ಓ ಮುದ್ದು ಮನಸೇ ...…...! ಸಂಚಿಕೆ - 34
Sunday, January 19, 2025
Edit
ಓ ಮುದ್ದು ಮನಸೇ ...…...! ಸಂಚಿಕೆ - 34
ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
Mob : 63610 07190
ಒಮ್ಮೆ ಪ್ರವೀಣ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ. ವೇಧಿಕೆಯ ಮೇಲಿದ್ದ ಅತಿಥಿಯೋರ್ವರು ತಮ್ಮ ಭಾಷಣದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು "ಹೂ ಆರ್ ಯು?" ಒಬ್ಬ ವಿದ್ಯಾರ್ಥಿ ಎದ್ದು "ಐ ಯಾಮ್ ಯ್ಯಾನ್ ಆನಿಮಲ್" ಅಂದರೆ ಮತ್ತೊಬ್ಬ ನಾನು "ಮನುಷ್ಯ" ಎಂದ. ಮಗದೊಬ್ಬ "ನಾನು ಗಣೇಶ, ನಾನು ಹರೀಶ, ಸುರೇಶ" ಉತ್ತರಗಳು ಹೀಗೆ ಮುಂದುವರಿದವು. ಆಗ ಅತಿಥಿಗಳು ನೀವು ಹೇಳಿದ್ದು ಸರಿ ಆದರೆ ಇವೆಲ್ಲವನ್ನೂ ಮೀರಿದ ನೀವ್ಯಾರೆಂದು ತಿಳಿದುಕೊಳ್ಳಿ ಆಗ ನೀವು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತೀರೆಂದು ಹೇಳಿ ಕಾರ್ಯಕ್ರಮ ಮುಗಿಸಿ ಹೊರಟು ಹೋದರು.
ತಲೆಯಲ್ಲಿ ಹುಳಬಿಟ್ಟುಕೊಂಡ ಪ್ರವೀಣ ತಾನ್ಯಾರೆಂದು ತಿಳಿದುಕೊಳ್ಳಲು ಅಜ್ಜನ ಬಳಿ ಬಂದ. ಪ್ರವೀಣನ ಪ್ರಶ್ನೆ ಕೇಳಿದ ಅಜ್ಜ ಮುಗುಳ್ನಕ್ಕು "ನೀನ್ಯಾರೆಂದು ತಿಳಿದುಕ್ಕೊಳ್ಳುವ ಆಸಕ್ತಿ ನಿನ್ನಲ್ಲಿ ಮೂಡಿದೆಯೆಂದರೆ, ಮುಂದೊಂದು ದಿನ ನೀನೊಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳೋದರಲ್ಲಿ ಸಂಶಯವಿಲ್ಲ” ಎಂದ ಅಜ್ಜ ತನ್ನ ಗೆಳೆಯನ ಕಥೆಯೊಂದನ್ನು ಹೇಳಿದ. "ಸರಿಸುಮಾರು ಐವತ್ತರಿಂದ ಐವತೈದು ವರ್ಷಗಳ ಹಿಂದೆ ನನ್ನ ಗೆಳೆಯ ಪ್ರಶಾಂತಿನಾಥನಿಗೂ ಇಂತಹದ್ದೇ ಪ್ರಶ್ನೆ ಎದುರಾಗಿತ್ತು. ಆಗ ಅವನು ತನ್ನನ್ನು ಅರಿಯಲು ಪಟ್ಟ ಕಷ್ಟ ಹೇಳ ತೀರದ್ದು. ಊರೂರು ಅಲೆದ, ಪುಣ್ಯಧಾಮಗಳಿಗೆ ಭೇಟಿ ಕೊಟ್ಟ, ಪರದೇಶ ಸುತ್ತಿದ, ಸಾಧು-ಸಂತರನ್ನೂ ಭೇಟಿ ಮಾಡಿದ, ಚರ್ಚಿಸಿದ, ಚಿಂತಿಸಿದ. ಅವನ ತಲೆಗೂದಲುಗಳು ಬೆಳ್ಳಗಾದವು, ಚರ್ಮ ಸುಕ್ಕುಗಟ್ಟಿತು, ದೇಹ ಬಳಲಿ-ಬೆಂಡಾಯಿತೇ ವಿನಹ ಅವನ ಪ್ರಶ್ನೆಗಳಿಗೆ ಉತ್ತರಗಳು ಮಾತ್ರ ಸಿಗಲಿಲ್ಲ”. ಆಗ ಅವನು, ಈ ಎಲ್ಲಾ ಲೌಕಿಕ ಜಂಜಾಟಗಳನ್ನು ತ್ಯಜಿಸಿ, ಏಕಾಂತವನ್ನು ಬಯಸಿ ಭೂಮಂಡಲದ ಎಲ್ಲಾ ಅದ್ಭುತಗಳನ್ನೂ ತನ್ನೊಡಲಲ್ಲಿ ಅಡಗಿಸಿಕೊಂಡಿರುವ, ದಣಿದವರ ಬದುಕಿನಲ್ಲಿ ಚಮತ್ಕಾರವನ್ನು ಸೃಷ್ಟಿಸಬಲ್ಲ, ಸಾಕ್ಷಾತ್ ಪರಶಿವನ ಕೈಲಾಸದಂತೆ ಗೋಚರಿಸುವ ಹಿಮಾಲಯಕ್ಕೆ ಹೋದನಂತೆ. ಮೈಕೊರೆವ ಮಂಜುಗಡ್ಡೆಗಳ ಇಕ್ಕಟ್ಟಾದ ಗುಹೆಯೊಂದರಲ್ಲಿ ಮೂರುದಿನಗಳ ಅವಿರತ ಧ್ಯಾನದ ನಂತರ ಅವನೆಂದೂ ಊಹಿಸಿರದ ಪವಾಡವೊಂದು ನಡೆಯಿತಂತೆ
"ಮಗನೇ... ಮಗನೇ..." ಅನ್ನುವ ಆ ವಾಣಿ ಕಣ್ಣುಗಳನ್ನು ಮುಚ್ಚಿ ಹಿಮಾಲಯದ ಹಿಮಬಂಡೆಗಳ ನಡುವೆ ತನ್ನನ್ನು ಅರಿಯುವ ಪ್ರಯತ್ನದಲ್ಲಿದ್ದ ಅವನ ಕಣ್ಣುಗಳನ್ನು ತೆರಿಸಿತಂತೆ. ದೇಹದ ಮೇಲೊಂದು ತುಂಡುಡುಗೆ, ಕೈಯ್ಯಲ್ಲಿ ತ್ರಿಶೂಲದಂತಹ ಉದ್ದನೆಯ ಕೋಲು, ಕಮಂಡಲ, ಮೈತುಂಬಾ ರುದ್ರಾಕ್ಷಿಯನ್ನು ಕಂಡನಂತೆ. ವಿಭೂತಿಯಲ್ಲಿ ಮಿಂದೆದ್ದ ದೇಹ, ಭೂಮಿಯಿಂದ ಗಗನೆತ್ತರಕ್ಕೆ ಚಾಚಿಕೊಂಡಂತೆ ತೋರುತ್ತಿರುವ ಜಡೆ, ಸಹಸ್ರಾರು ವರುಷಗಳನ್ನು ದಾಟಿಬಂದ ಅಮರನಂತೆ ಗೋಚರಿಸುತ್ತಿದ್ದನಂತೆ ಆ ವ್ಯಕ್ತಿ. ಅವನ ಮುಖ ಕಾಂತಿಯನ್ನು ಕಂಡ ಪ್ರಶಾಂತಿನಾಥನಿಗೆ ಸಾಕ್ಷಾತ್ ಪರಶಿವನನ್ನೇ ಕಂಡಂತೆ ಕಣ್ಣುಗಳು ತುಂಬಿ ಬಂದವಂತೆ. ಗಳಗಳನೆ ಅಳುತ್ತ ಆ ವ್ಯಕ್ತಿಯ ಪಾದಗಳನ್ನು ಬಿಗಿಯಾಗಿ ಹಿಡಿದಪ್ಪಿ ಮಗುವಾದನಂತೆ ಅವನು. "ತಂದೆ ತಾವ್ಯಾರೆಂದು ನನಗೆ ಗೊತ್ತಿಲ್ಲ. ಆದರೆ ನನ್ನ ಕಣ್ಣುಗಳು ಭಗವಂತನನ್ನು ನೋಡುತ್ತಿವೆ. ತಮ್ಮ ಪಾದಗಳನ್ನು ಸ್ಪರ್ಶಿಸಿದ ನನ್ನ ಕೈಗಳು ಹಿಂದೆಂದು ಅನುಭವಿಸಿರದ ಸಾರ್ಥಕತೆಯನ್ನು ಹೊಂದುತ್ತಿವೆ. ನನ್ನ ಪಾದಗಳು ಈ ಲೌಕಿಕ ಜಗತ್ತಿನಿಂದ ಬಹು ಎತ್ತರಕ್ಕೆ ಜಿಗಿದಂತೆ ತೋರುತ್ತಿದೆ. ಆತ್ಮ ಪರಮಾತ್ಮರೊಂದಾದಾಗ ಆಗುವಂತ ಅನುಭವ, ಬದುಕಿನ ಸಾರ್ಥಕತೆಯ ಉತ್ತುಂಗಕ್ಕೇರಿದಂತಹ ತೃಪ್ತಿ ನನಗಾಗುತ್ತಿದೆ. ಈಗ ನನ್ನಲ್ಲಿ ಉಳಿದಿರುವ ಒಂದೇ ಆಕಾಂಕ್ಷೆ ಅದು ನನ್ನ ಅಂತ್ಯ..!" ಅಂದುಬಿಟ್ಟನಂತೆ ಪ್ರಶಾಂತಿನಾಥ.
ದೈತ್ಯ ದೇಹವನ್ನು ಬಾಗಿಸಿ, ತನ್ನ ಕಮಲ ಸ್ಪರ್ಶಿ ಕೈಗಳಿಂದ ಪ್ರಶಾಂತಿನಾಥನನ್ನು ಮೇಲೆತ್ತಿದನಂತೆ ಆ ವ್ಯಕ್ತಿ. ಅವನ ಮುಖವನ್ನು ತನ್ನ ಎದೆಗೊತ್ತಿ ತಾಯಿ ಮಗುವನ್ನು ಸಂತೈಸುವಂತೆ ತಲೆ ಸವರುತ್ತ "ನಿನ್ನನ್ನು ನೀನು ಅರಿಯಲು ಜಗತ್ತು ಸುತ್ತುವ ಅವಶ್ಯಕತೆಯಿಲ್ಲ. ಸಾಧು ಸಂತರ ಉಪದೇಶ ಬೇಕಾಗಿಲ್ಲ, ಚರ್ಚೆಬೇಡ, ಚಿಂತನೆ ಬೇಡ. ನನ್ನನ್ನು ಕಂಡಾಗ ನಿನಗಾದ ಅನುಭವ ನಿನ್ನದು. ಗುರುವನ್ನೇ ದೇವರಂತೆ ಪೂಜಿಸುವ ವಿಧ್ಯಾರ್ಥಿಯಾಗಿ ನನ್ನ ಪಾದಸ್ಪರ್ಶಿಸಿ ನೀನು ಶಿಶ್ಯನಾದೆ. ನನ್ನನ್ನು ಬಿಗಿದಪ್ಪಿ ತಾಯಿಯ ಮಡಿಲನ್ನೇ ಸ್ವರ್ಗದಂತೆ ಅನುಭವಿಸುವ ಪುಟ್ಟ ಕಂದಮ್ಮನಾದೆ. ದುಖಿಃಯಾದೆ, ಸುಖಿಯಾದೆ, ಸಖನಾದೆ-ಹಸನ್ಮುಖನಾದೆ. ಲೌಕಿಕ ಬದುಕಿನ ಕಾಮನೆಗಳನ್ನು ತ್ಯಜಿಸಿ ಅಂತ್ಯಬಯಸಿದ ನೀನು ಶೂನ್ಯನಾದೆ. ಇದೇ ನಿಜವಾದ ನೀನು. ಹಸಿದವರಿಗೆ ಅನ್ನ ನೀಡಿದರೆ ಅನ್ನದಾತ, ನೊಂದವರನ್ನು ಸಂತೈಸಿದರೆ ಕರುಣಾಮಯಿ, ದರ್ಪ ತೋರಿದರೆ ಅಹಂಕಾರಿ. ಶರಣಾದರೆ ಶಿಷ್ಯ, ಜ್ಞಾನಾರ್ಜನೆ ಗೈದರೆ ವಿದ್ಯಾದಾತ, ಅಜ್ಞಾನಿಯಾದರೆ ಮೂರ್ಖ. ಇನ್ನೊಂದು ಜೀವಕ್ಕೆ ಕೆಡಕು ಮಾಡಿದರೆ ಕ್ರೂರಿ. ಸತ್ಯ, ಶಾಂತಿ, ಧರ್ಮಕ್ಕಾಗಿ ಅಧರ್ಮದ ವಿರುದ್ದ ಹೋರಾಡಿದರೆ ಶೂರ. ಸೇವೆ ಮಾಡಿದರೆ ಸೇವಕ, ನಿಸ್ವಾರ್ಥನಾಗಿ, ಪ್ರಾಮಾಣಿಕತೆಯಿಂದ ಮುಂದೆನಿಂತರೆ ನಾಯಕ. ನೀನೇನು ಎನ್ನುವುದನ್ನು ನೀನೇ ನಿರ್ಧರಿಸು. ಸದ್ಗುಣಿಯಾದರೆ ದೈವತ್ವ ಪಡೆದು ಸ್ವರ್ಗ ಸೇರುತ್ತೀಯಾ, ದುರ್ಗುಣಿಯಾದರೆ ರಾಕ್ಷಸನಾಗಿ ನರಕ ಸೇರುತ್ತೀಯಾ. ನೀನು ಯಾರೆಂದು ನನಗೂ ಗೊತ್ತಿಲ್ಲ.’
ನಿನ್ನನ್ನು ನೀನು ಅರಿಯಲು ಹಿಮಾಲಯಕ್ಕೆ ಬರಬೇಕಾಗಿಲ್ಲ. ಸದ್ಗುಣಿಯಾಗು, ನಿನ್ನ ಬದುಕಿನ ಪ್ರತಿ ಗಳಿಗೆಯೂ ನನ್ನನ್ನು ಕಂಡಾಗ ಸಿಕ್ಕ ಅನುಭವಗಳನ್ನೇ ಕೊಡುತ್ತವೆ. ತಂದೆ-ತಾಯಿ, ಬಂಧು-ಬಳಗವನ್ನು ಬಿಟ್ಟು ನಿನ್ನಲ್ಲೇ ತನ್ನ ನಂಬಿಕೆ ಪ್ರೀತಿಯನ್ನಿಟ್ಟು ಜೊತೆಯಾದ ನಿನ್ನ ಹೆಂಡತಿಯಲ್ಲಿ ನನ್ನನ್ನು ನೋಡು. ಕೆಂಪು ಕೆನ್ನೆಯ ನಿನ್ನ ಪುಟ್ಟ ಕಂದಮ್ಮಗಳಲ್ಲಿ, ಬದುಕಿನ ಬವಣೆಗಳ ಭಾರ ಹೊತ್ತು ನಿನ್ನನ್ನು ಬೆಳೆಸಿ-ಬೆಳಗಿಸಿದ ನಿನ್ನ ಪೂಜ್ಯ ತಂದೆ ತಾಯಿಯರಲ್ಲಿ ನನ್ನನ್ನು ಕಾಣು. ಕಷ್ಟವೆಂದು ಕೈಚಾಚುವವರಲ್ಲಿ, ನಿಷ್ಠೆಯಿಂದ ದುಡಿಯುವವರಲ್ಲಿ, ನ್ಯಾಯದಲ್ಲಿ, ಧರ್ಮದಲ್ಲಿ ನಾನಿದ್ದೇನೆ. ಅನ್ನ ನೀಡುವ ಭೂಮಿ, ದಾಹ ತೀರಿಸುವ ನೀರು, ನಿನ್ನ ಉಸಿರಾದ ಗಾಳಿ ನನ್ನವು. ಕಾಮ, ಕ್ರೋಧ, ಲೋಭ, ಮೋಹ, ಮಧ, ಮಾತ್ಸರ್ಯಗಳನ್ನು ಮೀರಿದ ವ್ಯಕ್ತಿ ನೀನಾದರೆ ಮುಕ್ತಿ ನಿನ್ನದಾಗುತ್ತದೆ". ಅಂದರಂತೆ ಆ ವ್ಯಕ್ತಿ. ಅವರ ಮಾತುಗಳನ್ನು ಕೇಳಿದನಂತರ ಮಣಭಾರವಾಗಿದ್ದ ಪ್ರಶಾಂತಿನಾಥನ ಮನಸ್ಸು ಹಗುರಾಗಿ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೊಂದರ ಚೈತನ್ಯದ ಅನುಭವವಾಯಿತಂತೆ ಅವನಿಗೆ. ಕಣ್ಣುತೆರೆದಾಗ ತಾನು ಧ್ಯಾನಭಂಗಿಯಲ್ಲೇ ಕುಳಿತಿದ್ದದ್ದನ್ನು ಕಂಡು ಆಶ್ಚರ್ಯವಾಯಿತಂತೆ.
"ಹಿಮಾಲಯದಿಂದ ಹಿಂತಿರುಗಿದ ಪ್ರಶಾಂತಿನಾಥ ನನ್ನನ್ನು ಭೇಟಿಯಾದಾಗ ಆಪ್ತ ಸ್ನೇಹಿತನಾಗಿದ್ದರಿಂದಲೂ ಏನೋ ನನಗೆ ಅವನ ಬದುಕಿನಲ್ಲಿ ನಡೆದಿದ್ದ ಈ ಘಟನೆಯನ್ನು ಹೇಳಿದ್ದ. ನಾನು ಹಿಂದೆಂದೂ ನೋಡಿರದ ಪ್ರಶಾಂತಿನಾಥ ಅವನಾಗಿದ್ದ. ಅವತ್ತು ಅವನಲ್ಲಿ ಅದೇನೋ ಹೊಸತನ ಗೋಚರಿಸಿದ್ದಂತು ಸತ್ಯ. ಇದಾದ ನಂತರ ಅವನೆಂದೂ ನನಗೆ ಸಿಗಲೇ ಇಲ್ಲ. ಇತ್ತೀಚೆಗೆ ಅವನು ತೀರಿಕೊಂಡ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ, ತಮಿಳುನಾಡಿನ ಕನ್ಯಾಕುಮಾರಿಯ ಒಂದು ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿ ಸಾವಿರಾರು ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ಎನ್ನುವುದನ್ನು ತಿಳಿದುಕೊಂಡೆ". ಎಂದ ಅಜ್ಜ ಜಗಲಿಯತ್ತ ನಡೆದರು.
ಅಜ್ಜ ಹೇಳಿದ ಕಥೆ ಪ್ರವೀಣನ ಮುಖದಲ್ಲಿ ಎನೋ ಒಂದು ಹೊಸ ಅನುಭವ ಉತ್ಸಾಹವನ್ನು ತುಂಬಿತು. ತಾನು ಯಾರೆನ್ನುವ ಪ್ರಶ್ನೆಗೆ ಉತ್ತರವನ್ನು ತಾನೇ ಕಂಡುಕೊಳ್ಳಬೇಕೆನ್ನುವುದರ ಅರಿವು ಅವನಿಗಾಗಿತ್ತು.
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************