-->
ಪಯಣ : ಸಂಚಿಕೆ - 30 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 30 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 30 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪಯಣ ಮಾಡೋಣ ಬನ್ನಿ.....
          
                    
      ಭಾರತದಲ್ಲಿ ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ. ಅದರಲ್ಲೂ ಐತಿಹಾಸಿಕ ಪ್ರಿಯರಿಗೆ ಇಷ್ಟವಾಗುವಂತಹ ಕುತೂಹಲಕಾರಿ ವಿಷಯಗಳಿಗೆ ಕೊನೆ ಎಂಬುವುದಿಲ್ಲ. ಇಂತಹ ಸಮೃದ್ಧ ಧಾರ್ಮಿಕ ಹಾಗೂ ಐತಿಹಾಸಿಕ ಸಂಪತ್ತನ್ನು ಹೊಂದಿರುವ ದೇಶ ಭಾರತ !

     ಭಾರತೀಯರಿಗೆ ಅವರವರ ಧರ್ಮಗಳಲ್ಲಿ ಎಲ್ಲಿಲ್ಲದ ನಂಬಿಕೆ ಹಾಗೂ ಪ್ರೀತಿ. ಶ್ರೀರಾಮನಿಂದ ಹಿಡಿದು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ವ್ಯಕ್ತಿಗಳವರೆಗಿನ ಎಲ್ಲಾ ವಿಷಯಗಳ ಬಗ್ಗೆಯೂ ನಮ್ಮಲ್ಲಿ ದಾಖಲೆಗಳಿವೆ. ಪುರಾವೆಗಳಿವೆ. ಇಂತಹ ಪುರಾಣಕಾಲದಲ್ಲಿ 'ಹೀಗಿತ್ತು' ಎಂಬುವುದಕ್ಕೆ ಸಾಕ್ಷಾಧಾರಗಳನ್ನು ಒದಗಿಸುವ ಏಕೈಕ ತಾಣ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಶ್ರೀಶೈಲಂ ಪಟ್ಟಣ. 

       ಶ್ರೀಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ. ಈ ಪಟ್ಟಣವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಕಾಣಬಹುದು. ಈ ನಗರವು ಕೃಷ್ಣಾ ನದಿಯ ತಟದಲ್ಲಿ ಸ್ಥಾಪಿತವಾಗಿದೆ.

    ಶ್ರೀಶೈಲಂ ಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಗರದ ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಇಲ್ಲಿಂದ ಶ್ರೀಶೈಲಂ ಪಟ್ಟಣಕ್ಕೆ 212 ಕೀ.ಮಿ ದೂರ. ಶ್ರೀಶೈಲಂ ಪಟ್ಟಣವು ಹಿಂದೂಗಳ ಪವಿತ್ರ ನಗರ ಎಂದು ಗುರುತಿಸಲ್ಪಟ್ಟಿದ್ದು, ಪ್ರತಿ ವರ್ಷ ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಯಾತ್ರಿಗಳು ಬರುತ್ತಾರೆ. ನಗರವು ಪ್ರಸಿದ್ಧ ದೇವಾಲಯಗಳನ್ನು ಹಾಗೂ 'ತೀರ್ಥಂ' (ತೀರ್ಥ ಸ್ಥಳ) ಗಳನ್ನು ಹೊಂದಿರುವುದರಿಂದ ಯಾತ್ರಾರ್ಥಿಗಳಿಗೆ ಯಾತ್ರಾ ಗಮ್ಯಸ್ಥಳವಾಗಿದೆ. ಹಾಗೂ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. 

     ಇಲ್ಲಿನ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಇಲ್ಲಿ ಭಗವಾನ್ ಶಿವನನ್ನು ಮಲ್ಲಿಕಾರ್ಜುನ ಸ್ವಾಮಿ ಎಂತಲೂ ಹಾಗೂ ಪಾರ್ವತಿ ದೇವಿಯನ್ನು ಭ್ರಮರಾಂಭ ಎಂದೂ ಪೂಜಿಸಲಾಗುತ್ತದೆ. ಈ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ, ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳ ನಡುವೆ ಇರುವುದು. ಮಲ್ಲೆಲಾ ತೀರ್ಥಂ ಧಾರ್ಮಿಕ ದೃಷ್ಟಿಯಿಂದ ಇನ್ನಷ್ಟು ಪ್ರಸಿದ್ಧಿಯನ್ನು ಗಳಿಸಿರುವ ಸ್ಥಳ. ಇದೊಂದು ಜಲಪಾತವಾಗಿದ್ದು, ಈ ತೀರ್ಥದ ನೀರಿನಲ್ಲಿ ಸ್ನಾನ ಮಾಡಿದರೆ ಸ್ನಾನ ಮಾಡಿದ ವ್ಯಕ್ತಿಯ ಪಾಪ ತೊಳೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಇಲ್ಲಿಗೆ ಭಕ್ತಾದಿಗಳು ನಿರಂತರವಾಗಿ ಬರುತ್ತಾರೆ. 

         ಪ್ರಸಿದ್ಧ ಸ್ಥಳವಾದ ಶ್ರೀಶೈಲಂ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲ. ಉತ್ತರ ಭಾರತದ ಚಳಿಗೆ ಹೋಲಿಸಿದರೆ ಇಲ್ಲಿನ ವಾಯುಗುಣ ಸೌಮ್ಯವಾಗಿರುತ್ತದೆ. ಇಲ್ಲಿ ಉಷ್ಣವಲಯದ ವಾಯುಗುಣವನ್ನು ಕಾಣಬಹುದಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಈ ಸ್ಥಳಕ್ಕೆ ಪ್ರಯಾಣ ಅಷ್ಟೊಂದು ಯೋಗ್ಯವಾಗಿಲ್ಲವೆಂದು ಹೇಳಬಹುದು.

       "ಶಿವ ಮತ್ತು ಪಾರ್ವತಿ ತಮ್ಮ ಪುತ್ರರಿಗೆ ಸೂಕ್ತವಾದ ವಧುಗಳನ್ನು ಹುಡುಕಲು ನಿರ್ಧರಿಸಿದಾಗ. ಶಿವನು ಬುದ್ಧಿ ಮತ್ತು ಸಿದ್ಧಿಯನ್ನು ಗಣೇಶನಿಗೆ ಮದುವೆ ಮಾಡಿಕೊಟ್ಟನು. ಹಿಂದಿರುಗಿದ ಕಾರ್ತಿಕೇಯನು ಕೋಪಗೊಂಡು ಕುಮಾರ ಬ್ರಹ್ಮಚಾರಿಯ ಹೆಸರಿನಲ್ಲಿ ಪಳನಿಯ ಕ್ರೌಂಚ ಪರ್ವತದಲ್ಲಿ ಏಕಾಂಗಿಯಾಗಿ ಇರಲು ಹೋದನು. ತನ್ನ ತಂದೆ ತನ್ನನ್ನು ಸಮಾಧಾನಪಡಿಸಲು ಬರುತ್ತಿರುವುದನ್ನು ನೋಡಿ, ಅವನು ಬೇರೆ ಸ್ಥಳಕ್ಕೆ ಹೋಗಲು ಪ್ರಯತ್ನಿಸಿದನು. ಆದರೆ ದೇವತೆಗಳ ಕೋರಿಕೆಯ ಮೇರೆಗೆ ಹತ್ತಿರದಲ್ಲಿಯೇ ಇದ್ದನು. ಶಿವ ಮತ್ತು ಪಾರ್ವತಿ ತಂಗಿದ್ದ ಸ್ಥಳವು ಶ್ರೀಶೈಲಂ ಎಂದು ಪ್ರಸಿದ್ಧ" ವಾಗಿರುವ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಕ್ಕೆ ಬನ್ನ.....
    ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article