ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 03
Tuesday, March 11, 2025
Edit
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 03
ಲೇಖನ : 'ಪರೀಕ್ಷೆ' ಎಂಬ ಮೆದುಳಿನ ಆಟ.
ಲೇಖಕಿ : ಗೀತಾ ಶ್ಯಾನ್ ಭಾಗ್.
ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ತಲಪಾಡಿ.
ಮಂಗಳೂರು ದಕ್ಷಿಣ ವಲಯ.
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಇನ್ನೇನು ಎಸ್. ಎಸ್. ಎಲ್. ಸಿ ಪರೀಕ್ಷೆ ಹತ್ತಿರ ಹತ್ತಿರ ಬಂತು. ನಿಮ್ಮೆಲ್ಲರ ತಯಾರಿಯೂ ಸಾಕಷ್ಟು ಚೆನ್ನಾಗಿ ನಡೆದಿದೆ ಎಂದುಕೊಂಡಿದ್ದೇನೆ. ಕಳೆದ ಹತ್ತು ವರ್ಷಗಳ ನಿಮ್ಮ ಕಲಿಕೆಯ ಒಟ್ಟಾರೆ ಚಿತ್ರಣವೇ ನೀವೀಗ ಬರೆಯಲಿರುವ ಪರೀಕ್ಷೆಯಿಂದ ನೀವು ಪಡೆಯಲಿರುವ ಅಂಕಪಟ್ಟಿ. ಹಾಗಾಗಿ ನೀವು ಕಳೆದ 10 ವರ್ಷಗಳ ಶಾಲಾ ಬದುಕನ್ನು ಸುಂದರವಾಗಿ ನೋಡಲು ಇಷ್ಟಪಡುವಿರಾದರೆ ನಿಮ್ಮ ಅಂಕಪಟ್ಟಿಯು ಸಮಾಧಾನಕರ ಅಂಕಗಳನ್ನು ಹೊಂದಿರಬೇಕಲ್ಲವೇ....?
ಇನ್ನೂ ಸಮಯವಿದೆ. ನಿಮಗೂ ಸಾಧ್ಯವಿದೆ. ಯಾವ ಆತಂಕವಿಲ್ಲದೆ ಕಲಿಕೆಯ ಮುಖ್ಯಾಂಶಗಳನ್ನು ಗಮನದಲ್ಲಿಟ್ಟು ಪುನರಾವರ್ತನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಪರೀಕ್ಷಾ ದಿನಗಳಲ್ಲಿ ನೀವು ಸಂತಸದಿಂದಲೇ ಪರೀಕ್ಷೆ ಬರೆಯಬಹುದು. ಮುಸ್ಲಿಂ ಮಕ್ಕಳಿಗೆ ಇದು ಉಪವಾಸದ ತಿಂಗಳಾದರೂ ಉಪವಾಸ ಕ್ರಿಯೆಯು ಒಂದು ಪವಿತ್ರ ಕ್ರಿಯೆಯಾದ್ದರಿಂದ ನಿಮ್ಮ ಓದಿಗೆ ಅದು ಯಾವತ್ತೂ ಅಡ್ಡಿಬಾರದು ಎಂಬುದನ್ನು ನೀವು ಒಪ್ಪಿಕೊಂಡಿದ್ದೀರಿ ಮತ್ತು ನಿಮ್ಮ ಮನಸ್ಸನ್ನು ಆ ರೀತಿ ಸಜ್ಜುಗೊಳಿಸಿದ್ದೀರಿ. ಬಿಸಿಲಿನ ಧಗೆ ಹೆಚ್ಚಿರುವುದು ಈ ಸಮಯದ ನೈಸರ್ಗಿಕ ಸಂಗತಿ. ಅದರ ಜೊತೆ ಹೊಂದಾಣಿಕೆಯೊಂದೇ ನಮಗೆ ಇರುವ ಮಾರ್ಗ. ಹೆಚ್ಚು ಹೆಚ್ಚು ದ್ರವ ಆಹಾರಗಳನ್ನು ಸೇವಿಸುವುದು ಹೆಚ್ಚು ನೀರು ಕುಡಿಯುವುದು ಮತ್ತು ಕಡಿಮೆ ಕರಿದ ಪದಾರ್ಥಗಳನ್ನು ಹಾಗೂ ಬೇಕಾದಷ್ಟೇ ಘನ ಆಹಾರವನ್ನು ತಿನ್ನುವುದು ಆರೋಗ್ಯಕ್ಕಾಗಿ ಅನುಸರಿಸಲೇಬೇಕಾದ ವಿಷಯಗಳು.
ನೂರಕ್ಕೆ ನೂರು ಅಂಕ ತೆಗೆಯಬೇಕೆಂಬ ವಿದ್ಯಾರ್ಥಿಗಳು ಕಳೆದ 20, 25 ವರ್ಷಗಳ ಹಿಂದಿನ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನೀವೇ ಮಹಾ ಅದೃಷ್ಟವಂತರು. ನಿಮಗೆ ಈಗ ಸಾಕಷ್ಟು ಮಾರ್ಗದರ್ಶನವಿದೆ. ಆನ್ಲೈನ್ ಕ್ಲಾಸ್ಗಳಿವೆ. ಇಡೀ ಇಲಾಖೆ ನಿಮ್ಮ ಬೆನ್ನಿಗೆ ನಿಂತಿದೆ. ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಆಯ್ಕೆ ಮಾಡಿಕೊಂಡು ಬರೆಯಬಹುದಾದ ದೀರ್ಘ ಉತ್ತರದ ಪ್ರಶ್ನೆಗಳು ನಿಮ್ಮ ಪ್ರಶ್ನೆ ಪತ್ರಿಕೆಯಲ್ಲಿರುತ್ತವೆ.. ಹಾಗಾಗಿ ನಿರಂತರ ಕಲಿಕೆಯು ನಿಮ್ಮ ಉತ್ತರ ಬರೆಯುವ ವೇಗವನ್ನು ಮತ್ತು ನಿಖರತೆಯನ್ನು ಸಹಜವಾಗಿಯೇ ಹೆಚ್ಚಿಸುತ್ತದೆ. ಹಾಗಾಗಿ ನಿತ್ಯ ಏಳೆಂಟು ತಾಸಿನ ನಿದ್ದೆ ಮತ್ತೊಂದು ಅರ್ಧ ಗಂಟೆಯ ಆಟದ ಜೊತೆ ನಿಮ್ಮ ಪುನರಾವರ್ತನೆಯು ನೂರಕ್ಕೆ ನೂರು ಅಂಕಗಳಿಸುವಲ್ಲಿ ನಿಮಗೆ ಸಹಾಯಕವಾಗುತ್ತದೆ.
'ನನಗೇನು ವಿದ್ಯೆ ಅಷ್ಟು ಬೇಗ ತಲೆಗೆ ಹತ್ತುತ್ತಿಲ್ಲವಲ್ಲ' ಎಂಬ ಆತಂಕ ಇರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಪಾಸು ಮಾಡುವುದು ಅಂತಹ ಕಷ್ಟವೇನಿಲ್ಲ. ಪ್ರತಿ ವಿಷಯದ ಉತ್ತೀರ್ಣತೆಗೆ ಬೇಕಾದ ಕನಿಷ್ಠ ಕಲಿಕಾ ಅಂಶಗಳನ್ನು ನಿಮ್ಮ ಶಿಕ್ಷಕರು ಈಗಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಮತ್ತು ಅದನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಹಾಗಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕನಿಷ್ಠ ಏನು ಕಲಿಯಬೇಕೆಂಬ ಸಣ್ಣ ಪ್ರಜ್ಞೆ ಇಟ್ಟುಕೊಂಡು ನಿರಂತರ ಪ್ರಯತ್ನ ಮಾಡಿದರೆ ನೀವು ಉತ್ತೀರ್ಣರಾಗುವಿರಿ. ನೀವೆಲ್ಲರೂ ಈ ಸಮಾಜದ ಬಹುದೊಡ್ಡ ಆಸ್ತಿ. ಮತ್ತೆ ಮತ್ತೆ ಪರೀಕ್ಷೆ ಬರೆಯುವ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಈಗಲೇ ಎಚ್ಚೆತ್ತುಕೊಂಡು ಸಮಯ ವ್ಯರ್ಥ ಮಾಡದೇ ಸಾಕಷ್ಟು ತಯಾರಿ ನಡೆಸುವುದು.
ಆಟೋಟ ಸ್ಪರ್ಧೆಗಳಿಗೆ ಬಹಳ ಹುಮ್ಮಸ್ಸಿನಿಂದ ಭಾಗವಹಿಸುತ್ತೀರಲ್ಲವೇ? ಈ ಪರೀಕ್ಷೆ ಎನ್ನುವುದು ಮೆದುಳು ಮತ್ತು ಜ್ಞಾನಕ್ಕೆ ಸಂಬಂಧಪಟ್ಟ ಆಟ. ಈ ಆಟವನ್ನೂ ಗೆಲ್ಲಲು ಸಾಧ್ಯವಿದೆ. ಪ್ರಯತ್ನ ಪಟ್ಟು ಪರೀಕ್ಷೆ ಎಂಬ ಆಟವನ್ನು ಆಡಿ ಎಲ್ಲರೂ ಗೆದ್ದು ಬನ್ನಿ. ಜಯವಾಗಲಿ. ಮತ್ತೆ ಫಲಿತಾಂಶ ಬಂದ ಮೇಲೆ ಅಂಕಪಟ್ಟಿಯನ್ನು status ಗೆ ಹಾಕಲು ಮರೆಯದಿರಿ. ಅದಕ್ಕೆ ನನ್ನದೂ ಒಂದು like ಇರುತ್ತದೆ.
ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ತಲಪಾಡಿ.
ಮಂಗಳೂರು ದಕ್ಷಿಣ ವಲಯ
ದಕ್ಷಿಣ ಕನ್ನಡ ಜಿಲ್ಲೆ
******************************************