ಜೀವನ ಸಂಭ್ರಮ : ಸಂಚಿಕೆ - 173
Sunday, January 19, 2025
Edit
ಜೀವನ ಸಂಭ್ರಮ : ಸಂಚಿಕೆ - 173
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಸಂತರ ಬದುಕಿಗೂ ಸಾಧಾರಣ ಮನುಷ್ಯನ ಬದುಕಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಸಂತರು ಸತ್ಯದರ್ಶನಕ್ಕಾಗಿ ಮೀಸಲಾಗಿ ಇರುತ್ತಾರೆ. ನಾವು ಪ್ರಪಂಚಕ್ಕೆ ಬದುಕನ್ನು ಮೀಸಲಾಗಿ ಇಟ್ಟಿರುತ್ತೇವೆ. ನಾವು ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಕ್ಕಾಗಿ ಬದುಕನ್ನು ಮೀಸಲಾಗಿಡುತ್ತೇವೆ. ನಾವು ಈ ಪ್ರಪಂಚದ ವಸ್ತುಗಳಿಗಾಗಿ ಬದುಕನ್ನೇ ಸವೆಸುತ್ತೇವೆ. ಈ ವಸ್ತುಗಳು ಹೇಗಿದ್ದಾವೆ ?. ಈ ವಸ್ತುಗಳು ನಮ್ಮದಾಗಿ ಉಳಿಯುವುದಿಲ್ಲ ಹಾಗೂ ನಮಗೆ ಹೇಗೆ ಬೇಕೋ ಹಾಗೆ ಇರುವುದಿಲ್ಲ. ಆದರೂ ಆ ವಸ್ತುಗಳ ಬೆನ್ನು ಹತ್ತುತ್ತೇವೆ. ಆ ವಸ್ತುಗಳಿಂದ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಕೊನೆಗೆ ಸಫಲವೋ, ವಿಫಲವೋ ಆಗುತ್ತೇವೆ. ಅನೇಕ ಕಷ್ಟ ನಷ್ಟಗಳನ್ನು ಎದುರಿಸುತ್ತೇವೆ. ಮನಸ್ಸಿನಲ್ಲಿ ಶಾಂತಿಗಾಗಿ ತಡವರಿಸುತ್ತೇವೆ. ಆದರೂ ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಸಂತರ ಬದುಕಿನಲ್ಲಿ ಮತ್ತು ನಮ್ಮ ಬದುಕಿನಲ್ಲಿರುವ ವ್ಯತ್ಯಾಸ. ಅದನ್ನು ನಾವು ಗಮನಿಸಬೇಕು. ಸಂತರು ನಮ್ಮ ಹಾಗೆಯೇ ಬದುಕಬೇಕಾಗುತ್ತದೆ. ಅವರ ಹಾಗೆ ನಾವು ಬದುಕುತ್ತಾ ಇರುತ್ತೇವೆ. ಸ್ವಲ್ಪ ಬದಲಾವಣೆ ಇದೆ. ಅವರು ಯಾವುದಕ್ಕೆ ಮಹತ್ವ ಕೊಡುತ್ತಾರೆ, ಅದಕ್ಕೆ ನಾವು ಮಹತ್ವ ಕೊಡುವುದಿಲ್ಲ. ಯಾವುದಕ್ಕೆ ನಾವು ಮಹತ್ವ ಕೊಡುತ್ತೇವೆ, ಅದಕ್ಕೆ ಅವರು ಮಹತ್ವ ಕೊಡುವುದಿಲ್ಲ. ನಾವು ಕೆಲವು ಸಂಗತಿಗಳಿಗೆ ಮಹತ್ವ ಕೊಡುತ್ತೇವೆ. ಶ್ರೇಷ್ಠ ಜ್ಞಾನಗಳಿಗೆ ಅವು ಮಹತ್ವದ್ದಲ್ಲ. ವಸ್ತುಗಳು ಬೇಡ ಅಂತ ಅಲ್ಲ. ಮನೆ ಬೇಡವೇನು? ಮನೆ ಬೇಕು. ಮನೆ ಅಂದಾಗ ದವಸ ಧಾನ್ಯಗಳು ಅವಶ್ಯವೆ. ಅದಕ್ಕಾಗಿ ನಾವು ಕೆಲಸ ಮಾಡಬೇಕು, ಗಳಿಸಬೇಕು. ಇವೆಲ್ಲ ಅವಶ್ಯವೇ. ಆದರೆ ಸಂತರು ಅವಕ್ಕೆ ಬಹಳ ಪ್ರಾಧಾನ್ಯತೆ ಕೊಡುವುದಿಲ್ಲ. ನಾವು ಬಹಳ ಆದ್ಯತೆ ಕೊಟ್ಟಿದ್ದೇವೆ. ನಾವು ಎಷ್ಟು ಮಹತ್ವ ಕೊಟ್ಟಿದ್ದೀವಿ ಅಂದರೆ ನಾವು ಬದುಕಿದ್ದೆ ಮನೆ ಕಟ್ಟುವುದಕ್ಕೆ. ನಾವು ಬಾಳೋದೇ ಅದಕ್ಕಾಗಿ ಅನ್ನುತ್ತೇನೆ. ಆದರೆ ನಿಸರ್ಗದಲ್ಲಿ ಹಾಗೆ ಇಲ್ಲ. ಬದುಕಿಗೆ ಬೆಲೆ ಹೆಚ್ಚು. ಆ ವಸ್ತುಗಳೆಲ್ಲ ಬದುಕಿಗಾಗಿ ಬೇಕು. ಜಗತ್ತಿನಲ್ಲಿ ಜೀವನಕ್ಕಿರುವ ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ. ನಾನು ಕುರ್ಚಿ ಬಳಸುತ್ತೇನೆ. ಟೇಬಲ್ ಬಳಸುತ್ತೇನೆ. ಅವೆಲ್ಲ ನನಗಾಗಿ. ನನ್ನ ಜೀವನಕ್ಕೆ ಉಪಯೋಗ ಆಗಲಿ ಅಂತ ವಿನಃ, ಅವುಗಳಿಗೆ ಮಹತ್ವದಲ್ಲ. ಕುರ್ಚಿ ಮಹತ್ವದಲ್ಲ. ಟೇಬಲ್ ಮಹತ್ವದಲ್ಲ. ಮುತ್ತು, ರತ್ನ, ಭೂಮಿ, ಹಣಕ್ಕಾಗಿ ಪ್ರಾಣ ಕೊಟ್ಟವರು ಎಷ್ಟು ಜನ ಇಲ್ಲ ಹೇಳಿ.
"ಕನಕ, ಕಾಮಿನಿ, ಕಾಂಚನಕ್ಕಾಗಿ ಹೊಡೆದಾಡಿ ಕೆಟ್ಟಿತು ಈ ಲೋಕವೆಲ್ಲ. ನೀನೇಕೆ ಇಚ್ಚಿಸುವೆ ಎಲೆ ಹುಚ್ಚು ಮನವೇ, ಹಗಲು ಕಂಡ ಕಮರಿಯಲಿ ಇರುಳು ಬೀಳುವರೇ, ಜಗದ ಆಗೂ ಹೋಗು ಅರಿತು ಜಗದೀಶ ಅಖಂಡೇಶನನ್ನು ನಂಬಿದೆಯಾದರೆ ನೀನು ಸುಖಿಯಪ್ಪೆ" ಅಂದರು ಶಿವಯೋಗಿಗಳು.
ಅಂದರೆ ನಮ್ಮ ಜೀವನದಲ್ಲಿ ಕನಕ, ಕಾಮಿನಿ, ಕಾಂಚನಕ್ಕಾಗಿ ಮಹತ್ವ ಕೊಟ್ಟಿದ್ದೀವಿ. ಅಂದರೆ ಇವು ಬೇಡವೇ?. ಕನಕ ಇರಬೇಕು. ಹೆಂಡತಿ ಮಕ್ಕಳು ಇರಬೇಕು. ಆದರೆ ಅದಕ್ಕಾಗಿ ಬಡಿದಾಡಬಾರದು. ಅದಕ್ಕೆ ಎಷ್ಟು ಮಹತ್ವ ಕೊಡಬೇಕೋ ಅಷ್ಟೇ ಮಹತ್ವ ಕೊಡಬೇಕು. ದುಬಾರಿ ಬೆಲೆಯದೆಂದು ನಡು ಮನೆಯಲ್ಲಿ ಬೂಟು ಇಡಲಾಗುತ್ತದೆಯೇ?, ಅವು ಎಲ್ಲಿರಬೇಕು, ಅಲ್ಲಿರಬೇಕು. ಎಲ್ಲಿ ಬಿಡಬೇಕು?. ಎಲ್ಲಿ ಬಳಸಬೇಕು?. ಒಳಗೆ ಏನು ಇಡಬೇಕು?. ಅದನ್ನೇ ಇಡಬೇಕು. ಹಾಗೆ ನಾವು ಬಾಳಬೇಕು. ಸಂತರು ಜಗತ್ತನ್ನ ಬೈಯುವುದಿಲ್ಲ, ತಿರಸ್ಕರಿಸುವುದಿಲ್ಲ. ಆದರೆ ಅದೇ ಮಹತ್ವ ಅಂತ ತಿಳಿದುಕೊಳ್ಳಬಾರದು. ಜಗತ್ತಿನಲ್ಲಿ ಅಷ್ಟೇ ಅಲ್ಲ ಬಹಳಷ್ಟು ಇದೆ. ಒಂದು ಹಕ್ಕಿ ಇತ್ತು. ಆ ಹಕ್ಕಿ ಒಂದು ದಿನ ದೊಡ್ಡ ಶ್ರೀಮಂತರ ಮನೆ ಹಿಂದಿನ ಮರದಲ್ಲಿ ಸುಂದರ ಗೂಡು ಕಟ್ಟಿತು. ಅದರಲ್ಲಿ ಎರಡು ಮೊಟ್ಟೆ ಇಟ್ಟಿತು. ಅದನ್ನು ಮನೆ ಮಾಲೀಕ ದಿನಾಲು ನೋಡುತ್ತಿದ್ದನು. ಆತ ಅದಕ್ಕೆ ಹೋಲಿಸಿಕೊಂಡು, ಇದೇನು ಗೂಡು ?. ನನ್ನ ಮನೆ ಎಷ್ಟು ಅದ್ಭುತ ಅಂತ ಆನಂದ ಪಡುತ್ತಿದ್ದ. ಒಂದು ದಿನ ಮೊಟ್ಟೆ ಒಡೆದು ಮರಿಗಳು ಆದವು. ಆ ಬಳಿಕ ಹಕ್ಕಿ ಆ ಎರಡು ಮರಿ ಗೂಡು ಬಿಟ್ಟು ತನ್ನ ಮರಿಗಳೊಂದಿಗೆ ಹೊರಗೆ ಬಂದು ಕುಳಿತಿತ್ತು. ಆಗ ಮನೆ ಮಾಲೀಕ ಹೇಳಿದ ಆ ಹಕ್ಕಿಗೆ. "ಏನು ನಿನ್ನ ಗೂಡು, ಹುಲ್ಲಿನಿಂದ ಕಟ್ಟಿದ್ದೀಯ, ಅದರಲ್ಲಿ ಏನಿದೆ?. ನೋಡು ನನ್ನ ಮನೆ, ನನ್ನ ಮನೆಗೆ ಸ್ವಾಗತ" ಎಂದನು. ಆ ಹಕ್ಕಿ ತನ್ನೆರಡು ಮರಿ ಕರೆದುಕೊಂಡು ಮನೆಯ ಒಳಗೆ ಬಂದಿತು. ಎಲ್ಲಾ ಕಡೆ ತೋರಿಸಿದ. ಆ ಪಕ್ಷಿ ಎಲ್ಲಾ ಕಡೆ ನೋಡಿತು. ಆಮೇಲೆ ಹೊರ ಬಂದು ಗಿಡದ ಮೇಲೆ ಕುಳಿತು ಹೇಳಿತು. ನನ್ನ ಮನೆಯಷ್ಟು ನಿನ್ನ ಮನೆ ಚಂದ ಇಲ್ಲ. ಏಕೆಂದರೆ ನಿನ್ನ ಮನೆಯಲ್ಲಿ ಸಾಮಾನುಗಳು ಇವೆ. ನನ್ನ ಮನೆಯಲ್ಲಿ ಮರಿಗಳು ಇದಾವೆ. ನಿನಗೆ ಒಂದು ಗೊತ್ತಿಲ್ಲ, ನಾನು ಮರಿಯಾದ ಕೂಡಲೇ ಈ ಗೂಡು ಬಿಡ್ತೀನಿ, ಮನೆ ಮಹತ್ವದಲ್ಲ, ಮರಿ ಮಹತ್ವದ್ದು, ಜೀವನ ಮಹತ್ವದ್ದು, ಹಾರೋದು, ಹಾಡೋದು ಮಹತ್ವದ್ದು. ನಮ್ಮ ಕೆಲಸ ಏನು ?. ನಾವು ಬಂದಿದ್ದು ಮನೆ ಕಟ್ಟಲು ಅಲ್ಲ, ಮನೆ ಕಟ್ಟಿ , ಮರಿ ಮಾಡಿ, ಮನೆ ಬಿಡುವುದಕ್ಕೆ ಬಂದಿದ್ದೇವೆ. ಅಲ್ಲಿ ಇರೋದಿಕ್ಕೆ ಅಲ್ಲ. ನಾವು ಈಗ ಹೊರಟೆವು. ಅದಕ್ಕೆ ನಿನಗೆ ಅದು ಎಂದೂ ಸಾಧ್ಯವಿಲ್ಲ. ನೀನು ಮನೆಗಾಗಿ ಸಾಯುತ್ತಿ ಎಂದಿತು. ಇಷ್ಟೇ ನನಗೂ ನಿನಗೂ ವ್ಯತ್ಯಾಸ. ನಾವು ಏಕೆ?. ಆಕಾಶಕ್ಕೆ ಹಾರುತ್ತೀವಿ ಅಂದರೆ, ನಮಗೆ ಮನೆ ಮಹತ್ವದಲ್ಲ, ಆಕಾಶದಲ್ಲಿ ಹಾರೋದು, ಸುಂದರ ಹಾಡು ಹಾಡೋದು. ಮನುಷ್ಯನೇ ನಿನಗೆ ಮನೆ ಮಹತ್ವದ್ದು. ಎಲ್ಲಿಗೆ ಹೋದರು ನಿನಗೆ ಮನೆಯೇ ತುಂಬಿರುತ್ತದೆ, ನನ್ನ ಮನೆಗಿಂತ ನಿನ್ನ ಮನೆ ಅದ್ಭುತ ಇದೆ. ಆದರೆ ನೀನು ಅದರಲ್ಲಿ ಸಿಕ್ಕಿಹಾಕಿಕೊಂಡು ಇದ್ದೀಯ. ನಾನು ಹೊರಗೆ ಇದ್ದೇನೆ ಅಂದಿತು. ಅಂದರೆ ಮನೆ ಇರಬೇಕು. ಅದು ತಲೆಯಿಂದ ಹೊರಗೆ ಇರಬೇಕು. ಬಂಧನಕ್ಕೆ ಒಳಗಾಗಬಾರದು. ಈಗ ಈ ಮನೆ ಯಾರು ಬೀಳಿಸಿದರೆ ಏನು?. ಕಿತ್ತು ಬಿಸಾಕಿದರೇನು ?. ನಾನು ಸ್ವತಂತ್ರ ಅಂದಿತು. ಮನೆ ಕಟ್ಟುವುದು ಬದುಕಿಗಾಗಿ. ವಸ್ತುಗಳನ್ನು ತರೋದು ಬಳಸುವುದಕ್ಕಾಗಿ. ಆದರೆ ಜೀವನವೇ ಮನೆ ವಸ್ತುಗಳಿಗಾಗಿ ಅಲ್ಲ. ನಾವು ಇದೇ ಜಗತ್ತಿನಲ್ಲಿ ಬಂದಿರೋದು. ಜೀವನಕ್ಕಾಗಿ ಜಗತ್ತು ಅಂತ ಭಾವಿಸಬೇಕು. ಈ ಜಗತ್ತಿರುವುದು ಅನುಭವಿಸುವುದಕ್ಕಾಗಿ. ಅನುಭವಿಸುವುದು ಎಂದರೆ ಎಲ್ಲಾ ನಮ್ಮದು ಮಾಡ್ಕೋಬೇಕು ಅಂತ ಅಲ್ಲ. ಇಲ್ಲಿ ಟೇಬಲ್, ಕುರ್ಚಿ ಇದೆ. ಇದನ್ನೆಲ್ಲಾ ನನ್ನದು ಮಾಡಿಕೊಂಡು ಅನುಭವಿಸಬೇಕು ಅಂತ ಎಲ್ಲಿದೆ? ಈಗ ನಾನು ಕುಳಿತಿದ್ದೇನೆ. ಈ ಕುರ್ಚಿ ನನ್ನದಲ್ಲ. ಈ ಕುರ್ಚಿ ಟೇಬಲ್ ನಿಮ್ಮದು. ಹಾಸಿಗೆ ನಿಮ್ಮದು. ಈ ಮನೆ ನಿಮ್ಮದೇ. ನಾನು ಕುಳಿತಿದ್ದೇನೆ. ನಿಮ್ಮದೇನು ತಕರಾರು ಇಲ್ಲ. ಅನುಭವಿಸುವುದಕ್ಕೆ ಕೂರೋದೆ ವಿನಹ, ನನ್ನದು ಮಾಡಿಕೋಬೇಕು ಅಂತ ಕುಳಿತರೆ, ನಾಳೆ ಯಾರು ಕೊಡುತ್ತಾರೆ. ಕುಳಿತಿದ್ದೆಲ್ಲ ನನಗೆ ಮಾಡ್ಕೋತೀನಿ ಅಂತ ಅಂದರೆ ನಾಳೆ ಕುರ್ಚಿ ಟೇಬಲ ಯಾರು ಕೊಡುತ್ತಾರೆ ? ಯಾಕೆ ಕೊಡುತ್ತಾರೆ? ಮನೆಯನ್ನು ಯಾಕೆ ಕೊಡುತ್ತಾರೆ. ಏನೂ ಕೊಡುವುದಿಲ್ಲ. ನಮ್ಮದು ಮಾಡಿಕೊಳ್ಳುವುದಲ್ಲ. ನಮ್ಮದು ಇದ್ದಂಗೆ ಬಳಸುವುದು ಅಷ್ಟೇ. ಜಗತ್ತನ್ನೆಲ್ಲ ನಮ್ಮದು ಇದ್ದಂಗೆ ಬಳಸೋದು. ಇದೆಲ್ಲ ಹೊಲ ಇದೆ. ಎಷ್ಟು ಚೆನ್ನಾಗಿ ಬೆಳೆದಿದೆ?. ತೆಂಗು, ಅಡಿಕೆ ಗಿಡ ಎಲ್ಲ ಇದೆ. ಹಲಸು ಇದೆ. ಎಲ್ಲಾ ತರಹ ಬೆಳೆದಿದೆ. ನೋಡೋದಿಕ್ಕೆ ಯಾರದು ತಕರಾರ್ ಇಲ್ಲ. ಹೆಸರಿಗೆ ಮಾಡಿಕೊಳ್ಳಬೇಕೆಂದರೆ ತಕರಾರು. ಹಸಿವಾಗಿದೆ ಒಂದು ಹಣ್ಣುಕೊಡು ಅಂದರೆ ಯಾರು ಕೊಡೋದಿಲ್ಲ ಹೇಳಿ. ಇರೋತನಕ ಬಳಸುವುದು ಅಷ್ಟೇ, ಬಳಸೋದಿಕ್ಕಾಗಿ ಈ ಜಗತ್ತಿಗೆ ಬಂದಿದ್ದೇವೆ ವಿನಹ ಹೆಸರಿಗೆ ಮಾಡಿಕೊಳ್ಳೋದಿಕ್ಕೆ ಅಲ್ಲ. ನಮ್ಮದು ಮಾಡಿಕೊಂಡು ಒಯ್ಯುವುದಕ್ಕೆ ಅಲ್ಲ. ಇದನ್ನು ಸಂತರು ಮರೆತಿಲ್ಲ. ನಾವು ಮರೆತಿದ್ದೇವೆ. ಇಷ್ಟೇ ವ್ಯತ್ಯಾಸ. ಆದರೆ ಇದು ದೊಡ್ಡ ಪರಿಣಾಮ ಬೀರಿತು ಜಗತ್ತಿನಲ್ಲಿ. ಈಗ ನಾವು ನೋಡುತ್ತಿದ್ದೇವೆ ದೇಶ ದೇಶಗಳು ಹೋರಾಟ ಮಾಡುತ್ತಿದ್ದಾರೆ. ಸಂತೋಷಕಲ್ಲ, ಶಾಂತಿ ಸಮಾಧಾನಕ್ಕಲ್ಲ. ಇವೆರಡು ಬಿಟ್ಟು ಉಳಿದುದ್ದಕ್ಕೆ. ಸಮಾಧಾನ ಮುಖ್ಯ ಅಂತ ಆದರೆ ಯಾವುದರಿಂದ ಸಮಾಧಾನ ಆಗುತ್ತದೆ ಅಷ್ಟು ಮಾಡ್ತೀವಿ. ಅಸಮಾಧಾನ ಆಗಬಾರದು ಹಾಗೆ ನೋಡ್ಕೋತೀವಿ. ಅಷ್ಟು ಮಾಡಿದರೆ ಸಾಕು. ಏನು ಕೊರತೆ ಈ ದೇಶದಲ್ಲಿ. ಎಂತಹ ಹಿಮದ ಬೆಟ್ಟ?. ನದಿ, ಭೂಮಿ ಹಚ್ಚ ಹಸಿರು, ಎಲ್ಲಾ ಕಡೆ ನೀರು, ಆರು ಋತುಗಳು ಎಷ್ಟು ಅದ್ಭುತ?. ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ, ಶಿಶಿರ. ಎಷ್ಟು ತರದ ಪಕ್ಷಿ ಪ್ರಾಣಿ ಜನ. ಇಷ್ಟೆಲ್ಲಾ ಇದ್ದು ಕಷ್ಟಪಡುತ್ತೀವಿ, ತ್ರಾಸ ಮಾಡ್ಕೋತೀವಿ ಅಂದರೆ ನಮ್ಮಲ್ಲೇ ಏನೋ ತೊಂದರೆ ಇದೆ. ಜಗತ್ತು ಕೆಟ್ಟಿಲ್ಲ ಕೆಟ್ಟಿದ್ದು ಮನಸ್ಸು ಸೇರಿದೆ. ಮನಸ್ಸು ಸ್ವಚ್ಛ ಮಾಡಿಕೋ ಆಗ ಎಲ್ಲಾ ಸರಿಯಾಗುತ್ತದೆ. ಸುಂದರ ಬದುಕಿಗೆ ಸುಂದರ ಸ್ವಚ್ಛ ಮನಸ್ಸು ಬೇಕು. ಯಾರದಾದರೇನು ಕೊನೆಗೆ ಯಾರದು ಅಲ್ಲ ಗೊತ್ತಿರಬೇಕು. ಎಲ್ಲರದು ಸರಿ, ಕೊನೆಗೆ ಯಾರದು ಅಲ್ಲ. ಈಗ ಬಹಳ ಚೆಂದಾಗಿ ಡ್ರೆಸ್ ಹಾಕಿದ್ದೀರಿ. ಮನೆಗೆ ಹೋದ ತಕ್ಷಣ ಅದನ್ನೆಲ್ಲ ತೆಗಿಯುತ್ತೇವೆ. ತೆಗೆದು ಆರಾಮಾಗಿ ಮಲಗಬೇಕು. ಇಲ್ಲ ಡ್ರೆಸ್ ಹಾಕೊಂಡು ಮಲಗುತ್ತೇವೆ ಅಂದ್ರೆ ಜೀವನ ಅಲ್ಲ. ತೆಗೆಯುವಾಗ ತೆಗೆಯಬೇಕು. ಹಾಕುವಾಗ ಹಾಕಬೇಕು. ಅದು ಜೀವನ. ಎಲ್ಲಿ ಹಾಕಬೇಕು ಅಲ್ಲಿ. ಎಲ್ಲಿ ಬಿಡಬೇಕು ಅಲ್ಲಿ ಬಿಡಬೇಕು. ಹೆಂಡತಿ ಮಕ್ಕಳು ಮನೆ ಎಲ್ಲ ಇರಬೇಕು. ಎಷ್ಟಿರಬೇಕು ಅಷ್ಟೇ. ಎಲ್ಲಿ ಬಿಡಬೇಕು ಅಲ್ಲಿ. ತಲೆಯಲ್ಲಿ ಇಲ್ಲದೆ ಹೊರಗೆ ಇದ್ದರೆ ತೊಂದರೆ ಇಲ್ಲ. ಪ್ರಪಂಚ ಹೊರಗಿಟ್ಟು ಬದುಕಿದವರು ಸಂತರು, ಮನಸ್ಸಿನಲ್ಲಿ ತುಂಬಿಕೊಂಡು ತಾಪ ಮಾಡಿಕೊಳ್ಳುವವರೆ ನಾವು. ಇಷ್ಟೇ ವ್ಯತ್ಯಾಸ.
ಒಬ್ಬ ಟ್ರೈನಿಗೆ ಹೋಗಿದ್ದಾನೆ. ಎಲ್ಲರೂ ಲಗೇಜ್ ಹೊರಗಿಟ್ಟು ಆರಾಮವಾಗಿ ಕುಳಿತಿದ್ದಾರೆ. ಒಬ್ಬ ಬಂದಿದ್ದಾನೆ. ಹಳ್ಳಿಯವ. ದೊಡ್ಡದೊಂದು ಚೀಲ ತಂದಿದ್ದಾನೆ. ಅದನ್ನು ತಲೆಯ ಮೇಲೆ ಹೊತ್ತುಕೊಂಡು ನಿಂತಿದ್ದಾನೆ. ಕುಳಿತುಕೊಂಡ ತಲೆಯ ಮೇಲೆ ಇಟ್ಟುಕೊಂಡು ಇಳಿಸಲೇ ಇಲ್ಲ. ಇಳಿಸಿದರೆ ಲಗೇಜ್ ದರ ನೀಡಬೇಕೆಂದು. ಅಷ್ಟರಲ್ಲಿ ಟಿಕೆಟ್ ಕಲೆಕ್ಟರ್ ಬಂದ. ಈ ಲಗೇಜ್ ದರ ನೀಡು ಅಂದನು. ನಾನು ಹೊತ್ತುಕೊಂಡು ಕುಳಿತಿದ್ದೀನಲ್ಲ ಎಂದ. ಟಿಕೆಟ್ ಕಲೆಕ್ಟರ್ ಹೇಳಿದ ಹೊತ್ತು ಕೊಂಡಾರು ಇರು ಕೆಳಗಡೆ ಆದರೂ ಬಿಡು ದರ ಕೊಡು ಎಂದನು. ಯಾಕೆ ಲಗೇಜ್ ಮತ್ತು ನಿನ್ನನ್ನು ಎರಡನ್ನು ಒಯ್ಯುವುದು ಈ ರೈಲು. ನಮ್ಮದು ಇದೇ ಪರಿಸ್ಥಿತಿ. ತಲೆ ಮೇಲೆ ಹೊತ್ತುಕೊಂಡಿದ್ದೇವೆ. ಹಾದಿಯಲ್ಲಿ ಒಂದು ಕುದುರೆ ಎದುರಾಗಿ ಕತ್ತೆಗೆ ಕೇಳಿತು. ಯಾಕೆ ಬರಬರಾ ಹೊರಟಿದ್ದಿ ಅಂತ. ಆಗ ಕತ್ತೆ ಹೇಳಿದ್ದು ಇಳಿಸಲು ಹೊರಟಿದ್ದೇನೆ ಎಂದಿತು. ನಿಮ್ಮ ಮಾಲೀಕ ನಿಧಾನವಾಗಿ ಬರ್ತಾ ಇದ್ದಾನಲ್ಲ ಏಕೆ? ಅಂತೂ ಕುದುರೆ. ನಾನು ಮನೆಗೆ ಹೋದ ಕೂಡಲೇ ಇಳಿಸುತ್ತೇನೆ. ನಮ್ಮ ಮಾಲೀಕ ಕಾಯಂ ಹೊತ್ತುಕೊಂಡಿದ್ದಾನೆ. ಅದಕ್ಕೆ ನಿಧಾನವಾಗಿ ಬರ್ತಾ ಇದ್ದಾನೆ ಅಂತ ಅಂದಿತು. ನನಗೆ ಬುದ್ಧಿ ಇಲ್ಲದ ಪ್ರಾಣಿ ಅಂತಾರೆ. ಮನುಷ್ಯ ನಿಜವಾಗಿ ಬುದ್ಧಿ ಇಲ್ಲದವ. ಏಕೆಂದರೆ ಅವನಿಗೆ ಖಾಯಂ ಹೊತ್ತಿದ್ದಾನೆ. ನನ್ನ ಮೇಲೆ ಏನಿದೆ ಅಂತ ಗೊತ್ತಿಲ್ಲ,20ಕಿಲೋ ಅಂತ ಗೊತ್ತು. ಅವನ ತಲೆಯಲ್ಲಿ ಅದೇ ತುಂಬಿದೆ. ಪ್ರತಿಯೊಂದರ ಬೆಲೆ, ಅವನ ತಲೆಯಲ್ಲಿದೆ. ಅವನು ಇಳಿಸುವುದಿಲ್ಲ. ನಾವು ಇಳಿಸುತ್ತೇವೆ. ಇಷ್ಟೇ ನಮಗೆ ಅವನಿಗೆ ಇರುವ ವ್ಯತ್ಯಾಸ. ಇಳಿಸಿದ ಕೂಡಲೇ ನಮ್ಮನ್ನು ಬಿಡುತ್ತಾನೆ. ನಾನು ಸ್ವತಂತ್ರ. ಇಳಿಸಿದ ಕೂಡಲೇ ಬಾಗಿಲು ಹಾಕುತ್ತಾನೆ. ಆತ ಪರತಂತ್ರ. ಒತ್ತಡ ನಾನು, ಸಿಕ್ಕಿಹಾಕಿಕೊಂಡವ ಮನುಷ್ಯ. ನಿಶ್ಚಿಂತ ನಾನು. ಚಿಂತಿತ ಮನುಷ್ಯ. ಯಾರು ಬುದ್ಧಿವಂತರು ಹೇಳು ಅಂತು ಕತ್ತೆ. ಆಗ ಕುದುರೆ ಹೇಳಿತು ಇಷ್ಟೆಲ್ಲಾ ಆದರೂ ನಿನ್ನನ್ನು ಬೈತಾರಲ್ಲ ಅಂದಿತು, ಬುದ್ಧಿ ಇಲ್ಲ ಅಂತಾರಲ್ಲ ಅಂದಿತು. ಅದಕ್ಕೆ ಕತ್ತೆ ಹೇಳಿದ್ದು ಹೌದು, ಅವನ ಬುದ್ಧಿ ನನಗಿಲ್ಲ ಅಂತ ನನಗೆ ಗೊತ್ತಿದೆ. ನಾನು ಹೇಗೆ ಸ್ವಾತಂತ್ರ್ಯ ಇರಬೇಕು ಅಂತ. ಆಗ ಕತ್ತೆ, ಕುದುರೆಗೆ ಹೇಳಿತು ನೀನು ಸಿಕ್ಕಿಹಾಕಿಕೊಂಡಿದ್ದೀಯಾ. ನಿನಗೆ ಲಗಾಮು ಹಾಕಿದ್ದಾರೆ. ಅವನು ಹಾಕಿದ್ದನ್ನು ತಿನ್ನಲು ಹೋಗಿ ಸಿಕ್ಕಿಹಾಕಿಕೊಂಡಿದ್ದೀಯಾ. ನಾನು ಅವನದೇನು ತಿನ್ನುವುದಿಲ್ಲ. ಅವನ ನೀರು ಕುಡಿಯುವುದಿಲ್ಲ. ನನಗೆ ಆತ ಆಹಾರ ಹಾಕುವುದಿಲ್ಲ. ನಾನು ಬಯಸುವುದು ಇಲ್ಲ ಅಂದಿತು. ಹೊರೋದು ಇಳಿಸುವುದು. ಹೊರಗೆ ಹೋಗೋದು. ನಾವು ಪ್ರಪಂಚಕ್ಕೆ ಬಂದೀರೋದಕ್ಕೆ ಮಸ್ತ್ ಆಗಿ ಹಗುರವಾಗಿ ಬಾಳೋದು. ಜಗತ್ತನ್ನ ಅನುಭವಿಸುವುದು. ತಲೆ ಖಾಲಿ ಇಟ್ಟುಕೊಂಡು ಬದುಕುವುದು. ಹೋಗುವಾಗ ಖಾಲಿ ಹೊರಟರೆ ಇದು ಪ್ರಪಂಚ. ಹಾಗೆ ಬಾಳುವವರೇ ಸಂತರು. ಬಂಧಿಯಾಗಿ ಬಾಳುವವರೇ ನಾವು ಸಾಮಾನ್ಯರು. ಮನುಷ್ಯ ಇಳಿಸಿ ಬದುಕಬೇಕಲ್ಲವೇ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************