ಮಕ್ಕಳ ಕವನಗಳು : ಸಂಚಿಕೆ - 43 - ಕವನ ರಚನೆ : ಶ್ರುತಿಕಾ, 8ನೇ ತರಗತಿ
Sunday, April 27, 2025
Edit
ಮಕ್ಕಳ ಕವನಗಳು : ಸಂಚಿಕೆ - 43
ಕವನ ರಚನೆ : ಶ್ರುತಿಕಾ
8ನೇ ತರಗತಿ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಮನೆಯಾಕೆ
ಎರಡು ಮಕ್ಕಳ ತಾಯಿ,
ಗಂಡನ ಮುದ್ದಿನ ಹೆಂಡತಿ ಈಕೆ
ಮನೆಯ ಊಟ ತಿಂಡಿ
ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವಾಕೆ
ಹೊರಗೂ, ಒಳಗೂ ದುಡಿಯುವ
ಯಂತ್ರ ಈಕೆ!
ಆದರೆ ಯಂತ್ರದಂತಲ್ಲ...
ಈಕೆ ಕರುಣಾಮಯಿ
ಕತ್ತೆಯಂತೆ ದುಡಿದರೂ
ಹಣವ ಅಪೇಕ್ಷಿಸದ ತ್ಯಾಗಮಯಿ
ಎಲ್ಲರ ಕಿರಿಕಿರಿ ಸಹಿಸುವ ಸಹನಾಮಯಿ
ಆದರೆ ಕೋಪ ಬಂದರೆ ಈಕೆ ಮಹಾಮ್ಮಾಯಿ!
ತನ್ನ ಕಷ್ಟ ಸುಖಗಳ ಪಕ್ಕಕ್ಕಿಟ್ಟು
ಮಾಡುವಳು ಕೆಲಸದ ಧಾರಣೆ
ಹೆಚ್ಚು ಓದದಿದ್ದರು ಈಕೆ ಜಾಣೆ
ಈಕೆಯ ಮೇಲಿದೆ ಇಡೀ ಮನೆಯ ಹೊಣೆ
ಈಕೆ ನನ್ನ ತಾಯಿಯೋ,
ದುಡಿಮೆಯ ಯಂತ್ರವೋ
ನಿಜಕ್ಕೂ ನಾ ಕಾಣೆ!
................................................ ಶ್ರುತಿಕಾ
9ನೇ ತರಗತಿ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನದಿಯಲ್ಲಿ ನಲಿಯುತಿತ್ತು ಜಲಚರ
ಕಣ್ಣು ಕುಕ್ಕುತ್ತಿದ್ದ ಪ್ರಾಣಿ ಪಕ್ಷಿಗಳ ಆಗರ
ಬಾನಿಗೆ ಮುತ್ತಿಡುತ್ತಿದ್ದ ವಿಶಾಲವಾದ ಸಾಗರ
ನೋಡಲು ಎಷ್ಟೊಂದು ಸುಂದರ ನೋಟ
ಆದರೆ ಬಿದ್ದಿತು ಮಾನವನ ಸುಡು ನೋಟ
ಮೂಕಪ್ರಾಣಿಗಳಿಗೆ ನೀಡಿದನು ಬಹಳ ಕಾಟ
ಅಭಿವೃದ್ಧಿಯ ನೆಪದಲಿ ಆಡಿದನು
ಅಹಂಕಾರದ ಆಟ
ಸ್ವಲ್ಪದಿನ ಸುಮ್ಮನಿತ್ತು ಪ್ರಕೃತಿ
ಆದರೂ ಮಾನವ ಬದಲಾಯಿಸಲಿಲ್ಲ
ತನ್ನ ರೀತಿ.....
ಮೀರಿತು ಪ್ರಕೃತಿಯ ತಾಳ್ಮೆಯ ಮಿತಿ
ತಯಾರಾಯಿತು ಕಲಿಸಲು ನರನಿಗೆ ನೀತಿ
ಬೇಸಿಗೆಯಲ್ಲಿ ಹೆಚ್ಚಿತು ಬಿಸಿಲಿನ ಝಳ
ವರುಣನ ಆರ್ಭಟಕ್ಕೆ ಬೆಚ್ಚಿಬಿದ್ದಿದ್ದಾನೆ ನರ
ಕ್ರೂರ ಕಾಡು ಪ್ರಾಣಿಗಳು ಸೇರುತ್ತಿವೆ ನಗರ
ಕೊನೆಗೂ ಪ್ರಕೃತಿ ತೀರಿಸಿಕೊಂಡಿದೆ
ತನ್ನ ಪ್ರತೀಕಾರ!
................................................ ಶ್ರುತಿಕಾ
9ನೇ ತರಗತಿ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲರ ಬಾಯಾರಿಕೆಯ ಬೇಗೆಯ ತಣಿಸುತಲಿ
ನಾ ಬೇಗೆಯ ತಣಿಸಿದರು
ನನ್ನ ಬೇಗೆಯ ತಣಿಸಿತು
ಕರೆಸಿತು ನನ್ನ ಮೋಡದ ಬಳಿ
ಮೋಡದಲಿ ದಿನಗಳ ಕಳೆಯುತ್ತಿದ್ದಾಗ
ಕೇಳಿಸಿತು ನನಗೆ ಜನರ ಶಾಪ
ಕಾಡು ಮೇಡುಗಳ ಕಡಿಯುವುದರಿಂದ
ತಟ್ಟಿದೆ ಜನರಿಗೆ ಬಿಸಿಲಿನ ತಾಪ!
ಅಂತೂ ನನ್ನ ಸಹಚರರೊಂದಿಗೆ
ಇಳಿದೆನು ಧರೆಗೆ ತಂಪಾಗಿ
ಅಯ್ಯೋ! ನನ್ನ ಇಂಗಿಸಲು ಮರಗಳಿಲ್ಲದೆ
ಹರಿಯುತಿರುವೆ ಪ್ರವಾಹವಾಗಿ!
ಶಪಿಸಿಹರು ಮತ್ತೆ ನನಗೆ
ನಿನಗೆ ಯಾಕೆ ಇಷ್ಟೊಂದು ರಭಸ
ತಿಳಿದಿಲ್ಲ ಅವರಿಗೆ ಇದಕ್ಕೆಲ್ಲ ಕಾರಣ
ತಾವೇ ಮಾಡಿದ ಕೆಲಸ!
ನಾನೇನು ಮಾಡಲಿ? ನಾನಿರುವುದು
ಜನರ ಬದುಕಿಸಲೆಂದೇ
ಆದರೆ ಬೈಗುಳಗಳೆಲ್ಲವು
ಅನಿವಾರ್ಯ ನನಗೆ
ಏಕೆಂದರೆ ನಾನು ಮಳೆ!
................................................ ಶ್ರುತಿಕಾ
9ನೇ ತರಗತಿ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ತಾಯಿಯೊಂದಿಗೆ ಕುಳಿತಿದ್ದೆ
ಆಸ್ಪತ್ರೆಯೊಳಗೆ
ಸ್ಮಶಾನ ಮೌನ ಆವರಿಸಿದೆ ಎಲ್ಲೆಡೆಯು
ತುಂಬಿದೆ ಬೇಸರ ಎಲ್ಲರ ಕಣ್ಗಳೊಳಗೆ!
ಆ ಮೌನವ ಮುರಿಯುತ್ತ ಬಂದರು ಇಬ್ಬರು ಸಹೋದರರು ತಮ್ಮ ತಾಯಿಯ ಜೊತೆ
ತಾಯಿಯ ಅನಾರೋಗ್ಯದ
ಯೋಚನೆಯಿಲ್ಲ ಅವರಿಗೆ
ಈಗ ಆಸ್ಪತ್ರೆಯ ಮೊತ್ತ
ತೆರುವುದೇ ಅವರ ಚಿಂತೆ!
ಆ ಹೆತ್ತ ತಾಯಿಯ ಕಣ್ಗಳೊಳಗೆ
ಮಕ್ಕಳ ಸಾಂತ್ವನದ ನುಡಿಗಾಗಿ ಆಸೆ
ಆದರೆ ಮಕ್ಕಳು ತಿರುಗಿಯೂ ನೋಡಲಿಲ್ಲ
ಆ ತಾಯಿಗಾಗಿದೆ ಬಹು ದೊಡ್ಡ ನಿರಾಸೆ
ಆ ನಿರಾಶೆಯೊಂದಿಗೆ ಕೊನೆಗೂ
ಅಸುನೀಗಿದರು ಆ ಮಾತೆ!
ಇದೆಲ್ಲವನ್ನು ಕಣ್ಣಾರೆ ನೋಡಿ ಅನಿಸಿತು
ಇದು ಈಗಿನ ಎಲ್ಲರ ಕತೆ...
ದುಡ್ಡಿನ ಭರದಲ್ಲಿ ನಮ್ಮ
ಆತ್ಮೀಯರನ್ನೇ ನಿರ್ಲಕ್ಷಿಸಿದರೆ ಹೇಗೆ?
ಆ ದಾರುಣ ದೃಶ್ಯ ನಡುಕ ಹುಟ್ಟಿಸಿತು
ಮುಖ ತೂರಿಸಿದೆ ಅಮ್ಮನ ಮಡಿಲೊಳಗೆ!
9ನೇ ತರಗತಿ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************