-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 64

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 64

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 64
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಒಂದು ಪ್ರಶ್ನೆಯೊಂದಿಗೆ ಹಿಂದಿನ ವಾರದ ಸಂಚಿಕೆ ಮುಗಿಸಿದ್ದೆ. ಆದರೆ ಅದು ನಾನು ನಿಮಗೆ ಕೇಳಿದ ಪ್ರಶ್ನೆ ಅಲ್ಲ. ಬದಲಾಗಿ ನೀವು ಕೇಳಬೇಕಾದ ಪ್ರಶ್ನೆ. ವಿಜ್ಞಾನ ಕಲಿಕೆಯ ಮತ್ತು ಸಂಶೋಧನೆಯ ಮೂಲಾಕ್ಷರವೇ ಪ್ರಶ್ನೆ. ಪ್ರಶ್ನೆಯೊಂದಿಗೆ ವಿಜ್ಞಾನದ ಪ್ರಕ್ರಿಯೆಗಳು ಆರಂಭವಾಗುವುದು. ಆದ್ದರಿಂದ ನಾವು ಮಕ್ಕಳಲ್ಲಿ ಪ್ರಶ್ನೆಗಳನ್ನು ರೂಪಿಸುವ ಮತ್ತು ಕೇಳುವ ಕೌಶಲಗಳನ್ನು ಬೆಳೆಸಬೇಕಾಗಿದೆ. ಈಗ ನಾನು ಕಳೆದ ವಾರ ಕೇಳಿದ ಪ್ರಶ್ನೆಗೆ ಬರೋಣ.
ಮನೆಯ ಒಳಗೆ ಮತ್ತು ಹೊರಗೆ ಯಾವಾಗಲೂ ಉಷ್ಣತೆ ಒಂದೇ ಆಗಿರುತ್ತದೆ. ಅಥವಾ ಬಿಸಿಲಿನ ಹೊತ್ತಿನಲ್ಲಿ ಮನೆಯ ಒಳಗಡೆ ಒಂದೆರಡು ಡಿಗ್ರಿಗಳಷ್ಟು ಉಷ್ಣತೆ ಹೆಚ್ಚಿದ್ದರೂ ಅಚ್ಚರಿಪಡಬೇಕಾಗಿಲ್ಲ. 

ನೀವು ಬಿಸಿಲಿಗೆ ಅದರಲ್ಲಿಯೂ ಮಧ್ಯಾಹ್ನದ ಹೊತ್ತು ಹೋದರೆ ಚರ್ಮ ಬಿಸಿಯಾದ ಅಥವಾ ಚರ್ಮ ಚುಚ್ಚಿದ ಅನುಭವವಾಗುತ್ತದೆ. ಇನ್ನೊಂದು ವಿಷಯವನ್ನು ಗಮನಿಸಿದ್ದೀರಾ? ಚರ್ಮ ಚುಚ್ಚಿದ ಅನುಭವವಾಗುವುದು ಬಿಸಿಲಿಗೆ ತೆರೆದುಕೊಂಡಿರುವ ಭಾಗದಲ್ಲಿ ಮಾತ್ರ. ಅಂದರೆ ನಿಮ್ಮ ಮೈಮೇಲೆ ಬೀಳುತ್ತಿರುವುದು ಶಾಖ ವಿಕರಣವಲ್ಲ ಅದು ಬೆಳಕಿನ ವಿಕಿರಣ. ಬೆಳಕು ನಿಮ್ಮ ಚರ್ಮದ ಮೇಲೆ ಬಿದ್ದಾಗ ಚರ್ಮ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಶಕ್ತಿಯನ್ನು IR ರೂಪದಲ್ಲಿ ಹೊರ ಹಾಕುತ್ತದೆ. ಹಾಗೆಯೇ ಮುಚ್ಚಿದ ಗಾಜಿನ ಮಳಕ ಕಾರಿನ ಒಳ ಪ್ರವೇಶಿಸಿದ ಬೆಳಕನ್ನು ಕಾರಿನ ಸೀಟು, ಡ್ಯಾಶ್ ಬೋರ್ಡ್, ಸ್ಟಿಯರಿಂಗ್ ವೀಲ್ ಹೀಗೆ ಎಲ್ಲವೂ ಹೀರಿಕೊಳ್ಳುತ್ತವೆ ಮತ್ತು ಶಕ್ತಿಯನ್ನು ಹೊರ ಹಾಕುತ್ತವೆ. ಆದ್ದರಿಂದ ಕಾರಿನ ಒಳಭಾಗದಲ್ಲಿ ಉಷ್ಣತೆ ಹೆಚ್ಚುತ್ತದೆ.

ಹೀಗೆಯೇ ಬೆಳಕು ನೆಲ ಭೂಮಿಯನ್ನು ಎಲ್ಲಾ ಏಕರೂಪದಲ್ಲಿ ಕಾಯಿಸುತ್ತದೆ. ಮಧ್ಯಾಹ್ನ ಹೊತ್ತಿಗೆ ಕಾಂಕ್ರೀಟ್ ರಸ್ತೆಯ ಮೇಲೆ ಕಾಲಿಡಲು ಆಗುವುದಿಲ್ಲ ಮತ್ತು ಸಂಜೆ ನದಿಯ ನೀರು ಬೆಚ್ಚಗಾಗುತ್ತದೆ. ಆದರೆ ಮರುದಿನ ಬೆಳಿಗ್ಗೆ ಮತ್ತೆ ವಾತಾವರಣ ತಣ್ಣಗಾಗಿ ಬಿಡುತ್ತದೆ. ಏಕೆಂದರೆ ಬಿಸಿ ವಸ್ತು ಹಾರ ಸೂಸಿದ  ಶಾಖ ಎಲ್ಲ ಕಡೆಗೆ ವಿಕಿರಣದ ಮೂಲಕ ಕಳೆದು ಹೋಗುತ್ತದೆ. ಅಂದರೆ ಗಾಳಿಯು ಹೇಗೆ ಬೆಳಕನ್ನು ತನ್ನ ಮೂಲಕ ಹಾದು ಹೋಗಲು ಬಿಡುತ್ತದೆಯೋ ಹಾಗೆ ಶಾಖ ವಿಕಿರಣಗಳನ್ನೂ ತನ್ನ ಮೂಲಕ ಹಾದು ಹೋಗಲು ಬಿಡುತ್ತದೆ. ಹೀಗೆ ವಿವಿಧ ಶಕ್ತಿಯ ಕಿರಣಗಳನ್ನು ತನ್ನ ಮೂಲಕ ಹಾದು ಹೋಗಲು ಬಿಡುವ ವಸ್ತುಗಳನ್ನು ಪಾರದರ್ಶಕ ವಸ್ತುಗಳೆನ್ನುತ್ತೇವೆ (transparent). 

ಈ ಪಾರದರ್ಶಕತೆ ಎನ್ನುವುದು  ಕೇವಲ ಬೆಳಕಿಗೆ ಮಾತ್ರ ಅಲ್ಲ. ಕಾಂತ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಉದಾಹರಣೆಗೆ ಒಂದು ಗಾಜಿನ ಹಲಗೆಯ ಮೇಲೆ ಅಥವಾ ಪುಸ್ತಕದ ಮೇಲೆ ಕೆಲವು ಗುಂಡು ಸೂಜಿಗಳನ್ನಿಡಿ. ಅದರ ಕೆಳಗೆ ಒಂದು ಕಾಂತವನ್ನು ಇಡಿ ಆಗ ಗುಂಡು ಸೂಜಿ ಗಳು ಪುಸ್ತಕಕ್ಕೆ ಅಂಟಿಕೊಳ್ಳುವುದನ್ನು ಮತ್ತು ಕೆಳಗಡೆ ಕಾಂತವನ್ನು ಹಿಂದೆ ಮುಂದೆ ಚಲಿಸಿದಾಗ ಗುಂಡು ಸೂಜಿ ಕೂಡಾ ಚಲಿಸುತ್ತದೆ. ಅಂದರೆ ಏನು ಹೇಳಿ...? ಕಾಂತೀಯ ಬಲ ರೇಖೆಗಳು ಪುಸ್ತಕ ಮತ್ತು ಗಾಜಿನ ಮೂಲಕ ಚಲಿಸುತ್ತವೆ ಅಂದರೆ ಗಾಜು ಮತ್ತು ಪುಸ್ತಕ ಕಾಂತ ಪಾರದರ್ಶಕ (magnetically transparent/permiable) ಎಂದಾಯಿತು ಅಲ್ಲವೇ. 

ಎರಡು ತೆಳ್ಳನೆಯ ಗಾಜಿನ ಹಲಗೆಗಳನ್ನು ತೆಗೆದುಕೊಳ್ಳಿ. ಅವುಗಳ ಮೇಲೆ ಒಂದು ಕಾಂತವನ್ನಿಡಿ. ಕೆಳಗೆ ನಾಲ್ಕು ಗುಂಡುಸೂಜಿಗಳನ್ನು ಇಡಿ. ಅವು ಗಾಜಿಗೆ ಅಂಡಿಕೊಳ್ಳುತ್ತವೆ. ಈಗ ಎರಡು ಗಾಜಿನ ಹಲಗೆಗಳ ನಡುವೆ ಒಂದು ತೆಳುವಾದ ಅಲ್ಯೂಮಿನಿಯಂ ತಗಡನ್ನು ತೂರಿಸಿ. ಆಗ ಗುಂಡುಸೂಜಿಗಳು ಹಾಗೆಯೇ ಅಂಟಿಕೊಂಡಿರುವುದನ್ನು  ಕಾಣುತ್ತೀರಿ. ಅಂದರೆ ಅಲ್ಯೂಮಿನಿಯಂ ಕೂಡಾ ಕಾಂತೀಯ ಪಾರದರ್ಶಕ  ಎಂದಾಯಿತಲ್ಲವೇ? ಈಗ ಅಲುಮಿನಿಯಂ ತಗಡನ್ನು ತೆಗೆದು ಉಕ್ಕಿನ ತಗಡನ್ನು ನಿಧಾನವಾಗಿ ತೂರಿಸಿ. ಒಮ್ಮೆಲೇ ಗುಂಡುಸೂಜಿಗಳು ಬಿದ್ದು ಹೋದದ್ದನ್ನು ನೋಡಿ ಅಚ್ಚರಿಯಾಯಿತೇ. ಕಬ್ಬಿಣ, ಉಕ್ಕು ಇವುಗಳೆಲ್ಲ ಕಾಂತೀಯ ವಸ್ತುಗಳು ಅಂದರೆ ಕಾಂತಗಳಿಂದ ಆಕರ್ಷಿಸಲ್ಪಡುವ ವಸ್ತುಗಳು. ಅಂದರೆ ಕಾಂತೀಯ ವಸ್ತುಗಳು ಕಾಂತೀಯ ಅಪಾರದರ್ಶಕಗಳು ಎಂದಾಯಿತು. 

ಕಾರಿನ ಒಳಗೆ ಬಿಸಿಯಾಗುವುದಕ್ಕೂ ಈ ಪಾರದರ್ಶಕತೆಗೂ ಸಂಬಂಧ ಇದೆಯೇ ಏನಾದರೂ ಸಂಬಂಧವಿದೆಯೇ ಎಂದು ಮುಂದಿನವಾರ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 

Ads on article

Advertise in articles 1

advertising articles 2

Advertise under the article