ಜೀವನ ಸಂಭ್ರಮ : ಸಂಚಿಕೆ - 187
Sunday, April 27, 2025
Edit
ಜೀವನ ಸಂಭ್ರಮ : ಸಂಚಿಕೆ - 187
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಆತ್ಮಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಯೋಗ ಸೂತ್ರದಲ್ಲಿ ಒಂದು ಪದ ಬರುತ್ತದೆ. ಅದು ದೃಷ್ಟ. ದೃಷ್ಟ ಎಂದರೆ ನೋಡುವವನು. ಎಲ್ಲವನ್ನು ನೋಡುವವನಿಗೆ ದೃಷ್ಟ ಎನ್ನುವರು. ಹೊರಗಿನ ವಸ್ತುಗಳನ್ನು ನೋಡುವವನು. ಹಾಗೆಯೇ ದೇಹದ ಒಳಗಿರುವ, ಮನಸ್ಸಿನಲ್ಲಿ ಏಳುವ, ಎಲ್ಲಾ ವೃತ್ತಿಗಳನ್ನು ನೋಡುವವನು. ಆದ್ದರಿಂದ ದೃಷ್ಟ ಅಂದಿದ್ದು. ಇದು ಸಂಸ್ಕೃತ ಪದ. ವಸ್ತುಗಳನ್ನು ನಾವು ನೋಡುತ್ತೇವೆ. ನೋಡುವಾಗ ನಾವು ಕಣ್ಣನ್ನು ಬಳಸಿಕೊಳ್ಳುತ್ತೇವೆ. ಮನಸ್ಸನ್ನು ಬಳಸಿಕೊಳ್ಳುತ್ತೇವೆ. ಹೊರಗೆ ಬೆಳಕನ್ನು ಬಳಸಿಕೊಳ್ಳುತ್ತೇವೆ. ಈ ಮೂರನ್ನು ಬಳಸಿ ಕೊಂಡಾಗ, ಆ ವಸ್ತುವಿನ ಜ್ಞಾನ ಉಂಟಾಗುತ್ತದೆ. ಕಣ್ಣು ಬಳಸದೆ ಇದ್ದರೆ, ವಸ್ತು ಕಾಣುವುದಿಲ್ಲ. ಕಣ್ಣು ಬಳಸಿ, ಮನಸ್ಸನ್ನು ಬಳಸಿದಿದ್ದರೆ, ವಸ್ತು ಕಾಣುವುದಿಲ್ಲ. ಕಣ್ಣು ಇದೆ, ಮನಸ್ಸು ಇದೆ, ಬೆಳಕು ಇಲ್ಲದಿದ್ದರೆ, ವಸ್ತು ಕಾಣುವುದಿಲ್ಲ. ಹೊರವಸ್ತು ಕಾಣಬೇಕಾದರೆ ಈ ಮೂರು ಬೇಕು. ಕಣ್ಣು, ಮನಸ್ಸು ಮತ್ತು ಬೆಳಕು. ಈ ಮೂರು ಅಗತ್ಯ ಹೊರಗಿನ ವಸ್ತು ನೋಡಲು. ಈ ಮೂರನ್ನು ಬಳಸಿಕೊಂಡು ವಸ್ತುವಿನ ಜ್ಞಾನ ಮಾಡಿಕೊಳ್ಳುತ್ತೇವೆ.
ಈಗ ನಾವು ಸ್ವಲ್ಪ ಒಳಗೆ ಹೋಗೋಣ. ಮನಸ್ಸಿನಲ್ಲಿ ಅನೇಕ ಸಂಗತಿಗಳು ಇರುತ್ತವೆ. ಮನುಸ್ಸಿನಲ್ಲಿ ಗಿಡ ಮೂಡುತ್ತದೆ. ಹೂ ಮೂಡುತ್ತದೆ. ಒಂದು ವಸ್ತು ಮೂಡುತ್ತದೆ. ಒಂದು ಮೂರ್ತಿ ಮೂಡುತ್ತದೆ. ಅವುಗಳನ್ನು ನಾವು ನೋಡುತ್ತೇವೆ. ಮನಸ್ಸಿನಲ್ಲಿ ಮೂಡಿರುವುದನ್ನು ನೋಡಲು ಕಣ್ಣು ಬಳಸುವುದಿಲ್ಲ. ಬೆಳಕನ್ನು ಬಳಸುವುದಿಲ್ಲ. ಮನಸ್ಸಿನಲ್ಲಿ ಮೂಡಿರುವುದನ್ನು ನೋಡಲು ಕಣ್ಣು ಬೇಕಾಗಿಲ್ಲ. ಬೆಳಕು ಬೇಕಾಗಿಲ್ಲ. ಅವಾಗ ನಾವು ಹೇಗೆ ನೋಡುತ್ತೇವೆ? ನಮ್ಮ ಮನಸ್ಸನ್ನೇ ಬಳಸಿಕೊಂಡು, ಮನಸ್ಸಿನಲ್ಲಿ ಮೂಡಿರುವುದನ್ನು ನೋಡುತ್ತೇವೆ. ಮನಸ್ಸನ್ನು ಬಳಸಿಕೊಂಡು, ಮನಸ್ಸಿನಲ್ಲಿ ಮೂಡಿರುವ ಆಕೃತಿಯನ್ನು ನಾವು ನೋಡುತ್ತೇವೆ ಮತ್ತು ನಾವು ಜ್ಞಾನ ಮಾಡಿಕೊಳ್ಳುತ್ತೇವೆ. ಇಲ್ಲಿ ಮನಸ್ಸು ಇದೆ ಮತ್ತು ನಾನು ಇದ್ದೇನೆ. ಆದರೆ ಇಲ್ಲಿ ಬೆಳಕಿಲ್ಲ. ಕಣ್ಣಿಲ್ಲ. ಬೆಳಕಿಲ್ಲದೆ, ಕಣ್ಣಿಲ್ಲದೆ ನಾನು ಒಳಗಿರುವ ವಸ್ತುಗಳನ್ನು ನೋಡಬಲ್ಲೆ. ಒಳಗಿನ ವಸ್ತು ಬೆಳಗಿಸುವ ಸಾಮರ್ಥ್ಯ ಹೊರಗಿನ ಬೆಳಕಿಗೆ ಇಲ್ಲ. ನಾನು ಈಗ ಹಿಮಾಲಯ ಅಂದೆ. ವಿಶಾಲವಾದ ವ್ಯಾಪಕವಾದ ಹಿಮಾಲಯ. ಅದ್ಭುತ ಹಿಮದಿಂದ ಆವೃತವಾದ ಹಿಮಾಲಯದ ಚಿತ್ರ ಮನಸ್ಸಿನಲ್ಲಿ ಮೂಡಿತು. ಆ ಚಿತ್ರದ ಜೊತೆಗೆ ಚಳಿಯ ಗಾಳಿ ಬೀಸಿದಂತೆ, ಮುಂಜಾನೆ ಸೂರ್ಯನ ಕಿರಣ ಮೂಡಿದಂತೆ, ಚಿತ್ರ ಮೂಡುತ್ತದೆ. ಇಲ್ಲಿ ಹೊರಗಿನ ಬೆಳಕು ಇಲ್ಲ, ಕಣ್ಣು ಇಲ್ಲ, ನಾನು ಇದ್ದೀನಿ, ನೋಡುವವ. ಹೊರಗಿನ ವಸ್ತುವನ್ನು ನಾನೇ ನೋಡಿದ್ದು. ನಾನು ನನ್ನ ಮನಸ್ಸು, ಕಣ್ಣು ಮತ್ತು ಬೆಳಕು ಬಳಸಿಕೊಂಡು ಹೊರಗಿನ ವಸ್ತುವನ್ನು ನೋಡಿದೆ. ಅದೇ ರೀತಿ ಮನಸ್ಸಿನಲ್ಲಿ ಮೂಡಿದ ಚಿತ್ರ ನಾನು ನೋಡುತ್ತಿದ್ದೇನೆ. ಆದರೆ ಕಣ್ಣಿಲ್ಲ, ಬೆಳಕಿಲ್ಲ ಆದರೆ ಒಳಗಿನ ಮನಸ್ಸಿನಲ್ಲಿ ಮೂಡಿದ ಚಿತ್ರ ನೋಡುವಲ್ಲಿ ನಾನು, ಮನಸ್ಸು ಮತ್ತು ಮನಸ್ಸಿನಲ್ಲಿ ಮೂಡಿದ ಚಿತ್ರ ಇದೆ. ಅಂದ್ರೆ ನನಗೆ ಎರಡು ರೀತಿಯ ಜ್ಞಾನ ಆಗಿತ್ತು ಅಲ್ಲವೇನು. ಎರಡು ರೀತಿ ಅಂದರೆ ಹೊರಗಿನ ಮತ್ತು ಒಳಗಿನ ಜ್ಞಾನ.
ಈಗ ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ, ಮನಸ್ಸಿನಲ್ಲಿ ಯಾವುದೇ ಚಿತ್ರಮೂಡಿಲ್ಲ. ಮನಸ್ಸಿನಲ್ಲಿ ಯಾವುದಾದರೂ ಚಿತ್ರ ಮೂಡಿದರೆ, ನಾನು ಆ ಚಿತ್ರ ನೋಡುತ್ತೇನೆ. ಆದರೆ ಮನಸ್ಸಿನಲ್ಲಿ ಯಾವುದು ಚಿತ್ರ ಮೂಡಿಲ್ಲ, ಅದು ಶಾಂತವಾಗಿದೆ. ಅಲ್ಲಿ ಒಳಗೆ ಏನೇನು ಇಲ್ಲ. ಅವಾಗ ನಾನು ಏನು ಹೇಳುತ್ತೇನೆ?. ಮನಸ್ಸಿನಾಗ ಏನು ಇಲ್ಲ ಅಂತೀನಿ. ಅಂದರೆ ಏನು ಇಲ್ಲದ್ದನ್ನು ನಾನು ನೋಡಿದ್ದೇನೆ. ಮನಸ್ಸಿನಲ್ಲಿ ಏನು ಮೂಡಿಲ್ಲ, ಕಣ್ಣು ಕೆಲಸ ಮಾಡ್ತಾ ಇಲ್ಲ, ಬೆಳಕಿಲ್ಲ, ಹೊರಗಿನ ವಸ್ತು ಇಲ್ಲ ಆದರೆ ಮನಸ್ಸಿನಲ್ಲಿ ಏನು ಮೂಡಿಲ್ಲ ಅಂತ ಹೇಳುವ ನಾನಿದ್ದೇನೆ. ನಾನು ನೋಡುತ್ತಾ ಇದ್ದೇನೆ. ಇನ್ನು ಮನಸ್ಸಿನಲ್ಲಿ ಏನು ಮೂಡಿತ್ತು? ನೋಡುತ್ತಾ ಇದ್ದೇನೆ. ಏನು ಇಲ್ಲ ಅದನ್ನು ನೋಡುತ್ತಾ ಇದ್ದೀನಿ. ನಾನು ನೋಡುತ್ತಾ ಇದ್ದೇನೆ. ಮನಸ್ಸು ಶಾಂತ ಇದೆ. ಇಂದ್ರಿಯಗಳು ಶಾಂತ ಇದ್ದಾವೇ. ಎಲ್ಲವೂ ಶಾಂತ ಇದೆ. ಆದರೆ ನಾನು ಮಾತ್ರ ನೋಡುತ್ತಾ ಇದ್ದೇನೆ. ಮನಸ್ಸಿನಲ್ಲಿ ಏನೂ ಇಲ್ಲ. ಶಾಂತವಾಗಿದೆ ಅಂತ ಹೇಳುತ್ತಾ ಇದ್ದೇನೆ. ಅಂದರೆ ನಾನು ಅನ್ನೋದು ಇವುಗಳಿಗಿಂತ ಬೇರೆ ಆಯ್ತಲ್ಲ. ಕಣ್ಣಿಗಿಂತ ಬೇರೆ ಆಯ್ತು, ಮನಸ್ಸಿಗಿಂತ ಬೇರೆ ಆಯ್ತು. ನಾನು ಅನ್ನೋದು ಬರಿ ನೋಡುವುದು. ಅದಕ್ಕೆ ದೃಷ್ಟ ಎನ್ನುವರು. ಅದು ಯಾವುದರ ಮೂಲಕ ನೋಡುತ್ತಿದೆ?. ಅದು ಮನಸ್ಸು ಇರೋ ತನಕ ಮನಸ್ಸಿನ ಮೂಲಕ ನೋಡುತ್ತಾ ಇತ್ತು. ಕಣ್ಣು ತೆರೆದಾಗ ಕಣ್ಣಿನ ಮೂಲಕ ನೋಡುತ್ತಾ ಇತ್ತು. ಈಗ ಕಣ್ಣು ಮುಚ್ಚಿದೆ. ಮನಸ್ಸು ಶಾಂತವಾಗಿದೆ. ಆದರೂ ನನಗೆ ಜ್ಞಾನ ಆಗುತ್ತಿದೆಯಲ್ಲ ಯಾವುದರ ಮೂಲಕ?. ಯಾವುದರ ಮೂಲಕ ಅಲ್ಲ. ಜ್ಞಾನ. ಜ್ಞಾನ. ಕೇವಲ ಜ್ಞಾನ ಆಯಿತು. ಅಂದರೆ ಇನ್ನೊಂದು ವಸ್ತು ಅಂದರೆ ಮನಸ್ಸು, ಕಣ್ಣು ಇದ್ದರೆ, ನೋಡುವವನ ನೋಡಿಸಿಕೊಳ್ಳುವವನ ಎಲ್ಲಾ ವಸ್ತು ಹೋದ ಬಳಿಕ ನೋಡುವವ ಇರುತ್ತಾನೆ. ಆದರೆ ನೋಡುವ ಕ್ರಿಯೆ ಇರುವುದಿಲ್ಲ. ಆಗ ನಾನು ಇರುತ್ತೇನೆ. ಆದರೆ ನೋಡುತ್ತಾ ಇಲ್ಲ. ಆದರೆ ನನಗೆ ಜ್ಞಾನ ಆಗುತ್ತಿದೆ. ಯಾವುದರ ಜ್ಞಾನ ಆಗುತ್ತದೆ?. ನಾನು ಇದ್ದೀನಿ ಅಂತ ಜ್ಞಾನ ಆಗುತ್ತದೆ. ಮೊದಲು ಹೊರಗೆ ಹೂವಿದೆ ಅಂತ ಜ್ಞಾನ ಆಗಿತ್ತು. ಎರಡನೇ ಬಾರಿ ಮನುಷ್ಯನಲ್ಲೇ ಮೂಡಿದ ಚಿತ್ರದ ಜ್ಞಾನ ಆಗಿತ್ತು. ಮೂರನೇ ಬಾರಿಗೆ ಹೂವಿಲ್ಲ, ಮನಸ್ಸಿನ ಚಿತ್ರ ಇಲ್ಲ, ಕೇವಲ ನಾನಿದ್ದೇನೆ ಅಂತ ಜ್ಞಾನ ಆಯಿತು. ನೋಡುವವ ದೃಷ್ಟ. ಆಗ ನಾನು ನನ್ನೊಳಗೆ ಇದ್ದೀನಿ. ಅಂದ್ರೆ ನಾನು ನನ್ನೊಳಗೆ ಇದ್ದೇನೆ. ನಾನು ಮನಸ್ಸಿನಲ್ಲಿ ಅಲ್ಲ. ಮನಸ್ಸಿನ ಭಾವನೆಗಳಲ್ಲಿ ಅಲ್ಲ. ಮನಸ್ಸಿನ ವಿಚಾರದಲ್ಲಿ ಅಲ್ಲ. ಹೊರಗಿರುವ ವಸ್ತುಗಳಲ್ಲಿ ಅಲ್ಲ. ಅವುಗಳ ನೋಡುವ ಕಣ್ಣುಗಳಲ್ಲಿ ಅಲ್ಲ. ನನ್ನೊಳಗೆ ನಾನು ಇರ್ತಿನಲ್ಲ ಇದೆ ಆತ್ಮ ಸಾಕ್ಷಾತ್ಕಾರ. ಇದಕ್ಕೆ ಪಾತಂಜಲ ಮಹರ್ಷಿ ಕೈವಲ್ಯ ಅಂದನು. ಕೈವಲ್ಯ ಎಂದರೆ ಕೇವಲ ನಾನು ಅಷ್ಟೇ. ನಾನು ಅನ್ನುವುದೇ ಆತ್ಮ. ದೇಹ, ಬುದ್ಧಿ ಮತ್ತು ಮನಸ್ಸು ಆತ್ಮ ಅಲ್ಲ. ತನ್ನಲ್ಲಿ ತಾನು ನಿಂತ ಅಂದರೆ ತನ್ನ ಜ್ಞಾನ ಇದೆ. ಉಳಿದಿದ್ದು ಏನೂ ಇಲ್ಲ. ಏಕೆ? ಮನಸ್ಸು ಶಾಂತ ಇದೆ. ಆ ಶಾಂತವಾದ ಮನಸ್ಸಿನ ಸ್ಥಿತಿಗೆ ನಿರೋಧ ಎನ್ನುವರು. ಮನಸ್ಸಿನಲ್ಲಿ ಯಾವ ತೆರೆಗಳು ಇಲ್ಲ. ಮನಸ್ಸು ಹೊಯ್ದಾಟ ಇಲ್ಲ. ಮನಸ್ಸು ಹೊಯ್ದಾಡಿದರೆ ವಸ್ತುವಿನ ಬಾನ ಬರುತ್ತದೆ. ಮನಸ್ಸು ಹೊಯ್ದಾಡಿದರೆ, ಸುಖ ದುಃಖದ ಬಾನ. ಮನಸ್ಸೇ ಹೊಯ್ದಾಟ ಇಲ್ಲ ಅಂದಾಗ, ಅಲ್ಲಿ ಸುಖವಿಲ್ಲ. ದುಃಖವು ಇಲ್ಲ. ಆ ಸ್ಥಿತಿಗೆ ಶಾಂತ ಸ್ಥಿತಿ. ಆಗ ನಾನು ನನ್ನೊಳಗೆ ಇರುತ್ತೇನೆ. ಆ ಅನುಭವಕ್ಕೆ ಆತ್ಮಾನುಭೂತಿ ಎನ್ನುವರು. ಇದು ಪಾತಂಜಲ ಯೋಗದ ಉದ್ದೇಶ. ಇದೊಂದೇ ಉದ್ದೇಶವಲ್ಲ. ನನ್ನ ಜ್ಞಾನದೊಂದಿಗೆ ನಾನು ಜಗತ್ತಿನಲ್ಲಿ ಬದುಕಬೇಕಲ್ಲ. ದೇಹ ಬಿಟ್ಟು, ಇಂದ್ರಿಯಗಳನ್ನು ಬಿಟ್ಟು, ಮನಸ್ಸನ್ನು ಬಿಟ್ಟು ಅಲ್ಲ. ಎಲ್ಲವನ್ನು ಹಿಡಿದುಕೊಂಡು ನೂರು ವರ್ಷ ಬದುಕಬೇಕಲ್ಲ. ಇಂದ್ರಿಯ ಬಳಸುತ್ತಾ, ಮನಸ್ಸನ್ನು ಬಳಸುತ್ತಾ, ಬುದ್ಧಿ ಬಳಸುತ್ತಾ, ದೇಹದ ಅವಯವ ಬಳಸುತ್ತ, ನಮ್ಮ ಸುತ್ತಮುತ್ತ ಇರುವ ವಸ್ತು ಬಳಸುತ್ತ, ಈ ಜಗತ್ತಿನಲ್ಲಿ ಬದುಕಬೇಕಲ್ಲ. ದೇಹ, ಮನಸ್ಸು, ಇಂದ್ರಿಯ, ಅವಯವ ಮತ್ತು ವಸ್ತುಗಳನ್ನು ಹೇಗೆ ಬಳಸಬೇಕೆಂದರೆ, ನನ್ನಲ್ಲಿರುವ ಆತ್ಮ ಸಂತೋಷ ಪಡುವಂತೆ ಬಳಸಬೇಕು. ಬೇರೆಯವರು ಮೆಚ್ಚಬೇಕು ಅಂತ ಅಲ್ಲ. ಬೇರೆಯವರು ಮೆಚ್ಚಲಿ, ಬಿಡಲಿ ನಮ್ಮ ಆತ್ಮ ಆನಂದ ಪಡೆಯಬೇಕು. ನಾನು ಮಾಡುವ ಕೆಲಸವನ್ನು ಯಾರು ನೋಡುತ್ತಾರೋ, ಬಿಡುತ್ತಾರೊ ಆದರೆ ಆತ್ಮ ಎನ್ನುವ ನಾನು ಸದಾ ನೋಡುತ್ತಿರುವುದರಿಂದ ಅದರ ಕಣ್ಣು ತಪ್ಪಿಸಿ ಮಾಡಲು ಸಾಧ್ಯವಿಲ್ಲ. ಕಣ್ಣುಮುಚ್ಚಬಹುದು. ಮನಸ್ಸನ್ನು ಶಾಂತ ಮಾಡಿ, ಯಾವುದೇ ತೆರೆ ಏಳದಂತೆ ನೋಡಿಕೊಳ್ಳಬಹುದು. ಆದರೆ ನಾನು ಅನ್ನುವುದು ಸದಾ ಇರುವುದು ಹಾಗೂ ಜಾಗೃತವಾಗಿ ಇರುವುದು. ನಾನು ಅನ್ನುವುದು ಹೋದರೆ ಈ ದೇಹ ಸತ್ತಂತೆ. ಅದಕ್ಕೆ ಬಲ್ಲವರು ಹೇಳುತ್ತಾರೆ "ಯಾರು ಇಲ್ಲದಿದ್ದರೂ, ದೇವರ ಜೊತೆಯಾಗಿ ಯಾವಾಗಲೂ ಇರುತ್ತಾನೆ ಅಂತ." ದೇವರು ಅಂದರೆ ಆತ್ಮ. ಪರಮಾತ್ಮ. ಅದು ನಾನು. ಅದಕ್ಕೆ ಅಹಂ ಬ್ರಹ್ಮಾಸ್ಮಿ ಎಂದರು. ಹಾಗಾಗಿ ಆತ್ಮ ಸಂತೋಷ ಆಗುವಂತೆ ಮಾಡಬೇಕು ಅಲ್ಲವೇ ಮಕ್ಕಳೆ...?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************