-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 87

ನಿಷ್ಪಾಪಿ ಸಸ್ಯಗಳು : ಸಂಚಿಕೆ - 87

ನಿಷ್ಪಾಪಿ ಸಸ್ಯಗಳು : ಸಂಚಿಕೆ - 87
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ.


ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಗಿಡ ಬಳ್ಳಿಗಳ ಜೊತೆ ಮಾತನಾಡಲು ಆರಂಭಿಸಿರುವಿರಲ್ಲವೇ? ನಾವಿಂದು  ನಮ್ಮ  ಊರಲ್ಲಿ  ಮಾರ್ಗದ ಇಕ್ಕೆಲಗಳಲ್ಲಿ  ಒಂದು ಒಂದೂವರೆ  ಅಡಿಗಳಷ್ಟು ಎತ್ತರ ಬೆಳೆದು ಮೈತುಂಬಾ ಹೂಗಳನ್ನು ಅರಳಿಸಿಕೊಂಡು ನಿಂತಿರುವ ಗಿಡವೊಂದರ ಬಳಿ ಹೋಗೋಣ. ಗಿಡದ ಜೊತೆಗೆ ಮಾತನಾಡೋಣ ಆಗದೇ.. ಹೀಗೆ ಬನ್ನಿ ಮಕ್ಕಳೇ.. ಇದು ಮಂಗಳೂರು ಸಮೀಪದ ಪಿಲಿಕುಳ ನಿಸರ್ಗಧಾಮದ ಸನಿಹವಿರುವ ರಸ್ತೆ. ಅಲ್ಲಿ ನೋಡಿ ನೇರಳೆ ಬಣ್ಣದ ಹೂಗಳನ್ನು ಹೊತ್ತ ಗಿಡಗಳ ಸಮೂಹ. ಅದರ ಹೆಸರು ಕೇಶವರ್ಧಿನಿ. ಬನ್ನಿ ಗಿಡಗಳ ಬಳಿಗೆ ಹೋಗೋಣ.. ಮಾತನಾಡಿಸೋಣ.
ಶಾಹಿಕ್ : ಕೇಶವರ್ಧಿನಿಯವರೇ ನಮಸ್ಕಾರ.
ಕೇಶವರ್ಧಿನಿ: ಮಕ್ಕಳೇ ನಮಸ್ಕಾರ. ನಿಮ್ಮನ್ನೆಲ್ಲ ನೋಡಿ ಆನಂದವಾಯಿತು.
ಶಮ್ಲ : ನಿಮ್ಮ ಈ ನೇರಳೆ ಬಣ್ಣದ ಹೂಗಳನ್ನು ನೋಡಿ ನಮಗೆ ವಿಶೇಷವೆನಿಸಿತು. ನೇರಳೆ ಬಣ್ಣದ ಹೂವಿನ ಗಿಡಗಳಿರುವುದು ಬಹಳ ಅಪರೂಪವಲ್ಲವೇ?
ಕೇಶವರ್ಧಿನಿ: ಹ್ಹಾಂ ಹೌದು ಮಕ್ಕಳೇ. ನನಗೂ  ಬಗ್ಗೆ ಹೆಮ್ಮೆಯಿದೆ. ನನ್ನ ಹೂಗಳ ಮಕರಂದವನ್ನು ಹೀರಲು ಅದೆಷ್ಟೋ ವಿಧದ ಚಿಟ್ಟೆಗಳು ಬರುತ್ತವೆ. ನಾನಾ ಜಾತಿಯ ಹುಳ ಹುಪ್ಪಟೆಗಳು, ಇರುವೆಗಳು ಬರುತ್ತವೆ. ನಮ್ಮ  ನೆರಳಲ್ಲಿ  ತಂಪಾಗಿರುತ್ತದೆ ಎಂಬ ಕಾರಣಕ್ಕೆ  ಕೆಲವು ಪುಟಾಣಿ ಜೀವಿಗಳಿರುತ್ತವೆ.
ಶಾಹಿಕ್ : ಹೌದೇ! ನಿಮ್ಮ ನಿಜವಾದ ಹೆಸರೇನು.. ಕೇಶವರ್ಧಿನಿ ಹೆಸರು ಅನ್ವರ್ಥಕವೇನು?
ಕೇಶವರ್ಧಿನಿ: ಹೌದು ಶಾಹಿಕ್. ಕೂದಲಿನ ಬೆಳವಣಿಗೆ, ದಟ್ಟಣೆ ಹಾಗೂ ಸಂರಕ್ಷಣೆಗೆ ನನ್ನ ಎಲೆಗಳ ರಸವನ್ನು ಬೇರೆ ಕೆಲವು ಗಿಡ ಮೂಲಿಕೆಗಳ ಜೊತೆ ತೆಂಗಿನೆಣ್ಣೆ  ಸೇರಿಸಿ ಕುದಿಸಿ, ಸೋಸಿ ಮಾರಾಟ ಮಾಡುತ್ತಾರೆ. ಇದು ನಿಮ್ಮೂರಿನ ಮೆಡಿಕಲ್ ನಲ್ಲಿಯೇ ಸಿಗುತ್ತದೆ. ಆ ಎಣ್ಣೆಯ ಹೆಸರೇ ಕೇಶವರ್ಧಿನಿ ! ನನ್ನ  ನಿಜವಾದ ಹೆಸರು ಸೆಂಟ್ರಾಥೆರಮ್ ಪಂಕ್ಟಟಮ್,(Centratherum  punctatam). ನಾನು ಹೂ ಬಿಡುವ ಸಸ್ಯಗಳ ಕುಲವಾದ ಅಸ್ಟರೇಸಿ ಕುಟುಂಬಕ್ಕೆ‌ ಸೇರಿದ್ದೇನೆ. 
ತನ್ವಿ:  ಹೋ! ಲಾರ್ಕ್ ಡೈಸಿ ಅಂದ್ರೆ ನೀವೇ  ಅಲ್ವೇ!ಮುಳ್ಳು ಹಂದಿ ಹೂವೆಂದು ಕನ್ನಡದಲ್ಲೂ ಕರೀತಾರೆ.
ಶಾಹಿಕ್: ನೀವಿಲ್ಲಿ ಮಾರ್ಗದ ಬದಿಯಲ್ಲಿ  ಯಾವುದೇ  ರಕ್ಷಣೆಯೂ ಇಲ್ಲದೆಯೂ ಚೆನ್ನಾಗಿದ್ದೀರಿ. ಆದರೆ ನಾನು ಕೆಲವು ಕಡೆ ಉದ್ಯಾನವನದಲ್ಲೂ ಗಮನಿಸಿದ್ದೇನೆ. ಕೆಲವೆಡೆ ಅಂಗಳದ ಚಟ್ಟಿಗಳಲ್ಲೂ ಮುದ್ದಾಗಿ ಸಾಕುತ್ತಾರೆ.
ಕೇಶವರ್ಧಿನಿ: ಹೌದು ಮಕ್ಕಳೇ. ವರ್ಷದ ಬಹುಪಾಲು ಕಾಲದಲ್ಲಿ ನಮ್ಮಲ್ಲಿ ಹೂವುಗಳಿರುತ್ತವೆ. ಅಷ್ಟು ಮಾತ್ರವಲ್ಲದೇ ಒಂದೇ ದಿನ ಅರಳಿ ಮುಗಿಯುವುದೂ ಇಲ್ಲ. ಕೋಮಲವಾದ ಪುಟಾಣಿ ದಳಗಳು ಹಲವು ದಿನಗಳ ವರೆಗೆ ಅರಳುತ್ತಾ ಸಾಗುತ್ತವೆ. ಹಾಗಾಗಿ ಪುಷ್ಪ ಪ್ರಿಯರು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೆ ಬಟನ್ ಆಕಾರದ ಲ್ಯಾವೆಂಡರ್ ನೀಲಿ ಹೂ ಅಂತಲೂ ಕರೀತಾರೆ!. ನಾನು ಬ್ರೆಜಿಲ್ ದೇಶಕ್ಕೆ ಸ್ಥಳೀಯವಾಗಿದ್ದೇನೆ. 
ಶಿಕ್ಷಕಿ: ಮಕ್ಕಳೇ ಸಸ್ಯವನ್ನ ಗಮನಿಸಿ. ಸ್ವಲ್ಪ ಒರಟಾಗಿ ಕಾಣಿಸುವ ಸರಳವಾದ ಸಸ್ಯವಿದು. ಅಂಡಾಕಾರದ ಆಲೀವ್ ಹಸಿರು ಎಲೆಗಳು. ಎಲೆಯ ತಳಭಾಗದಲ್ಲಿ ಎದ್ದು ಕಾಣುವ ಕರಾರುವಕ್ಕಾದ ಸಿರೆಗಳು. ಎಲೆಗಳ ಸುತ್ತಲೂ ಗರಗಸದಂತಹ ರಚನೆಯಿದೆ. ಎಲೆಗಳನ್ನು ಸ್ವಲ್ಪ ಪುಡಿಮಾಡಿದರೆ ಎಂತಹಾ ಸುವಾಸನೆಯಿದೆ ಗಮನಿಸಿ! ಪ್ರತಿ ಎಲೆಯ ಬುಡದಲ್ಲೂ ಹೊಸ ಚಿಗುರು ಮೂಡುವ ಮೂಲಕ ಗಿಡ ಬೆಳೆಯುತ್ತದೆ. ಪ್ರತಿ ಚಿಗುರಲ್ಲೂ ಮೊಗ್ಗು, ಹೂಗಳು ಮೂಡುತ್ತವೆ.
ಕೇಶವರ್ಧಿನಿ: ಅಷ್ಟೇ ಅಲ್ಲ ಟೀಚರ್.. ನನ್ನನ್ನು ಹಲವಾರು ಔಷಧಿಗಳಿಗೂ ಬಳಸುತ್ತಾರೆ ಗೊತ್ತಾ! ಮಧುಮೇಹ, ಉರಿಯೂತ, ಸ್ತ್ರೀರೋಗ ಸಮಸ್ಯೆಗಳಿಗೆ ಬಹಳಷ್ಟು ಜನರು ಬಳಸುತ್ತಾರೆ.
ಶಮ್ಲ : ಈ ನಿಷ್ಪಾಪಿ ಸಸ್ಯ ನಮ್ಮ ತೋಟದ ಸುತ್ತಲೂ ಇದೆ ಟೀಚರ್. ನನ್ನ ಅಜ್ಜ ಸಂಜೆ ತೋಟದ ಕೆಲಸ ಮುಗಿದು ಮನೆಗೆ ಬರುವಾಗ ಒಂದಿಷ್ಟು ಸೊಪ್ಪು ಕೈಯಲ್ಲಿ ಹಿಡಿದುಕೊಂಡು ಬರುತ್ತಾರೆ. ಕಲ್ಲಲ್ಲಿ ಗುದ್ದಿ ಪುಡಿ ಮಾಡಿ ಕೈಕಾಲಿಗೆ ರಸ ಹಚ್ಚುತ್ತಾರೆ.
ಕೇಶವರ್ಧಿನಿ: ಹ್ಹಾಂ... ಅದೇ ನಾನು ಹೇಳಿದೆನಲ್ಲಾ... ತೋಟದ ಕೆಲಸ ಮಾಡಿದ ನಂತರ ಬರುವ ಕೀಲು ನೋವುಗಳಿಗೆ ಉಪಶಮನ ನೀಡುತ್ತೇನೆ. ಅದಕ್ಕೇ ನಾನು  ''ತೋಟಗಾರಿಕರ ಸ್ನೇಹಿತ' ಅಂತಲೂ ಕರೆಸಿಕೊಳ್ಳುತ್ತೇನೆ. ನನ್ನಲ್ಲಿ 120 ಕ್ಕೂ ಹೆಚ್ಚು ರಾಸಾಯನಿಕ ಘಟಕಗಳಿವೆ ಎಂದು ಸಂಶೋಧಕರು ಹೇಳುತ್ತಾರೆ. ಅಸ್ತಮಾ, ನಾಯಿಕೆಮ್ಮು, ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲೂ ಬಳಸ್ತಾರೆ ಗೊತ್ತಾ!
ತನ್ವಿ : ನನ್ನಮ್ಮ ಈ ಹೂಗಳನ್ನು ಕಂಡ್ರೆ ಸಾಕು ತಲೆಗೆ ಮುಡಿದು ಕೊಳ್ತಾರೆ.
ಕೇಶವರ್ಧಿನಿ: ಒಹ್! ಅದಕ್ಕೆ ಕಾರಣವೇನು ಗೊತ್ತಾ ತನ್ವಿ? ನನ್ನನ್ನು ಫಲವತ್ತತೆಯ ಸಂಕೇತ ಅನ್ತಾರೆ ! ಧರಿಸಿದವರಿಗೆ ಅದೃಷ್ಡ ತರ್ತೇನೆಂಬ ನಂಬಿಕೆ ಇದೆ!
ಶಿಕ್ಷಕಿ: ಹೌದು ಮಕ್ಕಳೇ,ಈ ಕೇಶವರ್ಧಿನಿ ತಲೆ ಕೂದಲಿಗೆ ,ಚರ್ಮದ ಆರೈಕೆಗೆ ಹೇಗೆ ಉತ್ತಮವೋ ಹಾಗೇ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ,  ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ.
ಕೇಶವರ್ಧಿನಿ: ಹೌದು ಹೌದು.. ಎಲ್ಲರೂ ಹೊಗಳುತ್ತಿದ್ದೀರಿ. ಆದರೆ ಕಳೆ ಸಸ್ಯವೆಂದು ಕಿತ್ತು ದೂರ ಎಸೆಯುತ್ತೀರಿ. ಒಮ್ಮೊಮ್ಮೆ ಈ ಮನುಷ್ಯರ ಕೃತಘ್ನತೆ ಕಂಡು  ನಮಗೆಷ್ಟು ಬೇಸರವಾಗ್ತದೆ ಗೊತ್ತಾ ಮಕ್ಕಳೇ?
ಶಾಹಿಕ್: ಕ್ಷಮಿಸು , ಕೇಶವರ್ಧಿನಿ. ನಾವೆಂದೂ ಹಾಗೆಲ್ಲ ಮಾಡೋದಿಲ್ಲ. ನಮ್ಮ ಮನೆಗಳಲ್ಲಿ  ನಿಮ್ಮಂತಹ ನಿಷ್ಪಾಪಿ ಸಸ್ಯಗಳನ್ನು ಉಳಿಸುವ ಬಗ್ಗೆ ಪ್ರಯತ್ನ ಗಳನ್ನು ಮಾಡುತ್ತಿದ್ದೇವೆ.
ಕೇಶವರ್ಧಿನಿ: ಸರಿ ಮಕ್ಕಳೇ, ನೀವೂ ಬಾಳಿ. ನಮ್ಮನ್ನೂ ಬಾಳಲು ಬಿಡಿ ನಿಮಗೆ ಶುಭವಾಗಲಿ.
ಶಿಕ್ಷಕಿ: ಸರಿ ಮಕ್ಕಳೇ, ಕೇಶವರ್ಧಿನಿ ಗೆ ಟಾಟಾ ಮಾಡಿ ಹೊರಡೋಣ. ಮುಂದಿನ ವಾರ ಇನ್ನೊಂದು  ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ ,  ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article