-->
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 12

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 12

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 12
ಲೇಖನ : ಅತ್ಯಂತ ರುಚಿಯಾದ ಸಾಂಬಾರ್
ಬರಹ : ವಿದ್ಯಾ ಕಾರ್ಕಳ
ಪ್ರಭಾರ ಮುಖ್ಯ ಶಿಕ್ಷಕರು
ದ. ಕ. ಜಿ. ಪಂ. ಕಿರಿಯ 
ಪ್ರಾಥಮಿಕ ಶಾಲೆ. ಹೊಸಪಟ್ಣ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
 

         ಆ ದಿನ..ಜನವರಿ 1. 2025.. ಎಲ್ಲೆಡೆಯೂ ಹೊಸ ವರುಷದ ಆರಂಭದ ದಿನವನ್ನು ಸ್ವಾಗತಿಸುವ ಸಂಭ್ರಮ. ನಾವು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಈ ದಿನವು ವಿಶೇಷ ಸಂತಸದ ದಿನವಾಗಬೇಕು ಎಂದು ಯೋಚಿಸಿ ಒಂದಿಷ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಬೆಳಗ್ಗೆ ನನಗೆ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರ ಸಭೆಯಲ್ಲಿ ಪಾಲ್ಗೊಳ್ಳಲು ಇರುವ ಕಾರಣ ಶಾಲೆಯಲ್ಲಿ ಹೊಸ ವರ್ಷಾಚರಣೆ ಮಧ್ಯಾಹ್ನದ ಬಳಿಕ ಎಂದು ನಿರ್ಧರಿಸಿದ್ದೆವು. 

       ನನ್ನ ಕರ್ತವ್ಯನಿರತ ಹೊಸಪಟ್ಣ ಶಾಲೆಯ ಹತ್ತಿರದ ಬಜಿರೆ ಶಾಲೆಯಲ್ಲಿಯೇ ಮುಖ್ಯ ಶಿಕ್ಷಕರ ಸಭೆ ಇತ್ತು. ಮಧ್ಯಾಹ್ನದ ಕಾರ್ಯಕ್ರಮ ತಯಾರಿಗಾಗಿ ಮುಖ್ಯ ಶಿಕ್ಷಕರ ಸಭೆಯು ಮುಕ್ತಾಯಗೊಳ್ಳುವ 15 ನಿಮಿಷ ಮುಂಚಿತವಾಗಿಯೇ ಸಿ. ಆರ್. ಪಿ. ರಾಜೇಶ್ ಸರ್ ರವರಲ್ಲಿ ಅನುಮತಿಯನ್ನು ಪಡೆದು ನನ್ನ ಶಾಲೆಯತ್ತ ತೆರಳಿದೆನು. ಶಾಲೆ ತಲುಪುವಾಗ ಸಮಯ ಅದಾಗಲೇ ಬೆಳಗಿನ 12 ಘಂಟೆ ದಾಟಿತ್ತು. ಬಿಸಿಯೂಟ ನೀಡಲು ಅರ್ಧ ತಾಸಷ್ಟೇ ಮಿಕ್ಕಿತ್ತು. ಶಾಲೆ ತಲುಪಿ ಹತ್ತು ನಿಮಿಷವಾಯಿತಷ್ಟೇ.. ಶಾಲೆಯ ಗೌರವ ಶಿಕ್ಷಕಿಯವರಾದ ಪ್ರನೀಶಾರವರು ಹತ್ತಿರಕ್ಕೆ ಬಂದು, ಅಲ್ಲಿ ಅಡುಗೆಯವರು ಕಾಣುತ್ತಿಲ್ಲ.. ಬೆಳಗಿನಿಂದ ಕರೆಂಟಿಲ್ಲ, ಅವರು ಮಸಾಲೆ ಮಾಡಿ ತರಲು ಮನೆಗೆ ಹೋಗಿರಬೇಕು ಅಂದರು. ಶಾಲೆಯಲ್ಲಿ ಕೆಲವೊಮ್ಮೆ ಇಡೀ ದಿನ ವಿದ್ಯುತ್ ಸ್ಥಗಿತವಾದಾಗ ಅಡುಗೆಯವರು ಶಾಲಾ ಅಂಗಳಕ್ಕೆ ತಾಗಿಕೊಂಡೇ ಇರುವ ಅಕ್ಷರ ದಾಸೋಹದ ಮೊದಲಿನ ಸಿಬ್ಬಂದಿ ವಿಮಲಕ್ಕನವರ ಮನೆಯಲ್ಲಿ ಇನ್ವರ್ಟರ್ ನಲ್ಲಿ ನಡೆಯುವ ಮಿಕ್ಸಿಯಲ್ಲಿ ಮಸಾಲೆ ಮಾಡಿಕೊಂಡು ಬರುವುದು ನನಗೆ ತಿಳಿದಿತ್ತು. ಹಾಗಾಗಿ ಅಡುಗೆಯವರು ಕಾಣುತ್ತಿಲ್ಲ ಎಂದಾಗ ನನಗೆ ವಿಶೇಷ ಯೋಚನೆಯೇನೂ ಆಗಲಿಲ್ಲ. ವಿಮಲಕ್ಕನವರ ಮನೆಗೆ ಮಸಾಲೆ ಮಾಡಿಕೊಂಡು ಬರಲು ಹೋಗಿರಬಹುದು ಅಂದುಕೊಂಡಿದ್ದೆನು.
          
             ಹಿಂದಿನ ದಿನ ಬಿಸಿಯೂಟದ ಕಾರ್ಯದ ನಡುವೆಯೇ ಅಕ್ಷರ ದಾಸೋಹ ಸಿಬ್ಬಂದಿ ಶಶಿಯಕ್ಕನವರಿಗೆ ತೀವ್ರ ಅಸೌಖ್ಯವಾಗಿತ್ತು. ನಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯವರು ಒಬ್ಬರೇ ಆದ ಕಾರಣ ಅಸೌಖ್ಯದಿಂದ ಇವರು ಕೆಲಸ ಮುಂದುವರಿಸಲಾಗದೇ ಬಳಲಿ ಕೂತಾಗ, ಪೋಷಕರಾದ ಶಾಲಿನಿಯಕ್ಕ ಬಂದು ಜೊತೆಗೂಡಿ ಕೆಲಸವನ್ನು ಪೂರ್ತಿಗೊಳಿಸಿದ್ದರು. ಈ ಕಾರಣದಿಂದ ಈ ದಿನ ಹತ್ತು ನಿಮಿಷ ಮುಂಚಿತವಾಗಿ ಮಕ್ಕಳಿಗೆ ಊಟ ಕೊಟ್ಟು ಸಿಬ್ಬಂದಿ ಶಶಿಯಕ್ಕನವರಿಗೆ ಸ್ವಲ್ಪವಾದರೂ ಬೇಗ ಮನೆಗೆ ತೆರಳಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಬೇಕು ಎಂಬುದು ನನ್ನ ಯೋಚನೆಯಾಗಿತ್ತು.
      
          ಶಾಲಾ ಕಛೇರಿಯಲ್ಲಿ ಇದ್ದ ಗಡಿಯಾರ ನೋಡಿದರೆ ಊಟದ ವೇಳೆ ಸಮೀಪಿಸಿತ್ತು. ಗಡಿಯಾರ ನೋಡುತ್ತಿದ್ದ ನನ್ನ ಮನದಿಂಗಿತ ಅರಿತ ಗೌರವ ಶಿಕ್ಷಕಿ ಪ್ರನೀಶರವರು, ಊಟ ತಯಾರಾಗಿದೆಯೇ ನೋಡಿ ಬರುವೆ, ಕರೆಂಟಿರಿರಲಿಲ್ಲ ಅಲ್ವೇ ಎಂದು ಧಾವಂತದಲ್ಲಿ ಶಾಲೆಯ ಅಡುಗೆ ಕೋಣೆಯತ್ತ ತೆರಳಿದರು. ಹೋದಷ್ಟೇ ವೇಗದಲ್ಲಿ ವಾಪಸ್ ಬಂದು ಅನ್ನ, ಸಾಂಬಾರ್ ಎಲ್ಲವೂ ತಯಾರಾಗಿದೆ, ಆದರೆ ಅಡುಗೆಯವರು ತಮ್ಮ ಮನೆಗೇ ತೆರಳಿ ಕಲ್ಲಿನಲ್ಲಿ ಮಸಾಲೆ ಅರೆದು ಬಂದಿದ್ದಾರೆ ಎಂದರು. ಹೌದಾ!! ಎಂದು ನಾನು ಬಹಳ ಅಚ್ಚರಿಯಿಂದ ಉದ್ಗರಿಸಿದೆನು. ಅವರ ಮನೆಯು ಸ್ವಲ್ಪ ಜಾಸ್ತಿಯೇ ದೂರವಿತ್ತು. ನಡೆದುಕೊಂಡು ಹೋಗಲು ಕನಿಷ್ಟ ಹದಿನೈದು - ಇಪ್ಪತ್ತು ನಿಮಿಷಗಳು ಬೇಕು ಎನ್ನುವುದನ್ನು ನಾನು ಕೇಳಿದ್ದೆನು. ಅಪರೂಪಕ್ಕೆ ವಿದ್ಯುತ್ ಕಡಿತದ ಸಮಸ್ಯೆ ಆದಾಗ ಶಾಲೆಯ ಮೈದಾನಕ್ಕೆ ತಾಗಿಕೊಂಡೇ ಇರುವ ಮೊದಲಿನ ಅಕ್ಷರ ದಾಸೋಹ ಸಿಬ್ಬಂದಿಯವರ ಮನೆಗೆ ತೆರಳಿ ಇನ್ವರ್ಟರ್ ಮೂಲಕ ನಡೆಯುವ ಮಿಕ್ಸಿಯಲ್ಲಿ ಮಸಾಲೆ ಮಾಡಿಕೊಂಡು ಬರುತ್ತಿದ್ದದು ತಿಳಿದಿತ್ತು. ಆದರೆ ಈ ಬಾರಿ ತನ್ನ ಮನೆಗೇ ಹೋಗಿ ಕಲ್ಲಿನಲ್ಲಿ ಅರೆದು ಮಸಾಲೆ ಮಾಡಿರುವುದು ಏಕೆಂದು ಅಡುಗೆ ಸಿಬ್ಬಂದಿಯವರಲ್ಲಿ ಬಹಳ ಆಶ್ಚರ್ಯದಿಂದ ಕೇಳಿದೆನು. ಆ ಮನೆಯ ಬಾಗಿಲಿಗೆ ಇವತ್ತು ಬೀಗ ಇದ್ದ ಕಾರಣ ಮತ್ತೇನು ಮಾಡುವುದೆಂದು ತೋಚದೆ ಸೀದಾ ತನ್ನ ಮನೆಗೇ ಹೋಗಿ ಕಲ್ಲಿನಲ್ಲಿ ಅರೆದು ಮಸಾಲೆ ಮಾಡಿ ತಂದೆನು ಎಂದರು.

              ಈಗ ಅಚ್ಚರಿಯ ಜಾಗದಲ್ಲಿ ಬಹಳ ಬೇಸರದ ಭಾವ ಹುಟ್ಟಿತು. ಹಿಂದಿನ ದಿನ ವಾಂತಿಬೇಧಿಯ ಅಸೌಖ್ಯದಿಂದ ನಿತ್ರಾಣಗೊಂಡಿದ್ದ ಇವರು ಶಾಲೆಯಲ್ಲಿ ಏಕಮಾತ್ರ ಅಕ್ಷರ ದಾಸೋಹ ಸಿಬ್ಬಂದಿಯಾಗಿದ್ದ ಕಾರಣ ಅನಿವಾರ್ಯವಾಗಿ ಈ ದಿನ ಶಾಲೆಯ ಬಿಸಿಯೂಟದ ಕೆಲಸಕ್ಕೆ ಆಗಮಿಸಿದ್ದರು. ಕೆಲಸ ಮಾಡಲು ಕಷ್ಟವೆನಿಸಿದರೆ, ದೇಹಾಲಸ್ಯವಿದ್ದರೆ ತಾಯಂದಿರ ಸಮಿತಿಯ ಒಬ್ಬರು ಅಡುಗೆ ಮಾಡಿ ಮಕ್ಕಳಿಗೆ ಬಡಿಸಲು ತಿಳಿಸೋಣ ಎಂದು ಈ ದಿನ ಮುಂಜಾನೆ 6.30 ಘಂಟೆಗೇ ನಾನು ಕಾಲ್ ಮಾಡಿ ತಿಳಿಸಿದ ನೆನಪು ಮನದಲ್ಲಿ ಮೂಡಿ ಬಂದಿತು. ಬೆಳಗ್ಗೆ ನನಗೆ ಎಚ್.ಎಮ್ ಮೀಟಿಂಗ್, ಮಧ್ಯಾಹ್ನ ಶಾಲೆಯಲ್ಲಿ ಕಾರ್ಯಕ್ರಮ ಇರುವುದು ಅರಿತಿದ್ದ ಅವರು ಅಡುಗೆ ಕೆಲಸಕ್ಕೆ ಇದೇ ದಿನ ಬೆಳಗ್ಗೆ ಯಾರಾದರೂ ಪೋಷಕರನ್ನು ಹುಡುಕುವುದೂ ನನಗೆ ಕಷ್ಟಸಾಧ್ಯವೆಂದು ಅರಿತು ತಾವೇ ಬರುತ್ತೇನೆ ಎಂದಿರುವುದೂ ಅವರು ಪೂರ್ತಿ ಗುಣಮುಖರಾಗದಿರುವುದೂ ತಿಳಿದಿತ್ತು. ಇಂಥಹ ದೇಹಾಲಸ್ಯದ ಸಂದರ್ಭ ಶಾಲೆಯಲ್ಲಿ ಬಿಸಿಯೂಟಕ್ಕೆ ಸಾಂಬಾರ್ ಮಾಡಲು ಕರೆಂಟ್ ಆಗ ಬರಬಹುದು, ಈಗ ಬರಬಹುದು ಎಂದು ಕಾದು..ಕಾದು.. ಕೊನೆ ಘಳಿಗೆಯಲ್ಲಿ ಹತ್ತಿರದ ಮನೆಯೂ ಬೀಗ ಹಾಕಿದ್ದ ಸಂದರ್ಭ ಮಕ್ಕಳ ಬಿಸಿಯೂಟದ ಹೊತ್ತಿಗೆ ಸಾಂಬಾರ್ ತಯಾರಿರಲು ಬಿರಬಿರನೆ ತನ್ನ ಮನೆ ಕಡೆ ಹೆಜ್ಜೆ ಹಾಕಿ, ನಂತರ ಅದೇ ವೇಗದಲ್ಲಿ ಬಿರಬಿರನೆ ನಡೆದು ವಾಪಸಾಗುವುದು ಎಷ್ಟೊಂದು ಶ್ರಮದಾಯಕ ಎನ್ನುವ ಕಲ್ಪನೆ ಕಣ್ಣೆದುರು ಮೂಡಿ ಬಂದಿತು. ಅಡುಗೆ ಸಿಬ್ಬಂದಿಯವರ ಅಸೌಖ್ಯದ ಸಂದರ್ಭದಲ್ಲಿಯೇ ಶಾಲೆಯ ಬಿಸಿಯೂಟ ತಯಾರಿಗಾಗಿ ಇಷ್ಟೊಂದು ಶ್ರಮಪಡಬೇಕಾಯ್ತಲ್ಲ ಎಂದು ನೆನೆದು ಬೇಸರವಾಯಿತು.
      
              ಅದಾಗಲೇ ಶಾಲಾ ಜಗಲಿಯಲ್ಲಿ ಮಕ್ಕಳೆಲ್ಲರೂ ಕೈ ತೊಳೆದು ಬಿಸಿಯೂಟ ಸೇವಿಸಲು ಕುಳಿತಿದ್ದರು. ಊಟದ ಬಳಿಕ ಆಯೋಜಿಸಿದ್ದ ಹೊಸ ವರ್ಷ ಸಂಭ್ರಮದ ಮುಖ್ಯ ಅತಿಥಿ ಶ್ರೀಮತಿ ಪ್ರಜ್ಞಾರವರೂ ನಮ್ಮ ಜೊತೆಗೂಡಿದ್ದರು. ಬಿಸಿಯೂಟ ಬಡಿಸಲೆಂದು ಅನ್ನ, ಸಾಂಬಾರ್ ನ ಪಾತ್ರೆಗಳನ್ನು ತಂದು ನಮ್ಮ ಅಕ್ಷರ ದಾಸೋಹ ಸಿಬ್ಬಂದಿ ಶಶಿಯಕ್ಕ ಜಗಲಿಗೆ ತಾಗಿಕೊಂಡೇ ಇರುವ ಕಟ್ಟೆಯ ಮೇಲೆ ಜೋಡಿಸಿದರು. ಬಿಸಿಯೂಟದ ಪಾತ್ರೆಗಳನ್ನು ಜೋಡಿಸಿಯಾದಂತೆ ನಾವು ಮಕ್ಕಳಿಗೆ ಎದ್ದು ನಿಲ್ಲಲು ಹೇಳಿದೆವು. ಈ ಹೊಸ ವರ್ಷಕ್ಕೆ ನಿಜವಾಗಿ ಸಂತೋಷ ತಂದಿರುವುದು ಇವತ್ತಿನ ಸಾಂಬಾರ್ ಎಂದೂ ಅದನ್ನು ಈ ಹೊತ್ತಿಗೆ ಮಾಡಿ ಬಡಿಸುವುದರಲ್ಲಿ ಶಶಿಯಕ್ಕನವರ ಶ್ರಮ ಎಷ್ಟಿದೆ ಎಂದೂ ತಿಳಿಸಿದೆವು. ಇದನ್ನು ಕೇಳಿದ ಮಕ್ಕಳೆಲ್ಲರೂ ತಮ್ಮ ಪ್ರೀತಿಯ ಶಶಿ ಆಂಟಿಗೆ ಥ್ಯಾಂಕ್ಸ್ ಹೇಳಿ ಚಪ್ಪಾಳೆ ತಟ್ಟಿ ತಮ್ಮ ಗೌರವ ಸೂಚಿಸಿದರು.
          
               ಮಕ್ಕಳ ವಂದನೆ ಸ್ವೀಕರಿಸಿದ ಶಶಿಯಕ್ಕ ಇನ್ನೇನು ಬಿಸಿಯೂಟ ಬಡಿಸಬೇಕು ಅನ್ನುವಷ್ಟರಲ್ಲಿ ನಾವು ಶಿಕ್ಷಕರೆಲ್ಲರೂ ಸೇರಿ ಅವರನ್ನು ಬಿಸಿಯೂಟದ ಪಾತ್ರೆಗಳ ಬದಿಯಲ್ಲಿ ಕಟ್ಟೆ ಮೇಲೆ ತುಸು ಕುಳಿತುಕೊಳ್ಳುವಂತೆ ಕೇಳಿದೆವು. ಮೊದಲೇ ಅನಾರೋಗ್ಯವಿದ್ದ ಸಂದರ್ಭವೂ ಬಿಸಿಯೂಟಕ್ಕೆ ಚ್ಯುತಿ ಬರದಂತೆ ದೂರದ ತನ್ನ ಮನೆಗೇ ತೆರಳಿ ಕಲ್ಲಿನಲ್ಲಿ ಕಡೆದು ಮಸಾಲೆ ಮಾಡಿಕೊಂಡು ಬಂದಂಥಹ ದೊಡ್ಡ ಕಾರ್ಯಕ್ಕೆ ಥ್ಯಾಂಕ್ಸ್ ಎನ್ನುವ ಚಿಕ್ಕ ಪದವನ್ನು ನಾವು ಶಿಕ್ಷಕರೂ ಹೇಳಿದೆವು. ಮನೆಗೇ ಹೋಗಿ ಹೀಗೆ ಮಸಾಲೆ ಮಾಡಿಕೊಂಡು ಬರುವುದು ಮೊದಲೇ ತಿಳಿದಿದ್ದರೆ ರಿಕ್ಷದಲ್ಲಿಯಾದರೂ ಕಳುಹಿಸಬಹುದಿತ್ತು ಎಂದು ನನ್ನ ಮನದಾಳಕ್ಕೆ ಅನಿಸಿದ್ದನ್ನು ವ್ಯಕ್ತಪಡಿಸಿದೆನು. ಬಿರಬಿರನೇ ನಡೆದು ಹೋಗಿ ಬಂದು ಆಯಾಸವಾಗಿದ್ದರೆ ತುಸು ನೀರು ಕುಡಿದು ಸುಧಾರಿಸಿಕೊಳ್ಳುವಂತೆ ತಿಳಿಸಿದೆವು. ತನಗೆ ಕುಡಿಯಲು ನೀರು ಬೇಡವೆಂದೂ, ನಿನ್ನೆಯ ಅಸೌಖ್ಯದ ಬಳಿಕ ಸರಿಯಾಗಿ ಹಸಿವೂ, ಬಾಯಾರಿಕೆಯೂ ಆಗುತ್ತಿಲ್ಲವೆಂದು ಶಶಿಯಕ್ಕ ತಿಳಿಸಿದರು. ನಂತರ ಅತಿಥಿ ಶಿಕ್ಷಕಿ ಭವ್ಯರವರೂ ಸೇರಿದಂತೆ ಶಾಲೆಯ ಶಿಕ್ಷಕರೆಲ್ಲರೂ ಅನ್ನ, ಮೊಟ್ಟೆ, ಸಾಂಬಾರ್ ಹೀಗೆ ಒಂದೊಂದು ಬಗೆ ಬಡಿಸಲು ಶಶಿಯಕ್ಕನವರ ಜೊತೆಗೂಡಿದೆವು.
     
         ಅನ್ನ, ಸಾಂಬಾರ್ ಬಡಿಸಿಯಾದಂತೆ ಪ್ರತಿದಿನದ ಕ್ರಮದಂತೆ ಮಕ್ಕಳಿಗೆ ಅಂದಿನ ಬಿಸಿಯೂಟಕ್ಕೆ ತರಕಾರಿ ನೀಡಿದವರ ವಿವರ ಹೇಳಿ, ತರಕಾರಿ ನೀಡಿದವರಿಗೆಲ್ಲ ಥ್ಯಾಂಕ್ಸ್ ಹೇಳಲಾಯಿತು. ಅಷ್ಟರಲ್ಲಿ ನಮ್ಮ ಕ್ಲಸ್ಟರ್ ನ ಸಿ.ಆರ್.ಪಿ. ರಾಜೇಶ್ ಸರ್ ರವರು ಶಾಲೆಗೆ ಆಗಮಿಸಿದರು. ಅವರಿಗೂ ನಮ್ಮ ಜೊತೆ ಊಟ ಮಾಡಲು ಕೇಳಿಕೊಂಡೆವು. ನಮ್ಮೊಡನೆ ಬಿಸಿಯೂಟಕ್ಕೆ ಜೊತೆಗೂಡಲು ಅವರೂ ಸಂತೋಷದಿಂದ ಒಪ್ಪಿಕೊಂಡರು. ಸಿ.ಆರ್.ಪಿ. ರಾಜೇಶ್ ಸರ್ ತಮ್ಮ ಬಟ್ಟಲಿನಿಂದ ಅನ್ನ - ಸಾಂಬಾರ್ ಕಲೆಸಿ ಒಂದು ತುತ್ತು ಬಾಯಿಗಿಡುತ್ತಿದ್ದಂತೆ, ಸಾಂಬಾರ್ ರುಚಿಯಾಗಿದೆ ಎಂದರು.

ನಾನೂ ಶಾಲೆಯ ಬಿಸಿಯೂಟದ ಸಾಂಬಾರನ್ನೇ ಹಾಕಿಕೊಂಡು ಊಟ ಮಾಡಿದೆನು. ಹೌದು.. ಈ ದಿನದ ಸಾಂಬಾರ್ ಇಷ್ಟರವರೆಗೆ ನಾನು ತಿಂದ ಎಲ್ಲ ಸಾಂಬಾರ್ ಗಿಂತ ಅತ್ಯಂತ ರುಚಿಕರವಾಗಿದೆ ಅನ್ನಿಸಿತು. ಈ ದಿನದ ಬಿಸಿಯೂಟದ ಸಾಂಬಾರ್ ನಲ್ಲಿ ಶಾಲಾ ಕೈತೋಟದ ಕುಂಬಳಕಾಯಿ, ವಿದ್ಯಾರ್ಥಿಗಳು ತಂದ ಕಾಡು ಹೀರೇಕಾಯಿ, ಶಾಲಾ ಎದುರಿನ ದಿನಸಿ ಅಂಗಡಿಯವರು ಉಚಿತವಾಗಿ ನೀಡಿದ ಸೌತೆಕಾಯಿ, ಬಟಾಟೆ ಇವಿಷ್ಟು ವೈವಿಧ್ಯ ತರಕಾರಿಗಳು ಸೇರಿರುವುದು ಸಾಂಬಾರ್ ರುಚಿ ಹೆಚ್ಚಿಸಿತ್ತು. ಇದರ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಅಕ್ಷರ ದಾಸೋಹ ಸಿಬ್ಬಂದಿಯವರು ಎರಡು ಕಿ.ಮೀ.ನಷ್ಟು ದೂರದ ಮನೆಗೆ ನಡೆದುಕೊಂಡು ಹೋಗಿ ಕಲ್ಲಿನಲ್ಲಿ ಮಸಾಲೆ ಕಡೆದು ತಂದ ಶ್ರಮ, ಪ್ರೀತಿಯೂ ಬೆರೆತಿತ್ತು. ಈ ಸಾಂಬಾರ್ ರುಚಿ ನನ್ನ ವೃತ್ತಿಜೀವನದಲ್ಲಿಯೇ ಬಹಳ ಅನನ್ಯವಾದುದು ಮತ್ತು ಯಾವತ್ತೂ ನೆನಪಿನಲ್ಲಿ ಉಳಿಯುವ ರುಚಿಯಾಗಿದೆ.
.......................................... ವಿದ್ಯಾ ಕಾರ್ಕಳ
ಪ್ರಭಾರ ಮುಖ್ಯ ಶಿಕ್ಷಕರು
ದ. ಕ. ಜಿ. ಪಂ. ಕಿರಿಯ 
ಪ್ರಾಥಮಿಕ ಶಾಲೆ. ಹೊಸಪಟ್ಣ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
*******************************************


Ads on article

Advertise in articles 1

advertising articles 2

Advertise under the article