-->
ಪಯಣ : ಸಂಚಿಕೆ - 28 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 28 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 28 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಶಿವನ ದೇವಾಲಯ ನಂಜನಗೂಡಿಗೆ ಪಯಣ ಮಾಡೋಣ ಬನ್ನಿ....
         
      ಇದಕ್ಕೆ ಗರಳಪುರಿ, ದಕ್ಷಿಣಕಾಶಿ ಎಂದೂ ಮುಂತಾದ ಹೆಸರುಗಳಿವೆ. ಇಲ್ಲಿಯ ಕಪಿಲಾ ನದಿಯ ದಡದಲ್ಲಿ ಶ್ರೀಕಂಠೇಶ್ವರ ಅಥವಾ ನಂಜುಂಡೇಶ್ವರ ದೇವಾಲಯವಿದೆ. 

     ಇದು ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ. 385 ಅಡಿ ಉದ್ದ 160 ಅಡಿ ಅಗಲದ ವಿಸ್ತಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ದೊಡ್ಡ 120 ಅಡಿಯ ಎತ್ತರದ ಗೋಪುರವಿದೆ. ಗೋಪುರದ ಮೇಲೆ 3 ಮೀಟರ್ ಎತ್ತರದ ಚಿನ್ನದ ಕಲಶಗಳಿವೆ ಹಾಗೂ ಎರಡು ಕೊಂಬುಗಳಿವೆ. ಈ ದೇವಾಲಯದಲ್ಲಿ ಇರುವಷ್ಟು ವಿಗ್ರಹಗಳು ಮತ್ತೆಲ್ಲಿಯೂ ಇಲ್ಲ. ಇವುಗಳಲ್ಲಿ ಅರ್ಧದಷ್ಟು ಶಿವಲಿಂಗಗಳು ಗರ್ಭಗುಡಿಯ ಸುತ್ತ ಪ್ರದಕ್ಷಿಣಪಥ, ನಂತರ 9 ಕಂಬಗಳ ಸಭಾಮಂಟಪ ಇದೆ. 

      ಈ ದೇವಾಲಯದ ಸ್ಥಾಪನೆ ಗಂಗರಸರಿಂದ ಆಗಿದ್ದಿರಬೇಕು. ನಂತರ ಚೋಳರಾಜರಿಂದ ವಿಸ್ತಾರಗೊಂಡಿರಬೇಕು. ಮುಂದೆ ವಿಜಯನಗರದ ಅರಸರು, ದಿವಾನ್ ಪೂರ್ಣಯ್ಯನವರು , ದಳವಾಯಿಗಳು ದೇವಾಲಯವನ್ನು ಕ್ರಮವಾಗಿ ವಿಸ್ತರಿಸಿದರು.  
       ಈ ದೇವರು ನಂಜುಂಡೇಶ್ವರ (ನಂಜಯ್ಯ) ರೋಗ ನಿವಾರಕ ಎಂಬುದು ಜನರಲ್ಲಿನ ಬಲವಾದ ನಂಬುಗೆ. ಇದಕ್ಕೆ ನಂಜುಂಡೇಶ್ವರನ ಅನುಗ್ರಹದಿಂದ ಟಿಪ್ಪುವಿನ ಪಟ್ಟದಾನೆಗೆ ಹೋಗಿದ್ದ ಕಣ್ಣು ಮರಳಿ ಬಂದಿತೆಂಬ ಐತಿಹ್ಯವೇ ಸಾಕ್ಷಿ. 'ಹಕೀಂ ನಂಜುಂಡ' ಎಂಬ ದೇವರ ಹೆಸರಿಗೆ ಇದೇ ಕಾರಣ. ಟಿಪ್ಪು ಈ ಕಾರಣಕ್ಕೆ ಪಚ್ಚೆಲಿಂಗವನ್ನು ದೇವಸ್ಥಾನಕ್ಕೆ ಕಾಣಿಕೆ ಕೊಟ್ಟಿದ್ದಾನೆಂದು ಇತಿಹಾಸ ಹೇಳುತ್ತದೆ. 

      ವೈದ್ಯಕ್ಕೆ ಮಣಿಯದ ಖಾಯಿಲೆಗಳಿಂದ ನರಳುವ ಲಕ್ಷಾಂತರ ಮಂದಿಗೆ ಈ ದೇವರ ಯಾತ್ರೆ ಅಂತಿಮ ಪರಿಹಾರ. ಇಲ್ಲಿನ ಎರಡು ಮುಖ್ಯ ಉತ್ಸವಗಳೆಂದರೆ ಗಿರಿಜಾಕಲ್ಯಾಣ ಮತ್ತು ತೆಪ್ಪ, ಡಿಸೆಂಬರ್‌ನಲ್ಲಿ ನಡೆಯುವ ಅಂಧಕಾಸುರನ ಸಂಹಾರ, ಮಾರ್ಚ್ - ಎಪ್ರಿಲ್‌ನಲ್ಲಿ ನಡೆಯುವ ಪಂಚರಥ ದೊಡ್ಡ ಜಾತ್ರೆಯಾಗಿದೆ. 

     ಭಕ್ತರು ದರ್ಶನದ ಮುನ್ನ ಕಪಿಲಾ ನದಿಯ ಚಾಮುಂಡೇಶ್ವರಿ ಘಟ್ಟದಲ್ಲಿ ಮಿಂದು ಅಲ್ಲಿಯೇ ಚಾಮುಂಡೇಶ್ವರಿ ದೇವಾಲಯದಲ್ಲಿ ನಮಸ್ಕರಿಸಿ ನಂಜುಂಡೇಶ್ವರನ ದರ್ಶನ ಮಾಡುವರು.  

ಸೇರುವ ಬಗೆ : ಮೈಸೂರಿಗೆ 23 ಕಿ.ಮೀ, ಬೆಂಗಳೂರಿಗೆ 163 ಕಿಮೀ, ಮೈಸೂರು ಊಟಿ ರಸ್ತೆ , ರೈಲು ಬಸ್ಸುಗಳ ಸೌಕರ್ಯ ಚೆನ್ನಾಗಿದೆ. ಎಲ್ಲರೂ ನೋಡಿ ಬರುವಂತಹ ಧಾರ್ಮಿಕ ಸ್ಥಳ ಇದಾಗಿದೆ.

       ಕನ್ನಡದಲ್ಲಿ ನಂಜು ಎಂದರೆ "ವಿಷ" ಎಂದರ್ಥ. ನಂಜುಂಡೇಶ್ವರ ಎಂಬ ಹೆಸರಿನ ಅರ್ಥ "ವಿಷವನ್ನು ಸೇವಿಸಿದ ದೇವರು" ಆಪ್ತವಾದ, ಮನಸ್ಸಿನ ಕಲ್ಮಶಗಳನ್ನು ತೊಳೆಯುವ, ವಿಷದ ಮನಸ್ಸಿನಿಂದ - ಮನಸ್ ಶುದ್ಧೀಕರಿಸುವ ಆಧ್ಯಾತ್ಮಿಕ ಕ್ಷೇತ್ರ ಈ ನಂಜನಗೂಡು "ಬನ್ನಿ ನೋಡಿ ... ಅನುಭವಕ್ಕೊಂದು ಪ್ರವಾಸ.. ಬನ್ನಿ ಪ್ರವಾಸ ಹೋಗೋಣ.....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article