ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 60
Wednesday, December 25, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 60
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಮೊನ್ನೆ ಪ್ರಬಲವಾಗಿರುವ ಗಾಮಾ ಮತ್ತು ಕ್ಷ ಕಿರಣಗಳ ಬಗ್ಗೆ ಮಾತನಾಡುತ್ತಿದ್ದೆವು. ಕಿರಣಗಳ ಶಕ್ತಿ ನಿರ್ಧಾರವಾಗುವುದು ಅವುಗಳ ಕಂಪನಾಂಕದ ಮೇಲೆ. ಕಂಪನಾಂಕ ಮತ್ತು ತರಂಗಾಂತರ ಪರಸ್ಪರ ವಿಲೋಮ ಅನುಪಾತ ಅಂದರೆ ಒಂದು ಹೆಚ್ಚಾದರೆ ಇನ್ನೊಂದು ಕಡಿಮೆ. ನಾವು ದೂರಗಳನ್ನು ಅಳೆಯಲು ಬೇರೆ ಬೇರೆ ಮಾಪನಗಳನ್ನು ಬಳಸುತ್ತೇವೆ. ಇವು ಒಂದೇ ಅಳತೆಯ ಗುಣಕಗಳಷ್ಟೇ. ಎರಡು ನಕ್ಷತ್ರಗಳ ನಡುವಿನ ದೂರವನ್ನು ಅಳೆಯುವಾಗ ಬೆಳಕಿನ ವರ್ಷವನ್ನು ಬಳಸುತ್ತೇವೆ (light year). ಅಂದರೆ ಬೆಳಕು ಒಂದು ವರ್ಷದಲ್ಲಿ ಸೆಕುಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುವ ದೂರ. ನಮಗೆ ಅತ್ಯಂತ ಸಮೀಪದ ನಕ್ಷತ್ರವಾದ ಆಲ್ಫಾ ಸೆಂಟಾರಿ ನಮ್ಮಲ್ಲಿಂದ ಸುಮಾರು ನಾಲ್ಕೂವರೆ ಬೆಳಕಿನ ವರ್ಷ ದೂರದಲ್ಲಿರುತ್ತವೆ. ಅಂದರೆ ಆಲ್ಫಾ ಸೆಂಟಾರಿಯಿಂದ ಇವತ್ತು ಅಂದರೆ 25/12/2024 ಹೊರಟ ಬೆಳಕಿನ ಕಿರಣ ಭೂಮಿಯನ್ನು ತಲುಪುವುದು 24/06/2029 ಕ್ಕೆ. ಅಂದರೆ ನೀವು ಇವತ್ತು ನೋಡುವ ಆಲ್ಫಾ ಸೆಂಟಾರಿ ಇವತ್ತಿನದಲ್ಲ 24/06/ 2020 ನೆಯ ತಾರೀಖಿನದ್ದು. ವ್ಯೋಮವನ್ನು ಬಿಟ್ಟು ನಮ್ಮ ಸೌರವ್ಯೂಹದೊಳಗೆ ಬಂದರೆ ದೂರವನ್ನು ಖಗೋಳಮಾನದಲ್ಲಿ ಹೇಳುತ್ತೇವೆ. ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು 8 ನಿಮಿಷ 20 ಸೆಕೆಂಡ್ ಬೇಕು. ಈ ದೂರವೆ ಖಗೋಳಮಾನ (astromical unit AU). ಉದಾಹರಣೆಗೆ ಬುಧ ಮತ್ತು ಸೂರ್ಯನ ನಡುವಿನ ದೂರ 0.33 ಖ ಮಾ. ಅಲ್ಲಿಂದ ಭೂಮಿಗೆ ಬಂದರೆ ಎರಡು ಸ್ಥಳಗಳ ನಡುವಿನ ಅಂತರವನ್ನು ನಾವು ಕಿಲೋಮೀಟರ್ ನಲ್ಲಿ ಅಳೆದರೆ ಅಮೇರಿಕನ್ನರಿಗೆ ಮೈಲಿ ಇದೆ. ನಿಮ್ಮ ಪ್ಯಾಂಟಿಗೆ ಬಟ್ಟೆ ತೆಗೆದುಕೊಳ್ಳಬೇಕಾದಾಗ ನೀವು ಮೀಟರ್ ಗೆ ಬದಲಾಗುತ್ತೀರಿ. ಇನ್ನು ಜೀವಕೋಶಗಳ ಗಾತ್ರ ಅಳೆಯುವಾಗ ಮೈಕ್ರಾನ್ ಅಥವಾ ಮೈಕ್ರೋಮೀಟರ್ ಗೆ ಬದಲಾಗುತ್ತೀರಿ. ಮೈಕ್ರೋಮೀಟರ್ ಎಂದರೆ 10 ರ ಘಾತ -6 ಅಥವಾ 0.000001. ಅದೇ ಅಧಿಕ ಶಕ್ತಿಯ ವಿದ್ಯುತ್ಕಾಂತೀಯ ತರಂಗಗಳ ತರಂಗಾಂತರವನ್ನು ಹೇಳುವಾಗ ನಾವು ನ್ಯಾನೋ ಮೀಟರ್ ಗಳಲ್ಲಿ (nanometres ಅಂದರೆ 10 ರ ಘಾತ -9 ಅಥವಾ 0.000000001) ಹೇಳುತ್ತೇವೆ. ಈಗ ಪ್ರಬಲವಾದ ಗಾಮಾ ಕಿರಣಕ್ಕೆ ಬಂದರೆ ಅದರ ತರಂಗಾಂತರ 0.01/ನ್ಯಾನೋ ಮೀಟರ್ ಗಳಿಗಿಂತ ಕಡಿಮೆ. ಅದೇ ಅದರ ಕಂಪನಾಂಕವನ್ನು ಕೇಳುತ್ತೀರಾ? ಕಂಪನಾಂಕಗಳನ್ನು ಹೇಳುವಾಗ ಪ್ರತಿ ಸೆಕೆಂಡಿಗೆ ಎಷ್ಟು ಆವರ್ತಗಳು (cycles/sec) ಎಂದು ಹೇಳುವುದು. ಈ cycles/sec ಅನ್ನು ಮೊದಲ ಬಾರಿಗೆ ರೇಡಿಯೋ ತರಂಗಗಳನ್ನು ಪ್ರಸಾರ ಮಾಡಿದ ಮತ್ತು ಅವುಗಳನ್ನು ಸ್ವೀಕರಿಸಿದ ಹೆನ್ರಿಚ್ ಹರ್ಟ್ಜ್ (Heinrich Hutrz) ನ ಸ್ಮರಣಾರ್ಥ ಹರ್ಟ್ಝ್ Hz) ಎನ್ನುತ್ತೇವೆ. ಗಾಮಾ ಕಿರಣದ ಕಂಪನಾಂಕ 3x 10 ರ ಘಾತ 19 ಕ್ಕಿಂತ ಹೆಚ್ಚು. ಅಂದರೆ 3 ರ ನಂತರ 19 ಸೊನ್ನೆ ಹಾಕಿದರೆ ಎಷ್ಟು ದೊಡ್ಡ ಸಂಖ್ಯೆಯಾಗುತ್ತದೋ ಅದು. ಅದೇ ಕ್ಷ ಕಿರಣದ ತರಂಗಾಂತರ 0.01 ರಿಂದ 10 nm ಗಳು ಮತ್ತು ಕಂಪನಾಂಕ 3x10 ರ ಘಾತ 19 ರಿಂದ 10 ರ ಘಾತ 16 ವರೆಗೆ.
ಇಲ್ಲಿಂದ ಅಲ್ಲಿಯ ವರೆಗೆ ಎಂದರೆ ಈ ಕಿರಣಗಳು ಒಂದೇ ಅಲೆಯುದ್ದವನ್ನು ಹೊಂದಿರುವ ಒಂದೇ ಅಲೆಯಲ್ಲ ಬದಲಾಗಿ ಬೇರೆ ಬೇರೆ ಅಲೆಯುದ್ದವುಳ್ಳ ಅಲೆಗಳ ಸಮೂಹ ಎಂಬುದು ನಿಮಗೆ ಅರ್ಥವಾಗಿರಬಹುದು ಅಂದುಕೊಳ್ಳುತ್ತೇನೆ.
ನೀವು ಹಾಗೆ ಅಂದುಕೊಂಡಿದ್ದರೆ ನಮ್ಮ ಅಲೆಯುದ್ದ (wavelength) ಏಕರೂಪವಾಗಿದೆ ಅಂದುಕೊಳ್ಳಬಹುದು. ಓಹ್ ಇವತ್ತು ಅಳತೆಯಲ್ಲಿ ಕಳೆದುಹೋದೆವು ಹೊಸ ವಿಷಯಗಳು ಮುಂದಿನ ವಾರ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************