ಭಕ್ತಿ. ಮಗ್ಗದ ಅಣ್ಣನು ಭಕ್ತಿಯ ಶೃಂಗವನ್ನೇರಿದಾಗ ಮೋಕ್ಷ ಹೊಂದುತ್ತಾನೆ. ಮೋಕ್ಷವು ದೊರೆಯಿತೆಂದರೆ ಅಣ್ಣನ ಕೆಲಸವೂ ಮುಗಿಯಿತು ಎಂದರೆ ಅವನ ಜೀವನವೂ ಸಾರ್ಥಕ್ಯ ಪಡೆಯಿತು. ಅವನ ಭಕ್ತಿಯು (ಕುಣಿಯು) ಅವನನ್ನು ನುಂಗಿತು.

ಮೋಕ್ಷವು ಭಕ್ತಿ ಮೂಲ. ಮಗ್ಗವು ಕಾಯಕ ಮೂಲ. ಕಾಯಕವೇ ಕೈಲಾಸ ಎಂದರೆ ಕಾಯಕದಿಂದಲೇ ಮೋಕ್ಷ ಅಥವಾ ಸಾಯುಜ್ಯ ಎಂದಂತೆ ಅಲ್ಲವೇ?
ಮುಂದೆಯೂ ಇದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article