-->
ಪಯಣ : ಸಂಚಿಕೆ - 21 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 21 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 21 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

   ಇಂದಿನ ಪ್ರವಾಸದಲ್ಲಿ ಮಂಡ್ಯ ಜಿಲ್ಲೆಯ ಮುತ್ತತ್ತಿಗೆ ಪಯಣ ಬೆಳೆಸೋಣ ಬನ್ನಿ....
                 
    ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ.

       ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳೆಯುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ ಮತ್ತು ಚಾರಣ ಸಾಹಸಿಗರಿಗೆ ಉತ್ತಮವಾದ ಸ್ಥಳವಾಗಿದ್ದು, ಮುತ್ತತ್ತಿ ಅರಣ್ಯವೆಂದೇ ಪ್ರಸಿದ್ಧಿ ಪಡೆದಿದೆ.

ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ.

       ಇಲ್ಲಿ ಪ್ರಸಿದ್ಧವಾದ ಹನುಮಾನ್ ಮಂದಿರ. ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ. ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು, ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986 - 87ನೇ ವರ್ಷದ ಸಾಲಿನಲ್ಲಿ ಭಕ್ತಾಧಿಗಳ ವಂತಿಗೆಯ ಹಣ ಕ್ರೋಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.

ಪುರಾಣದ ಹಿನ್ನೆಲೆ ಹೇಳುವುದಾದರೆ...
     ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರಪ್ರಭು ಲಂಕಾಧಿಪತಿ ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿ, ತಂದೆ ಶ್ರೀ ರಾಮಚಂದ್ರಪ್ರಭು, ತಾಯಿ ಸೀತಾಮಾತೆ, ಲಕ್ಷ್ಮಣ ಮತ್ತು ಆಂಜನೇಯರ ಸಮೇತ ಲಂಕೆಯಿಂದ ಅಯೋಧ್ಯೆಗೆ ಹಿಂದಿರುಗಿ ಹೋಗುವಾಗ ಬಸವನ ಬೆಟ್ಟ ಅರಣ್ಯ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಒಂದು ದಿನ ಇಲ್ಲೇ ತಂಗಿ ಹೋಗಲು ನಿರ್ಧರಿಸುತ್ತಾರೆ.

     ಮರುದಿನ ಬೆಳಗ್ಗೆ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ತಾಯಿ ಸೀತಾಮಾತೆದೇವಿ ಸ್ನಾನ ಮಾಡುತ್ತಿದ್ದಾಗ, ಸೀತಾಮಾತೆಯ ಮುತ್ತಿನ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮಚಂದ್ರನಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನಿಗೆ ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ಶ್ರೀ ರಾಮಚಂದ್ರ ಪ್ರಭು ಹೇಳುತ್ತಾರೆ. ಅವರ ಆಜ್ಞೆಯಂತೆ ಆಂಜನೇಯಸ್ವಾಮಿ ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಕಳೆದುಹೋಗಿದ್ದ ಮುತ್ತಿನ ಮೂಗುತಿ ಹುಡುಕಿ ಸೀತಾಮಾತೆಗೆ ನೀಡಿದನು. ಹನುಮಂತ ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗದಲ್ಲಿ ಇಂದಿಗೂ ಕಾವೇರಿ ನದಿಯ ನೀರು ಒಂದು ಸುತ್ತು ತಿರುಗಿ ಹೋಗುತ್ತದೆ. ಆದಕಾರಣ ಆ ಸ್ಥಳಕ್ಕೆ ತಿರುಗಣೆಮಡು ಎಂದು ಕರೆದು ಪ್ರಸಿದ್ದಿಯಾಗಿದೆ.

        ಹನುಮಂತನು ಸೀತಾಮಾತೆಗೆ ಮುತ್ತಿನ ಮೂಗುತಿಯನ್ನು ತನ್ನ ಬಾಲದಲ್ಲಿ ಕೊಟ್ಟಿರುವುದಕ್ಕೆ ತಾಯಿ ಸೀತಾಮಾತೆದೇವಿ ಆಂಜನೇಯಸ್ವಾಮಿ ಅವರನ್ನು ಮುತ್ತೆತ್ತರಾಯನೆಂದು ಹೆಸರು ಕರೆದರು. ಅಂದರೆ ಸೀತಾಮಾತೆಯ ಮುತ್ತಿನ ಮೂಗುತಿಯನ್ನು ಬಾಲದಲ್ಲಿ ಎತ್ತಿಕೊಟ್ಟ ಕಾರಣ ಮುತ್ತೆತ್ತರಾಯ ಎಂಬ ಹೊಸ ನಾಮಕರಣವನ್ನು ತಾಯಿ ಸೀತಾದೇವಿ ಮಾಡಿದರು, ಹಾಗೂ ಆಂಜನೇಯಸ್ವಾಮಿಯನ್ನು ಈ ಕ್ಷೇತ್ರದಲ್ಲಿ ಮುತ್ತೆತ್ತರಾಯಸ್ವಾಮಿಯಾಗಿ ನೆಲೆಸಿ, ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರು ಬಂತು.
  "ಹನುಮನ ಆರಾಧ್ಯ ಸ್ಥಳ, ದಟ್ಟ ಅರಣ್ಯದ ತಾಣ, ಪೌರಾಣಿಕ ಹಿನ್ನೆಲೆಯುಳ್ಳ ಮುತ್ತತ್ತಿ ಸದಾ ದೈವಿಕ ಸ್ಥಾನವೇ ಸರಿ" ಬನ್ನಿ ಒಮ್ಮೆ ಭೇಟಿ ನೀಡಿ.....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article