ನಿಷ್ಪಾಪಿ ಸಸ್ಯಗಳು : ಸಂಚಿಕೆ - 82
Thursday, December 26, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 82
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಕಳೆದ ವಾರ ನೀವು ಕಟ್ಟತ್ತಿಲ ಹೊಳೆ ಬದಿ ಇನ್ಸುಲಿನ್ ಗಿಡವನ್ನು ಗುರುತಿಸಿದ್ದನ್ನು ಜ್ಞಾಪಕ ಇಟ್ಟುಕೊಂಡಿರುವಿರಲ್ಲವೇ? ಇನ್ನು ಆ ಗಿಡ ಎಲ್ಲಾದರೂ ಕಾಣಸಿಕ್ಕರೆ ಅದರ ಬಳಿ ಹೋಗಿ ಮಾತನಾಡಿಸುವಿರಲ್ಲವೇ?. ಆಗ ಆ ನಿಷ್ಪಾಪಿ ಸಸ್ಯಕ್ಕೂ ಆನಂದವಾಗುತ್ತದೆ. ಇಂದು ನಾವು ಸಾಲೆತ್ತೂರಿನ ಹತ್ತಿರದ ಪಾಣಾಜೆ ಕೋಡಿ ವೆಂಕಪ್ಪ ಪಂಡಿತರ ಮನೆಗೆ ಹೋಗೋಣ ಬನ್ನಿ. ಪಾಣಾಜೆಕೋಡಿ ಮಂಚಿಗೂ ಹತ್ತಿರದ ಒಂದು ಸ್ಥಳನಾಮ. ವೆಂಕಪ್ಪ ಪಂಡಿತರೆಂದರೆ ಪಾರಂಪರಿಕ ನಾಟಿ ವೈದ್ಯರು. ಅವರ ತಂದೆ ಮಾತ್ರವಲ್ಲ ಅವರ ಅಜ್ಜನೂ ನಾಟಿ ವೈದ್ಯರಾಗಿ ಹೆಸರು ಪಡೆದವರಂತೆ. ಇವರೂ ನಾಟಿ ವೈದ್ಯರೇ ಆಗಿರುವುದರಿಂದ ಗಿಡಮೂಲಿಕೆಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ ಗೊತ್ತಾ!
ಇಲ್ಲಿ ನೋಡಿ ಮಕ್ಕಳೇ.. ಮಾರ್ಗದಿಂದ ಇವರ ಮನೆಗೆ ಹೋಗಲು ಇಳಿಜಾರಾದ ದಾರಿ ಇದೆ. ಜಾಗ್ರತೆಯಾಗಿ ಇಳಿಯಿರಿ. ದಾರಿಗೆ ಕೆಂಪು ಕಲ್ಲಿನ ಮೆಟ್ಟಿಲುಗಳನ್ನು ಮಾಡಿದ್ದರೂ ಮೆಟ್ಟಿಲ ಸಂದಿಗಳಲ್ಲಿ ಬಿಳಿ ಹೂಗಳನ್ನು ಹೊತ್ತ ಒಂದಡಿಗಿಂತ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರುವ ಗಿಡಗಳ ರಾಶಿಯೇ ಇದೆಯಲ್ಲವೇ? ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಒಣಗುತ್ತಿರುವ ಹುಲ್ಲಿನ ನಡುವೆಯೂ ಇದೇ ಗಿಡದ ಕಾರುಬಾರು!. ಹೇಳಿಕೇಳಿ ಪಂಡಿತರ ಮನೆ. ಮನೆಯೆದುರಿನ ಅಂಗಳದ ಸುತ್ತಲೂ ಇದೇ ಗಿಡ ಕಾಣಿಸುತ್ತಿದೆ ನೋಡಿದಿರಾ ? ಈ ಗಿಡಗಳನ್ನು ಗಮನಿಸಿರಿ.
ತುದಿಯಿಂದ ಬುಡದವರೆಗೂ ಹಲವಾರು ಶಾಖೆಗಳಿವೆ. ಎಲೆಗಳು ಕಾಣದಂತೆ ಹೂಗಳು ಆವರಿಸಿ ಗಿಡವೇ ನೆಲಕ್ಕೊರಗಿದೆ ಗಮನಿಸಿದಿರಾ! ಕಾಂಡವು ತೆಳ್ಳಗಿದ್ದು ಹಸಿರು ಕಂದು ಬಣ್ಣದಲ್ಲಿದೆ. ಹಸಿರು ಹಸಿರಾದ ಅಂಡಾಕಾರದ ಪರ್ಯಾಯ ಜೋಡಣೆಯ ಪುಟಾಣಿ ಎಲೆಗಳನ್ನು ಗಮನಿಸಿ. ಈ ಸಸ್ಯವೊಂದು ಅಪರೂಪದ ಗಿಡಮೂಲಿಕೆ ಯಾಗಿದೆ. ಆಯುರ್ವೇದದಲ್ಲಿ ಅಶ್ಮಂತಕ, ಪಾಶಾಣ ಭೇದ, ಕನ್ನಡದಲ್ಲಿ ಬಿಳಿ ಹಿಮ್ಡಿ ಸೊಪ್ಪು, ಪರ್ವತ ಗಂಟು ಹುಲ್ಲು ಎನ್ನುವರು. Aerva lanata ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಈ ಸಸ್ಯ ಅಮರಂಥೇಸಿ ಕುಟುಂಬದ ಸದಸ್ಯತನ ಪಡೆದಿದೆ. ಕುರುಚಲು ಜಾತಿಯ ಸಣ್ಣ ಸಸ್ಯವಾದ ಪಾಶಾಣ ಭೇದ ರಸಭರಿತ ದೀರ್ಘಕಾಲಿಕ ಮೂಲಿಕೆ. ಆಫ್ರಿಕಾ ಮತ್ತು ಏಷ್ಯಾದ ಉಷ್ಣವಲಯಕ್ಕೆ ಸ್ಥಳೀಯವಾಗಿದೆ. ಭಾರತದ ಬಯಲುಸೀಮೆಯ ಎಲ್ಲೆಡೆ, ಪರ್ವತದ ಇಳಿಜಾರು, ಕಲ್ಲು ಬಂಡೆಗಳ ನಡುವೆ, ಕರಾವಳಿಯಲ್ಲಿ ಪೊದೆಗಳ ನಡುವೆ ಪಾಶಾಣ ಭೇದಿ ಕಾಣಸಿಗುತ್ತದೆ. ಇದನ್ನೊಂದು ಸಾಮಾನ್ಯ ಕಳೆಯಾಗಿ ಪರಿಗಣಿಸಿದರೂ ಬ್ಯುಕಲ್ಲನ್ ಹಾಗೂ ಬೂರ್ ಎಂಬ ವಾಣಿಜ್ಯ ಹೆಸರಿನಲ್ಲಿ ಮಾರಾಟವಾಗುತ್ತದೆ.
ಪಾಶಾಣ ಬೇರು ಎಂದು ತುಳುಭಾಷೆಯಲ್ಲಿ ಪ್ರಸಿದ್ಧವಾಗಿದ್ದು ಭೇದಿ ಸೊಪ್ಪೆಂದೂ ಕರೆಯಲ್ಪಡುವ ಈ ಸಸ್ಯದ ಬೇರಿಗೆ ಕರ್ಪೂರದ ಪರಿಮಳವಿದೆ. ಪಾಶಾಣ ವೆಂದರೆ ಕಲ್ಲು, ಭೇದ ವೆಂದರೆ ಒಡೆದುಹಾಕು ಎಂದರ್ಥ. ಈಗ ಈ ಗಿಡದ ಹೆಸರಿನ ಅರ್ಥ ನಿಮಗಾಗಿರಬೇಕಲ್ವಾ? ಹ್ಹಾಂ... ಕಲ್ಲನ್ನೂ ಒಡೆದುಹಾಕಬಲ್ಲ ಶಕ್ತಿ ಈ ಸಸ್ಯಕ್ಕಿದೆ ಎಂದು ನಮ್ಮ ಹಿರಿಯರು ತಲೆತಲಾಂತರಗಳಿಂದ ಕಂಡುಕೊಂಡಿದ್ದಾರೆ. ಮಕ್ಕಳೇ. ಕಲ್ಲೆಂದರೆ ನಮ್ಮ ಪರಿಸರದ ಕಲ್ಲೇನಲ್ಲ! ಮೂತ್ರಕೋಶದಲ್ಲಿ ರೂಪುಗೊಳ್ಳುವ ಕಲ್ಲನ್ನು ಒಡೆಯುವ ಕಾರ್ಯವನ್ನು ಈ ಸಸ್ಯ ನಡೆಸುವುದರಿಂದಲೇ 'ಪಾಶಾಣ ಭೇದ' ಎಂಬ ಹೆಸರು ಬಂದಿದೆ.
ಮಕ್ಕಳೇ, ಈ ಸಸ್ಯದ ಎಲೆ, ಕಾಂಡ, ಬೇರು ಎಲ್ಲವೂ ಅತ್ಯಪೂರ್ವ ಔಷಧಿಯಾಗಿದೆ. ಕಹಿ ಮತ್ತು ಒಗರು ಗುಣದ ರಸ ಬಸ್ತಿ ಶೋಧನದಲ್ಲಿ ಬಳಕೆಯಾಗುತ್ತದೆ. ಮೂತ್ರಕೋಶ ಶುದ್ಧಗೊಳಿಸುವ ಪ್ರಧಾನ ಸ್ವಭಾವ ಇದಕ್ಕಿದೆ.
ಹೊಟ್ಟೆ ಹುಳದ ಬಾಧೆ, ಅತಿಸಾರ, ಭೇದಿ, ಮೂಲವ್ಯಾಧಿ, ಹೃದ್ರೋಗ, ಮಧುಮೇಹ, ಸ್ತ್ರೀರೋಗ ಪ್ಲೀಹದ ನೋವು, ಕರುಳಿನ ಹುಣ್ಣಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಅಸ್ತಮಾ ಹಾಗೂ ಬೊಜ್ಜು ಕರಗಿಸಿ ತೂಕ ಇಳಿಸಲೂ ಕೂಡ ಸಹಕಾರಿಯಾಗಿದೆ. ಲ್ಯುಕೇಮಿಯ, ಪ್ರೊಸ್ಪೇಟ್, ಗರ್ಭಾಶಯದ ಕೊರಳ ಭಾಗದ ಕ್ಯಾನ್ಸರ್ ಬಾರದಂತೆಯೂ ಸಹಕರಿಸಬಲ್ಲದು. ರಕ್ತದ ಯೂರಿಯಾ, ಕ್ರಿಯಾಟನಿನ್ ಅಂಶ ಕಡಿಮೆಮಾಡಲು ಹಾಗೂ ಮೂತ್ರಪಿಂಡದ ರಕ್ಷಣಾ ಕಾರ್ಯದಲ್ಲೂ ಸಹಕರಿಸುವ ಗುಣ ಹೊಂದಿದೆ. ಈ ನಿಷ್ಪಾಪಿ ಸಸ್ಯವನ್ನು ಸುಟ್ಟು ಬರುವ ಹೊಗೆಯನ್ನು ಕೆಮ್ಮು, ನೋಯುವ ಗಂಟಲಿನ ಚಿಕಿತ್ಸೆಗೆ ಬಳಸುತ್ತಾರೆ. ಗಿಡಗಳನ್ನು ನೆರಳಿಗೆ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡೂ ಅಸ್ತಮ ಉಲ್ಬಣಿಸಿದಾಗ ಬಳಸುವರು.
ಕೋಳಿಗಳಿಗೆ, ಪ್ರಾಣಿಗಳಿಗೆ ಆಹಾರವಾಗುವ ಪಾಶಾಣ ಭೇದದ ಸೊಪ್ಪನ್ನು ಖಾದ್ಯವಾಗಿ, ಸೂಪ್, ಚಟ್ನಿಯಾಗಿಯೂ ಬಳಸುವರು. ಕೇರಳದಲ್ಲಿ 'ಪಾಪ ಕಾರ್ಯಗಳನ್ನು ತಡೆಯುವ ದಶ ಪುಷ್ಪ' ಗಳೆಂದು ಗುರುತಿಸುವ ಹತ್ತು ಹೂಗಳಲ್ಲಿ ಪಾಶಾಣಭೇದ ದ ಹೂವೂ ಸೇರಿದೆ! ತಮಿಳುನಾಡಿನ ಪೊಂಗಲ್, ಆಂದ್ರದ ಸುಗ್ಗಿ ಹಬ್ಬವಾದ ಸಂಕ್ರಾಂತಿಯಲ್ಲೂ ಇದರ ಹೂಗಳನ್ನು ಅಲಂಕಾರಕ್ಕಾಗಿ ಬಳಸುವರು.
ಮಕ್ಕಳೇ, ಇಂದು ನಾವು ನಾಟಿ ವೈದ್ಯರ ಮನೆಯ ದಾರಿಯಲ್ಲಿರುವ ಪಾಶಾಣ ಭೇದಿ ಎಂಬ ಅಪರೂಪದ ಸಸ್ಯದ ಪರಿಚಯ ಮಾಡಿಕೊಂಡೆವು. ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************