-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 95

ನಿಷ್ಪಾಪಿ ಸಸ್ಯಗಳು : ಸಂಚಿಕೆ - 95

ನಿಷ್ಪಾಪಿ ಸಸ್ಯಗಳು : ಸಂಚಿಕೆ - 95
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಪರೀಕ್ಷೆಗಳ ಗೌಜಿ ಗಮ್ಮತ್ತಿನಲ್ಲಿ ದಿನಗಳು ಕಳೆದುದೇ ತಿಳಿಯಲಿಲ್ಲ ಅಲ್ಲವೇ?
     ನಿಜ, ನಮಗೆ ಖುಷಿ ಕೊಡುವ ವಿಚಾರಗಳು, ಪರಿಸರದಲ್ಲಿರುವ ಹೂವು ಹಣ್ಣುಗಳನ್ನು ಕಂಡಾಗ.. ಗಿಡ ಮರ ಪಕ್ಷಿಗಳನ್ನು ಕಂಡಾಗ ನಾವು ಮೈಮರೆಯುತ್ತೇವೆ. ಗಿಡ ಮರಗಳಿಗೂ ನಮ್ಮನ್ನು ನೋಡುವಾಗ ಹಾಗೇನೆ ಅನಿಸಬಹುದೇ? ಈ ಪ್ರಶ್ನೆ ಯಾವಾಗಲೂ ನನ್ನನ್ನೂ ಕಾಡುವುದಿದೆ. ಸಸ್ಯಗಳಿಗೂ ಜೀವವಿದೆ, ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ಆಹಾರ ತಯಾರಿಸುತ್ತವೆ, ಆಮ್ಲಜನಕವನ್ನು ನೀಡುತ್ತವೆ, ಇಂಗಾಲದ ಡೈಆಕ್ಸೈಡ್ ನ್ನು ಹೀರಿಕೊಳ್ಳುತ್ತವೆ ಎಂದೆಲ್ಲ ಯಾವತ್ತೋ ಸಂಶೋಧನೆಗಳಾಗಿವೆ. ಅದಿರಲಿ.. ಈಗ ಸಸ್ಯಗಳೂ ಪರಸ್ಪರ ಸಂವಹನ ನಡೆಸುತ್ತವೆ, ಸಸ್ಯಗಳಿಗೂ ರಹಸ್ಯ ಭಾಷೆಯಿದೆ ಎಂದು ಜಪಾನಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರಂತೆ. ಸಸ್ಯಗಳು ಮುಂಬರುವ ಅಪಾಯಗಳ ಬಗ್ಗೆ ಪರಸ್ಪರ ಎಚ್ಚರಿಕೆ ನೀಡಲು ವಿಧಾನಗಳಿವೆ ಎಂದು ಕಂಡುಕೊಂಡಿದ್ದಾರೆ. ಬಾಹ್ಯ ಆಪತ್ತನ್ನು ಗುರುತಿಸಿದಾಗ ಇತರ ಕಾಂಡಗಳ, ಎಲೆಗಳ ಜೊತೆ ಸಂವಹನ ನಡೆಸುವ ಬಗ್ಗೆ ದಾಖಲೆಗಳನ್ನು ನಡೆಸಿದ್ದಾರೆಂದ ಮೇಲೆ ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತಿದೆ ಎಂದನಿಸುವುದಿಲ್ಲವೇ...?
       ನಾವು ಸಸ್ಯಗಳನ್ನು ಗಮನಿಸಿದರೆ ಸೂರ್ಯನ ಬಿಸಿಲನ್ನು ಇಷ್ಟಪಡುವ, ಸೂರ್ಯನ ಬಿಸಿಲಿಗೆ ಅಡಗಿ ಬೆಳೆಯುವ ಅಥವಾ ಅರೆ ಬಿಸಿಲು ಮಾತ್ರ ಸಾಕೆಂದು ಅಂತಹಾ ಜಾಗವನ್ನೇ ಹುಡುಕಿ ಬೆಳೆಯುವ ಅವುಗಳ ಕಾರ್ಯ ತಂತ್ರ, ವಿಧಾನಗಳನ್ನು ಗಮನಿಸಬಹುದು. ಭಾರತದ್ದೇ ಮೂಲವನ್ನು ಪಡೆದು, ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡದ ಎಲ್ಲಾ ಜಾಗಗಳಲ್ಲೂ ನೆರಳಿನಲ್ಲಿ ಬೆಳೆಯುವ ಸಸ್ಯವೊಂದಿದೆ. ಗ್ರಾಮೀಣ ಪ್ರದೇಶದಲ್ಲಿದು‌ ಚಿರಪರಿಚಿತ ಸಸ್ಯವಾಗಿದೆ. ಸರ್ಪಸುತ್ತು ಎಂಬ ಕಾಯಿಲೆಗೆ ಪಾರಂಪರಿಕವಾಗಿ ಅತ್ಯುತ್ತಮ ಔಷಧಿಯಾಗಿ ಬಳಕೆಯಲ್ಲಿರುವ ನಿಷ್ಪಾಪಿ ಸಸ್ಯವೇ ಒಳ್ಳೆಕೊಡಿ. ಭಾರತಕ್ಕೆ ಸ್ಥಳೀಯವಾದ ಈ ಸಸ್ಯ ನಿತ್ಯಹರಿಧ್ವರ್ಣದ ಮರ. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ಗಳಲ್ಲಿ ಕಂಡು ಬರುವುದಲ್ಲದೆ ಥೈಲ್ಯಾಂಡ್, ಮಲಯ, ಸಿಂಗಾಪುರಗಳಲ್ಲಿ ಮರಳು ಅಥವಾ ಕಲ್ಲು ಮಣ್ಣಿನ ಜೊತೆ ಪೊದೆಸಸ್ಯವಾಗಿ ಬೆಳೆಯುತ್ತದೆ. 
          ಎಳೆಯ ಕಂದಮ್ಮಗಳು ಮಮತೆಯಿಂದ ತಾಯ ಸೆರಗಿನಡಿ ನಕ್ಕಂತೆ ಬೆಳೆದ ಮರಗಳಡಿ ತಂಪಾದ ತರಗಲೆಗಳ ನಡುವೆ 3ರಿಂದ 7 ಅಡಿಗಳೆತ್ತರ ಎದ್ದು ನಿಲ್ಲುವ ಒಳ್ಳೆಕೊಡಿ ಒಂದು ಗಿಡಮೂಲಿಕೆಯಾಗಿ, ಗಿಡದಂತೆ ಕಂಡರೂ ಅದೊಂದು ಗಟ್ಟಿ ಕಾಂಡವಿರುವ ಮರದಂತಹ ಜಾತಿ. ಆದ್ದರಿಂದಲೇ ಅದನ್ನು ಉಳಿ, ಸುತ್ತಿಗೆಯ ಹಿಡಿಗಳನ್ನು ಮಾಡಲು ಬಳಸುವರು. ನಮ್ಮ ಹಿರಿಯರು ಇದರ ಪುಟ್ಟ ಕೊಂಬೆಗಳನ್ನು ನೈಸರ್ಗಿಕ ಬ್ರಷ್ ಆಗಿ ಹಲ್ಲುಜ್ಜಲು ಬಳಸುತ್ತಿದ್ದರು. ಇದರ ಎಲೆ ಮತ್ತು ಹೂಗಳಿಂದ ತೆಗೆದ ಬಣ್ಣವನ್ನು ಬೌದ್ಧ ಸನ್ಯಾಸಿಗಳ ನಿಲುವಂಗಿಗೆ ಬಳಸುತ್ತಿದ್ದರು. ಒಳ್ಳೆಕೊಡಿಯ ತೊಗಟೆಯ ಬಣ್ಣ ಬೂದು.. ಕಂದು. 3 ರಿಂದ 7ಸೆಂ.ಮೀ. ಉದ್ದದ ಅಂಡಾಕಾರದ ದಪ್ಪ ಎಲೆಗಳು ಚಿಗುರುವಾಗ ದಟ್ಟ ಕಂದು ವರ್ಣದಲ್ಲಿದ್ದು ಮುಟ್ಟಿದರೆ ಚರ್ಮದಂತೆ ದಪ್ಪಗಿರುತ್ತದೆ. ಎಲೆಗಳು ಸಂಪೂರ್ಣ ಬೆಳೆದಾಗ ಹಸಿರು ವರ್ಣ ತಳೆಯುತ್ತದೆ. ಅಲಿಮಾರ್ ಗಿಡದ ಹೂಗಳಂತೇ ಗೋಚರಿಸುವ ನೇರಳೆ ವರ್ಣದ ಹೂಗಳು ಚೆಂಡಿನಂತೆ ಗೋಳಾಕಾರದಲ್ಲಿರುತ್ತದೆ. ಒಂದು ಸೆಂ.ಮೀ.ನಷ್ಟಿರುವ ಇದರ ಹಣ್ಣು ಎಳವೆಯಲ್ಲಿ ಹಸಿರಾಗಿ ಬೆಳೆಯುತ್ತಾ ಕೆಂಪು.. ಹಳದಿ.. ಕಪ್ಪು ಬಣ್ಣವಾಗಿ ಮಾಗುತ್ತದೆ. ಮೆಲಾಸ್ಟೊಮಟೇಸಿ (Melastomataceae) ಕುಟುಂಬದ ಈ ಸಸ್ಯದ ವೈಜ್ಞಾನಿಕ ಹೆಸರು ಮೆಮೆಸಿಲಾನ್ ಮಲಬಾರಿಕಮ್ (Memecylon malabairicum). ಕಾಡು, ನದೀ ದಡ, ತಂಪಾದ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಬೀಜದ ಮೂಲಕ ಗಿಡವಾಗುವ ಒಳ್ಳೆಕೊಡಿಗೆ ಕನ್ನಡದಳ್ಲಿ ದೊಡ್ಡ‌ನೆಕ್ಕರೆಗಂಡು ಕೇಪಳ, ಹುಳಿಸೊಪ್ಪು, ಹುಳಚಪ್ಪು ಗಂಡು ಕುಸುಮಾಲೆಗಳೆಂಬ‌ ಹೆಸರುಗಳೂ ಇವೆ.
         ಒಳ್ಳೆಕೊಡಿಯನ್ನು ಮಲೆನಾಡಿನ ಸಂಜೀವಿನಿ ಎಂದೂ ಕರೆಯುತ್ತಾರೆ. ಮಾತ್ರವಲ್ಲದೇ ಭವಿಷ್ಯದ ಬಂಗಾರವೆಂದೂ ಮಾನ್ಯತೆ ಪಡೆದಿದೆ. 'ಹತ್ತು ವರ್ಷ ಒಳ್ಳೆಕೊಡಿ ಕಷಾಯ ಕುಡಿದರೆ ನೂರು ವರ್ಷ ಬದುಕಿದರೂ ಚರ್ಮ ರೋಗ ಬರದು' ಎಂಬ ಮಾತೇ ಇದೆ. ಬ್ಯಾಕ್ಟೀರಿಯಾ ಸೋಂಕು, ಉರಿಯೂತ, ಚರ್ಮರೋಗ ಚಿಕಿತ್ಸೆಯಲ್ಲಿದು ಪರಿಣಾಮಕಾರಿಯೆಂದು ಜನಜನಿತವಾಗಿದೆ. ಮಧುಮೇಹ ಹಾಗೂ ಸರ್ಪಸುತ್ತು ಎಂಬ ಕಾಯಿಲೆಗಳಿಗೆ ಮಹತ್ವ ಪೂರ್ಣ ವನೌಷಧಿಯಾಗಿದೆ. 14 ದಿನಗಳ ಒಳಗೆ ಸರ್ಪಸುತ್ತು ಕಾಯಿಲೆ ಗುಣಪಡಿಸುತ್ತೇವೆಂದು ಈಗಲೂ ಸವಾಲೊಡ್ಡುವ ಪಾರಂಪರಿಕ ಪಂಡಿತರು ನಮ್ಮಲ್ಲಿದ್ದಾರೆ. ಇವರಿಗೆ ಈ ಒಳ್ಳೆಕೊಡಿಯದೇ ಧೈರ್ಯ! ಕೋಟ್ಲೆ ಅಥವಾ ಅಮ್ಮ ಬಿದ್ದಾಗಲೂ ಇದರ ಪ್ರಯೋಜನವಿದೆ. ಸೊಳ್ಳೆ ಕಚ್ಚಿದ ಜಾಗ ಕಪ್ಪಾದಾಗ, ಹೊಟ್ಟೆಯ ಹುಳದ ಬಾಧೆಗೆ, ಚರ್ಮದ ನಂಜಿಗೆ ಕೂಡ ಉಪಯುಕ್ತವಾದ ಸಸ್ಯ ನಮ್ಮ ನಡುವೆಯೇ ಇಂದು ಮಾಯವಾಗಿದೆ ಎಂದು ತಿಳಿಸಲು ವಿಷಾದಪಡುವ ಸ್ಥಿತಿ ಬಂದಿದೆ. ಹಟ್ಟಿಗಾಗಿ ತರಗೆಲೆ ತರಲು, ಜಾನುವಾರುಗಳ ಮೇವಿಗಾಗಿ ಮೀಸಲಿದ್ದ ಪ್ರದೇಶಗಳಾಗಲಿ, ಒಂದಿಷ್ಟು ಎತ್ತರದ ಗುಡ್ಡಬೆಟ್ಟಗಳಾಗಲೀ ಮಾನವನಿಗೆ ಕ್ಷಣಕ್ಷಣಕ್ಕೂ ನೋಟುಗಳಾಗಿ ಬದಲಾಗುತ್ತಿವೆ. ಸಸ್ಯಗಳಿಗೆ ಯಾವ ಸಂವಹನ ಭಾಷೆಯಿದ್ದರೇನು? ಮಹಾ ಯಂತ್ರಗಳ ನಡುವೆ ಉಸಿರು ಚೆಲ್ಲುವ ನಿಷ್ಪಾಪಿ ಸಸ್ಯಗಳನ್ನು ಉಳಿಸುವತ್ತ ತುರ್ತು ಗಮನ ನೀಡದೇ ಹೋದರೆ ನಾಳೆಗಳಿಗೆ‌ ಸಸ್ಯಗಳು ಬರಿಯ ದಂತಕಥೆಗಳಾಗುವುದರಲ್ಲಿ ಸಂಶಯವಿಲ್ಲ. ಕಾಟು ಮಾವಿನ ಹಣ್ಣಿನ ಮರಗಳು ಇಂದು ಬರಿಯ ನೆನಪುಗಳಾಗಿ ಉಳಿದಂತೆ ಈ ನಿಷ್ಪಾಪಿ ಸಸ್ಯಗಳೂ ತೆರೆಯ ಹಿಂದೆ ಸರಿಯದಿರಲೆಂದು ಆಶಿಸೋಣ. ಮಾತ್ರವಲ್ಲದೇ ಈ ಬಗ್ಗೆ ಪ್ರಯತ್ನವನ್ನೂ ಮುಂದರಿಸೋಣ.
      ಸರಿಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article