-->
ಪಯಣ : ಸಂಚಿಕೆ - 23 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 23 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 23 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

 ಈ ವಾರದ ಪಯಣದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಗೆ ಪ್ರವಾಸ ಬೆಳೆಸೋಣವೇ.....        
  'ಕನಕಗಿರಿ' ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿನ ಅತಿ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳವಾಗಿದೆ.  
     ಪೌರಾಣಿಕವಾಗಿ ಇದು ಕನಕನೆಂಬ ಮುನಿ ತಪಸ್ಸು ಮಾಡಿದ ಸ್ಥಳ. ಚಾರಿತ್ರಿಕವಾಗಿ ಇಲ್ಲಿ 300ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಅದರಲ್ಲಿ ಕನಕಾಚಲ ದೇವಾಲಯ ಭವ್ಯವಾಗಿದೆ. ಇದರ ರಚನೆ ವಿಜಯನಗರದ ರಾಜ ಪ್ರೌಢದೇವರಾಯನ ಸೈನ್ಯಾಧಿಕಾರಿಯಾಗಿದ್ದ ಪರಸಪ್ಪ ನಾಯಕನಿಂದ ಆಯಿತು.

       ಇದರ ವಿವರಣೆ ಶ್ರೀಕೃಷ್ಣದೇವರಾಯನ "ಅಮುಕ್ತಮೌಲ್ಯದ" ಗ್ರಂಥದಲ್ಲಿ ಕೂಡ ಇದೆ. ಈ ದೇವಾಲಯದ ಭವ್ಯ ಮಹಾದ್ವಾರ ಮತ್ತು ಗೋಪುರ ಬಹುದೂರದಿಂದಲೇ ಕಾಣಬಹುದು. ವಿಜಯನಗರ ಶಿಲ್ಪದ ಈ ದೇವಸ್ಥಾನದ ನೋಟ ಕಣ್ಣಿಗೆ ಒಂದು ಹಬ್ಬವೇ ಸರಿ. ಇಲ್ಲಿಯ ನಯವಾದ ಶಿಲ್ಪ ಕಲಾಕೌಶಲ್ಯ, ವಿಶಾಲವಾದ ಮಂಟಪಗಳು, ತುಂಬುಗಾತ್ರದ ಕಂಬಗಳು ಒಂದನ್ನೊಂದು ಮೀರಿಸುವಂತಿದೆ. ಇಲ್ಲಿನ ಕಂಬಗಳ ಮೇಲೆ ಹರಿ ಚರಿತ್ರೆಯನ್ನು ಕೆತ್ತನೆ ಮಾಡಲಾಗಿದೆ. ಈ ದೇವಾಲಯದ ಮದ್ಯರಂಗ (ನಾಟ್ಯಶಾಲೆ) 34 x 54 ಅಡಿ ವಿಸ್ತಾರದ ಅತ್ಯಂತ ಸುಂದರ ಜಾಗ, ಕಪ್ಪು ಕಲ್ಲಿನಲ್ಲಿ ರಚಿಸಿದ ರಾಜರಾಣಿಯರ ಮೂರ್ತಿಗಳು, ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣ ವರ್ಣರಂಜಿತ ಪ್ರತಿಮೆಗಳೂ ಇಲ್ಲಿಯ ಕಲಾ ನೈಪುಣ್ಯತೆಯನ್ನು ಜಗತ್ತಿಗೆ ಸಾರಿ ಹೇಳುತ್ತಿವೆ.

       ಇಲ್ಲಿಯ ಮತ್ತೊಂದು ಆಕರ್ಷಣೆ ರಾಜವೆಂಕಟಪ್ಪನ ಬಾವಿ, ಬಾವಿಯೊಳಗಿಳಿಯಲು ಗ್ರಾನೈಟ್ ಕಲ್ಲಿನ ಪಾವಟಿಕೆಗಳಿವೆ. ಬಾವಿಯ ಸುತ್ತಲೂ ಕಲಾತ್ಮಕ ಮಂಟಪವಿದೆ. ಮಂಟಪದ ಮೇಲು ಅಂತಸ್ತಿನಲ್ಲಿ ಮುಸ್ಲಿಂ ಶೈಲಿಯಲ್ಲಿ ನಿರ್ಮಿಸಲಾಗಿರುವ ಜಾಲಂದ್ರಗಳಿವೆ. ಈ ಬಾವಿಯ ಮಂಟಪದ ಎರಡು ಕಡೆಗಳಲ್ಲಿ ಸಿಂಹದ ಮುಖಗಳಿವೆ. ಸಿಂಹದ ತೆರೆದ ಬಾಯಿಯಲ್ಲಿ ಕಲ್ಲುಗುಂಡೊಂದ್ದಿದ್ದು ಅದನ್ನು ಒಳಗಿನಿಂದಲೇ ಉರುಳಿಸಬಹುದು. ಹೊರಗೆ ತೆಗೆಯುವಂತಿಲ್ಲ. 

       ಒಟ್ಟಿನಲ್ಲಿ ಈ ದೇವಾಲಯ, ಮಂಟಪ, ಬಾವಿ ಸಂದರ್ಶನ ಯೋಗ್ಯ. ಇದರಿಂದಲೇ "ಕಣ್ಣಿದ್ದವರು ಕನಕಗಿರಿ ನೋಡಿ'' ಎಂಬ ಗಾದೆ ಹುಟ್ಟಿರುವುದು. ಈ ಕನಕಾಚಲ ದೇವಸ್ಥಾನ ವಾಸ್ತುಶಿಲ್ಪದ ದೃಷ್ಟಿಯಿಂದ ಬಲುಸುಂದರ ರಚನೆ. ವಿಸ್ತಾರವಾದ ಒಳಾಂಗಣ, ಬೃಹತ್ ಕಂಬಗಳು, ಗೋಪುರ, ದೇವಾಲಯದ ಗೋಡೆಗಳ ಮೇಲೆ ಕೆತ್ತಿದ ಮೂರ್ತಿಗಳು, ಕಪ್ಪುಶಿಲೆಯ ರಾಜರಾಣಿಯರ ಮೂರ್ತಿಗಳು ಇತ್ಯಾದಿ. 

      ಸೇರುವ ಬಗೆ : ಗಂಗಾವತಿ ಲಿಂಗಸೂಗೂರು ರಸ್ತೆ, ಗಂಗಾವತಿಗೆ 25 ಕಿಮೀ, ಬೆಂಗಳೂರಿಗೆ 374 ಕಿಮೀ, ಗಂಗಾವತಿ ಜೇವರ್ಗಿಗಳ ಮದ್ಯದ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು.
"ಕಣ್ಣಿದ್ದವರು ಕನಕಗಿರಿ ನೋಡಿ" - ಎಂಬ ಮಾತಿಗೆ ಪೂರಕವಾಗಿ ಭವ್ಯ ಶಿಲ್ಪಕಲೆಯ ನೋಟ ಇಲ್ಲಿವೆ. ದೇವಾಲಯದ ಜೊತೆಗೆ ಪೌರಾಣಿಕ ಹಿನ್ನೆಲೆಯುಳ್ಳ ಕನಕಗಿರಿಗೆ ಪ್ರವಾಸ ಹೋಗೋಣ ಬನ್ನಿ ....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article