ನಿಷ್ಪಾಪಿ ಸಸ್ಯಗಳು : ಸಂಚಿಕೆ - 80
Thursday, December 12, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 80
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನಿಮ್ಮ ಮನೆಯಲ್ಲಿ ದನ ಕರುಗಳು ಇದ್ದರೆ ಅವುಗಳನ್ನು ಗುಡ್ಡದ ತಪ್ಪಲಿಗೆ ಅಥವಾ ಹುಲ್ಲಿನ ಗದ್ದೆಗಳಿಗೆ ಕೊಂಡೊಯ್ದು ಮೇಯಿಸುವ ಅವಕಾಶ ನಿಮಗೆ ಸಿಕ್ಕರೆ ಯಾವತ್ತೂ ಕಳೆದುಕೊಳ್ಳದಿರಿ. ಏಕೆಂದರೆ ಅವುಗಳು ತನ್ಮಯತೆಯಿಂದ ಮೇಯುವುದನ್ನು ಕಾಣುವುದೇ ಒಂದು ಸೊಗಸು!. ಮಾತ್ರವಲ್ಲ, ಹುಲ್ಲು ಮೇಯುತ್ತಾ ಸನಿಹವಿರುವ ಪೊದರುಗಳ ನಡುವೆ ಮುಖವನ್ನು ತೂರಿಸಿ ಕಣ್ಣುಗಳನ್ನು ಮುಚ್ಚಿ ತೆರೆಯುತ್ತಾ ಮುಳ್ಳೇನಾದರೂ ಚುಚ್ಚೀತೆಂಬ ಅಳುಕಿನಿಂದಲೇ ನಾಲಿಗೆ ಚಾಚಿ ಹಸಿರೆಲೆಗಳನ್ನು ಎಳೆದುಕೊಂಡು ತಿನ್ನುವುದಷ್ಟೇ ಅಲ್ಲ ಅವುಗಳು ಆಸ್ವಾದಿಸುವುದನ್ನು ನೋಡಿಯೇ ತಿಳಿಯಬೇಕು. ಹೀಗೆ ತಿನ್ನುವಾಗ ಅವುಗಳಿಗೆ ಹಿತವೆನಿಸುವುದು ಸರೊಳಿ ಎಂಬ ನಿಷ್ಪಾಪಿ ಸಸ್ಯದ ಅದ್ಭುತ ಹಸಿರೆಲೆಗಳು!.
ಸಾಮಾನ್ಯವಾಗಿ ಎಲ್ಲ ಕಡೆಯೂ ಕಾಣಸಿಗುವ ಗಿಡ ಈ ಸರೊಳಿ. ಮಹಾರಾಷ್ಟ್ರ ದಿಂದ ಕನ್ಯಾಕುಮಾರಿಯವರೆಗೆ ಹಬ್ಬಿನಿಂತ ಪಶ್ವಿಮ ಘಟ್ಟ ಅಥವಾ ಸಹ್ಯಾದ್ರಿ ಪರ್ವತಶ್ರೇಣಿಯ ಉದ್ದಗಲಕ್ಕೂ ಈ ಸರೊಳಿ ಸ್ಥಳೀಯವಾಗಿದೆ. ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯ ನೆಲೆಗಳಲ್ಲಿ ಒಂದಾಗಿರುವ ಈ ಭಾಗ 1273 ಸಸ್ಯಗಳಿಗೆ ತವರಾಗಿದೆ. ಪಳೆಯುಳಿಕೆ ಪುರಾವೆಗಳ ಆಧಾರದ ಮೇಲೆಯೂ ಇದರ ಕುಲ ಭಾರತೀಯ ಉಪಖಂಡದಲ್ಲಿ ಮೂಲವನ್ನು ಹೊಂದಿರುವುದೇ ಅಲ್ಲದೆ ಇಲ್ಲಿಂದಲೇ ಆಗ್ನೇಯ ಏಷ್ಯಾಕ್ಕೆ ಹಬ್ಬಿದೆ ಎನ್ನುತ್ತಾರೆ. ಸಾಮಾನ್ಯವಾಗಿ ಪತನ ಶೀಲ ಕಾಡು, ತೆರೆದ ಕಲ್ಲಿನ ಮೈದಾನ, ನದಿಯ ಹರಿವಿನ ಇಕ್ಕೆಲ, ಗದ್ದೆ ತೋಟಗಳ ಸುತ್ತಮುತ್ತ ಈ ಸರೊಳಿ ಬೆಳೆದು ನಿರ್ಲಿಪ್ತವಾಗಿ ನಿಂತಿರುತ್ತದೆ.
ಕನ್ನಡದಲ್ಲಿ ಸರೊಳಿ, ಅಕರ್ಕಲ್, ಸಾಲಿ, ಸರಳಿ, ಸುಳ್ಳ ಎಂದು ಕರೆಯಲ್ಪಡುವ ಸಸ್ಯ ತುಳುವಿನಲ್ಲಿ ತರೊಳಿ ಎಂದೇ ಚಿರಪರಿಚಿತವಾಗಿದೆ. ಕೊಂಕಣಿಯಲ್ಲಿ ಸಾಲಾ ಸಾಲಾ, ಸಾಲ್ ಸಾಲ್ ಎಂದೂ ಮಲಯಾಳಂ ನಲ್ಲಿ ವೇಟ್ಟಿ ವೆಟ್ಟಿ ಎಂದೂ ಕರೆಯುವರು.
1825 ರಲ್ಲಿ ಕಾರ್ಲ್ ಲುಡ್ಡಿಂಗ್ ಬ್ಲೂಮ್ ಅವರು ಈ ಸಸ್ಯವನ್ನು ಅಪೊರೋಸಾ ಕಾರ್ಡಿಯೆಸ್ಪರ್ಮ (Aporosa cardiosperma) ಎಂದು ಗುರುತಿಸಿದರು. ಆ ವರೆಗೆ Aporosa Lndlieyana ಎಂಬುದೇ ಜನಪ್ರಿಯ ಹೆಸರಾಗಿತ್ತು. ಇದು ಫಿಲಾಂಥೇಸಿಯ (Phyllanthaceae) ಕುಟುಂಬಕ್ಕೆ ಸೇರಿದೆ. ಸಣ್ಣ ಮರ ಅಥವಾ ಪೊದರಿನ ರೀತಿ ಕಾಣಸಿಗುವ ಸರೊಳಿಗೆ ತಿಳಿ ಕೆಂಪು ವರ್ಣದ ಮುದ್ದಾದ ಚಿಗುರೆಲೆಗಳಿರುತ್ತವೆ. ಪರ್ಯಾಯ ಜೋಡಣೆಯ ಎಲೆಗಳು ಬೆಳೆಯುತ್ತಾ ಹೋದಂತೆ ಹಚ್ಚ ಹಸಿರು ಬಣ್ಣ ತಳೆಯುತ್ತವೆ. ಅಂಡಾಕಾರವಾದ ಎಲೆಗಳ ತುದಿ ಚೂಪಾಗಿರುತ್ತದೆ. ನಮ್ಮ ಬಾಲ್ಯವು ಈ ಸರೊಳಿಯ ಎಳೆಯ ಎಲೆಗಳ ಜೊತೆಗೆ ಥಳಕು ಹಾಕಿಕೊಂಡಿತ್ತು ಗೊತ್ತಾ? ಶಾಲೆಗೆ ಹೋಗಿ ಬರುವ ದಾರಿಯ ಇಕ್ಕೆಲಗಳಲ್ಲಿ ಬೆಳೆದು ಬೆಳವಣಿಗೆ ನಿಲ್ಲಿಸಿ ನಿಂತ ಶಾಖೆಗಳ ತುದಿಗಳಲ್ಲಿ ತನಗೆ ಸೂಕ್ತವೆನಿಸಿದ ಕಾಲದಲ್ಲಿ ಚಿಗುರುಗಳನ್ನು ಮೂಡಿಸಿ ಮದುಮಗಳಂತೆ ತುದಿ ಬಾಗಿ ನಿಲ್ಲುತ್ತಿದ್ದ ಗಿಡಗಳು ನಮ್ಮನ್ನು ಸೆಳೆಯುತ್ತಿದ್ದವು. ನಾಲ್ಕಾರು ಕೆಂಪೆಲೆಗಳ ಗಿಡದ ತುದಿಯಿಂದ ಪುಟ್ಟ ಎಲೆಯನ್ನು ಅಥವಾ ಎತ್ತರಕ್ಕೇರುವ ಕನಸು ಹೊತ್ತ ತುದಿಯನ್ನೇ ಚಿವುಟಿ ಒಣಗಿದ ಬಾಯಿಗಿಟ್ಟು ಜಗಿದರೆ ಅದೇನೋ ಹಿತವೆನಿಸುತ್ತಿತ್ತು. ತುದಿ ಚಿವುಟಿದರೆ ಉಳಿದೆಲ್ಲಾ ಎಲೆಗಳ ಕಂಕುಳಲ್ಲಿ ಚಿಗುರುಗಳು ಮೂಡಿ ಹುಬ್ಬೇರುವಂತೆ ಮಾಡುತ್ತಿದ್ದವು.
ಸರೊಳಿ ಗಿಡ ಒಂದು ಗಟ್ಟಿ ಸಸ್ಯ. ಇದರ ಎಲ್ಲಾ ಸಣ್ಣ ದೊಡ್ಡ ಶಾಖೆಗಳಲ್ಲೂ ಅಕ್ಷಾಕಂಕುಳಲ್ಲಿ ಎಡೆಬಿಡದೆ ಮೂಡುವ ತೂಗು ಪುಷ್ಪ ಮಂಜರಿ ಕೆಲವೇ ದಿನಗಳೊಳಗೆ ಪುಟಾಣಿ ಬುಗರಿಯಂತಹ ಕಾಯಿಗಳ ಗೊಂಚಲುಗಳ ಮಾಲೆಯನ್ನೇ ಎತ್ತಿಕೊಳ್ಳುತ್ತವೆ. ಎಳತರಲ್ಲಿ ಹಸಿರಾಗಿ, ಹಣ್ಣಾಗುತ್ತಿದ್ದಂತೆ ಕಂದು ಬಣ್ಣವಾಗುವ ಸಿಪ್ಪೆಯ ಒಳಗೆ ಹಳದಿಯಾದ ರಸಭರಿತ ಹಣ್ಣು ನೋಡಲು ಬಹಳ ಆಕರ್ಷಕ. ತರತರದ ಪಕ್ಷಿ ಸಂಕುಲಕ್ಕೆ ಆಗ ಸರೊಳಿ ಗಿಡ ತವರು ಮನೆಯೇ ಆಗಿರುತ್ತದೆ. ಬಿರುಸಾಗಿ ಸುರಿದ ಮಳೆಗೆ ಕಂದು ಚಿಪ್ಪು ಒಡೆದು ಜಾರಿ ಗೋಳಾಕಾರದ ಹಳದಿ ಹಣ್ಣುಗಳೇ ಗಿಡದುದ್ದಕ್ಕೂ ಕಾಣಿಸುವುದಿದೆ. ಇದರಲ್ಲಿ ಹೃದಯದಾಕಾರದ ಎರಡು ಬೀಜಗಳಿದ್ದು ಪ್ರಾಣಿ ಪಕ್ಷಿಗಳಿಂದಲೇ ಬೀಜ ಪ್ರಸಾರವಾಗುವುದು. ನೇರಳೆ ಹಣ್ಣು, ಕುಂಟಾಲ ಹಣ್ಣು ತಿಂದುದು ಹಿರಿಯರಿಗೆ ತಿಳಿಯಬಾರದೆಂದು ನಾವು ಸರಳಿ ಹಣ್ಣು ತಿಂದು ಬಾಯಿ ಸ್ವಚ್ಛ ಗೊಳಿಸುತ್ತಿದ್ದೆವು!ಇದರ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆಯಂತೆ. ಎಳೆ ಚಿಗುರುಗಳನ್ನು ಆಹಾರವಾಗಿಯೂ ಬಳಸುವರು.
ಸರಳಿಯ ಎಲೆಗಳು ಉತ್ತಮ ಮೇವು ಆದಂತೆ ಹಟ್ಟಿಗೆ ಹಾಕುವ ಮೂಲಕ ಗೊಬ್ಬರವಾಗಿಯೂ ಬಳಕೆಯಾಗುತ್ತದೆ. ಉಳುಮೆಗೆ ಹೋಗುವ ಎತ್ತು ಕೋಣಗಳಿಗೆ, ಹಾಲು ಕರೆಯುವ ದನಗಳಿಗೆ ಬೇಗನೆ ಹೊಟ್ಟೆ ತುಂಬಲೆಂದು ಸರೊಳಿಯ ಎಳೆಯ ಎಲೆಗಳನ್ನು ತಂದು ಅಕ್ಕಿ ತೌಡಿನ ಜೊತೆ ಉಪ್ಪು ಹಾಕಿ ಬೇಯಿಸಿ ಕೊಡುತ್ತಿದ್ದರು. ಅದು ಬೆಂದಾಗುವಾಗ ನಮಗೂ ತಿನ್ನಬೇಕೆನಿಸುವಷ್ಟು ಪರಿಮಳವಿರುತ್ತಿತ್ತು! ಇದನ್ನು ಉರುವಲಾಗಿ ಮಾತ್ರವಲ್ಲ ಗುಡಿಸಲುಗಳ ನಿರ್ಮಾಣದಲ್ಲೂ ಬಳಸುವರು. ಎಲ್ಲಕ್ಕಿಂತ ತಮಾಷೆಯೆಂದರೆ ಪೇಟೆಯಲ್ಲಿ ಮಾರಾಟವಾಗುವ ಹೆಚ್ಚಿನ ಗಂಧದ ಹಾರಗಳು ಈ ಸರೊಳಿ ಗಿಡದಿಂದ ತಯಾರಾದುವು. ಕೃತಕ ಪರಿಮಳ ಬಳಿದುಕೊಂಡು 'ಛಾಯಾಗಂಧ' ವಾಗಿ ಮೆರೆಯುತ್ತವೆ!
ಸರೊಳಿ ಮರದ ತೊಗಟೆ, ಬೇರುಗಳೂ ಪಾರಂಪರಿಕ ಔಷಧಿಯಾಗಿದೆ. ಹೊಟ್ಟೆನೋವು, ಜ್ವರ, ಹುಚ್ಚುತನ, ಕಾಮಾಲೆ, ನಂಜು ನಿರೋಧಕವಾಗಿಯೂ ಬಳಸುವರು.
ಮಕ್ಕಳೇ, ನಿಮಗೂ ಈ ಸರೊಳಿ ಗಿಡದ ಪರಿಚಯವಿರಬಹುದು. ಇಲ್ಲವೆಂದರೆ ತಪ್ಪದೆ ಅರಿತುಕೊಳ್ಳಲು ಪ್ರಯತ್ನಿಸುವಿರಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************