ನಿಷ್ಪಾಪಿ ಸಸ್ಯಗಳು : ಸಂಚಿಕೆ - 86
Thursday, January 23, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 86
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ..? ಆರಾಮವಾಗಿದ್ದೀರಿ ತಾನೆ? ಬನ್ನಿ... ಇಂದು ನಾವು ವಿಟ್ಲದ ಸಮೀಪ ವಾಸ್ತವ್ಯ ಇರುವ ಶ್ರೀಕಾಂತ ಮತ್ತು ಮಂಜುಳ ರವರ ಅಡಿಕೆ ತೋಟಕ್ಕೆ ಹೋಗೋಣ. ನೀವಲ್ಲಿ ಬಳ್ಳಿಯೊಂದು ಏಕಾಂತದಲ್ಲಿ ಹಾಡುತ್ತಿರುವುದನ್ನು ಕೇಳಬಹುದು. ಆದರೆ ಅದು ತುಂಬಾ ಸೂಕ್ಷ್ಮ ವಾಗಿ ಆಲಿಸಿದರೆ ಮಾತ್ರ ಕೇಳಿಸುವುದು.
ರಂಜಿನಿ: ಅದೇನ್ ಹಾಡು ಟೀಚರ್! ಬಳ್ಳಿ ಯೂ ಹಾಡುತ್ತದೆಯೇ?
ಟೀಚರ್: ಹೌದು, ರಜನಿ. ಎಲ್ಲ ಸಸ್ಯಗಳಿಗೂ ನೋವು ನಲಿವುಗಳಿವೆ. ಅವುಗಳೂ ಪರಿಸರಕ್ಕೆ ಪ್ರತಿಕ್ರಿಯೆ ನೀಡುತ್ತವೆ.
ನಂದನ್: ಹಾಗಾದರೆ ಸಸ್ಯಗಳೂ ಹಾಡುತ್ತವೆ.. ಮಾತನಾಡುತ್ತವೆ ಎಂದಾಯಿತು.
ಟೀಚರ್: ಹೌದು ನಂದನ್. ಅವುಗಳ ಭಾಷೆ ನಮಗರ್ಥವಾಗಬೇಕು ಅಷ್ಟೇ. ಅದನ್ನು ಅಭ್ಯಾಸದಿಂದ ಅರಿಯಬಹುದು, ನೀವೂ ಕಲಿಯಬಹುದು. ಅಲ್ಲಿ ನೋಡಿ.. ಶ್ರೀಕಾಂತ್ ಹಾಗೂ ಮಂಜುಳ ಕೂಡ ಬಂದ್ರು, ಅವರೂ ನಮ್ಮ ಜೊತೆ ಸೇರ್ಕೊಳ್ತಿದ್ದಾರೆ.
ಶ್ರೀಕಾಂತ: ಟೀಚರ್ ನಮಸ್ತೆ... ನಮ್ಮ ಅಡಿಕೆ ತೋಟಕ್ಕೆ ಹೋಗೋಣ ಬನ್ನಿ. ಆದ್ರೆ ತೋಟವಿಡೀ ಆ ನೆಲ ಸೇವಂತಿಗೆ ಹಬ್ಬಿಕೊಂಡಿದೆ. ತೋಟಕ್ಕೆ ಇಳಿಯೋದೇ ಕಷ್ಟ!
ಮಂಜುಳ: ಟೀಚರ್.. ಅದು ವರ್ಷವಿಡೀ ಹಳದಿ ಬಣ್ಣದ ಪುಟ್ಟ ಹೂಗಳನ್ನು ಅರಳಿಸ್ತಾನೇ ಇರ್ತದೆ. ದಿನಾ ನೋಡೋದೇ ಕಣ್ಣಿಗೊಂದು ಹಬ್ಬ!
ಶಿಕ್ಷಕಿ: ಹೌದೇ! ಮಕ್ಕಳೇ, ನಿಧಾನಕ್ಕೆ ನಡೀರಿ. ಗದ್ದೆ ಬದುಗಳಲ್ಲಿ ನಡೆಯುವಾಗ ಸ್ವಲ್ಪ ಕಾಲಿನಡಿ ನೋಡಿ ನಡೀಬೇಕು. ಅಭ್ಯಾಸವಿಲ್ಲದಿದ್ದರೆ ಜಾರಿ ಬೀಳಬಹುದು.
ಶ್ರೀಕಾಂತ: ಅಷ್ಟೇ ಅಲ್ಲ ಟೀಚರ್.. ಕೆಲವೊಮ್ಮೆ ಹಾವುಗಳೂ ಇರ್ತಾವೆ. ಈ ಹುಲ್ಲಿನ ದಟ್ಟಣೆಯಲ್ಲಿ ಗೊತ್ತೇ ಆಗೋದಿಲ್ಲ.
ರಂಜಿನಿ: ನೋಡಿಲ್ಲಿ.. ಮರಿ ಕಪ್ಪೆಗಳು..! ಕಾಲಡಿಯಿಂದ ಅತ್ತಿತ್ತ ಹಾರ್ತಿವೆ!
ಮೋನಿಕಾ: ಮಂಜುಳಾ.. ನೀನು ಹಳದಿ ಹೂಗಳು ಕಣ್ಣಿಗೆ ಹಬ್ಬ ಅನ್ತೀಯಾ.. ಎಲ್ಲಿದೆ? ತೋಟವಿಡೀ ಕಪ್ಪಾಗಿದೆ!
ಮಂಜುಳಾ: ಹೌದು ಮೋನಿಕಾ. ಹಳದಿ ಹೂಗಳ ಬಳ್ಳಿಯೇ ತುಂಬಿತ್ತು. ಅಡಿಕೆ ಕೊಯ್ಲಿಕ್ಕೆ ಬರ್ತಾರಂತೆ ನಾಳೆ. ಬಿದ್ದ ಅಡಿಕೆ ಕಾಣೋದಿಲ್ಲಾಂತ ನಿನ್ನೆ ಅದೇನೋ ಮದ್ದು ಬಿಟ್ಟು ಗಿಡಗಳನ್ನು ಸಾಯ್ಸಿದ್ದಾರೆ..
ರಜನಿ: ಛೆ! ಎಂತಹ ಅನ್ಯಾಯ ಅಲ್ವಾ ? ಇಡೀ ತೋಟವೀಗ ಅಳುತ್ತಾ ಇರಬಹುದೇನೊ!
ಶಿಕ್ಷಕಿ: ಮಕ್ಕಳೇ, ನಾನಾಗಲೇ ಹೇಳಿದೆ. ಗಿಡಗಳಿಗೂ ಜೀವ ಇದೆ. ಮನಸ್ಸಿದೆ. ಭಾವನೆಗಳಿವೆ ಅಂತ... ಸ್ವಲ್ಪ ಹೊತ್ತು ಇಲ್ಲೇ ಇರುವ ಪೇರಳೆ ಮರದಡಿ ಕುಳಿತುಕೊಳ್ಳೋಣ. ಈ ಗಿಡಗಳೆಲ್ಲ ಹಸಿ ಹಸಿರಾಗಿರುತ್ತಿದ್ದರೆ.. ಅವುಗಳ ನಡುವೆ ಪುಟ್ಟ ಸೇವಂತಿಗೆಯಂತಹ ಹೂಗಳು ಅರಳಿರುತ್ತಿದ್ದರೆ ಹೇಗೆ ಕಾಣುತ್ತಿತ್ತು.. ಕಲ್ಪನೆ ಮಾಡಿಕೊಳ್ಳೋಣ.
ನೆಲ ಸೇವಂತಿಗೆ :
ಇಳೆಯ ಸುಂದರಿ ನಾನು
ಮುದುಡಿ ಹೋಗಿಹೆ ಇಂದು
ಪುಟ್ಟ ಮಗುವೇ ನೀನು
ಏನ ನೋಡುವೆ ಬಂದು?
ಮೆಚ್ಚಿಕೊಳುತಿದ್ದ ಪಶುಗಳಿಗೆ
ಹಾಲ ಹೆಚ್ಚಿಸುತಿದ್ದೆ
ಭೋರ್ಗರೆವ ಮಳೆಗೆ
ಮಣ್ಣ ಸವೆತ ನಿಲಿಸುತಿದ್ದೆ
ಕಳೆ ಗಿಡವೆಂದು ಧರಣಿಯಲಿ
ನೂರರಲಿ ನಾನೊಂದಂತೆ
ಜೇನು, ಚಿಟ್ಟೆಗಳ ನಡುವಿನಲಿ
ಹುಳ ಹುಪ್ಪಟೆಗಳ ನೀ ಕೊಂದಂತೆ
ರಜನಿ: ಟೀಚರ್.... ಅದೇನು ಮೌನ ಗೀತೆ!ಯಾರು ಹೇಳುತ್ತಿದ್ದಾರೆ?
ಶಿಕ್ಷಕಿ: ಮಕ್ಕಳೇ ಅದು ನೆಲ ಸೇವಂತಿಗೆ ಅಳುತಿರುವ ಶಬ್ಧ ಹಾಗೂ ಅದರದೇ ಮಾತುಗಳು. ತನ್ನ ಕಣ್ಣೀರಲ್ಲೇ ಕವಿತೆ ಹಾಡುತಿದೆ..!ಕೇಳಿಸಿಕೊಂಡಿರಾ?
ಶ್ರೀಕಾಂತ: ಹೌದು ಟೀಚರ್. ವಿಶ್ವದ 100 ಕೆಟ್ಟ ಕಳೆಗಿಡಗಳಲ್ಲಿ ಇದೂ ಒಂದಂತೆ.
ರಜನಿ: ಮಳೆಗೆ ಹಾಗೂ ಮಾನವ ಯಂತ್ರಗಳ ಜೊತೆ ನಡೆಸುವ ಆವಾಂತರಗಳಿಗೆ ಮಣ್ಣಿನ ಸವೆತ ನಡೆಯುತ್ತಲೇ ಇದೆ. ಹಾಗೆ ಸಡಿಲವಾದ ಮಣ್ಣಿನ ಮೇಲೆ ಕ್ಷಿಪ್ರವಾಗಿ ಬೆಳೆಯುವ ಈ ಬಳ್ಳಿ ಮಣ್ಣನ್ನು ಹಿಡಿದಿಟ್ಟು ಮೇಲ್ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ.
ಶಿಕ್ಷಕಿ: ಅಷ್ಟು ಮಾತ್ರವಲ್ಲ ಮಕ್ಕಳೇ, ಮೇಲ್ಮಣ್ಣಿನಲ್ಲಿ ಹಲವಾರು ರೀತಿಯ ಜೀವಿಗಳು, ಬ್ಯಾಕ್ಟೀರಿಯಾ ದಂತಹ ಸೂಕ್ಷ್ಮ ಜೀವಿಗಳಿರುತ್ತವೆ. ಈ ಸಸ್ಯದ ನಾಶವಾದರೆ ಅವೆಲ್ಲವೂ ನಾಶವಾದಂತೆ.
ಶ್ರೀಕಾಂತ: ಟೀಚರ್.. ಈಗ ಮದ್ದು ಬಿಟ್ಟು ಇಡೀ ತೋಟ ಕಪ್ಪಾಗಿದ್ದರೂ ನೀರು ಸಿಕ್ಕ ಕೂಡಲೇ ಮತ್ತೆ ಚಿಗುರುತ್ತದೆ. ಇದರ ನಾಶವಂತೂ ಅಸಾಧ್ಯವೇ ಸರಿ.
ಶಿಕ್ಷಕಿ: ಶ್ರೀಕಾಂತ.. ಪ್ರಕೃತಿ ನಮಗಿಂತಲೂ ಜಾಣತನ ಬಳಸುತ್ತದೆ ಗೊತ್ತಾ. ಮಣ್ಣನ್ನು ಚೆನ್ನಾಗಿಡುವುದು ಪ್ರಕೃತಿಯ ಜವಾಬ್ದಾರಿ. ಹಾಳಾದ ಪರಿಸರವನ್ನದು ಮತ್ತೆ ರೂಪಿಸಿಕೊಳ್ಳಲು ಹೆಣಗಾಡುತ್ತದೆ. ಅದಕ್ಕಾಗಿಯೇ ಈ ನಿಷ್ಪಾಪಿ ಸಸ್ಯವನ್ನು ಬದುಕಿಸಲು ಪ್ರಯತ್ನಿಸುತ್ತದೆ. ಆ ಮೂಲಕ ಜೀವವೈವಿಧ್ಯವನ್ನು ಕಾಪಾಡಲು ಯತ್ನಿಸುತ್ತದೆ. ಮಾನವರ ಹಿಡಿತಕ್ಕೆ ಸಿಕ್ಕದಾಗ ಕಳೆಗಿಡದ ಪಟ್ಟ ಕಟ್ಟುತ್ತಾರೆ ಅಷ್ಟೆ.
ನಂದನ್ : ಇದರ ನಿಜವಾದ ಹೆಸರೇನು ಟೀಚರ್?
ಶಿಕ್ಷಕಿ: ಇದು ಅಸ್ಫರೇಸಿ ಕುಟುಂಬದ ಸದಸ್ಯ ಸಸ್ಯ. ಬಳ್ಳಿಯಾಗಿ ಹರಡಿಕೊಳ್ಳುತ್ತದೆ. Sphagneticola trilobata ( ಸ್ಪಗ್ನೆಟಿಕೋಲ ಟೈಲೋಬಾಟಾ) ಎಂಬುದು ಸಸ್ಯ ಶಾಸ್ತ್ರೀಯ ಹೆಸರು. ಇದು ಪ್ರಕೃತಿಯ ಕೃಪೆ. ಮೆಕ್ಸಿಕೋ, ಮಧ್ಯ ಅಮೇರಿಕಾಗಳಲ್ಲಿ ಸ್ಥಳೀಯವಾಗಿದೆ. ಈ ಗಿಡವನ್ನು ಇತ್ತೀಚೆಗೆ ಅಂದರೆ 25 - 30 ವರ್ಷಗಳಿಂದ ನಾವು ನೋಡುತ್ತಿದ್ದೇವೆ.
ಶ್ರೀಕಾಂತ: ತೆವಳುತ್ತಾ ಸಾಗುವ ಈ ಬಳ್ಳಿಯ ಪ್ರತೀ ಎಲೆಯ ಬುಡದಲ್ಲೂ ಬೇರು ಬಂದು ಗಿಡವು ಗಟ್ಟಿಗೊಳ್ಳುತ್ತದೆ.
ರಜನಿ: ಕೆಲವೊಮ್ಮೆ ಕಸವೆಂದು ತೋಟ, ಗದ್ದೆ ಬದಿಗಳಿಂದ ಕತ್ತರಿಸಿ ನೀರಿಗೆಸೆಯುತ್ತಾರೆ. ಅದು ನೀರಲ್ಲೇ ಸಾಗಿ ನದಿಯ ಅಕ್ಕ ಪಕ್ಕವೇ ಹುಲುಸಾಗಿ ಬೆಳೆದು ರೈತರ ಕಣ್ಣು ಕೆಂಪಾಗುವಂತೆ ಮಾಡುತ್ತದೆ.
ಶಿಕ್ಷಕಿ: ಈಗ ವಿದೇಶಗಳಲ್ಲಿ ಕೂಡ ಉದ್ಯಾನವನಗಳಲ್ಲಿದೆ. ಚಿಟ್ಟೆ ಪಾರ್ಕ್ ಗಳಿಗೆ ಇದುವೇ ಆಧಾರ!
ಶ್ರೀಕಾಂತ: ಅಮ್ಮ ಹೇಳ್ತಾ ಇದ್ರು.. online ನಲ್ಲಿ ಈ ಗಿಡಕ್ಕೆ 350 ರುಪಾಯಿ ವರೆಗೆ ಇದೆಯಂತೆ!
ಶಿಕ್ಷಕಿ: ಹೌದು ಮಕ್ಕಳೇ, ಈಗ ಎಲ್ಲದಕ್ಕೂ ಬೆಲೆ ಬಂದಿದೆ. ಇದು ಒಂದು ಔಷಧೀಯ ಗಿಡವೂ ಹೌದು. ಕೆಮ್ಮು, ಮೂಳೆಮುರಿತ, ಚರ್ಮದ ಸಮಸ್ಯೆ, ಗೊನೆರಿಯ, ಕಾಮಾಲೆ, ಇತ್ಯಾದಿಗಳನ್ನು ಗುಣಪಡಿಸಲು ಸಹಕರಿಸ್ತದೆ. ಆಂಟಿ ಟ್ಯೂಮರ್, ಮಾನಸಿಕ ಅಸ್ವಸ್ಥತೆ, ಕ್ಷಯ, ಹಲ್ಲುನೋವು, ಗಂಟಲು ನೋವುಗಳಿಗೂ ಉಪಶಮನ ನೀಡುತ್ತದೆ. ಚೀನೀ ಔಷಧ ಪದ್ಧತಿಯಲ್ಲಿ, ಯುನಾನಿ, ಆಯುರ್ವೇದ ದಲ್ಲೂ ಬಳಕೆಯಿದೆ. ಆದ್ದರಿಂದ ನಮ್ಮ ಸುತ್ತಮುತ್ತ ಅನುಪಯುಕ್ತ ಸಸ್ಯಗಳೇ ಇಲ್ಲವೆನ್ನಬಹುದು. ಈ ಕಾಡು ಸೇವಂತಿಗೆ ಅಥವಾ ನೆಲ ಸೇವಂತಿ ಪರಾಗಸ್ಪರ್ಶ ಕ್ರಿಯೆಗೂ, ಜೀವವೈವಧ್ಯದ ಉಳಿವಿಗೂ, ಪರಿಸರ ರಕ್ಷಣೆಗೂ ಪೂರಕವಾಗಿದೆ. ಮಾನವ ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡುವುದು ತರವಲ್ಲ ಅಲ್ಲವೇ....?
ಸರಿ ಮಕ್ಕಳೇ, ಇಂದಿಗೆ ಸಾಕು. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************