-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 73

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 73

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 73
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ನಿಮ್ಮ ಎದುರಿನಲ್ಲಿ ಒಂದು ಮರವಿದೆಯಲ್ಲ. ಈ ಮರದಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಿಮ್ಮ ಕಣ್ಣಿನ ಕಾರ್ನಿಯಾದ ಒಳ ಪ್ರವೇಶಿಸುತ್ತದೆ. ಕಾರ್ನಿಯಾ, ಕಣ್ಣಿನ ಒಳಗಿರುವ ಮಸೂರ (crystalline lens) ಮತ್ತು ಮಸೂರ ಮತ್ತು ರೆಟಿನಾಗಳ ನಡುವೆ ಇರುವ ಗಾಜಿನಂತಹ ದ್ರವ ಚಾಕ್ಷುಷ ರಸ (vitrious humour) ಗಳು ಇದನ್ನು ಬಗ್ಗಿಸಿ ಪ್ರತಿಬಿಂಬವನ್ನು ರೆಟಿನಾದ ಮೇಲೆ ಮೂಡುವಂತೆ ಮಾಡುತ್ತವೆ. ಈ ರೆಟಿನಾದ ಒಳಬದಿಯಲ್ಲಿ ದ್ಯುತಿ ಗ್ರಾಹಕ ಕೋಶಗಳು (photoreceptors) ಒಂದೇ ತೆರನಾಗಿ ಹರಡಿಕೊಂಡಿಲ್ಲ. ಈ ದ್ಯುತಿ ಗ್ರಾಹಕ ಕೋಶಗಳು ಕಣ್ಣಿನ ಹಿಂಭಾಗದ ಒಂದು ಬಿಲ್ಲೆಯಾಕಾರದ ಜಾಗದಲ್ಲಿ ಸಾಂದ್ರವಾಗಿವೆ ಇಲ್ಲಿ ದೃಷ್ಟಿ ಸ್ಪಷ್ಟವಾಗಿದೆ. ಇದು ದೃಷ್ಟಿ ಬಿಲ್ಲೆ (macula). ದೃಷ್ಟಿ ಬಿಲ್ಲೆಯ ಕೇಂದ್ರದಲ್ಲಿ ದೃಷ್ಟಿ ಹರಿತವಾಗಿದ್ದು ಅದನ್ನು ಫೋವಿಯಾ ಎನ್ನುತ್ತೇವೆ. ಕಣ್ಣಿನ ಗುಡ್ಡೆಯ ಚಲನೆಯನ್ನು ನಿಯಂತ್ರಿಸುವ ರೆಕ್ಟಿ ಸ್ನಾಯುಗಳು (recti muscles) ಕಣ್ಣಿನ ಗಡ್ಡೆಯನ್ನು ತಿರುಗಿಸಿ ಫೋವಿಯಾದ ಮೇಲೆ ಪ್ರತಿಬಿಂಬ ಮೂಡುವಂತೆ ಮಾಡುತ್ತವೆ. ಈಗ ಮರದ ಬಣ್ಣ, ಮರದ ಹರವು, ಎತ್ತರ, ದೂರ, ಕೊಂಬೆಗಳ ರಚನೆ ಇತ್ಯಾದಿ ಸ್ಪಷ್ಟ ಚಿತ್ರ ದೊರೆಯುತ್ತದೆ. ಈ ರೀತಿ ಎಲ್ಲಾ ವಿವರಗಳನ್ನೊದಗಿಸುವ ದೃಷ್ಟಿ ಸ್ಪಷ್ಟ ದೃಷ್ಟಿ (clear vision)

ಸ್ಪಷ್ಟ ದೃಷ್ಟಿಯಲ್ಲಿ ಬಣ್ಣವನ್ನು ಸ್ಪಷ್ಟವಾಗಿ ಗುರುತಿಸುತ್ತೇವೆ. ಬಣ್ಣ ಎಂದ ಕೂಡಲೇ ನಿಮ್ಮ ಮೆದುಳಿನಲ್ಲಿ ಏಳು ಬಣ್ಣಗಳ ನ್ಯೂಟನ್ ಚಕ್ರ ಮೂಡಿರಬಹುದು. ಅದ ಅಲ್ಲ ಬದಲಾಗಿ ಒಂದೂವರೆ ಲಕ್ಷದಷ್ಟು ಬಣ್ಣದ ಛಾಯೆಗಳು (shades). ಕಣ್ಣಿನಲ್ಲಿ ಬಣ್ಣವನ್ನು ಗುರುತಿಸುವ ಕೋಶಗಳು ಶಂಕುಗಳು (cones). ಈ ಕೋಶಗಳಲ್ಲಿ ಕೆಂಪು, ಹಸಿರು ಮತ್ತು ನೀಲಿ ಬೇರೆ ಬೇರೆ ಕೋಶಗಳು. ಕೆಂಪು ಹೆಚ್ಚಿನ ತರಂಗಾಂತರದ ಬೆಳಕನ್ನು ಗ್ರಹಿಸಿದರೆ, ಹಸಿರು ಮಧ್ಯಮ ಮತ್ತು ನೀಲಿ ಅಲ್ಪ ತರಂಗಾಂತರದ ಬೆಳಕನ್ನು ಗ್ರಹಿಸುತ್ತವೆ. ಈ ಮೂರು ವಿಧದ ಕೋಶಗಳು ಹೀರಿಕೊಳ್ಳುವ ತರಂಗಾಂತರದ ಆಧಾರದ ಮೇಲೆ ಮೆದುಳಿನ ದೃಷ್ಟಿ ತೊಗಟೆ (visual cortex) ಬೆಳಕಿನ ವರ್ಣ ಛಾಯೆಯನ್ನು ಗುರುತಿಸುತ್ತದೆ. ಎಲ್ಲಾ ಪ್ರಾಣಿಗಳೂ ಮನುಷ್ಯನಂತೆ ಎಲ್ಲಾ ಬಣ್ಣಗಳನ್ನು ಗುರುತಿಸಲಾರವು. ನಮ್ಮ ಮನೆಯ ನಾಯಿ ಮತ್ತು ಬೆಕ್ಕು ನೀಲಿ ಮತ್ತು ಹಳದಿ ಬಣ್ಣವನ್ನು ಮಾತ್ರ ಗುರುತಿಸುತ್ತವೆ. ಫ್ರಾನ್ಸಿನ ಗೂಳಿ ಕಾಳಗದಲ್ಲಿ ಅವುಗಳ ಎದುರು ಕೆಂಪು ಬಾವುಟವನ್ನು ತಿರುಗಿಸುತ್ತಾ ಅವುಗಳನ್ನು ರೊಚ್ಚಿಗೆಬ್ಬಿಸಲಾಗುತ್ತದೆ. ಆದರೆ ಗೂಳಿಗಳು ಕೆಂಪು ಬಣ್ಣವನ್ನು ಗುರುತಿಸಲಾರವು. ಕೆಂಪು ಅವುಗಳಿಗೆ ಕಪ್ಪಾಗಿ ಕಾಣಿಸುತ್ತದೆ. ಅವುಗಳು ಸಿಟ್ಟುಗೊಳ್ಳುವುದು ಬಾವುಟದ ಚಲನೆಗೆ ಹೊರತು ಬಣ್ಣದಿಂದಲ್ಲ. ಕೆಲವು ಪಕ್ಷಿಗಳು ಮತ್ತು ಜೇನು ನೊಣಗಳು ನೇರಳಾತೀತ ಕಿರಣಗಳನ್ನು(UV) ಗುರುತಿಸುತ್ತವೆ. ಕೆಲವೊಂದು ಕನ್ನಡಿ ಹಾವುಗಳು (pit vipers) IR ಗಳನ್ನು ಗುರುತಿಸಬಲ್ಲವು.

ಸಂಜೆಯ ಮಬ್ಬು ಬೆಳಕಿನಲ್ಲಿ ಕಾಣುವ ವಸ್ತುಗಳ ಬಣ್ಣ ನಮಗೆ ಸ್ಪಷ್ಟವಾಗುವುದಿಲ್ಲ. ನೀವು ಕತ್ತಲಿನಲ್ಲಿ ಹೋಗುವಾಗ ಏನೋ ಚಲಿಸಿದಂತೆ ಅನ್ನಿಸುತ್ತದೆ ಆದರೆ ಸ್ಪಷ್ಟ ಚಿತ್ರ ಮೂಡುವುದಿಲ್ಲ. ಇದು ಕ್ಷೇತ್ರ ದೃಷ್ಟಿ (peripheral vision). ಮಂದ ಬೆಳಕಿನಲ್ಲಿ ಶಂಕು ಕೋಶಗಳು ಕೆಲಸ ಮಾಡುವುದಿಲ್ಲ. ಮಂದ ಬೆಳಕನ್ನು ಗ್ರಹಿಸಲು ಕಣ್ಣಿನಲ್ಲಿ ಕಂಬಿಯಾಕಾರದ ಕೋಶಗಳಿವೆ (rods). ಇವುಗಳು ಫೋವಿಯಾಕ್ಕಿಂತ ರೆಟಿನಾದ ಪರಿಧಿಯಲ್ಲಿ ಅಧಿಕ ಪ್ರಮಾಣದಲ್ಲಿವೆ. ಆದ್ದರಿಂದ ಕತ್ತಲೆಯಲ್ಲಿ ನಮಗೆ ವಸ್ತು ಕಾಣಿಸುತ್ತದೆಯೇ ಹೊರತು ಬಣ್ಣ ಗೋಚರಿಸುವುದಿಲ್ಲ. ಆದರೆ ಈ ಕ್ಷೇತ್ರೀಯ ದೃಷ್ಟಿ ನಮ್ಮ ದೃಷ್ಟಿ ವ್ಯಾಪ್ತಿಯನ್ನು FOV ಹೆಚ್ಚಿಸುತ್ತದೆ. ಕತ್ತಲೆಯಲ್ಲಿ, ವಾಹನ ಚಲಾಯಿಸುವಾಗ ನಿಮಗೆ ಅಪಾಯದ ಮುನ್ಸೂಚನೆ ನೀಡುವ ಆಪ್ತ ಮಿತ್ರ ಇದೇ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article