-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 58

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 58

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 58
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಎಲೆಗಳೇಕೆ ಹಸಿರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಅಲೆಯಬೇಕಾದ ಪರಿಸ್ಥಿತಿ ನನ್ನದು. ಜೀವಶಾಸ್ತ್ರ ಶಿಕ್ಷಕರು ಬಣ್ಣ ನನ್ನದಲ್ಲ ಎಂದಾಗ ಭೌತಶಾಸ್ತ್ರದ ಶಿಕ್ಷಕರ ಬಳಿ ಬಂದೆ. ಅವರು ಕೇಳಿದ ಮೊದಲ ಪ್ರಶ್ನೆ ಬಣ್ಣ ಅಂದರೆ ಏನು ಎಂದು. ಉತ್ತರ ನೀನೇ ಹುಡುಕಿಕೋ ಗ್ರಂಥಾಲಯದಲ್ಲಿ ನೋಡಬೇಕಾದ ಪುಸ್ತಕದ ಹೆಸರು ಹೇಳಿ ಕಳುಹಿಸಿಕೊಟ್ಟರು. ಗ್ರಂಥಾಲಯಕ್ಕೆ ಬಂದು ಪುಸ್ತಕ ಬಿಡಿಸಿದೆ. ಹೊಸ ಜ್ಞಾನ ಲೋಕ ತೆರೆದುಕೊಂಡಿತು.

ಬಣ್ಣ ಎಂದರೆ ಒಂದು ವಸ್ತುವು ಬೆಳಕನ್ನು ವ್ಯತ್ಯಸ್ತವಾಗಿ ಪ್ರತಿಫಲಿಸುವ ಮತ್ತು ಹೊರ ಸೂಸುವುದರಿಂದ ಉಂಟಾಗುವ ಪ್ರಕ್ರಿಯೆ. ಬಣ್ಣವುಂಟಾಗಬೇಕಾದರೆ ಬೆಳಕು ಇರಬೇಕು. ಆ ಬೆಳಕು ನಮ್ಮ ಕಣ್ಣನ್ನು ತಲುಪಬೇಕು. ಅಂದರೆ ಬಣ್ಣ ಎಂದರೆ ಬೆಳಕೇ ಎಂಬ ಹೊಸ ಪ್ರಶ್ನೆ ಉದ್ಭವವಾಯಿತು. ಹಾಗಾದರೆ ಬೆಳಕು ಎಂದರೇನು? ಎಂದು ಹುಡುಕಿದೆ. ಬೆಳಕು ಒಂದು ವಿದ್ಯುತ್ಕಾಂತೀಯ ವಿಕಿರಣ ಎನ್ನುತ್ತದೆ ಭೌತಶಾಸ್ತ್ರ. ಹಾಗಾದರೆ ವಿದ್ಯುತ್ಕಾಂತೀಯ ವಿಕಿರಣ ಅಂದರೇನು ಎಂದು ನೋಡಿದೆ. ಪಾರಂಪರಿಕ ವಿವರಣೆಯ ಪ್ರಕಾರ ಇವು ಕಾಂತಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರಗಳು ಒಂದಕ್ಕೊಂದು ಲಂಬವಾಗಿ ಕಂಪಿಸುವುದರಿಂದ ಉಂಟಾಗುವ ಅಲೆಗಳು. ಈ ಎರಡು ಕ್ಷೇತ್ರಗಳಿಗೆ ಲಂಬವಾಗಿ ಇವು ಅಡ್ಡಲೆಗಳು (transverse waves). ಈ ಅಲೆಗಳಿವೆಯಲ್ಲ ಇವು ಶಕ್ತಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ವಾಹಕಗಳು . ಇವುಗಳು ಅಡ್ಡಲೆಗಳಾಗಿರುವುದರಿಂದ ವೀಣೆಯ ತಂತಿ ಮೀಟಿದ ಹಾಗೆ, ಸಮುದ್ರದ ಅಲೆಗಳ ಹಾಗೆ ಉಬ್ಬು (crest) ತಗ್ಗುಗಳನ್ನು (trough) ಹೊಂದಿರುತ್ತದೆ. ಒಂದು ಉಬ್ಬಿನ ಆರಂಭದಿಂದ ಇನ್ನೊಂದು ಅನುಕ್ರಮ ಉಬ್ಬಿನ ಆರಂಭದ ವರೆಗೆ ಇರುವ ಅಂತರ ತರಂಗಾಂತರ ಅಥವಾ ಅಲೆಯುದ್ದ (wavelength ). ಒಂದು ಸೆಕೆಂಡಿಗೆ ಹುಟ್ಟಿಕೊಳ್ಳುವ ಇಂತಹ ಅಲೆಗಳ ಸಂಖ್ಯೆಯನ್ನು ಕಂಪನಾಂಕ (frequency) ಎನ್ನುತ್ತೇವೆ. ಕಂಪನಾಂಕ ಹೆಚ್ಚಾದರೆ ಅಲೆಯುದ್ದ ಕಡಿಮೆ ಹಾಗೂ ಕಂಪನಾಂಕ ಕಡಿಮೆಯಾದರೆ ಅಲೆಯುದ್ದ ಹೆಚ್ಚು. ಇದನ್ನು ಬೆಳಕಿನ ಅಲೆಗಳ (wave theory of light) ಸಿದ್ಧಾಂತ ಎಂದು ಹ್ಯೂಗನ್ಸ್ 1690 ರಲ್ಲಿ ವಿವರಿಸಿದ. ಆದರೆ ಸರ್ ಐಸಾಕ್ ನ್ಯೂಟನ್ ಬೆಳಕು ಅಲೆಗಳ ರೂಪದಲ್ಲಿಲ್ಲ ಬದಲಾಗಿ ಕಣಗಳ ರೂಪದಲ್ಲಿರುತ್ತವೆ ಎಂದು ಬೆಳಕಿನ ಕಣ ಸಿದ್ಧಾಂತವನ್ನು (corposcular theory of light) ಮುಂದಿಟ್ಟ. ನಂತರ ಬಂದ ಅಲ್ಬರ್ಟ್ ಐನ್‍ಸ್ಟೈನ್ ಕ್ವಾಂಟಮ್ ಮೆಕ್ಯಾನಿಕ್ಸ್ ಬಂದ ಮೇಲೆ ಈ ಕಣಗಳನ್ನು ಫೋಟಾನ್ ಗಳೆಂದು (photons) ಹೆಸರಿಸಿದ. ಈಗ ಎರಡನ್ನೂ ಸೇರಿಸಿ ಬೆಳಕು ಕಣಗಳ ರೂಪದಲ್ಲಿ ಮತ್ತು ಅಲೆಗಳ ರೂಪದಲ್ಲಿಯೂ ಇರುತ್ತದೆ ಎಂದು ಒಪ್ಪಿಕೊಳ್ಳಲಾಗಿದೆ.

ನೋಡಿದಿರಾ ವಿಜ್ಞಾನ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬುದನ್ನು. ವಿಜ್ಞಾನದಲ್ಲಿ ನಿಶ್ಚಿತವಾದುದು ಎಂಬುದಿಲ್ಲ ಪ್ರಸಕ್ತವಾಗಿ ಯಾವುದು ಹೆಚ್ಚು ಪ್ರಸ್ತುತವಾಗಿರುತ್ತದೆ ಎನ್ನಿಸುತ್ತದೆಯೋ ಅದನ್ನೇ ವಿಜ್ಞಾನ ಎಂದು ಒಪ್ಪಿಕೊಳ್ಳುತ್ತದೆ. ಏಕೆಂದರೆ ಜ್ಞಾನಕ್ಕೆ ಮಡಿವಂತಿಕೆ ಎಂಬುದಿಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article