-->
ಮಕ್ಕಳ ನಾಟಕ : ಗಿಡದ ಮಹತ್ವ : ಸಂಚಿಕೆ - 02 - ರಚನೆ : ಗೌತಮಿ ಶೆಟ್ಟಿಗಾರ್,  9ನೇ ತರಗತಿ

ಮಕ್ಕಳ ನಾಟಕ : ಗಿಡದ ಮಹತ್ವ : ಸಂಚಿಕೆ - 02 - ರಚನೆ : ಗೌತಮಿ ಶೆಟ್ಟಿಗಾರ್, 9ನೇ ತರಗತಿ

ಮಕ್ಕಳ ನಾಟಕ : ಗಿಡದ ಮಹತ್ವ
ಸಂಚಿಕೆ - 02
ರಚನೆ : ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 


                               ದೃಶ್ಯ- 1

(ಶಾಲೆಯ ಗಂಟೆ ಬಾರಿಸಿತು ಮಕ್ಕಳು ವರ್ಗ ಕೋಣೆಯೊಳಗೆ ಬಂದು ಕುಳಿತುಕೊಳ್ಳುವರು. ರಾಹುಲ್ ಕಾರ್ತಿಕನ ಬಳಿ ಜಗಳ ಮಾಡಲು ನೋಡುತ್ತಾನೆ. ಅಷ್ಟೊತ್ತಿಗೆ ಪ್ರಜ್ವಲ್ ಓಡಿ ಬರುತ್ತಾನೆ)

 ಪ್ರಜ್ವಲ್ : ಹೇ..ಟೀಚರ್ ಬಂದ್ರು.. ಟೀಚರ್ ಬಂದ್ರು
 ಟೀಚರ್ : (ಟೀಚರನ್ ಪ್ರವೇಶ) ಹೇ.. ಯಾಕೆ ಹೀಗೆ ಗಲಾಟೆ ಮಾಡ್ತಿದ್ದೀರಾ, ಇದೇನು ಮೀನು ಮಾರ್ಕೆಟಾ.. ಹೇ ಪ್ರಜ್ವಲ್ ನೀನು ಯಾವ ಮೀನು ಮಾರುತ್ತಿದ್ದೀಯಾ?
ಪ್ರಜ್ವಲ್ : ಟೀಚರ್ ನಾನು ಬಂಗುಡೆ ಮೀನು ಮಾರುತ್ತಿದ್ದೀನಿ.
ಟೀಚರ್ : ಸುಮ್ಮನೆ ಕೂತ್ಕೋ ನಿನಗೆ ಓದ್ಲಿಕ್ಕೆ ಹೇಳಿದ್ರೆ ಆಗಲ್ಲ… ಇದಕ್ಕೆಲ್ಲ ಸರಿ ಇದೆಯಾ.. ಮಕ್ಕಳೇ ಇವತ್ತು ಯಾವ ದಿನ ಅಂತ ಗೊತ್ತಾ.
ರಾಹುಲ್ : ಟೀಚರ್ ಇವತ್ತು ಶನಿವಾರ
ಟೀಚರ್ : ಶನಿವಾರ ಅಂತ ನನಗೂ ಗೊತ್ತು ಇವತ್ತು ಏನು ಸ್ಪೆಷಲ್ ಹೇಳಿ ನೋಡುವ.
 ಪ್ರಜ್ವಲ್ : ಟೀಚರ್ ಇವತ್ತು ನಮ್ಮ ಮನೆಯಲ್ಲಿ ಬಿರಿಯಾನಿ ಸ್ಪೆಷಲ್.
 ಟೀಚರ್ : ಸುಮ್ನೆ ಕೂತ್ಕೋ.. ಇವತ್ತು ಯಾವ ವಿಶೇಷ ದಿನ ಅಂತ ಗೊತ್ತಿರುವವರು ಹೇಳಿ ನೋಡುವ.
 ಕಾರ್ತಿಕ್ : ಟೀಚರ್ ಇವತ್ತು ವನ ಮಹೋತ್ಸವ ದಿನಾಚರಣೆ ಅಲ್ವಾ.
 ಟೀಚರ್ : ಸರಿ ಹೇಳಿದ್ದೀಯಾ ಕಾರ್ತಿಕ್ ಇವತ್ತು ವನಮಹೋತ್ಸವ. ಅದಕ್ಕೆ ಇವತ್ತು ತೋಟಕ್ಕೆ ಹೋಗಿ ಗಿಡ ನೆಡ್ಲಿಕ್ಕೆ ಉಂಟು. ನಾನು ಎರಡು ಗ್ರೂಪ್ ಮಾಡುತ್ತೇನೆ. ಒಬ್ಬ ಕಾರ್ತಿಕ್ ಬಾ ಮತ್ತೊಬ್ಬ ರಾಹುಲ್ ಬಾ, ನಿಮಗೆ ಬೇಕಾದ ಜನರನ್ನು ಆಯ್ಕೆ ಮಾಡಿ ನಿಮ್ಮ ತಂಡಗಳೊಂದಿಗೆ ಸೇರಿ ಗಿಡವನ್ನು ನೆಟ್ಟು ಚೆನ್ನಾಗಿ ಬೆಳಸಬೇಕು. ಯಾರ ಗಿಡ ಚೆನ್ನಾಗಿ ಬೆಳೆದು ಮುಂದೆ ಹೂವು ಹಣ್ಣು ಕೊಡುತ್ತದೋ ಅವರಿಗೆ ಬಹುಮಾನ ಕೊಡುತ್ತೇನೆ. ಸಾಲಾಗಿ ನಿಂತುಕೊಳ್ಳಿ ತೋಟಕ್ಕೆ ಹೋಗೋಣ. (ಎಲ್ಲರೂ ತೋಟದ ಕಡೆ ನಡೆಯುತ್ತಾರೆ)
 ಟೀಚರ್ : ತೆಗೆದುಕೊಳ್ಳಿ.. ಗಿಡ ಚೆನ್ನಾಗಿ ಬೆಳೆಸಬೇಕು ಯಾರಿಗೆ ಬಹುಮಾನ ಸಿಗುತ್ತೆ ನೋಡೋಣ.
(ವಿದ್ಯಾರ್ಥಿಗಳು ಅವರ ಗಿಡಗಳಿಗೆ ನೀರು ಗೊಬ್ಬರ ಹಾಕಿ ಚೆನ್ನಾಗಿ ಪೋಷಣೆ ಮಾಡುವರು)

                      ದೃಶ್ಯ- 2
(ಮೂರುವಾರಗಳ ನಂತರ ಗಿಡಗಳನ್ನು ಆರೈಕೆ ಮಾಡುತ್ತಿರುವಾಗ)
 ಟೀಚರ್ : (ಎಲ್ಲರ ಗಿಡಗಳನ್ನು ನೋಡುತ್ತಿದ್ದಾಗ) ಹೇ… ಕಾರ್ತಿಕ್ ನಿನ್ನ ಗಿಡ ತುಂಬಾ ಚೆನ್ನಾಗಿ ಬೆಳೆದಿದೆ ನನಗನಿಸುತ್ತೆ ನಿನಗೆ ಬಹುಮಾನ ಸಿಗುತ್ತದೆ.. ಗುಡ್ ಗುಡ್ ಕೀಪ್ ಇಟ್ ಅಪ್. 
 ಸಾಗರ್ : ನೋಡು ರಾಹುಲ್ ಟೀಚರ್ ಕಾರ್ತಿಕ್ ಗೆ ತುಂಬಾನೇ ಹೊಗಳುತ್ತಾ ಇದ್ದಾರೆ. (ಟೀಚರ್ ಅಲ್ಲಿಂದ ಹೋದ ಮೇಲೆ)
 ರಾಹುಲ್ : ಟೀಚರ್ಗೆ ಗಿಡ ತುಂಬಾ ಚೆನ್ನಾಗಿ ಬೆಳೆದಿದೆ ಅನ್ನಿಸಿತ್ತು. ಅದಕ್ಕಾಗಿ ಅವರು ಶಾಬಾಸ್ ಅಂದ್ರು.
 ಕಾರ್ತಿಕ್ : ಹೌದು ನೀರು ಗೊಬ್ಬರವೆಲ್ಲ ಹಾಕಿ ಚೆನ್ನಾಗಿ ಬೆಳೆಸಿದ್ದೇನೆ… ಅದಕ್ಕೆ ಟೀಚರ್ ಹೊಗಳಿದ್ರು ಸರಿ ಆಯ್ತು, ಕ್ಲಾಸ್ಗೆ ಟೈಮ್ ಆಗ್ತದೆ ನಾನು ಹೋಗ್ತೇನೆ.
 ರಾಹುಲ್ : (ಅಕ್ಕ ಪಕ್ಕದಲ್ಲಿ ಯಾರು ಇಲ್ಲದನ್ನು ನೋಡಿ) ನಾನು ನೋಡ್ತೇನೆ ಕಾರ್ತಿಕ್ ನ ಗಿಡಕ್ಕೆ ಹೇಗೆ ಬಹುಮಾನ ಸಿಗುತ್ತದೆ ಎಂದು. (ರಾಹುಲ್ ನ ಗಿಡವನ್ನು ಮುರಿದು ಅಲ್ಲಿಂದ ಓಡಿ ಹೋಗುತ್ತಾನೆ)
(ಮೂರನೇ ದಿನ ತೋಟದಲ್ಲಿ ವಿದ್ಯಾರ್ಥಿಗಳು)
 ಕಾರ್ತಿಕ್ : ಅಯ್ಯೋ… ಗಿಡ ಹಾಳಾಗಿ ಹೋಯಿತು. ಯಾರೋ ಕಿತ್ತಿದ್ದಾರೆ (ಜೋರಾಗಿ ಅಳುತ್ತಾನೆ)
 ಪ್ರಜ್ವಲ್ : ಅಯ್ಯೋ ಕಾರ್ತಿಕ್ ನ ಗಿಡ ಹಾಳಾಗಿದೆ ನನಗನಿಸುತ್ತೆ ಇದು ರಾಹುಲ್ ನ ಕೆಲಸ.
 ರಾಹುಲ್ : ಏ ಪಾಪ ಕಾರ್ತಿಕ್.. ಇದು ಗಿಡ ಹಾಳಾಗಿ ಹೋಯಿತು. (ಜೋರಾಗಿ ನಗುತ್ತಾ) ಟೀಚರ್ ಹೊಗಳಿದ್ದೇ ಹೊಗಳಿದ್ದು ಗಿಡ ಸತ್ತೇ ಹೋಯಿತು.
 ಸಾಗರ್ : ಗಿಡ ಸ್ವರ್ಗಕ್ಕೆ ಹೋಯಿತ ನರಕಕ್ಕೆ ಹೋಯಿತಾ.
  ಕಾರ್ತಿಕ್ : ನನಗೆ ಗೊತ್ತು ನೀನೇ ನನ್ನ ಗಿಡವನ್ನು ಹಾಳು ಮಾಡಿದ್ದೀಯಾ ಅಂತ.
 ರಾಹುಲ್ : ಹೌದು ನಾನೇ ಹಾಳು ಮಾಡಿದ್ದೇನೆ ಏನೀಗ?
 ಕಾರ್ತಿಕ್ : ನಾನು ಈಗಲೇ ಟೀಚರ್ ಹತ್ತಿರ ಹೋಗಿ ನಿನ್ನ ದೂರು ಹೇಳುತ್ತೇನೆ.
 ರಾಹುಲ್ : ಹೋಗು ಹೋಗು ಯಾರ ಜೊತೆ ಬೇಕಾದರೂ ಹೇಳು. 
ಕಾರ್ತಿಕ್ : ಟೀಚರ್ ಬಳಿ ಹೇಳಿ ಅವರನ್ನು ಕರೆದುಕೊಂಡು ಬರುತ್ತಾನೆ.
 ಟೀಚರ್ : ರಾಹುಲ್ ನಾನು ಏನು ಕೇಳ್ತಾ ಇದ್ದೇನೆ, ನೀನು ಕಾರ್ತಿಕ್ ನ ಗಿಡ ಹಾಳು ಮಾಡಿದ್ದೀಯಾ. ನಿನಗೆ ಸರಿಯಾಗಿ ಪನಿಶ್ಮೆಂಟ್ ಉಂಟು.
  ರಾಹುಲ್ : ಹೌದು ಟೀಚರ್ ನಾನೇ ಮಾಡಿದ್ದು.
 ಟೀಚರ್ : ನೋಡು ನೀನು ಬೇರೆಯವರ ಗಿಡವನ್ನು ಹಾಳು ಮಾಡುವುದು ತಪ್ಪು. ನೀನು ಕಾರ್ತಿಕ್ ನ ಮೇಲೆ ಇರುವ ದ್ವೇಷವನ್ನು ಗಿಡದ ಮೇಲೆ ಯಾಕೆ ಹಾಕಿದ್ದೀಯಾ? ಆದರೆ ಗಿಡ ಒಂದು ಪರಿಸರದ ಭಾಗ ಅಲ್ಲವೇ, ಗಿಡವನ್ನು ಹಾಳು ಮಾಡಿದ್ದು ನಿನ್ನ ತಪ್ಪು, ಈಗ ನೀನು ತಪ್ಪು ಎಂದು ಒಪ್ಪಿಕೋ.. ಮತ್ತು ಕಾರ್ತಿಕ್ ನ ಬಳಿ ಸಾರಿ ಕೇಳು.
 ರಾಹುಲ್ : ನಾನು… ನಾನು ಸಾರಿ ಯಾರಿಗೂ ಕೇಳಲ್ಲ.
 ಟೀಚರ್ : ನೋಡು ಒಳ್ಳೆ ಮಾತಿನಿಂದ ಹೇಳುತ್ತಿದ್ದೇನೆ ಅವನಿಗೆ ಸಾರಿ ಕೇಳು.
 ರಾಹುಲ್ : ಪರಿಸರದ್ದು ಒಂದು ಭಾಗ ಮಾತ್ರ ಅಲ್ವಾ ಹಾಳಾದದ್ದು ಇನ್ನುಳಿದ ಅಂಶ ಇದೆಯಲ್ಲ.
 ಟೀಚರ್ : ನೀನು ಹೀಗೆ ಹೇಳಿದರೆ ಕೇಳಲ್ಲ, ಇದರ ಪರಿಣಾಮ ಮುಂದೆ ಪ್ರಕೃತಿನೇ ನಿನಗೆ ನೀಡುತ್ತದೆ.
(ಟೀಚರ್ ಅಲ್ಲಿಂದ ಹೋಗುತ್ತಾರೆ ರಾಹುಲ್ ಮತ್ತು ಅವನ ಗೆಳೆಯರು ಕಾರ್ತಿಕ್ ನನ್ನು ದಿಟ್ಟಿಸಿ ನೋಡುತ್ತಾರೆ. ಕಾರ್ತಿಕ್ ಹಾಳಾದ ಗಿಡವನ್ನು ಸರಿಪಡಿಸಿ ಅಲ್ಲಿಂದ ಹೋಗುವನು)

                      ದೃಶ್ಯ- 3

(ಸುಮಾರು 24 ವರ್ಷಗಳ ನಂತರ ಒಂದು ದಿನ)
 ಡಾಕ್ಟರ್ : ಹಲೋ ರಾಹುಲ್. 
 ರಾಹುಲ್ : ಹೇಳಿ ಡಾಕ್ಟರ್.
 ಡಾಕ್ಟರ್ : ನೋಡು ರಾಹುಲ್.. ನಿಮ್ಮ ತಾಯಿ ಇನ್ನೂ ಬದುಕುವುದು ಒಂದು ವಾರ ಮಾತ್ರ ಸಾಧ್ಯತೆ ಇದೆ. ನಿಮ್ಮ ತಾಯಿಗೆ ಇರುವ ಕ್ಯಾನ್ಸರ್ ಗೆ ನಮ್ಮ ಮೆಡಿಸನ್ ಯಾವ ಕೆಲಸ ಮಾಡುತ್ತಿಲ್ಲ. ನಿಮ್ಮ ತಾಯಿ ಬದುಕ ಬೇಕಾದರೆ ಒಂದೇ ಒಂದು ಸಾಧ್ಯತೆ ಇದೆ. ಭಾರತದಲ್ಲಿ ಸಿಗುವ ಒಂದು ಹಣ್ಣು ಅದರ ಹೆಸರು ರಾಮ ಫಲ.. ಅದನ್ನು ನಿಮ್ಮ ತಾಯಿ ಸೇವಿಸಿದರೆ ಬದುಕುಬಹುದು ಎನ್ನುವುದು ನನ್ನ ಅನಿಸಿಕೆ. ಎಲ್ಲವೂ ಪ್ರಕೃತಿಯ ಮಹಿಮೆ.
 ರಾಹುಲ್ : ಸರಿ ಡಾಕ್ಟರ್ ಹಾಗಾದ್ರೆ.. ನಾನು ಭಾರತಕ್ಕೆ ಹೋಗಿ ಕಾಡಿನಲ್ಲಾದರೂ ಸರಿ ಹುಡುಕಿ ಆ ಹಣ್ಣು ತರಲು ಪ್ರಯತ್ನಿಸುತ್ತೇನೆ.
(ರಾಹುಲ್ ತನ್ನ ಊರಿಗೆ ಬರುತ್ತಾನೆ.. ಊರಿನ ಹತ್ತಿರ ಬೇಸರದಿಂದ ನಡೆದುಕೊಂಡು ಹೋಗುತ್ತಿರುವಾಗ)
 ಅಂಗಡಿಯವ : ಓ ರಾಹುಲ್ ಯಾವಾಗ ಬಂದದ್ದು ಊರಿಗೆ.. ತಾಯಿ ಹೇಗಿದ್ದಾರೆ.
 ರಾಹುಲ್ : ನಾನು ಚೆನ್ನಾಗಿದ್ದೇನೆ ಶಂಕರಣ್ಣ.. ಆದರೆ ಅಮ್ಮ…
 ಅಂಗಡಿಯವನು : ಆದರೆ ಅಮ್ಮನಿಗೆ ಏನಾಯಿತು?
 ರಾಹುಲ್ : ಅಮ್ಮನಿಗೆ ಕ್ಯಾನ್ಸರ್.. ಡಾಕ್ಟರು ಹೇಳಿದ್ರು ಇವರಿಗೆ ಇರುವ ಕಾಯಿಲೆಗೆ ಯಾವ ಮೆಡಿಸಿನ್ ಕೂಡ ಕೆಲಸ ಮಾಡುತ್ತಿಲ್ಲ ಎಂದು.. ಆದರೆ ಅಮ್ಮ ಬದುಕಬೇಕಾದರೆ ಒಂದು ಸಾಧ್ಯತೆ ಇದೆ.. ಅದೇನೆಂದರೆ ಅದೇ ರಾಮ ಫಲದ ಹಣ್ಣು ಹಾಗೂ ಅದರ ತೊಗಟೆ ಹಾಗೂ ಎಲೆಯ ಕಷಾಯ ಮಾಡಿ ಕುಡಿದರೆ ಸರಿ ಹೋಗುವ ಸಾಧ್ಯತೆ ಇದೆ ಎಂದು… ಎಷ್ಟೋ ಜನರು ಅದರಿಂದ ಬದುಕಿದ್ದಾರೆ ಅಂತ ಕೂಡ ಹೇಳಿದ್ದಾರೆ.. ಅದಕ್ಕಾಗಿ ಇಲ್ಲಿ ಎಲ್ಲಾದರೂ ಆ ಮರ ಉಂಟಾ ಎಂದು ಹುಡುಕ್ತಾ ಇದ್ದೇನೆ.
 ಅಂಗಡಿಯವನು : ಇಲ್ಲಿರಬಹುದು ಇದ್ದರೆ ಹೇಳುತ್ತೇನೆ.
 ರಾಹುಲ್ : ಸರಿ ಶಂಕರಣ್ಣ ನಾನು ಬರುತ್ತೇನೆ.
(ಒಂದು ಕಡೆಯಿಂದ ಕಾರ್ತಿಕ್ ಮತ್ತು ಸಾಗರ್ ಬರುತ್ತಿದ್ದರು. ಅವರು ರಾಹುಲ್ ಬರುತ್ತಿದ್ದುದ್ದನ್ನು ನೋಡಿ, ಅವನ ಬಳಿ ಬಂದು ಮಾತನಾಡುತ್ತಾರೆ)
 ಕಾರ್ತಿಕ್ : ಹಾಯ್ ರಾಹುಲ್ ಹೇಗಿದ್ದೀಯಾ?
 ರಾಹುಲ್ : ಹೇ…. ಕಾರ್ತಿಕ್ ಅಲ್ಲವಾ ನೀನು ?ನಾನು ಚೆನ್ನಾಗಿದ್ದೇನೆ. ನೀನು ಹೇಗಿದ್ದೀಯ?
 ಕಾರ್ತಿಕ್ : ಹೌದು ನಾನು ಚೆನ್ನಾಗಿದ್ದೇನೆ. ನಿನ್ನನ್ನು ತುಂಬಾ ವರ್ಷಗಳ ನಂತರ ನೋಡಿದ್ದೇನೆ. ಅಮ್ಮ ಬರಲಿಲ್ಲವಾ. 
 ರಾಹುಲ್ : ಇಲ್ಲ ಕಣೋ.. ಅಮ್ಮನಿಗೆ ಕ್ಯಾನ್ಸರ್.. ಡಾಕ್ಟರು ಹೇಳಿದ್ರು ಅಮ್ಮನಿಗೆ ಇರುವ ಕಾಯಿಲೆಗೆ ಯಾವ ಮೆಡಿಸಿನ್ ಕೂಡ ಕೆಲಸ ಮಾಡುವುದಿಲ್ಲ ಅಂತ..
 ಕಾರ್ತಿಕ್ : ಏನು ಹೇಳುತ್ತಿದ್ದೀಯಾ ಅದಕ್ಕೆ ಬೇರೆ ಏನಾದರೂ ಆಯುರ್ವೇದಿಕ್ ಮೆಡಿಸಿನ್ ಇಲ್ವಾ?
 ರಾಹುಲ್ : ಹಾ… ಉಂಟು ಅದು ಭಾರತದಲ್ಲಿ ಸಿಗುವ ಹಣ್ಣು ರಾಮಫಲ ತಿನ್ನಲು ಹೇಳಿದ್ದಾರೆ. ಅದರ ಕಷಾಯ ಕುಡಿಯಲು ತಿಳಿಸಿದ್ದಾರೆ.
 ಕಾರ್ತಿಕ್ : ಅದು ಯಾವ ಹಣ್ಣು ಮಾರಾಯ.
 ರಾಹುಲ್ : ಕಾರ್ತಿಕ್ ನಿನಗೆ ಎಲ್ಲಿಯಾದರೂ ಸಿಕ್ಕಿದರೆ ಹೇಳು.. ಇನ್ನು ನಾನು ಬರುತ್ತೇನೆ.
 ಕಾರ್ತಿಕ್ : ಹಾ ಹಾಹಾ.. ರಾಹುಲ್ ಈ ಮರ ಶಾಲೆಯಲ್ಲಿ ಉಂಟು ಈ ಹಣ್ಣಿನ ಗಿಡವನ್ನು ನಾವು ಶಾಲೆಯಲ್ಲಿರುವಾಗ ನೆಟ್ಟಿದ್ದು ಅಲ್ವಾ ನನಗೆ ನೆನಪಾಯಿತು.
 ಸಾಗರ್ : ರಾಹುಲ್ ನೆನಪಿದೆಯಾ ನೀನು ಇದೇ ಗಿಡವನ್ನು ಹಾಳು ಮಾಡಿದ್ದು ಅಲ್ವಾ, ಅದೇ ಗಿಡದಲ್ಲಿ ಈಗ ಆ ಹಣ್ಣಾಗುವುದು.
 ರಾಹುಲ್ : ಹೌದಾ.. ನಾವು ಒಂದು ಸಲ ಶಾಲೆಗೆ ಹೋಗುವ ಕಣೋ.. ಅದರಲ್ಲಿ ಹಣ್ಣಾಗಿದ್ದರೆ ನನ್ನ ತಾಯಿಗೆ ಆ ಹಣ್ಣು ತೆಗೆದುಕೊಂಡು ಹೋಗಿ ತಾಯಿ ಎಂದು ಬದುಕಿಸುತ್ತೇನೆ.. ಪ್ಲೀಸ್ ನನಗೆ ಸಹಾಯ ಮಾಡ್ರೋ.. ( ರಾಹುಲ್ ಅಳುವನು)
 ಕಾರ್ತಿಕ್ : ಬಾ ಹೋಗೋಣ ಶಾಲೆಗೆ. (ಎಲ್ಲರೂ ಶಾಲೆಯ ಬಳಿಗೆ ಹೋಗುತ್ತಾರೆ)
 (ರಾಹುಲ್ ಓಡಿಹೋಗಿ ಶಾಲೆ ಬಳಿಯ ಮರದ ಹತ್ತಿರ ನಿಲ್ಲುತ್ತಾನೆ)
 ರಾಹುಲ್ : ಓ ಮರದಲ್ಲಿ ತುಂಬಾ ಹಣ್ಣುಗಳಾಗಿವೆ. ಈಗ ನನಗೆ ನಂಬಿಕೆ ಇದೆ. ನನ್ನ ಅಮ್ಮ ಬದುಕಬಹುದು.. ಥ್ಯಾಂಕ್ ಯು ಕಾರ್ತಿಕ್ ನನ್ನ ಅಮ್ಮನನ್ನು ಉಳಿಸಿದಕ್ಕೆ ಹಾಗೂ ನನ್ನ ಆಗಿನ ತಪ್ಪಿಗಾಗಿ ಇವತ್ತು ನಾನು ತುಂಬಾ ಸಾರಿ ಕೇಳುತ್ತೇನೆ… ಸಾರಿ ಸಾರಿ ಕಾರ್ತಿಕ್
 ಕಾರ್ತಿಕ್ : ಪರ್ವಾಗಿಲ್ವಾ ಬಿಡು ನಿನ್ನ ತಾಯಿ ನನ್ನ ತಾಯಿ ಇದ್ದ ಹಾಗೆ. ಅವರು ಗುಣವಾದರೆ ಸಾಕು ಅದೇ ನಮಗೆ ದೊಡ್ಡ ಸಂತೋಷ.
(ಅವರಿಗೆ ಚಿಕ್ಕ ವಯಸ್ಸಿನಲ್ಲಿ ಕಲಿಸುತ್ತಿದ್ದ ಟೀಚರ್ ಅಲ್ಲಿಗೆ ಬರುತ್ತಾರೆ)
 ಟೀಚರ್ : ಓ ರಾಹುಲ್... ಕಾರ್ತಿಕ್ ... ಹೇಗಿದ್ದೀರಾ ನೀವು? ತುಂಬಾ ದಿನದ ನಂತರ ಇಲ್ಲಿ ನೋಡ್ತಾ ಇದ್ದೇನೆ, ನೋಡು ರಾಹುಲ್ ನೀನು ಚಿಕ್ಕವಯಸ್ಸಿನಲ್ಲಿ ಕಾರ್ತಿಕ್ ನ ಗಿಡ ಹಾಳು ಮಾಡಿದ್ದೆ ಅಲ್ವಾ. ಅದೇ ಗಿಡ ಇದು ಇವತ್ತು ಇಷ್ಟು ದೊಡ್ಡದಾಗಿ ಬೆಳೆದಿದೆ.
 ರಾಹುಲ್ : ಹೌದು ಟೀಚರ್ ಅದರ ಅವಶ್ಯಕತೆ ಈಗ ನನಗೆ ಗೊತ್ತಾಯ್ತು.
 ಟೀಚರ್ : ಹೌದು ರಾಹುಲ್ ನಿನ್ನ ತಾಯಿಗೆ ಹುಷಾರಿಲ್ಲ ಎಂದು ಗೊತ್ತಾಯ್ತು. ಆದರೆ ಪ್ರಕೃತಿ ನಿನಗೆ ಇವತ್ತು ಪಾಠ ಕಲಿಸಿದೆ. ಈಗಲಾದರೂ ನಿನ್ನ ತಪ್ಪಿನ ಅರಿವು ಆಯ್ತಾ ರಾಹುಲ್.
 ರಾಹುಲ : ಹೌದು ಟೀಚರ್ ನನ್ನನ್ನು ಕ್ಷಮಿಸಿಬಿಡಿ. ನನ್ನ ತಪ್ಪಿನ ಅರಿವು ನನಗಾಗಿದೆ. ಇನ್ನು ಯಾರು ಇಂಥ ತಪ್ಪನ್ನು ಮಾಡಬಾರದೆಂದು ನಾನು ಎಲ್ಲರಿಗೂ ಹೇಳುತ್ತೇನೆ. ಔಷಧಿ ಗುಣವುಳ್ಳ ಹಲವು ಗಿಡ ಮರಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಲು ನಾನು ಕರೆ ನೀಡುತ್ತೇನೆ.
 ಎಲ್ಲರೂ : ಹೌದು ನಾವೆಲ್ಲರೂ ಗಿಡಮರಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸೋಣ. ಬನ್ನಿ ಸಾಲುಮರದ ತಿಮ್ಮಕ್ಕನ ಪ್ರೇರಣೆಯನ್ನು ಪಡೆದು ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಪರಿಸರವನ್ನು ಸಂರಕ್ಷಿಸಲು ಗಿಡ ಮರಗಳನ್ನು ನಡೆಸಲು ಪ್ರೇರಣೆ ನೀಡೋಣ.
       “ಮನೆಗೊಂದು ಗಿಡ ಊರಿಗೊಂದು ವನ” ಧನ್ಯವಾದಗಳು.....
....................................... ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
***************************************
ಮಾರ್ಗದರ್ಶಕ ಶಿಕ್ಷಕರು : ಐರಿನ್ ಫೆರ್ನಾಂಡಿಸ್
***************************************


Ads on article

Advertise in articles 1

advertising articles 2

Advertise under the article